‘ಅಂತಾರಾಷ್ಟ್ರೀಯ ಶುಶ್ರೂಷಕರ ದಿನ’ವನ್ನು (ಮೇ 12) ಈ ವರ್ಷ ‘ನಮ್ಮ ದಾದಿಯರು-ನಮ್ಮ ಭವಿಷ್ಯ’ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ, ಕರ್ನಾಟಕ ಶುಶ್ರೂಷಕರ ಪರಿಷತ್ ಅಧ್ಯಕ್ಷೆ ಡಾ.ಸುಜಾತಾ ರಾಠೋಡ್ ಹಾಗೂ ಪರಿಷತ್ ರಿಜಿಸ್ಟ್ರಾರ್ ಕೆ.ಮಲ್ಲು ಅವರು ನರ್ಸಿಂಗ್ ಕ್ಷೇತ್ರದ ಸಮಸ್ಯೆ, ಸವಾಲು, ಉದ್ಯೋಗಾವಕಾಶ ಇತ್ಯಾದಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೋವಿಡ್ ನಂತರ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಹಾಗೂ ಪ್ರಗತಿ ಉಂಟಾಗಿದ್ದು, ಜಗತ್ತಿನಾದ್ಯಂತ ಶುಶ್ರೂಷಕರ ಹುದ್ದೆ ಭಾರಿ ಬೇಡಿಕೆ ಪಡೆದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಮೆರಿಟ್ ವಿದ್ಯಾರ್ಥಿಗಳೂ ನರ್ಸಿಂಗ್ ವೃತ್ತಿಯತ್ತ ಒಲವು ತೋರುತ್ತಿರುವುದು ನರ್ಸಿಂಗ್ ಕೋರ್ಸ್​ಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ.
ರಾಜ್ಯದಲ್ಲಿ ಈ ಹಿಂದೆ ನರ್ಸಿಂಗ್ ಕೋರ್ಸ್​ಗೆ ಕೇರಳ ಸೇರಿ ಹೊರ ರಾಜ್ಯಗಳ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೀಗ ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಅಭ್ಯರ್ಥಿಗಳು ನರ್ಸಿಂಗ್ ಕೋರ್ಸ್ ಸೇರ್ಪಡೆಗೆ ಆಸಕ್ತಿ ತೋರುತ್ತಿದ್ದಾರೆ. ನರ್ಸಿಂಗ್ ವಲಯವು ಸೇವಾ ಮನೋಭಾವ ಅಷ್ಟೇ ಅಲ್ಲದೆ, ಉದ್ಯೋಗ ಭದ್ರತೆ ಒದಗಿಸುವ ಮೂಲಕ ಆರ್ಥಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಜೀವನಶೈಲಿ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶುಶ್ರೂಷಕರಿಗೆ ಬೇಡಿಕೆ ಸಾಕಷ್ಟಿದೆ. ವಿಭಕ್ತ ಕುಟುಂಬಗಳಿಂದಾಗಿ ಮನೆಯಲ್ಲಿ ಅನಾರೋಗ್ಯಪೀಡಿತರ ಆರೈಕೆಗೆ ಯಾರೂ ಇಲ್ಲದ ಕಾರಣ, ಮನೆಯಲ್ಲಿ ಅವರನ್ನು ನೋಡಿಕೊಳ್ಳಲು ಶುಶ್ರೂಷಕರ ಅಗತ್ಯವೂ ಇದೆ.
ನರ್ಸಿಂಗ್​ನತ್ತ ಪುರುಷ ಅಭ್ಯರ್ಥಿಗಳು:ಇತ್ತೀಚಿನವರೆಗೂ ಶುಶ್ರೂಷಕ ವೃತ್ತಿಯಲ್ಲಿ ಮಹಿಳೆಯರೇ ಇರುತ್ತಿದ್ದರು. ಆದರೀಗ ಪುರುಷರೂ ನರ್ಸಿಂಗ್​ನತ್ತ ಆಸಕ್ತಿ ವಹಿಸುತ್ತಿದ್ದಾರೆ. ಇದು ಜೀವನ ಪರ್ಯಂತ ಉದ್ಯೋಗ ಒದಗಿಸುವ ಕ್ಷೇತ್ರವಾಗಿರುವ ಜತೆಗೆ ವಿದೇಶಗಳಲ್ಲಿ ಶುಶ್ರೂಷಕರಿಗೆ ಬೇಡಿಕೆಯ ವಿಫುಲ ಅವಕಾಶವನ್ನು ತೆರೆದಿಟ್ಟಿದೆ. ಈ ವೃತ್ತಿ ಸೇರಿ ಉದ್ಯೋಗ ಭದ್ರತೆ ಹಾಗೂ ಕೈತುಂಬಾ ವೇತನ ಸಿಗುತ್ತದೆ ಎಂಬ ಕಾರಣಕ್ಕಾಗಿ ಪುರುಷರೂ ಹೆಚ್ಚಿನ ಪ್ರಮಾಣದಲ್ಲಿ ವೃತ್ತಿ ಸೇರುತ್ತಿದ್ದಾರೆ.

