ಕೃಷ್ಣರಾಜ ಕುತ್ಪಾಡಿ‘ವಿದ್ವಾನ್ ಏವ ವಿಜಾನಾತಿ ವಿದ್ವಜ್ಜನ-ಪರಿಶ್ರಮಂ’|‘ತಿಳಿದವನೇ ತಿಳಿದಾನು ತಿಳಿದವನ ಅಳವನ್ನು. ತಿಳಿದವನ ಬಳಲನ್ನು.’
ಹೆರುವ ಬಳಲಿಕೆಯನ್ನು ಹೆತ್ತ ಮಗುವಿನ ಮೋರೆ ಅಳಿಸುತ್ತದೆ. ಅದು ಬಾಳಿ ಬೆಳೆವುದನ್ನೇ ಕರುಳು ಬಯಸುತ್ತದೆ. ‘ಸ್ಮರಣಂ ಗ್ರಂಥ ಕೃತಿಃ’ ಗ್ರಂಥರಚನೆ ಎಂದರೆ ತಲೆಯಲ್ಲಿ ಕಾವ್ಯಕಥೆ ಸಾಲುಸಾಲಾಗಿ ಅಚ್ಚೊತ್ತಿ ನಿಲ್ಲುವುದು. ವಾಲ್ಮೀಕಿಗಳ ಹೃದಯ ರಾಮಮಯವಾಗಿತ್ತು. ರಾಮಚರಿತ 24 ಸಾವಿರ ಶ್ಲೋಕಗಳಲ್ಲಿ ಸಿದ್ಧವಾಗಿತ್ತು. ರಾಮಾಯಣದ ಮೊದಲ ಮುದ್ರಣ ಕುಶೀಲವರಲ್ಲಿ ಒಂದೇ ಹೇಳಿಕೆಗೆ ನಡೆದುಹೋಯಿತು. ಕವಿಯ ಕಾತರತೆ ಹೆಚ್ಚಿತ್ತು. ಮೊದಲ ಕಾವ್ಯವಾಚನಕ್ಕೆ ಸಾವಿರಾರು ಸಜ್ಜನ ಮುನಿಗಳ ಸಮಾಗಮವಾಗಿತ್ತು. ಅವಳಿ ಮಕ್ಕಳು ತಂತಿ ಹಿಡಿದು ಸೀತಾರಾಮರ ಕಥೆಯನ್ನು ಹೇಳಿಕೊಟ್ಟಂತೆ, ತಿಳಿದು, ಸುಶ್ರಾವ್ಯವಾಗಿ ಹಾಡಿದರು. ರಸಕ್ಕೆ ತಕ್ಕ ಸ್ವರ ಸೇರಿತ್ತು. ಕೇಳುಗರ ಹೃದಯ ಸ್ರವಿಸಿತ್ತು. ಭಾವ ಪರವಶವಾಗಿತ್ತು.
ಸಾಧುಸಾಧಿ್ವತಾವೂಚುಃ ಪರಂ ವಿಸ್ಮಯಮಾಗತಾಃ|ತೇ ಪ್ರೀತಮನಸಃ ಸರ್ವೆ ಮುನಯೋ ಧರ್ಮವತ್ಸಲಾಃ||
‘ಚೆನ್ನಾಗಿದೆ! ಚೆನ್ನಾಗಿದೆ! ಅದ್ಭುತ! ಎಂದೆಲ್ಲ ಮುನಿಗಳು ಅಚ್ಚರಿ ವ್ಯಕ್ತಪಡಿಸಿದರು. ಮನಸ್ಸು ಮುದಗೊಂಡಿತ್ತು. ಧರ್ಮವತ್ಸಲರಾದ ಎಲ್ಲರೂ ಹಾಡನ್ನು, ಹಾಡಿದವರನ್ನು ಮನದುಂಬಿ ಹೊಗಳಿದರು.’
ಹಾಡಿದ ಎಳೆಯರಿಗೆ ಏನಾದರೂ ಕೊಡಲೇಬೇಕೆಂಬ ಬಯಕೆ ‘ತಪೋಧನ’ರಿಗೆ ಮೂಡಿತ್ತು. ಕೊಡಲು ಏನಿತ್ತು? ತಮ್ಮಲ್ಲಿದ್ದ ವಸ್ತುಗಳನ್ನೇ ಕೊಡಮಾಡಿದರು. ಕೆಲವರು ಹುಲ್ಲಿನ ಚಾಪೆಯನ್ನು ಕೊಟ್ಟರು. ಕೆಲವರು ನಾರುಮಡಿಯನ್ನಿತ್ತರು. ಇನ್ನು ಕೆಲವು ಮಂದಿ ತಂಬಿಗೆ, ದರ್ಭೆ, ಕೌಪೀನ, ಕಟ್ಟಿಗೆ ಕಟ್ಟುವ ಹಗ್ಗ, ಕಟ್ಟಿಗೆ ಕಡಿಯುವ ಕೊಡಲಿ, ಯಜ್ಞಕ್ಕಾಗಿ ಕೆಲವು ಮರದ ಪಾತ್ರೆಗಳನ್ನು ಹೀಗೆ ಏನೇನೋ ಕೊಟ್ಟರು. ಕೊಡಲಾಗದವರಂತೂ ಅಮೂಲ್ಯವಾದ ಆಯುಷ್ಯವನ್ನೇ, ಆರೋಗ್ಯವನ್ನೇ ಹರಸಿದರು.
ಈ ಕಾವ್ಯ ಮುಂದೆ ಎಲ್ಲ ಕವಿಗಳಿಗೆ ನೆಲೆಮನೆಯಾಗಲಿದೆ ಎಂದು ಭವಿಷ್ಯ ನುಡಿದರು. ಮುನಿಗಳ ಈ ಬಗೆಯ ಅಭೂತಪೂರ್ವ ಪ್ರತಿಕ್ರಿಯೆಗೆ ವಾಲ್ಮೀಕಿಗಳು ಮೂಕವಾದರು. ಕೃತಿಯೆ ಕವಿಯ ಬಗೆಗೆ ಹೇಳತೊಡಗಿತು. ವರಕವಿ ಬೇಂದ್ರೆಯವರನ್ನು ಯಾರೋ ಕೇಳಿದರಂತೆ, ’ಕವಿಯಾಗಲು ಎಷ್ಟು ಕಾವ್ಯ ಕವನಗಳನ್ನು ಬರೆಯಬೇಕು’ ಎಂದು. ಬೇಂದ್ರೆಯವರ ಉತ್ತರ ಹೀಗಿತ್ತು. ‘ತಾಯಿಯಾಗಲು ಒಂದೇ ಹೆತ್ತರೂ ಸಾಕು’.
(ಲೇಖಕರು ಸಂಸ್ಕೃತ ಉಪನ್ಯಾಸಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 9 =
Remember me
