ವಿಲಾಸ ಮೇಲಗಿರಿಬೆಂಗಳೂರು:ಚುನಾವಣಾ ನೀತಿಸಂಹಿತೆ ಜಾರಿಯಾಗದಿರುವುದನ್ನೇ ಬಂಡವಾಳ ಮಾಡಿಕೊಂಡು ಎಲ್ಲ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಮತದಾರರಿಗೆ ಎಗ್ಗಿಲ್ಲದೆ ಆಮಿಷವೊಡ್ಡುತ್ತಿದ್ದಾರೆ. ದುಬಾರಿ ಗಿಫ್ಟ್​ಗಳನ್ನು ಪೈಪೋಟಿ ಮೇಲೆ ಹಂಚುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯಾಚರಣೆ ಕೈಗೊಂಡಿದ್ದಾರೆ. 2 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತದ ವರ್ಗಾವಣೆ ಮೇಲೂ ಕಣ್ಣಿಟ್ಟಿದ್ದಾರೆ.
ಮೂರ್ನಾಲ್ಕು ತಿಂಗಳಿಂದ ಹಾಲಿ ಶಾಸಕರು, ಸಚಿವರು ಕೂಡ ಕುಕ್ಕರ್, ಸೀರೆ, ಗೋಡೆ ಗಡಿಯಾರ, ಫ್ಯಾನ್, ಬೆಳ್ಳಿ ನಾಣ್ಯ, ಸಿಲಿಂಡರ್, ಯುಗಾದಿ ಗಿಫ್ಟ್ ಪ್ಯಾಕ್, ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವಿನ ಘೋಷಣೆ ಮಾಡುತ್ತಿದ್ದಾರೆ. ಕೆಲವರಂತೂ ಉಚಿತ ನಿವೇಶನ ನೀಡುವುದಾಗಿಯೂ ಘೋಷಿಸಿದ್ದಾರೆ. ಮೊದಲೆಲ್ಲ ಕದ್ದು ಮುಚ್ಚಿ ಹಣ, ವಸ್ತುಗಳನ್ನು ಹಂಚಿಕೆ ಮಾಡುತ್ತಿದ್ದವರು ಈಗ ಬಹಿರಂಗವಾಗಿಯೇ ವಿತರಣೆ ಮಾಡುತ್ತಿದ್ದಾರೆ.
ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಗ್ಗೆ ಅನೇಕರು ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದರು. ದೂರು ಕೂಡ ನೀಡಿದ್ದರು. ಕೆಲವರು ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಪಿಸಿಸಿ ಮತದಾರರ ಆಮಿಷಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಹೀಗಿದ್ದರೂ ನಿರ್ದಿಷ್ಟ ಪ್ರಕರಣಗಳ ಮೇಲೆ ಕ್ರಮ ಕೈಗೊಂಡಿರಲಿಲ್ಲ. ಈಗ ಚುನಾವಣಾ ಆಯೋಗ ಮತದಾರರ ಆಮಿಷಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಧಿಕಾರಿಗಳು ಆಖಾಡಕ್ಕಿಳಿದಿದ್ದಾರೆ. ವ್ಯಾಪಾರ-ವಹಿವಾಟಿನ ಮೇಲೆ ನೋಟ ನೆಟ್ಟಿದ್ದಾರೆ.
ಬೆಂಗಳೂರಿನ ಅನೇಕ ಕಡೆಗಳಲ್ಲಿ ಪರವಾನಗಿ ಪಡೆಯದೆ ಅಂಟಿಸಿದ್ದ ಪೋಸ್ಟರ್‌ಗಳಿಗೆ ಬಿಳಿ ಬಣ್ಣ ಬಳಿದು ಮರೆ ಮಾಚಲಾಗಿದೆ. ಪರವಾನಗಿ ಪಡೆಯದೆ ಕಟ್ಟಿದ ಬ್ಯಾನರ್, ಪೋಸ್ಟರ್‌, ಭಿತ್ತಿಪತ್ರಗಳ ತೆರವಿಗೆ ಬಿಬಿಎಂಪಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಒಂದು ಪ್ರದೇಶಕ್ಕೆ ಸೀಮಿತಗೊಳಿಸಿ ಪರವಾನಗಿ ತೆಗೆದುಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಅಳವಡಿಸಿದ್ದರೂ ಕ್ರಮ ನಿಶ್ಚಿತ.
