ಬೆಂಗಳೂರು:ಬರ, ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿನ ಜನತೆ ಮುಂಗಾರು ಆರಂಭದ ಹೊತ್ತಲ್ಲಿ ನಿಟ್ಟುಸಿರು ಬಿಡಬೇಕೆನ್ನುವಷ್ಟರಲ್ಲಿ ಮತ್ತೆ ಬೆಲೆ ಏರಿಕೆಯ ಭೂತ ಬೆನ್ನೇರಿದೆ. ಶನಿವಾರವಷ್ಟೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ರಾಜ್ಯ ಸರ್ಕಾರ ದಿಢೀರ್ ಏರಿಕೆ ಮಾಡಿದ ಬಳಿಕ ಅದರ ಪರಿಣಾಮವಾಗಿ ಬಸ್, ಆಟೋ, ಟ್ಯಾಕ್ಸಿ, ಕಟ್ಟಡ ಸಾಮಗ್ರಿ, ಹೋಟೆಲ್ ತಿನಿಸು, ತರಕಾರಿ, ದಿನಬಳಕೆ ವಸ್ತು ಕೂಡ ಗಗನಮುಖಿಯಾಗುವುದು ನಿಶ್ಚಿತವಾಗಿದೆ. ಬೆಲೆ ಏರಿಕೆ ಬರೆ ಎಳೆದ ಸರ್ಕಾರದ ವಿರುದ್ಧ ಜನಾಕ್ರೋಶ ಭುಗಿಲೇಳುತ್ತಿದೆ.
ತೈಲ ಬೆಲೆ ಏರಿಕೆಯಿಂದಾಗಿ ದಿನಬಳಕೆ ವಸ್ತುಗಳು, ಉತ್ಪನ್ನಗಳ ಸರಬರಾಜು, ಸಾಗಣೆ ವೆಚ್ಚ ಹೆಚ್ಚಳವಾಗಲಿದೆ. ಕೈಗಾರಿಕೆಗಳು, ಉದ್ಯಮಗಳು ಸಾಗಣೆ ವೆಚ್ಚ ಅವಲಂಬಿಸಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದರಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಜೀವನದ ಮೇಲೆ ಹೊಡೆತ ಬೀಳಲಿದೆ.
ಇಂಧನ ದರ ಹೆಚ್ಚಳ ವಿಶೇಷವಾಗಿ ಮನೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು ಸಿಮೆಂಟ್, ಸ್ಟೀಲ್, ಸಿಮೆಂಟ್ ಹಾಗೂ ಇಟ್ಟಿಗೆ ಬೆಲೆ ಇನ್ನಷ್ಟು ದುಬಾರಿಯಾಗಲಿದೆ. ವರ್ಷದಿಂದ ವರ್ಷಕ್ಕೆ ಅಡುಗೆ ಎಣ್ಣೆ, ತೊಗರಿ ಬೇಳೆ, ತರಕಾರಿ, ಅಕ್ಕಿ, ಗೋಧಿ, ಹಿಟ್ಟು, ಖಾದ್ಯ ತೈಲಗಳು, ಸಕ್ಕರೆ, ಚಹ- ಕಾಫಿ ಸೇರಿ ದಿನಬಳಕೆ ವಸ್ತುಗಳ ಬೆಲೆ ಏರುತ್ತಿವೆ. ಇದೀಗ ಇಂಧನ ದರ ಹೆಚ್ಚಳದಿಂದಾಗಿ ಮೇಲಿನ ವಸ್ತುಗಳ ಬೆಲೆ ಇನ್ನಷ್ಟು ದುಬಾರಿ ಆಗುತ್ತದೆ. ಬಡವರಿಗೆ, ಮಧ್ಯಮ ವರ್ಗದ ಜನರಿಗೆ, ಅವಿಭಕ್ತ ಕುಟುಂಬಗಳ ಅಡುಗೆ ಮನೆಗಳಿಗೆ ಬಿಸಿ ತಟ್ಟುತ್ತದೆ.
