ಬೆಳಗಾವಿ:ಜಾತ್ಯಾತೀತ, ಭಾಷಾತೀತವಾಗಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್​ಇ) ಅಧ್ಯಕ್ಷರಾಗಿ ಶಾಸಕ ಮಹಾಂತೇಶ ಕೌಜಲಗಿ, ಉಪಾಧ್ಯಕ್ಷರಾಗಿ ರಾಜೇಂದ್ರ ಹಂಜಿ ಮತ್ತು ಬಸವರಾಜ ತಟವಟಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.
ನಗರದ ಕೆಎಲ್​ಇ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 104 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೆಎಲ್​ಇ ಸಂಸ್ಥೆಯು ರಾಜಕೀಯೇತರವಾಗಿ ಕೆಲಸ ಮಾಡುತ್ತಿದೆ. ಸತ್ಯ, ಪ್ರೇಮ, ಸೇವೆ, ನಿಸ್ವಾರ್ಥ, ತ್ಯಾಗ ಧ್ಯೇಯಗಳೊಂದಿಗೆ ಸರ್ಪ¤ಗಳಿಂದ ಸ್ಥಾಪಿತವಾದ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯು ಅವಿರೋಧ ಆಯ್ಕೆಯಾಗಿರುವುದು ಹೆಮ್ಮೆ. ಸಂಸ್ಥೆಗೆ ಕಳೆದ ನಾಲ್ಕು ಅವಧಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರು ಅವಿರೋಧ ಆಯ್ಕೆಯಾಗುತ್ತಿದ್ದಾರೆ ಎಂದು ವಿವರಿಸಿದರು. ಪ್ರಜಾಪ್ರಭುತ್ವದ ತಳಹದಿ ಮೇಲೆ ರೂಪುಗೊಂಡಿರುವ ಕೆಎಲ್​ಇ ಸಂಸ್ಥೆಯು ಸದಸ್ಯರ ಆದೇಶಕ್ಕೆ ತಲೆ ಬಾಗಿದೆ. ಸದಸ್ಯರು ನಮ್ಮ ಮೇಲಿಟ್ಟ ವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ಬಾರದಂತೆ ಶೈಕ್ಷಣಿಕ, ಆರೋಗ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಂಸ್ಥೆ ಅದ್ವಿತೀಯವಾದುದನ್ನು ಸಾಧಿಸಿ ತೋರಿಸಿದೆ. 270ಕ್ಕೂ ಹೆಚ್ಚು ಅಂಗ ಸಂಸ್ಥೆಗಳು ದೇಶಾದ್ಯಂತ ವಿಸ್ತರಿಸಿವೆ. 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 16,000ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರ ಮಕ್ಕಳ ಕಲ್ಯಾಣಕ್ಕೆ ಸಂಸ್ಥೆ ಶ್ರಮಿಸಿದೆ. ಅವರಿಗೆ ಉತ್ತಮ ಆರೋಗ್ಯ ಸೇವೆ ನೀಡಿದೆ. ಅಂತೆಯೇ ಕೆಎಲ್​ಇ ಸಂಸ್ಥೆಯು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು. ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತನಾಡಿ, ಕೆಎಲ್​ಇ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವಲ್ಲಿ ಡಾ.ಪ್ರಭಾಕರ ಕೋರೆ ಅವರ ಪಾತ್ರ ದೊಡ್ಡದಿದೆ. 30 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಕವಟಗಿಮಠ ಸ್ವಾಗತಿಸಿದರು.
ಚುನಾವಣಾಧಿಕಾರಿ ಡಾ.ಬಿ.ಜಿ.ದೇಸಾಯಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭವಿಷ್ಯದ ಯೋಜನೆಗಳು
ಕೆಎಲ್​ಇ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಹಿರಿಯರ ಮಾರ್ಗದರ್ಶನದಲ್ಲಿ ಅವರ ಸಲಹೆ ಪಡೆದು ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
| ಮಹಾಂತೇಶ ಕೌಜಲಗಿ ಕೆಎಲ್​ಇ ಸಂಸ್ಥೆಯ ನೂತನ ಅಧ್ಯಕ್ಷ
ರಾಜ್ಯ ಬೃಹತ್ ಕೈಗಾರಿಕೆ ಸಚಿವರು ಹುಬ್ಬಳ್ಳಿಯವರು ಆಗಿರುವುದರಿಂದ ಹೂಡಿಕೆದಾರರ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಅದಕ್ಕೆ ಪ್ರತ್ಯೇಕತೆಯ ಭಾವ ಸೃಷ್ಟಿಸುವುದು ಬೇಡ. ಬರುವ ದಿನಗಳಲ್ಲಿ ಬೆಳಗಾವಿಯಲ್ಲೂ ಸಮಾವೇಶ ನಡೆಸೋಣ. ರಾಣೆಬೆನ್ನೂರಿನಿಂದ ಮಹಾರಾಷ್ಟ್ರ ಗಡಿ ವರೆಗಿನ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಪ್ರದೇಶ ಕೈಗಾರಿಕಾ ಕಾರಿಡಾರ್ ಎಂದು ಗುರುತಿಸಿಕೊಳ್ಳುತ್ತಿದೆ. ಅಲ್ಲದೆ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ ತ್ರಿವಳಿ ನಗರಗಳೆಂದು ಕರೆಸಿಕೊಳ್ಳುತ್ತಿರುವುದರಿಂದ ಮೂರೂ ನಗರಗಳ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನಿಸಬೇಕಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಅನುದಾನ, ಅಬಿವೃದ್ಧಿ ಕೆಲಸಗಳು ನಡೆದಿವೆ.
| ಡಾ.ಪ್ರಭಾಕರ ಕೋರೆ ರಾಜ್ಯಸಭಾ ಸದಸ್ಯ
ಯಾರು, ಯಾವುದಕ್ಕೆ ಆಯ್ಕೆ?
ಅಧ್ಯಕ್ಷ:ಮಹಾಂತೇಶ ಶಿವಾನಂದ ಕೌಜಲಗಿ
ಉಪಾಧ್ಯಕ್ಷರು:ರಾಜೇಂದ್ರ ವಿರುಪಾಕ್ಷಪ್ಪ ಹಂಜಿ, ಬಸವರಾಜ ಶಿವಲಿಂಗಪ್ಪ ತಟವಟಿ
ಆಡಳಿತ ಮಂಡಳಿ ಸದಸ್ಯರು: ಡಾ.ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ ಪ್ರಭಾಕರ ಕೋರೆ, ಶ್ರೀಶೈಲಪ್ಪ ಚನ್ನಪ್ಪ ಮೆಟಗುಡ್, ಜಯಾನಂದ ಊರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಶಂಕರಣ್ಣ ಈಶ್ವರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ, ಅನಿಲ ವಿಜಯಬಸಪ್ಪ ಪಟ್ಟೇದ, ವಿರುಪಾಕ್ಷಿ ಶಿವಲಿಂಗಪ್ಪ ಸಾಧುನವರ.
ಮತದಾನ ರದ್ದು
ಕೆಎಲ್​ಇ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಅವಿರೋಧ ಆಗಿರುವುದರಿಂದ ಫೆ.29ರಂದು ಹುಬ್ಬಳ್ಳಿಯ ವಿ.ವಿ.ಭೂಮರಡ್ಡಿ ಅಭಿಯಾಂತ್ರಿಕ, ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ್ತು ಮಾ.1ರಂದು ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದಲ್ಲಿ ನಡೆಯಬೇಕಿದ್ದ ಚುನಾವಣಾ ಮತದಾನವನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಬಿ.ಜಿ.ದೇಸಾಯಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
