| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಬೇಕೆಂಬ ಮಹತ್ವಕಾಂಕ್ಷೆಗೆ ಸರ್ಕಾರದಲ್ಲಿಯೇ ಒಪ್ಪದ ಕೆಲವು ಇಲಾಖೆಗಳು ಅಧಿಕಾರ ಬಿಟ್ಟುಕೊಡಲು ಅಡ್ಡಿಯಾಗಿವೆ. ಅದರೊಂದಿಗೆ ಇಡೀ ಪ್ರಕರಣವನ್ನು ಸಿಎಂ ಅಂಗಳಕ್ಕೆ ತೆಗೆದುಕೊಂಡು ಹೋಗಲು ಸಿದ್ಧತೆ ನಡೆದಿದೆ.
ಗ್ರಾಪಂಗಳಿಗೆ 29 ಇಲಾಖೆಗಳ ಜವಾಬ್ದಾರಿ ನೀಡಲು ಬಜೆಟ್​ನಲ್ಲಿಯೇ ಘೋಷಣೆ ಮಾಡಲಾಗಿತ್ತು. ಆ ಮೂಲಕ ಸಂವಿಧಾನದ 73ನೇ ತಿದ್ದುಪಡಿಯ ಆಶಯ ಜಾರಿಗೆ ತರಲು ಉದ್ದೇಶಿಸಲಾಗಿತ್ತಾದರೂ ನಿಜವಾದ ಗ್ರಾಮ ಸ್ವರಾಜ್ಯದ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಕೇರಳದಲ್ಲಿ ಗ್ರಾಮ ಸ್ವರಾಜ್ಯ ಅತ್ಯಂತ ಯಶಸ್ವಿಯಾಗಿದೆ. ಅದಕ್ಕಿಂತ ಬಲವಾದ ಕಾಯ್ದೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತರಲಾಗಿದೆ. ಕಾಯ್ದೆ ಬಂದು ಐದು ವರ್ಷದ ಮೇಲಾಗಿದ್ದರೂ ಆಶಯ ಈಡೇರಿಲ್ಲ.
ಯೋಜನೆಗಳನ್ನು ರೂಪಿಸುವ, ಖಜಾನೆಯಿಂದ ಹಣ ಪಡೆಯುವ ಅಧಿಕಾರ ಪಂಚಾಯಿತಿಗಳಿಗೆ ನೀಡುವ ಮೂಲಕ ಸಚಿವಾಲಯದಂತೆ ಕಾರ್ಯನಿರ್ವಹಿಸಬೇಕು ಎಂಬ ಭಾವನೆ ಇತ್ತು. ಸಂಸದರು, ಶಾಸಕರು, ಐಎಎಸ್ ಅಧಿಕಾರಿಗಳನ್ನು ಗ್ರಾಪಂಗಳ ಸದಸ್ಯರ ಅಧಿಕಾರ ವ್ಯಾಪ್ತಿಯಿಂದ ದೂರವಿಟ್ಟು, ಆಯಾ ಗ್ರಾಮಗಳ ಯೋಜನೆಗಳ ಅನುಷ್ಠಾನ ಅಲ್ಲಿಯೇ ಆಗುವಂತೆ ನೋಡಿಕೊಳ್ಳುವುದು ಉದ್ದೇಶವಾಗಿದೆ. ಹಣಕಾಸು, ಮುನ್ನೋಟ ಹಾಗೂ ಜವಾಬ್ದಾರಿ ಎಂಬ ಮೂರು ಆಶಯಗಳನ್ನು ಇಟ್ಟುಕೊಂಡು ಗ್ರಾಪಂಗಳ ಜವಾಬ್ದಾರಿ ನಕ್ಷೆ ಯೋಜನೆ ರೂಪಿಸಲಾಗಿದೆ.
ಮುಗಿದ ಗಡುವು:ಕಳೆದ ವರ್ಷದ ನವೆಂಬರ್ 26ರ ಒಳಗೆ 29 ಇಲಾಖೆಗಳ ಅಧಿಕಾರವನ್ನು ಗ್ರಾಪಂಗಳಿಗೆ ವರ್ಗಾವಣೆ ಮಾಡುವ ಗಡುವು ಹಾಕಿಕೊಳ್ಳಲಾಗಿತ್ತು. ಇದೀಗ ಗಡುವು ಮೀರಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಿಗೆ ಪತ್ರ ಬರೆದು ಇಲಾಖೆಗಳ ಕರ್ತವ್ಯವನ್ನು ಪಂಚಾಯಿತಿಗಳಿಗೆ ಹಸ್ತಾಂತರ ಮಾಡುವಂತೆ ಮನವಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರಿಂದಲೂ ಹೇಳಿಸಿದ್ದರು. ಆದರೆ ಅಧಿಕಾರಿಗಳು ತಮ್ಮ ಇಲಾಖೆ ಗಳ ಮೂಲಕವೇ ನಿರ್ವಹಣೆ ಮಾಡುವುದಾಗಿ ಹೇಳುತ್ತಿದ್ದಾರೆ.