45 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳು:ಅತೀ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಜತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯದಿಂದಾಗಿ ವೈದ್ಯಕೀಯ ಹಾಗೂ ನರ್ಸಿಂಗ್ ಕೋರ್ಸ್​ಗಳಿಗೆ ಬೇಡಿಕೆ ಹೆಚ್ಚಿದೆ. ಪ್ರಸ್ತುತ ರಾಜ್ಯವು 22 ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. 18 ಸರ್ಕಾರಿ ನರ್ಸಿಂಗ್ ಶಾಲೆಗಳು, 840 ಖಾಸಗಿ ಶಾಲೆಗಳು, 30 ಸರ್ಕಾರಿ ನರ್ಸಿಂಗ್ ಕಾಲೇಜುಗಳು ಹಾಗೂ 732 ಖಾಸಗಿ ಕಾಲೇಜುಗಳಿದ್ದು, ಪ್ರತೀ ವರ್ಷ 45 ಸಾವಿರ ವಿದ್ಯಾರ್ಥಿಗಳು ಹೊರ ಬರುತ್ತಿದ್ದಾರೆ. ಇಷ್ಟು ಮಂದಿಗೂ ಉದ್ಯೋಗ ದೊರೆಯುತ್ತಿರುವ ಕಾರಣ ಕ್ಷೇತ್ರ ಯುಜನತೆಯ ಅಚ್ಚುಮೆಚ್ಚು ಆಗಿದೆ.
ಜಗತ್ತಿನಾದ್ಯಂತ ಶುಶ್ರೂಷಕರಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲ ಕಂಪನಿಗಳು ವಿದೇಶದಲ್ಲಿ ನರ್ಸಿಂಗ್ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಿವೆ. ಇದಲ್ಲದೆ ವಿದೇಶಕ್ಕೆ ಕಳುಹಿಸಿ ಅಲ್ಲಿ ಆಸ್ಪತ್ರೆಗಳ ಬದಲಿಗೆ ಸ್ಪಾ ಹಾಗೂ ಬ್ಯೂಟಿ ಪಾರ್ಲರ್​ಗಳಲ್ಲಿ ಕೆಲಸಕ್ಕೆ ಸೇರಿಸಿ ವಂಚಿಸುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಹೀಗಾಗಿ ನರ್ಸ್​ಗಳ ಟ್ರಾ್ಯಕಿಂಗ್ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಲಾಗಿದೆ. ಇದಲ್ಲದೆ ಕರ್ನಾಟಕ ಶುಶ್ರೂಷಕರ ಪರಿಷತ್ತು (ಕೆಎನ್​ಸಿ) ವಿದೇಶಿ ನರ್ಸಿಂಗ್ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಕೆಎನ್​ಸಿ ಮೂಲಕವೇ ವಿದೇಶಗಳಲ್ಲಿ ಕೆಲಸ ದೊರಕಿಸಿಕೊಡುವ ಮೂಲಕ ಇಂತಹ ವಂಚನೆಗಳಿಗೆ ಕಡಿವಾಣ ಹಾಕಲು ಯೋಚಿಸುತ್ತಿದೆ ಎಂದು ಪರಿಷತ್​ನ ರಿಜಿಸ್ಟ್ರಾರ್ ಕೆ.ಮಲ್ಲು ತಿಳಿಸಿದರು.
