ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್
ಸಾಮಾನ್ಯ ಗೃಹಿಣಿ ಎನಿಸಿಕೊಂಡಿದ್ದ ಒನಕೆ ಓಬವ್ವ ಇತಿಹಾಸದ ಪುಟಗಳಲ್ಲಿ ಆವರಿಸಿಕೊಂಡದ್ದೇ ರೋಮಾಂಚಕ ಕಥನ. ಛಲವಾದಿ ಸಮುದಾಯದ ಓಬವ್ವ ಸ್ವಾಮಿನಿಷ್ಠೆ, ಸಮಯ ಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ.
ಚಿತ್ರದುರ್ಗದ ಕೋಟೆಯ ವಶಕ್ಕೆ ಯತ್ನಿಸಿದ ಹೈದರಾಲಿ ಕುತಂತ್ರವನ್ನು ವಿಫಲಗೊಳಿಸಿ, ಕೋಟೆ ಮತ್ತು ಜನತೆಯನ್ನು ಅಪಾಯದಿಂದ ಪಾರುಮಾಡಿದ ವೀರವನಿತೆ ಓಬವ್ವ.
ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಚಿನ್ನಪ್ಪ-ಚಿನ್ನಮ್ಮ ದಂಪತಿಯ ಸುಪುತ್ರಿಯಾಗಿ ಕ್ರಿ.ಶ.1721ರ ನ. 11 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆಯಲ್ಲಿ ಜನಿಸಿದಳು. ಓಬವ್ವಗೆ ಕದುರಪ್ಪ ಮತ್ತು ತಿಮ್ಮಣ್ಣ ಎಂಬ ಅಣ್ಣಂದಿರಿದ್ದರು. ಕದುರಪ್ಪ ನಿಡುಗಲ್ಲು ಸಂಸ್ಥಾನದ ದೊರೆಗಳಲ್ಲಿ ಕಾವಲುಗಾರನಾಗಿ, ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿ, ವೀರ ಮರಣ ಹೊಂದಿದನು. ಇಂತಹ ಆದರ್ಶದಲ್ಲಿ ಬೆಳೆದವಳು ಓಬವ್ವ. ಓಬವ್ವಳ ಪತಿ ಕಹಳೆ ಮದ್ದಹನುಮಪ್ಪ. ನಂಬಿದ ದೊರೆಗೆ ಕಿಂಚಿತ್ ಲೋಪ ಮಾಡಿದವನಲ್ಲ. ಅವನ ವ್ಯಕ್ತಿತ್ವಕ್ಕೆ ಸರಿಸಮವಾದ ಸಂಗಾತಿ ಓಬವ್ವ. ಚಿತ್ರದುರ್ಗದ ರಾಜವೀರ ಮದಕರಿ ನಾಯಕರಲ್ಲಿ ಆಪ್ತಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಮದ್ದಹನುಮಪ್ಪನ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿಪುಂಜ.
ಇಂಥ ಮಹಾನ್ ಧೈರ್ಯನಿಧಿಯನ್ನು ಕುರಿತು ಬರೆದಿರುವ ಲೇಖನಗಳು, ಕೃತಿಗಳು ಕಡಿಮೆ. 1971ರಲ್ಲಿ ಐಬಿಎಚ್ ಪ್ರಕಾಶನದಿಂದ ಕಮಲಾ ಹಂಪನಾ ಅವರ ‘ವೀರವನಿತೆ ಓಬವ್ವ’, 1973 ರಲ್ಲಿ ಭಾರತ-ಭಾರತಿ ಪುಸ್ತಕ ಸಂಪದ ಸರಣಿಯಲ್ಲಿ ಜಿ.ವರದರಾಜರಾವ್ ಅವರ ‘ಓಬವ್ವ’ ಪ್ರಕಟವಾಗಿವೆ. ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಒನಕೆ ಓಬವ್ವೆಯ ವಂಶಸ್ಥರಾದ ಪೊ›.ಎ.ಡಿ.ಕೃಷ್ಣಯ್ಯ ಅವರ ‘ಭಾರತದ ಧೀರಮಹಿಳೆ ಚಿತ್ರದುರ್ಗದ ಒನಕೆ ಓಬವ್ವ’ ಕೃತಿ 1979ರಲ್ಲಿ ಪ್ರಕಟವಾಗಿದ್ದು, ಈ ಕೃತಿಯನ್ನು ಇದೇ ಲೇಖಕರು ಸಂಪಾದಿಸಿ, ಪರಿಷ್ಕರಿಸಿ 2007ರಲ್ಲಿ ಪ್ರಕಟಿಸಿದ್ದಾರೆ. ಎಚ್.ವಿ.ವೀರನಾಯಕ ಹರತಿ ಅವರ ‘ದುರ್ಗದ ಸಿಂಹಿಣಿ ಓಬವ್ವ’ನಾಟಕ, 1982ರಲ್ಲಿ, ಇತಿಹಾಸ ದರ್ಶನ ಸಂಪುಟದಲ್ಲಿ ಪೊ›.ಲಕ್ಷ್ಮಣ್ ತೆಲಗಾವಿ ಅವರ ‘ಚಿತ್ರದುರ್ಗದ ಒನಕೆ ಓಬವ್ವೆಯ ಘಟನೆ-ಚಾರಿತ್ರಿಕ ವಿಮರ್ಶೆ’ ಲೇಖನ 1996 ರಲ್ಲಿ ಪ್ರಕಟವಾಗಿದೆ.