ಸಮಸ್ಯೆ ಇರುವುದೆಲ್ಲಿ:ಅಧಿಕಾರ ಬಿಟ್ಟು ಕೊಡುವುದಕ್ಕೆ ಪ್ರಮುಖ ಅಡ್ಡಿ ಇರುವುದು ಅನುದಾನದ ವಿಷಯದಲ್ಲಿ. ಶೇ.83 ಹಣ ರಾಜ್ಯ ವಲಯದಲ್ಲಿದ್ದರೆ, ಶೇ.17 ಮಾತ್ರ ಜಿಲ್ಲಾ ವಲಯದಲ್ಲಿದೆ. ಪಂಚಾಯಿತಿಗಳಿಗೆ ಬರುವ ಅನುದಾನದಲ್ಲಿ ಶೇ.90 ನೌಕರರ ಸಂಬಳಕ್ಕೆ ವೆಚ್ಚವಾಗುತ್ತಿದೆ. ಶೇ.83 ಹಣದ ನಿರ್ವಹಣೆ ಬಿಟ್ಟುಕೊಡಲು ಅಧಿಕಾರಿವರ್ಗ ಸಿದ್ಧವಿಲ್ಲವೆಂದು ಮೂಲಗಳು ಹೇಳುತ್ತವೆ.
ಕೆಳ ಹಂತದಿಂದ ಯೋಜನೆ:ಯಾವುದೇ ಯೋಜನೆ ಅಗತ್ಯಕ್ಕೆ ತಕ್ಕಂತೆ ಕೆಳ ಹಂತದಲ್ಲಿ ರೂಪುಗೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಗ್ರಾಮಸಭೆಗಳ ಜತೆಗೆ ಮಕ್ಕಳ ಹಾಗೂ ಮಹಿಳೆಯರ ಗ್ರಾಮಸಭೆಗಳನ್ನೂ ನಡೆಸಲಾಗುತ್ತದೆ. ಆ ಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಅರ್ಥ ಬರಬೇಕಾದರೆ ಜವಾಬ್ದಾರಿ ನಕ್ಷೆಯ ಮೂಲಕ ಅಧಿಕಾರದ ಹಸ್ತಾಂತರ ಅಗತ್ಯವಾಗಿದೆ.
ಹೇಗೆ ಆಗಲಿದೆ:ಅರಣ್ಯ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಲೋಕೋಪಯೋಗಿ, ಸಾಮಾಜಿಕ ಭದ್ರತಾ ಪಿಂಚಣಿ, ಜಲ ಸಂಪನ್ಮೂಲ ಸೇರಿದಂತೆ 29 ಇಲಾಖೆಗಳು ಬಜೆಟ್ ಸಂಬಂಧಿಸಿದಂತೆ ಲಿಂಕ್ ಡಾಕ್ಯೂಮೆಂಟ್ ಸಿದ್ಧಪಡಿಸಬೇಕಾಗುತ್ತದೆ. ಆಯಾ ಗ್ರಾಪಂಗಳು ರೂಪಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಅದರಿಂದ ಗ್ರಾಮಗಳಿಗೆ ಇಲಾಖೆಗಳಿಂದ ಆಗಬೇಕಾದ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ. ಇದರಿಂದ ರಾಜ್ಯದಲ್ಲಿ ಒಂದೇ ರೀತಿಯ ಯೋಜನೆ ರೂಪುಗೊಂಡು ಅನುಷ್ಠಾನದಲ್ಲಿ ಆಗುವ ಲೋಪಗಳಿಗೆ ತಿಲಾಂಜಲಿ ಇಡಲಾಗುತ್ತದೆ.
ಇಲಾಖೆಗಳ ಮಾಹಿತಿ :ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಕೆಲವು ಇಲಾಖೆಗಳು ತಮ್ಮಿಂದ ಯಾವ ಅಧಿಕಾರ ನೀಡಲು ಹಾಗೂ ನೀಡದಿರಲು ಸಾಧ್ಯವಿಲ್ಲ ಎಂಬ ಉತ್ತರ ಬರೆದಿವೆ. ಆದ್ದರಿಂದಲೇ ಸಿಎಂ ಅಂಗಳದಲ್ಲಿ ನಿರ್ದೇಶನ ಕೊಡಿಸಲಾಗುತ್ತದೆ.
