ಬೆಂಗಳೂರು:ಬಡವರ ಜೀವನಮಟ್ಟ ಸುಧಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಉಚಿತ, ಸಬ್ಸಿಡಿ ಯೋಜನೆಗಳ ಮೂಲಕ ಎಲ್​ಪಿಜಿ ಗ್ಯಾಸ್ ಸೌಲಭ್ಯ ಕಲ್ಪಿಸುತ್ತಿದ್ದರೂ, ವಿತರಿಸುತ್ತಿದ್ದರೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪಡಿತರ ಚೀಟಿದಾರರು ಸೀಮೆಎಣ್ಣೆಯನ್ನೇ ಅವಲಂಬಿಸಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಸೌಲಭ್ಯ ಹೊಂದಿರುವ ಹಾಗೂ ಎಪಿಎಎಲ್ ಕಾರ್ಡ್ ಹೊಂದಿರುವ ಲಕ್ಷಾಂತರ ಕುಟುಂಬಗಳು ಅಡುಗೆ, ಚಿಮಣಿ, ಸ್ನಾನಕ್ಕೆ ನೀರು ಕಾಯಿಸಲು ಇನ್ನಿತರ ಕೆಲಸಗಳಿಗಾಗಿ ಸೀಮೆಎಣ್ಣೆಯನ್ನೇ ಬಳಸುತ್ತಿದ್ದಾರೆ! ಗ್ರಾಮೀಣ ಪ್ರದೇಶಗಳಲ್ಲಿ ದಿನದ ಕೂಲಿ ಮೇಲೆ ಜೀವನ ಸಾಗಿಸುವ ಬಡವರು ಅಡುಗೆಗಾಗಿ ಗ್ಯಾಸ್ ಬದಲು ಸೌದೆಯನ್ನೇ ಬಳಸುತ್ತಿದ್ದಾರೆ. ಅವರು ಗುಡಿಸಲು, ಶೆಡ್​ಗಳಲ್ಲಿ ವಾಸಿಸುತ್ತಿರುವುದರಿಂದ ವಿದ್ಯುತ್ ಸಂಪರ್ಕ ಹೊಂದಿಲ್ಲ. ಹಾಗಾಗಿ ದೀಪ, ಅಡುಗೆಗಾಗಿ ನಿತ್ಯ ಸೀಮೆಎಣ್ಣೆಯೇ ಗತಿಯಾಗಿದೆ.
ಬಡಜನರು ಅಡುಗೆ ಮಾಡಲು ಸೌದೆ, ಸೀಮೆಎಣ್ಣೆಗಾಗಿ ಮಾಡುತ್ತಿರುವ ಖರ್ಚು ಸಿಲಿಂಡರ್​ಗಿಂತ ದುಬಾರಿ. ಆಹಾರ ಇಲಾಖೆಯು ಪ್ರತಿ ಲೀಟರ್​ಗೆ 25 ರೂ. ದರದಲ್ಲಿ ಪ್ರತಿ ಕುಟುಂಬಕ್ಕೆ ಮಾಸಿಕ 3 ಲೀಟರ್ ಅಥವಾ ಬೇಡಿಕೆಗನು ಗುಣವಾಗಿ ಸೀಮೆಎಣ್ಣೆ ನೀಡುತ್ತಿದೆ. ಮುಂದಿನ 2024ರ ಒಳಗಾಗಿ ಸೀಮೆಎಣ್ಣೆ ಬಳಕೆ ಪ್ರಮಾಣ ಶೇ.75 ಕಡಿಮೆ ಆಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾಸ್ ಇದ್ದರೂ ಬಳಕೆಯಿಂದ ದೂರ: ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸೌಲಭ್ಯ ಒದಗಿಸಿದೆ. ಆದರೆ, ಸಾಕಷ್ಟು ಕುಟುಂಬಗಳು ಮನೆಯಲ್ಲಿ ಗ್ಯಾಸ್ ಸೌಲಭ್ಯವಿದ್ದರೂ ಬಳಕೆ ಮಾಡುತ್ತಿಲ್ಲ. ಒಂದು ಕುಟುಂಬಕ್ಕೆ ವಾರ್ಷಿಕ 12 ಗ್ಯಾಸ್ ನೀಡಲಾಗುತ್ತಿದೆ. ಆದರೆ, ಬಡ ಕುಟುಂಬಗಳು ವಾರ್ಷಿಕ 6 ಗ್ಯಾಸ್​ಗಳನ್ನೂ ಬಳಸುತ್ತಿಲ್ಲ. ಗ್ಯಾಸ್ ಬೆಲೆ ಏರಿಕೆ, ಗ್ಯಾಸ್ ಪೂರೈಕೆ ಸಮರ್ಪಕವಾಗಿ ಆಗದ ಕಾರಣ ಕೆಲ ಕುಟುಂಬಗಳು ಇನ್ನೂ ಸೌಧೆ ಬಳಕೆ ಮಾಡುತ್ತಿವೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