ಒಂದು ರಾಷ್ಟ್ರ, ಒಂದು ನೋಂದಣಿ :ಒನ್ ನೇಷನ್ ಒನ್ ರೇಷನ್ ಕಾರ್ಡ್ ಸೇರಿ ರಾಷ್ಟ್ರದುದ್ದಕ್ಕೂ ಒಂದೇ ಸೌಲಭ್ಯಗಳು ಸಿಗುವ ರೀತಿ ನರ್ಸಿಂಗ್ ಸಿಬ್ಬಂದಿ ನೋಂದಣಿಯನ್ನೂ ‘ಒನ್ ನೇಷನ್ ಒನ್ ರಿಜಿಸ್ಟ್ರೇಷನ್’ ಮಾಡುವ ಚಿಂತನೆ ಇದೆ. ದಾದಿಯರು ಎಲ್ಲೇ ಕೋರ್ಸ್ ಮಾಡಿದರೂ ತೇರ್ಗಡೆ ನಂತರ ರಾಜ್ಯಕ್ಕೆ ತೆರಳಿದ ಬಳಿಕ ನೋಂದಣಿ ಸಂಖ್ಯೆ ಊರ್ಜಿತವಾಗುತ್ತದೆ. ಇದರಿಂದ ಎಷ್ಟು ಮಂದಿ ಕಾರ್ಯಕ್ಷೇತ್ರದಲ್ಲಿರುತ್ತಾರೆ, ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವುದು ಅಥವಾ ನಿವೃತ್ತಿ ಇತ್ಯಾದಿ ಕಾರಣದಿಂದ ಅವರ ಸಂಖ್ಯೆಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದು ಮಲ್ಲು ತಿಳಿಸಿದರು.
ಕೆಎನ್​ಸಿ ಪಾತ್ರ:ನರ್ಸಿಂಗ್ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶುಶ್ರೂಷಕರ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತದೆ. ನರ್ಸಿಂಗ್ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ, ನೋಂದಣಿ ಮಾಡಿಕೊಂಡು, ಕಾಲಕಾಲಕ್ಕೆ ಅದರ ನವೀಕರಣ ಮಾಡುವುದು. ನರ್ಸಿಂಗ್ ಮಾಡಿದ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡು ಪ್ರಮಾಣಪತ್ರ ವಿತರಿಸುವಲ್ಲಿ ತೊಡಗಿಸಿಕೊಂಡಿದೆ.
ರೋಗ ತಡೆವ ಲಸಿಕೆ:ಶುಶ್ರೂಷಕರು ಬಹುತೇಕ ಸಂದರ್ಭ ಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ಕಾಲಕಾಲಕ್ಕೆ ಲಸಿಕೆ ಹಾಕಲಾಗುತ್ತದೆ. ಆದಾಗಿಯೂ ಕಠಿಣ ಸಂದರ್ಭಗಳಲ್ಲಿ ಕರ್ತವ್ಯನಿರ್ವಹಣೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟರೆ ಅವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ.

ಶುಶ್ರೂಷಕರ ಸಮಸ್ಯೆ ಮತ್ತು ಸವಾಲು:ರಾಜ್ಯದಲ್ಲಿ ಶುಶ್ರೂಷಕರಿಗೆ ಸರ್ಕಾರಿ ವಲಯದಲ್ಲಿ ಉದ್ಯೋಗಾವಕಾಶ ಇದ್ದರೂ, ಕಾಯಂ ನೇಮಕ ಆಗದೆ, ಗುತ್ತಿಗೆ ಹಾಗೂ ಹೊರಗುತ್ತಿಗೆ ಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಇನ್ನು ಬಿಎಸ್​ಸಿ, ಎಂಎಸ್​ಸಿ, ಪಿ.ಎಚ್​ಡಿ ಮಾಡಿದರೂ ಜ್ಞಾನಕ್ಕೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ಸರ್ಕಾರಿ ಕಾಲೇಜಿನಲ್ಲಿ ಓದಿದರೂ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ ಕಡಿಮೆ. ಬಡ್ತಿ ಸಮಸ್ಯೆಯಿಂದ ಬಹಳಷ್ಟು ಮಂದಿ 30 ವರ್ಷ ಸೇವೆ ಸಲ್ಲಿಸಿದರೂ ಶುಶ್ರೂಷಕರಾಗಿಯೇ ನಿವೃತ್ತಿ ಹೊಂದಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯಗಳ ಕೊರತೆ ನಡುವೆಯೂ ಸೇವೆ ಒದಗಿಸಲು ಸಜ್ಜಾಗುವುದು ಶುಶ್ರೂಷಕರಿಗೆ ಇರುವ ದೊಡ್ಡ ಸವಾಲಾಗಿದೆ.