ಶಾಸಕರಲ್ಲಿಯೂ ವಿರೋಧಅನೇಕ ಶಾಸಕರು ಅಧಿಕಾರ ಬಿಟ್ಟುಕೊಡಲು ವಿರೋಧ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಇನ್ನೂ ಕೆಲವರು ಅಧಿಕಾರಿಗಳ ಮೂಲಕ ಒತ್ತಡ ತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂವಿಧಾನದ 73 ನೇ ತಿದ್ದುಪಡಿಯ ಕುರಿತು ಕೆಲ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇರಬಹುದು. ಆರ್ಥಿಕ ಜವಾಬ್ದಾರಿ ಇರುವ ಕಡೆ ಸಾಧಕ-ಬಾಧಕ ನೋಡುತ್ತಿರುವುದಾಗಿ ಹೇಳುತ್ತಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದರೆ ಎಲ್ಲವೂ ಪರಿಹಾರವಾಗಲಿದೆ. ಬಜೆಟ್​ಗೆ ಮುನ್ನ ಅಧಿಕಾರ ಹಸ್ತಾಂತರದ ಪ್ರಯತ್ನ ಆರಂಭವಾಗಿದೆ.
| ಪ್ರಿಯಾಂಕ್ ಖರ್ಗೆ ಆರ್​ಡಿಪಿಆರ್ ಸಚಿವ
ಯಾವ ಇಲಾಖೆಗಳು ವಿರೋಧಶಿಕ್ಷಣ, ಸಣ್ಣ ನೀರಾವರಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಶು ಸಂಗೋಪನೆ ಸೇರಿ ಏಳೆಂಟು ಇಲಾಖೆಗಳು ವಿರೋಧ ಮಾಡುತ್ತಿವೆ. ಶಿಕ್ಷಣ ಇಲಾಖೆ ಶಾಲಾ ಮಕ್ಕಳ ಯೂನಿಫಾರಂ ಖರೀದಿಯ ಜವಾಬ್ದಾರಿ ನೀಡುವುದು, ಶಿಕ್ಷಕರ ಹಾಜರಾತಿಯ ಮೇಲೆ ನಿಗಾವಹಿಸುವುದಕ್ಕೆ ವಿರೋಧ ಮಾಡುತ್ತಿದೆ. ಕೆರೆಗಳ ಜವಾಬ್ದಾರಿ ನೀಡಲು ಸಣ್ಣ ನೀರಾವರಿ, ಪಶು ಸಂಗೋಪನಾ ಇಲಾಖೆ ತನ್ನ ಚಿಕಿತ್ಸಾಲಯಗಳ ನಿರ್ವಹಣೆ, ಅಂಗನವಾಡಿಗಳ ಜವಾಬ್ದಾರಿ, ಆಹಾರ ಖರೀದಿಯ ಹೊಣೆಗಾರಿಕೆ ಕೊಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ಕೆಲ ಇಲಾಖೆಗಳು ಎಲ್ಲ ಅಧಿಕಾರ ಬಿಟ್ಟುಕೊಡಲು ಹಿಂದೇಟು ಹಾಕಿವೆ ಎಂದು ಮೂಲಗಳು ಹೇಳಿವೆ.
ಏನೇನು ಆಗಲಿದೆಗ್ರಂಥಾಲಯ ಮೇಲ್ವಿಚಾರಕರು, ಸಮುದಾಯ ಆರೋಗ್ಯ ಅಧಿಕಾರಿ, ಅಂಗನವಾಡಿ ಮೇಲ್ವಿಚಾರಕರು ಮತ್ತು ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮ ಪುನರ್ವಸತಿ ಕಾರ್ಯಕರ್ತರು, ಗ್ರಾಮ ಕಾಯಕ ಮಿತ್ರ, ಬಿಸಿಯೂಟ ಅಡುಗೆಯವರು, ಎನ್​ಆರ್​ಎಲ್​ಎಂ ಸಿಬ್ಬಂದಿ ಹಾಗೂ ಇತರರು ಗ್ರಾಪಂಗಳ ವ್ಯಾಪ್ತಿಗೆ ಸೇರಲಿದ್ದಾರೆ. ಅಂಗನವಾಡಿಗಳ, ಕಿರಿಯ ಪ್ರಾಥಮಿಕ ಶಾಲೆಗಳ ನಿರ್ವಹಣೆ, ಆರೋಗ್ಯ ಕೇಂದ್ರ, ವಿವಿಧ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಹಾಸ್ಟೆಲ್​ಗಳು, ಸಾಮಾಜಿಕ ಭದ್ರತಾ ಪಿಂಚಣಿ ಹಾಗೂ ಇತ್ಯಾದಿ ಜವಾಬ್ದಾರಿಗಳು ಸಿಗಲಿವೆ. ಜಿಲ್ಲಾಧಿಕಾರಿಗಳ ಬಳಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ, ತೋಟಗಾರಿಕೆ, ಕಿಸಾನ್ ಸಮ್ಮಾನ್, ವಸತಿ ಯೋಜನೆಗಳು, ಪಿಎಂ ಮತ್ಸ್ಯ ಯೋಜನೆ ಸೇರಿದಂತೆ ಕೆಲವು ಯೋಜನೆಗಳನ್ನು ಜಿಪಂ ವ್ಯಾಪ್ತಿಗೆ ವರ್ಗಾವಣೆ ಮಾಡಬೇಕಾಗುತ್ತದೆ.