ಸೀಮೆಎಣ್ಣೆಮುಕ್ತ ಪ್ರಥಮ ಜಿಲ್ಲೆ ಕೋಲಾರ:ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕೋಲಾರ ಜಿಲ್ಲೆಯನ್ನು ಸೀಮೆಎಣ್ಣೆಮುಕ್ತ ಎಂದು ಘೋಷಣೆ ಮಾಡಲಾಗಿದೆ. ಉಜ್ವಲ, ಅನಿಲಭಾಗ್ಯ ಯೋಜನೆ, ಸಿಎಸ್​ಆರ್ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದ ಡಿಸೆಂಬರ್​ನಲ್ಲಿ ಈ ಸಾಧನೆ ಮಾಡಲಾಗಿದೆ. ಪಡಿತರದಾರರು ಇಚ್ಛಿಸಿದಲ್ಲಿ 1 ಲೀಟರ್ ಸೀಮೆಎಣ್ಣೆ ಪಡೆಯಲು ಅವಕಾಶವಿದೆ. ಬೆಂ.ನಗರ, ದಕ್ಷಿಣ ಕನ್ನಡ, ದಾವಣಗೆರೆ ಸಂಪೂರ್ಣ ಸೀಮೆಎಣ್ಣೆಮುಕ್ತ ಜಿಲ್ಲೆಯಾಗಿವೆ. ಮೈಸೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳನ್ನು ಸೀಮೆಎಣ್ಣೆಮುಕ್ತ ಜಿಲ್ಲೆ ಎಂದು ಘೊಷಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸೀಮೆಎಣ್ಣೆ ಇಲ್ಲದೆ ಜೀವನ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಮನವಿ ಸಲ್ಲಿಸಿದ ಕುಟುಂಬಗಳಿಗೆ ತಲಾ 1 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದೆ.
ಕೆಲವೆಡೆ ವಿತರಣೆ ಇಲ್ಲ:ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕುಗಳು ಸೀಮೆಎಣ್ಣೆಮುಕ್ತವಾಗಿವೆ. ಹಾವೇರಿ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳು ಹಾಗೂ ಹಿರೇಕೆರೂರ ತಾಲೂಕಿನ ಕವಳಿಕೊಪ್ಪ ಗ್ರಾಮ, ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ತುಮಕೂರು ತಾಲೂಕು,
ಚಿಕ್ಕಬಳ್ಳಾಪುರ ಜಿಲ್ಲೆಯ ವೈಚಕೂರಹಳ್ಳಿ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳಲ್ಲಿ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಡಗಲಿಯಲ್ಲಿ ತಲಾ ಎರಡು, ಹಗರಿಬೊಮ್ಮನ ಹಳ್ಳಿಯಲ್ಲಿ ಮೂರು, ಸಂಡೂರು ಆರು, ಹೊಸಪೇಟೆಯಲ್ಲಿ ಕೇವಲ 17 ಕುಟುಂಬ ಸೀಮೆ ಎಣ್ಣೆ ಪಡೆದಿದ್ದು ಬಹುತೇಕ ಗ್ರಾಮಗಳು ಸೀಮೆಎಣ್ಣೆ ಮುಕ್ತವಾಗಿವೆ.
ನಗರ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಗ್ಯಾಸ್ ಇಲ್ಲದೆ ಇರುವ ಫಲಾನುಭವಿಗಳಿಗೆ ಮಾತ್ರ 3 ಲೀಟರ್ ಸೀಮೆಎಣ್ಣೆ ನೀಡಲಾಗುತ್ತದೆ. ವಿದ್ಯುತ್ ಸಂಪರ್ಕ ಇಲ್ಲದಿರುವ ಮಲೆನಾಡು ಭಾಗದ ಕೆಲವರು ಸೀಮೆಎಣ್ಣೆ ದೀಪ ಬಳಸುವುದಕ್ಕಾಗಿ 1 ಲೀಟರ್ ನೀಡುವಂತೆ ನೋಂದಣಿ ಮಾಡಿಕೊಳ್ಳುತ್ತಾರೆ. ಅಂಥವರಿಗೆ ಮಾತ್ರ ಕೊಡಲಾಗುತ್ತದೆ.
| ವಿಜಯಕುಮಾರ್ ಜಂಟಿ ನಿರ್ದೇಶಕ ಆಹಾರ ಇಲಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