ಕ್ವಾಲಿಫೈಡ್ ನರ್ಸ್ ಲಭ್ಯ:ಕಳೆದ ವರ್ಷದಿಂದ ನರ್ಸಿಂಗ್ ಕೋರ್ಸ್ ಸೇರಲು ಬಯಸುವವರು ನೀಟ್ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಶೇ.90ಕ್ಕೂ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳೂ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಶೇ.20 ಸರ್ಕಾರಿ ಸೀಟುಗಳಿವೆ. ಇದರಿಂದ ಇನ್ನು ಮುಂದೆ ಗುಣಮಟ್ಟದ (ಕ್ವಾಲಿಫೈಡ್) ನರ್ಸ್​ಗಳು ದೊರೆಯುತ್ತಾರೆ ಎಂದು ಡಾ.ಸುಜಾತಾ ರಾಠೋಡ್ ವಿಶ್ವಾಸ ವ್ಯಕ್ತಪಡಿಸಿದರು. ವೈದ್ಯಕೀಯ ನಿಯಮಾನುಸಾರ ಶುಶ್ರೂಷಕ ಹುದ್ದೆಯಲ್ಲಿ ದಿನಕ್ಕೆ ಮೂರು ಪಾಳಿ ಇರುತ್ತದೆ. ಅದರಂತೆ ಒಬ್ಬ ರೋಗಿಗೆ ಮೂವರು ಶುಶ್ರೂಷಕರು ಇರಬೇಕು. ತುರ್ತು ನಿಗಾ ಘಟಕದಲ್ಲಿ ಈ ಪ್ರಮಾಣದಲ್ಲಿ ಶುಶ್ರೂಷಕರ ಸೇವೆ ಲಭ್ಯವಿದೆ. ಆದರೆ, ವಾರ್ಡ್​ಗಳಲ್ಲಿ ಸದ್ಯ 1:1 ಅನುಪಾತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷಕರ ಕೊರತೆ ಇದೆಯಾದರೂ, ನರ್ಸಿಂಗ್ ಕೋರ್ಸ್ ಮಾಡುವ ವಿದ್ಯಾರ್ಥಿಗಳು ಒಂದು ವರ್ಷ ಇಂಟರ್ನ್​ಶಿಪ್ ಮಾಡುವುದರಿಂದ ಇವರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಆಸ್ಪತ್ರೆಗಳಲ್ಲಿ ದಾದಿಯರ ಕೊರತೆ ಉಂಟಾಗುತ್ತಿಲ್ಲ ಎಂದು ಪ್ರತಿಪಾದಿಸಿದರು.
ನರ್ಸಿಂಗ್ ಫ್ಯಾಕಲ್ಟಿ ಬಲಪಡಿಸಬೇಕಿದೆ:ರಾಜ್ಯದಲ್ಲಿ ನರ್ಸಿಂಗ್ ಕೋರ್ಸ್​ಗೆ ಬೇಡಿಕೆ ಹೆಚ್ಚಿದ್ದು, ಅದಕ್ಕೆ ಪೂರಕವಾಗಿ ನರ್ಸಿಂಗ್ ಫ್ಯಾಕಲ್ಟಿ ಬಲಪಡಿಸಬೇಕಿದೆ. ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವವರು ಫ್ಯಾಕಲ್ಟಿ ಕೆಲಸದ ಜತೆಗೆ ಶುಶ್ರೂಷಕ ಸೇವೆ ಮಾಡಬೇಕಿದೆ. ಇದರಿಂದ ಕೆಲಸದ ಹೊರೆ ಹೆಚ್ಚು ಎಂಬ ಅಭಿಪ್ರಾಯ ಕೇಳಿಬಂದಿದೆ.
ಆನ್​ಲೈನ್ ತರಬೇತಿ:ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳ ಮೇಲ್ದರ್ಜೆ, ಮೂಲಸೌಕರ್ಯ ಹೆಚ್ಚಳದೊಂದಿಗೆ ಶುಶ್ರೂಷಕರ ಸೇವೆ ಬಲಪಡಿಸಲು ಶುಶ್ರೂಷಕರಿಗೆ ಡಿಜಿಟಲ್ ವೇದಿಕೆ ಬಳಸಿಕೊಂಡು ಅವರ ಕೌಶಲ ವೃದ್ಧಿಸಲು ವಿವಿಧ ರೀತಿಯ ತಾಂತ್ರಿಕ ತರಬೇತಿ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಇದರಿಂದ ವೈದ್ಯರ ರೀತಿಯಲ್ಲಿಯೇ ಶುಶ್ರೂಷಕರೂ ಆಯಾ ಕಾಲಮಾನಕ್ಕೆ ಚಿಕಿತ್ಸೆ ನೀಡುವಲ್ಲಿ ಅಪ್​ಗ್ರೇಡ್ ಹೊಂದಲು ನೆರವಾಗಲಿದೆ.
ಕ್ರಿಕೆಟ್ ಲೋಕದ GOAT ಜೇಮ್ಸ್ ಆಂಡರ್ಸನ್ ನಿವೃತ್ತಿ ಘೋಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − twelve =
Remember me