ಪರಿಶಿಷ್ಟರಿಗೆ ಶೇ.25 ಅನುದಾನ ಬಳಕೆಬೆಂಗಳೂರು: ಗ್ರಾಪಂ ನಿಧಿಯಲ್ಲಿ ಶೇ.25ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ವಿನಿಯೋಗಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ಶುಲ್ಕ, ಪುಸ್ತಕ ಖರೀದಿಗೆ ಸಹಾಯಧನ, ಶೇ.80ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ನಗದು ಬಹುಮಾನ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆ, ಭಾಷಣ, ವಿಜ್ಞಾನ, ಸಾಂಸ್ಕೃತಿಕ ಹಾಗೂ ಇತರ ವ್ಯಾಸಂಗೇತರ ಸ್ಪರ್ಧೆಗಳಲ್ಲಿ ಭಾಗವಹಿಸಲು ತೆರಳುವವರಿಗೆ ಸಾರಿಗೆ ವೆಚ್ಚ ನೀಡಬಹುದು. ಹೊಸದಾಗಿ ಕಾನೂನು ಪದವಿ ಪಡೆದ ವಕೀಲರಿಗೆ ಒಂದು ಬಾರಿಗೆ ಮಾತ್ರ ಪುಸ್ತಕ, ನೋಂದಣಿ ಶುಲ್ಕಗಳಿಗೆ ಗರಿಷ್ಠ 5000 ರೂ. ಸಹಾಯಧನ ನೀಡಬಹುದು. ದೃಷ್ಟಿದೋಷದಿಂದ ಬಳಲುವವರಿಗೆ ಚಿಕಿತ್ಸೆ ಹಾಗೂ ಕನ್ನಡಕದ ವೆಚ್ಚಕ್ಕಾಗಿ 5000 ರೂ., ದೀರ್ಘಕಾಲದ ಕಾಯಿಲೆಯಿಂದ ಬಳಲುವವರಿಗೆ, ಉಪಕಸುಬು, ಸಣ್ಣ ವ್ಯಾಪಾರ ಹಾಗೂ ಸ್ವಂತ ಉದ್ದಿಮೆ ಪ್ರಾರಂಭಿಸುವವರಿಗೆ, ಉತ್ಪನ್ನ ಪ್ರಚಾರಕ್ಕೆ, ಹೈನುಗಾರಿಕೆಗೆ ಗರಿಷ್ಠ 5 ಸಾವಿರ ರೂ., ಹೊಸದಾಗಿ ಅಡುಗೆ ಅನಿಲ ಸಂಪರ್ಕ ಪಡೆಯಲು, ಸೋಲಾರು ಲಾಟೀನು ಹಾಗೂ ಬೀದಿದೀಪ ಅಳವಡಿಸಲು ಶೇ.25 ಪರಿಮಿತಿ ಅನುದಾನ ಬಳಸಿಕೊಳ್ಳಬಹುದು. ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಆರೋಗ್ಯ, ನೈರ್ಮಲ್ಯ, ಕಾನೂನು ಅರಿವು ಕಾರ್ಯಕ್ರಮ ನಡೆಸಲು 5 ಸಾವಿರ ರೂ., ಗುಡಿಸಲು ಮತ್ತು ಮನೆಗಳು ಪ್ರಕೃತಿ ವಿಕೋಪಕ್ಕೆ ಹಾನಿಯಾಗಿದ್ದಲ್ಲಿ 1 ರಿಂದ 2 ಸಾವಿರ ರೂ. ಸಹಾಯಧನ ನೀಡಬಹುದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.
ಸಿದ್ದರಾಮಯ್ಯ ಅವರೇ ಸರಿಯಾಗಿ ವಿಡಿಯೋ ನೋಡಿ: ಸಿಎಂ ಸಿದ್ದು ಆರೋಪಕ್ಕೆ ಅಸ್ಸಾಂ ಸಿಎಂ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
