ಬೆಂಗಳೂರು:ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಶನಿವಾರ ನಗರದಾದ್ಯಂತ ಸಂಭ್ರಮದ ಗಣೇಶೋತ್ಸವವನ್ನು ಆಚರಿಸಲಾಯಿತು.
ನಗರದ ಪ್ರಸಿದ್ಧ ಗಣಪತಿ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ–ಪುನಸ್ಕಾರಗಳನ್ನು ಆಯೋಜಿಸಲಾಗಿತ್ತು.ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಗಣಪತಿ ಹಬ್ಬದ ಸಂಭ್ರಮ ಕಂಡು ಬಂತು.ದೇವರಿಗೆ ವಿವಿಧ ಅಭಿಷೇಕ ಹಾಗೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.ಬೆಳಗ್ಗಿನಿಂದ ರಾತ್ರಿಯವರೆಗೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.
ಜಯನಗರದ4ನೇ ಬ್ಲಾಕ್‌ನಲ್ಲಿರುವ ವರಸಿದ್ಧಿ ವಿನಾಯಕ ದೇವಾಸ್ಥಾನದಲ್ಲೂ ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.ದೇವಾಲಯದಲ್ಲಿರುವ ಮೂಲ ಮೂರ್ತಿಗೆ ಪಂಚಾಮೃತ ಹಾಗೂ ವಿವಿಧ ಅಭಿಷೇಕಗಳನ್ನು ಮಾಡಿ ಪೂಜೆ ಸಲ್ಲಿಸಲಾಯಿತು.ನಂತರ ವಜ್ರಖಚಿತ ಕಿರೀಟ ಸೇರಿದಂತೆ ಬಂಗಾರದ ಕವಚವನ್ನು ತೊಡಿಸಿ ದೇವರಿಗೆ ಸರ್ವಾಲಂಕಾರವನ್ನು ಮಾಡಿ ಮಹಾ ಮಂಗಳಾರತಿ ಮಾಡಲಾಯಿತು.
ಸಾವಿರಾರು ಭಕ್ತರು ಬೆಳಗ್ಗೆಯಿಂದ ತಡರಾತ್ರಿಯವರೆಗೆ ಉದ್ದನೆಯ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಿದರು.ದೇವಾಲಯ ಮುಂಭಾಗದ ರಸ್ತೆಯಲ್ಲಿ ದೊಡ್ಡ ಪೆಂಡಾಲ್ ಹಾಕಿ ಬೃಹತ್ ಮಣ್ಣಿನ ಗಣಪತಿಯನ್ನು ಗೌರಿ ಸಹಿತವಾಗಿ ಪ್ರತಿಷ್ಠಾಪಿಸಲಾಗಿದ್ದು, 9ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.
ಜೆ.ಪಿ ನಗರದ ಪುಟ್ಟೇನಹಳ್ಳಿ ಶ್ರೀಸತ್ಯಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿನೂತನವಾಗಿ ಆಚರಿಸಲಾಯಿತು.ನಾಡಿನೆಲ್ಲೆಡೆ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಜೋಳ,ತೆಂಗಿನಾಯಿ,ಬೇಲದ ಕಾಯಿ ಮತ್ತಿತರ ಹಣ್ಣು,ತರಕಾರಿಗಳಿಂದ ದೇವಾಲಯವನ್ನು ಶೃಂಗರಿಸಿ ಗಣಪತಿ ಹಬ್ಬವನ್ನು ಮಾಡಲಾಯಿತು.ಪ್ರತಿವರ್ಷ ಈ ದೇವಾಲಯದಲ್ಲಿ ವಿಭಿನ್ನ ಅಲಂಕಾರವನ್ನು ಮಾಡಲಾಗುತ್ತದೆ.ಈ ವರ್ಷ36ಕ್ಕೂ ಹೆಚ್ಚು ಬಗೆಯ ಹಣ್ಣು,ತರಕಾರಿ ಮತ್ತು ಹೂಗಳಿಂದ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು.
ಇನ್ನುಳಿದಂತೆ ಬನಶಂಕರಿ,ಕೋರಮಂಗಲ,ಸಹಕಾರನಗರ,ಮಲ್ಲೇಶ್ವರ,ಶ್ರೀನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಗಣಪತಿ ದೇವಾಲಯಗಳಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಬೇರೆಲ್ಲ ಧಾರ್ಮಿಕ ಹಬ್ಬಗಳು ಕೇವಲ ಮನೆ ಮತ್ತು ಮಂದಿರಗಳಲ್ಲಿ ಆಚರಿಸಲ್ಪಟ್ಟರೆ;ಗಣಪತಿ ಹಬ್ಬವು ಸಾರ್ವಜನಿಕ ಉತ್ಸವವಾಗಿ ಆಚರಿಸುವುದು ವಿಶೇಷ.ಅಂತೆಯೇ ವಿವಿಧ ಸಂಘಟನೆಗಳು ನಗರದ ರಸ್ತೆ,ಮೈದಾನ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್‌ಗಳನ್ನು ಹಾಕಿ ಗಣಪತಿಯನ್ನು ಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದವು.ಇನ್ನೂ ಒಂದು ತಿಂಗಳ ವರೆಗೆ ಸಾರ್ವಜನಿಕ ಗಣೇಶೋತ್ಸವಗಳು ನಗರದಾದ್ಯಂತ ನಡೆಯಲಿವೆ.
ಶಂಕರಮಠದ ಪ್ರಾಚೀನ ವಿದ್ಯಾರಣ್ಯ ಸಂಘಟನೆಯು62ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಹಮ್ಮಿಕೊಂಡಿದೆ.ಬಸವನಗುಡಿಯ ಬೆಂಗಳೂರು ಗಣೇಶೋತ್ಸವವು ವಿಜೃಂಭಣೆಯಿಂದ ಆರಂಭವಾಗಿದ್ದು,ಹಲವು ಖ್ಯಾತನಾಮರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಜಯನಗರ8ನೇ ಬ್ಲಾಕ್‌ನಲ್ಲಿ ವಿನಾಯಕ ಮಿತ್ರ ಮಂಡಳಿಯು43ನೇ ವರ್ಷದ ವಿನಾಯಕ ಉತ್ಸವದ ಅಂಗವಾಗಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಗಣಪತಿ ಹಬ್ಬದ ನಂತರ ಗಣಪತಿ ವಿಸರ್ಜನೆ ಹಾಗೂ ಕಸ ವಿಲೇವಾರಿ ಬಿಬಿಎಂಪಿಗೆ ದೊಡ್ಡ ಸವಾಲು.ಬಿಬಿಎಂಪಿಯು ಗಣೇಶ ಮೂರ್ತಿಗಳ ಜಲ ವಿಸರ್ಜನೆಗಾಗಿ ಪ್ರತಿ ವಾರ್ಡ್ ಮಟ್ಟದಲ್ಲಿ ಒಂದರಂತೆ ತಾತ್ಕಾಲಿಕ ನೀರು ತುಂಬಿದ ಲಾರಿಯನ್ನು ವ್ಯವಸ್ಥೆ ಮಾಡಿದ್ದು,ಅಲ್ಲಿ ಸಾರ್ವಜನಿಕರು ಚಿಕ್ಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.
ಇನ್ನುಳಿದಂತೆ ಸ್ಯಾಂಕಿ ಕೆರೆ,ಹೆಬ್ಬಾಳ ಕೆರೆ,ಯಡಿಯೂರು ಕೆರೆಯಲ್ಲಿ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದ್ದು,ಯಾವುದೇ ಗೊಂದಲ,ಅಪಾಯಗಳಾಗದಂತೆ ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × three =
Remember me