ಪ್ರಯಾಣ ದರವೂ ತುಟ್ಟಿ
ಇಂಧನ ದರ ಹೆಚ್ಚಳದಿಂದಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್​ಗಳು, ಟ್ಯಾಕ್ಸಿಗಳು, ಆಟೋದವರು ದರ ಹೆಚ್ಚಿಸುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ಆಪ್ ಆಧಾರಿತ ಸೇವೆ ನೀಡುತ್ತಿರುವ ಸಾರಿಗೆ ಕಂಪನಿಗಳು ಪ್ರಯಾಣಿಕರಿಂದ ಹಣ ಸುಲಿಗೆಗೆ ಇಳಿಯಲಿವೆ. ಪ್ರಯಾಣಕ್ಕಾಗಿ ಜನರು ಇನ್ನಷ್ಟು ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. ಜತೆಗೆ, ರಾಜ್ಯದ ಎಲ್ಲ ಕಡೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುತ್ತದೆ. ಟ್ಯಾಕ್ಸಿ ಬಳಕೆಗೆ ವಿಧಿಸುತ್ತಿದ್ದ ಪ್ರತಿ ಕಿ.ಮೀ ದರ ಹೆಚ್ಚಳವಾಗುತ್ತದೆ. ಜಿಎಸ್​ಟಿ, ಟೋಲ್ ಶುಲ್ಕವನ್ನು ಪ್ರಯಾಣಿಕರಿಂದಲೂ ವಸೂಲಿ ಮಾಡುತ್ತಾರೆ. ಆಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಬಳಸುವ ಬಳಕೆದಾರರಿಗೆ ಹೊರೆಯಾಗಲಿದೆ.

ಇಂದು ಬಿಜೆಪಿ ಪ್ರತಿಭಟನೆ
ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಿರುವ ಬಿಜೆಪಿ ಭಾನುವಾರ ಕೂಡ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿತು. ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕರು , ಕಾರ್ಯಕರ್ತರು ಚೆಂಬು, ಚಿಪು್ಪ ಹಿಡಿದುಕೊಂಡು, ಕಿವಿಗೆ ಹೂವಿಟ್ಟುಕೊಂಡು ಪ್ರತಿಭಟಿಸಿದರು.
ಕರ್ನಾಟಕದಲ್ಲಿ ಡೀಸೆಲ್ ಬೆಲೆ ಗುಜರಾತ್, ಮಧ್ಯಪ್ರದೇಶಕ್ಕಿಂತ ಕಡಿಮೆ ಇದೆ. ವ್ಯಾಟ್ ಹೆಚ್ಚಳದ ನಂತರವೂ ರಾಜ್ಯದಲ್ಲಿ ಕಡಿಮೆ ತೆರಿಗೆ ಇದೆ. ಕೇಂದ್ರ ಸರ್ಕಾರ ತನ್ನ ಬೊಕ್ಕಸಕ್ಕೆ ಹೆಚ್ಚು ಸಂಗ್ರಹಿಸಿ ಕನ್ನಡಿಗರಿಗೆ ಮೋಸ ಮಾಡಿದೆ| ಸಿದ್ದರಾಮಯ್ಯ ಸಿಎಂ
ದಿನ ಬಳಕೆ ವಸ್ತುಗಳು ಸೇರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಮಾತ್ರ ಪ್ರತಿಭಟಿಸುವುದಲ್ಲ. ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು. ಆ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು| ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವ
ನಿರ್ಮಾಣ ದುಬಾರಿ:ಸಿಮೆಂಟ್, ಉಕ್ಕು, ಮರಳು,ಎಂ.ಸ್ಯಾಂಡ್, ಜಲ್ಲಿಕಲ್ಲು, ಸೈಜ್​ಗಲ್ಲು ಬೆಲೆ ಹೆಚ್ಚಳದಿಂದಾಗಿ ಮನೆ, ಅಪಾರ್ಟ್​ವೆುಂಟ್​ಗಳು ಇನ್ನಷ್ಟು ದುಬಾರಿಯಾಗಲಿದೆ.2ಬಿಎಚ್​ಕೆ, 3 ಬಿಎಚ್​ಕೆ ಅಪಾರ್ಟ್​ವೆುಂಟ್ ಬೆಲೆಗಳು ಗಗನಮುಖಿಯಾಗಲಿವೆ. ವಿಲ್ಲಾಗಳ ಬೆಲೆಯೂ ತುಟ್ಟಿಯಾಗಲಿದೆ.ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂದು ಕನಸು ಕಾಣುತ್ತಿರುವವರಿಗೆ ನಿರಾಸೆಯಾಗುತ್ತದೆ.
ಊಟ-ತಿಂಡಿ ತುಟ್ಟಿ:ಅಡುಗೆ ಎಣ್ಣೆ, ವಾಣಿಜ್ಯ ಬಳಕೆಯ ಸಿಲಿಂಡರ್,ಕಾರ್ವಿುಕ ವೇತನ ಸೇರಿ ಇನ್ನಿತರ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಈಗಾಗಲೇ ಹೋಟೆಲ್ ಉದ್ಯಮಗಳು, ಊಟ-ತಿಂಡಿಗಳ ಮೇಲೆ ದರ ಏರಿಸಿವೆ. ಇಂಧನ ಹೆಚ್ಚಳದಿಂದಾಗಿ ಮತ್ತೊಮ್ಮೆ ಊಟ-ತಿಂಡಿಗಳ ಮೇಲೆ ದರ ಹೆಚ್ಚಿಸಿದರೆ ಒಂದು ಹೊತ್ತು ಊಟ ಬಿಟ್ಟು ಖಾಲಿ ಹೊಟ್ಟೆಯಲ್ಲಿ ಜೀವನ ನಡೆಸಬೇಕಾಗುತ್ತದೆ.