ಬಿ.ಎಲ್.ವೇಣು ಅವರ ‘ವೀರ ವನಿತೆ ಒನಕೆ ಓಬವ್ವ’ ಎಂಬ ಕಾದಂಬರಿ 2001ರಲ್ಲಿ ಪ್ರಕಟವಾಗಿದೆ. 2010ರಲ್ಲಿ ಲಕ್ಷ್ಮಣ್ ತೆಲಗಾವಿ ಅವರ ‘ಚಿತ್ರದುರ್ಗದ ಒನಕೆ ಓಬವ್ವ ಚಾರಿತ್ರಿಕ ವಿವೇಚನೆ’ ಕೃತಿ, 2016 ರಲ್ಲಿ ಡಾ.ಚಿನ್ನಸ್ವಾಮಿ ಸೋಸಲೆ ಅವರ ‘ಒನಕೆ ಓಬವ್ವೆ ’ಕೃತಿ ಪ್ರಕಟವಾಗಿದೆ.
1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ನಾಗರಹಾವು’ ಚಲನಚಿತ್ರಕ್ಕೆ ಚಿ. ಉದಯಶಂಕರ್ ಅವರು ಬರೆದಿರುವ ‘ಕನ್ನಡ ನಾಡಿನ ವೀರರಮಣಿಯ ಗೀತೆ ಕನ್ನಡಿಗರಿಗ ಹೃನ್ಮನ ತುಂಬಿದೆ. ಆದರೆ 1766ರಲ್ಲಿ ಈ ಸಾಹಸದ ಘಟನೆ ನಡೆಯುತ್ತದೆ. 1769 ರಲ್ಲಿ ಓಬವ್ವ ಸಾವನ್ನಪ್ಪುತ್ತಾರೆ. ಚಲನಚಿತ್ರ ನಿರ್ದೇಶಕರು ಒನಕೆ ಕಿಂಡಿಯ ಬಳಿಯೇ ಓಬವ್ವಳನ್ನು ಸಾಯಿಸಿರುವುದು ಐತಿಹಾಸಿಕ ಸತ್ಯವನ್ನು ಮರೆಮಾಚಿಸಿದೆ.
ಓಬವ್ವ ಮಾತೆಯ ಸಾಹಸ ಕಾರ್ಯಕ್ಕೆ ರಾಜವೀರ ಮದಕರಿನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆ ಕಟ್ಟಿಸಿ, ಅದರ ಬಾಗಿಲಿಗೆ ‘ಒನಕೆ ಕಿಂಡಿ ಬಾಗಿಲು’ ಎಂದು ಹೆಸರಿಟ್ಟಿದ್ದು, ಓಬವ್ವಳ ಪ್ರತಿಮೆ ಪ್ರತಿಷ್ಠಾಪಿಸಿದ್ದು, ಓಬವ್ವ ಮಾತೆಯ ಅಪೇಕ್ಷೆಯಂತೆ ಕುಲದೇವತೆಯಾಗಿಸಿ, ಅಗಸನಕಲ್ಲು ಗ್ರಾಮವನ್ನು ಛಲವಾದಿ ಸಮುದಾಯಕ್ಕೆ ಜಹಗೀರಾಗಿ ನೀಡಿರುವುದು, ಓಬವ್ವ ಮರಣ ಹೊಂದಿದಾಗ ದೊರೆಗಳೇ ಬಂದು ಸಂತಾಪ ಸೂಚಿಸಿ, ರಾಜ ಮರ್ಯಾದೆಯೊಡನೆ ದುರ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ತಣ್ಣೀರು ಚಿಲುಮೆಯ ಪೂರ್ವಕ್ಕೆ ಸಮಾಧಿ ಮಾಡಿಸಿದ್ದು ದುರ್ಗದ ದೊರೆಗಳ ದಕ್ಷತೆಗೆ, ಔದಾರ್ಯಕ್ಕೆ ಹಿಡಿದ ರನ್ನಗನ್ನಡಿಯಾಗಿದೆ.
ಓಬವ್ವ ತ್ರಿಕಾಲಗಳಿಗೂ ಪ್ರಭಾವಿಸುವಂತಹ ವ್ಯಕ್ತಿತ್ವ ಸಂಪಾದಿಸಿದ್ದರಿಂದಲೇ ಸಾಂಸ್ಕೃತಿಕ ನಾಯಕಿ ಎಂಬ ಅಭಿದಾನಕ್ಕೆ ಅರ್ಹಳಾಗಿದ್ದಾಳೆ. ಆಕೆಯ ಸೌಮ್ಯತೆ, ಸೌಜನ್ಯ, ವಿವೇಕ, ವಿವೇಚನೆ, ವಿಚಾರಗಳು ಅಪ್ಯಾಯಮಾನ. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಅಗಸನಕಲ್ಲು, ಛಲವಾದಿಗಳು ವಾಸಿಸುತ್ತಿರುವಲ್ಲಿ ಓಬವ್ವ ಮಾತೆಯ ದೇವಾಲಯ ನಿರ್ವಣವಾಗಿದೆ. ನಿತ್ಯಪೂಜೆ ನಡೆಯುತ್ತಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five − three =
Remember me