ಚುನಾವಣಾ ನೀತಿಸಂಹಿತೆ ಜಾರಿ ಆಗಿಲ್ಲದ ಕಾರಣ ಈಗಿರುವ ಕಾನೂನಿನ ಅನ್ವಯವೇ ಅಕ್ರಮಗಳ ಪತ್ತೆ ಮಾಡಲಾಗುತ್ತದೆ. ಪೊಲೀಸ್, ಐಟಿ, ಅಬಕಾರಿ, ವಾಣಿಜ್ಯ, ಸ್ಥಳೀಯ ಸಂಸ್ಥೆಗಳು ತಮಗಿರುವ ಅಧಿಕಾರ ವ್ಯಾಪ್ತಿಯನ್ನೇ ಬಳಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ಎಲ್ಲ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಕೊಡುಗೆಗಳನ್ನು ಕೊಡುವಲ್ಲಿ ನಿರತ ರಾಗಿದ್ದಾರೆ. ಯುಗಾದಿ ನೆಪದಲ್ಲಿ ಮನೆ ಮನೆಗೆ ಉಡುಗೊರೆ ತಲುಪಿಸಲಾಗುತ್ತದೆ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡುವುದರ ಜತೆಗೆ ಬೆಳ್ಳಿ ದೀಪ, ಪಂಚೆ, ಸೀರೆ, ತಟ್ಟೆ, ಲೋಟ, ಸಿಹಿ ತಿನಿಸು ನೀಡುವುದು ಅವ್ಯಾಹತವಾಗಿ ನಡೆಯುತ್ತಿದೆ.
ಬ್ಯಾಂಕ್‌ಗಳು ಪ್ರತಿದಿನ ಸಂಜೆ 5 ರಿಂದ ಬೆಳಗ್ಗೆ 9 ಗಂಟೆ ವರೆಗೆ ಕ್ಯಾಷ್ ಟ್ರಾನ್ಸ್‌ಫರ್ ವೆಹಿಕಲ್ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ಸಾಗಣೆ ಮಾಡದಂತೆ ಕೆಲವು ಜಿಲ್ಲಾಧಿಕಾರಿಗಳು ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ | ಸಾಲದ ಹಣ ಹಿಂತಿರುಗಿಸದೆ ಸತಾಯಿಸಿದ ಸ್ನೇಹಿತರು; ಮನನೊಂದು ವಿಷ ಸೇವಿಸಿದ ಪಶುವೈದ್ಯ
ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್​ಕುಮಾರ್ ನೇತೃತ್ವದ ನಿಯೋಗ ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿ ಚುನಾವಣಾ ಪೂರ್ವಸಿದ್ಧತೆ ಪರಿಶೀಲಿಸಿತ್ತು. ಮತದಾರರ ಆಮಿಷಕ್ಕೆ ಸಂಬಂಧಿಸಿದಂತೆ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣೆ ನೀತಿಸಂಹಿತೆ ಜಾರಿವರೆಗೆ ಕಾಯಬೇಡಿ. ಪ್ರಸ್ತುತ ಇರುವ ಕಾನೂನು ಬಳಕೆ ಮಾಡಿಕೊಂಡು ಅಕ್ರಮ ತಡೆಗಟ್ಟಿ. ಇದಕ್ಕಾಗಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಕಾರ್ಯೋನ್ಮುಖವಾಗಿವೆ.