ಕಾಂಗ್ರೆಸ್​ನಲ್ಲಿ ದುಗುಡ:ಪ್ರತಿಪಕ್ಷ ಸ್ಥಾನದಲ್ಲಿದ್ದಾಗಿ ಬೆಲೆ ಏರಿಕೆ ವಿರುದ್ಧ ಬೀದಿ ಹೋರಾಟ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಈಗ ಧರ್ಮಸಂಕಟ ಎದುರಾಗಿದೆ. ಅನಿರೀಕ್ಷಿತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದರಿಂದ ಜನರ ಎದುರು ಸಮರ್ಥಿಸಿಕೊಳ್ಳಲಾಗದ ಸಂದಿಗ್ಧಕ್ಕೆ ಸಿಲುಕಿದ್ದಾರೆ.
ಗ್ರಾಹಕರ ಲಾಭಕ್ಕೆ ಕತ್ತರಿ
ಯೂಕ್ರೇನ್-ರಷ್ಯಾ ಯುದ್ಧದ ಸಂಕಷ್ಟದ ನಡುವೆಯೂ ಭಾರತ ಸರ್ಕಾರ ರಾಜತಾಂತ್ರಿಕವಾಗಿ ದೃಢ ಹೆಜ್ಜೆಯಿಟ್ಟು ಗಮನ ಸೆಳೆದಿತ್ತು. ಅಮೆರಿಕ ಮತ್ತಿತರ ರಾಷ್ಟ್ರಗಳ ಒತ್ತಡಕ್ಕೂ ಮಣಿಯದೆ ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ. ಇದೇ ಕಾಲಕ್ಕೆ ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣಕ್ಕೂ ಉತ್ತೇಜನ ನೀಡುತ್ತಿದೆ. ಇವೆಲ್ಲವುಗಳ ಫಲವಾಗಿ ದೀರ್ಘಾವಧಿಯಿಂದ ಪ್ರತಿ ಲೀಟರ್ ಪೆಟ್ರೋಲ್ 100 ರೂ. ಆಸುಪಾಸಿನಲ್ಲಿದೆ. ಅಂದರೆ ರಷ್ಯಾದಿಂದ ತರಿಸಿಕೊಳ್ಳುತ್ತಿರುವ ಕಡಿಮೆ ಬೆಲೆಯ ಕಚ್ಚಾ ತೈಲದ ಲಾಭವನ್ನು ಗ್ರಾಹಕರಿಗೆ ಕೇಂದ್ರ ಸರ್ಕಾರ ಹಂಚಿಕೊಳ್ಳುತ್ತಿದೆ. ಇದೀಗ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದರಿಂದ ಗ್ರಾಹಕರ ಜೇಬಿಗೆ ಸೇರುತ್ತಿದ್ದ ಲಾಭಕ್ಕೆ ಕತ್ತರಿ ಹಾಕಿದಂತಾಗಿದೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ತಕ್ಷಣ ಪರಿಣಾಮ ಬೀರದಿದ್ದರೂ ಕ್ರಮೇಣವಾಗಿ ಉದ್ದಿಮೆಗಳ ಮೇಲೆ ಪರಿಣಾಮ ಆಗುತ್ತದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ನೋಡಿಕೊಂಡು ಒಂದು ತಿಂಗಳ ಬಳಿಕ ಹೋಟೆಲ್​ಗಳ ಊಟ-ತಿಂಡಿ ದರ ಹೆಚ್ಚಿಸಲಾಗುವುದು. ಸದ್ಯಕ್ಕೆ ದರ ಹೆಚ್ಚಳ ಪ್ರಸ್ತಾಪ ಇಲ್ಲ. ದರ ಹೆಚ್ಚಳದಿಂದ ಗ್ರಾಹಕರಿಗೆ ಹೊರೆ ಬೀಳುತ್ತದೆ| ಬಿ. ಚಂದ್ರಶೇಖರ್ ಹೆಬ್ಬಾರ್,ಅಧ್ಯಕ್ಷ, ಕರ್ನಾಟಕ ರಾಜ್ಯ ಹೋಟೆಲ್​ಗಳ ಸಂಘ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