ಪೊಲೀಸ್, ವಾಣಿಜ್ಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದಾರೆ. ಅಕ್ರಮ ವಹಿವಾಟು, ಸರಕು ಸಾಗಣೆ, ಚಲನ-ವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಮತದಾರರಿಗೆ ಹಂಚಲು ವಸ್ತುಗಳನ್ನು ದಾಸ್ತಾನಿಟ್ಟರೆ ಅವುಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಂಗ್ರಹಿಸಿಟ್ಟಿರುವ ವಸ್ತುಗಳ ಖರೀದಿ ವಿವರ ಪಡೆಯುತ್ತಿದ್ದಾರೆ. ಅಧಿಕೃತವಾಗಿ ಖರೀದಿ ಮಾಡಲಾಗಿದೆಯೆ? ಜಿಎಸ್​ಟಿ ಪಾವತಿ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಮಾಜಿ ಸಚಿವ ಶಂಕರ್ ಅವರ ರಾಣೆಬೆನ್ನೂರಿನ ಮನೆ ಮೇಲೆ ವಾಣಿಜ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನಿನ ವಿವರ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕುಣಿಗಲ್​ನಲ್ಲಿ ಕಾಂಗ್ರೆಸ್ ಶಾಸಕರ ಸ್ಟಿಕ್ಕರ್ ಅಂಟಿಸಿದ್ದ ಕುಕ್ಕರ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೆಜಿಎಫ್​ನಲ್ಲಿ ಕಾಂಗ್ರೆಸ್ ಶಾಸಕಿ ಪೋಸ್ಟರ್​ಗಳಿದ್ದ ಆಹಾರ ಧಾನ್ಯದ ಕಿಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದುವರೆಗೆ ಅನೇಕ ಕಡೆ ರಾಜಕೀಯ ಸಭೆ, ಸಮಾರಂಭ, ಸಮಾವೇಶ ಗಳನ್ನು ಸಂಬಂಧಿಸಿದ ಪ್ರಾಧಿಕಾರಗಳಿಂದ ಪರವಾನಗಿ ಪಡೆಯದೆ ನಡೆಸಲಾಗುತ್ತಿತ್ತು. ಇನ್ನು ಮುಂದೆ ಹಾಗೆ ಮಾಡುವಂತಿಲ್ಲ.
ಹಣ ವರ್ಗಾವಣೆ ಮೇಲೂ ಚುನಾವಣಾ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಹಣ ಹಿಂತೆಗೆದುಕೊಳ್ಳುವಿಕೆಗೆ ಸೂಕ್ತ ಕಾರಣ ಸಂಗ್ರಹಿಸುತ್ತಿದ್ದಾರೆ. ಮಾ.15 ರಿಂದ ಮಾದರಿ ನೀತಿಸಂಹಿತೆ ಮುಕ್ತಾಯವಾಗುವವರೆಗೆ ತಮ್ಮ ಅಧೀನಕ್ಕೆ ಒಳಪಡುವ ಎಲ್ಲ ಬ್ಯಾಂಕ್​ಗಳು ಪ್ರತಿದಿನ 2 ಲಕ್ಷ ರೂ. ಅಥವಾ ಮೀರಿದ ಮೊತ್ತವು ಯಾವುದೇ ಖಾತೆಯಿಂದ ಹಣ ವರ್ಗಾವಣೆ/ಹಿಂಪಡೆಯುವಿಕೆ ನಡೆದರೆ ಪ್ರತಿ ದಿನ ವರದಿ ಸಲ್ಲಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಮತದಾರರಿಗೆ ಟ್ರಾವೆಲ್ ಕಿಟ್ ಕೊಟ್ಟರೆ, ಇನ್ನೊಂದೆಡೆ ವಿದೇಶಿ ನೋಟು ಹಂಚಿದ್ದಾರೆ. ಮತ್ತೆ ಕೆಲವರು ಮತದಾರರನ್ನು ತೀರ್ಥಕ್ಷೇತ್ರಗಳ ದರ್ಶನಕ್ಕೆ ಕಳುಹಿಸುತ್ತಿರುವುದು ವರದಿಯಾಗಿದೆ.
ಚುನಾವಣಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ನೀತಿಸಂಹಿತೆ ಜಾರಿ ಆಗದಿರುವ ಕಾರಣ ಚಾಲ್ತಿಯಲ್ಲಿರುವ ಕಾನೂನು ಅನ್ವಯ ಕ್ರಮ ಕೈಗೊಳ್ಳುತ್ತಿವೆ. ವಾಣಿಜ್ಯ, ಆದಾಯ, ಅಬಕಾರಿ ಹೀಗೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಪಾರದರ್ಶಕ ಹಾಗೂ ನಿರ್ಭೀತ ಚುನಾವಣೆ ನಡೆಸಲು ಕಾರ್ಯಾಚರಣೆ ನಡೆಸುತ್ತಿವೆ.| ವೆಂಕಟೇಶ್​ಕುಮಾರ್ ಅಪರ ಮುಖ್ಯ ಚುನಾವಣಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − ten =
Remember me
