ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನಕ್ಕೆ ಜನರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷದಂತೆ ಈ ವರ್ಷವೂ ಜೂ. 14ರಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ತದಾನದ ಮಹತ್ವ ಕುರಿತು ಇಲ್ಲಿ ವಿವರ ನೀಡಲಾಗಿದೆ.
ಪಂಕಜ ಕೆ.ಎಂ. ಬೆಂಗಳೂರುದೇಶದಲ್ಲಿ ಪ್ರತಿ ವರ್ಷ ಸುಮಾರು 5 ಕೋಟಿ ಯೂನಿಟ್​ಗೂ ಅಧಿಕ ರಕ್ತದ ಅವಶ್ಯಕತೆ ಇದೆ. ಆದರೆ ಲಭ್ಯವಿರುವುದು ಕೇವಲ 2.5ರಿಂದ 3 ಕೋಟಿ ಯೂನಿಟ್ ಮಾತ್ರ. ಅಂದರೆ ಶೇ. 40ರಷ್ಟು ರಕ್ತದ ಕೊರತೆ ಇದೆ. ಇದರಿಂದಾಗಿ ಥಲಸ್ಸೇಮಿಯಾ, ಹಿಮೊಫೀಲಿಯಾದಂತಹ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ, ಲಕ್ಷಾಂತರ ಕ್ಯಾನ್ಸರ್ ಪೀಡಿತರು ಸೇರಿ ನಾನಾ ಶಸ್ತ್ರಚಿಕಿತ್ಸೆಗಳಿಗೆ ರಕ್ತ ಸಿಗುತ್ತಿಲ್ಲ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಅಗತ್ಯವಿದೆ.
ಇಂಟರ್​ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಇಂಟರ್​ನ್ಯಾಷನಲ್ ಫೆರಡೇಷನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಷನ್ ಮತ್ತು ಇಂಟರ್​ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್​ಪ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೂ. 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಘೋಷಿಸಿದೆ.
ಯಾರು ರಕ್ತದಾನ ಮಾಡಬಹುದು?:18ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ದೇಹದ ತೂಕ ಕನಿಷ್ಠ 45 ಕೆ.ಜಿ. ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್ ರಕ್ತದಾನ ಮಾಡಬಹುದಾಗಿದೆ. ದಾನಿಗಳ ಹಿಮೋಗ್ಲೋಬಿನ್ (ಎಚ್​ಬಿ) ಪ್ರಮಾಣ ಕನಿಷ್ಠ 12.5 ಇರಬೇಕು.
ಯಾರು ರಕ್ತದಾನ ಮಾಡುವಂತಿಲ್ಲ?:ಅನಾರೋಗ್ಯ ಇರುವವರು, ನಿಯಮಿತವಾಗಿ ಔಷಧ ಸೇವಿಸುವವರು, ಸಾಂಕ್ರಾಮಿಕ ರೋಗ ಹೊಂದಿರುವವರು, ಎಚ್​ಐವಿ/ಏಡ್ಸ್ ಸೋಂಕಿತರು, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಕ್ಷಯ ರೋಗಿಗಳು, ಹೆಪಟೈಟಿಸ್ ಬಿ, ರಕ್ತಹೀನತೆ, ಅಪೌಷ್ಟಿಕತೆ ಇರುವವರು, ಗರ್ಭಿಣಿಯರು, ಮಧುಮೇಹ ನಿಯಂತ್ರಣದಲ್ಲಿ ಇಲ್ಲದವರು, ಮಾದಕ ವ್ಯಸನಿಗಳು, ಕಿಡ್ನಿ ಸೇರಿದಂತೆ ಅಂಗಾಂಗಗಳ ತೊಂದರೆ ಹಾಗೂ ನಾನಾ ಆರೋಗ್ಯ ಸಮಸ್ಯೆ ಹೊಂದಿರುವವರು, ರಕ್ತದಾನ ಮಾಡುವಂತಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದವರು, ಬದಲಿ ರಕ್ತ ಹಾಕಿಸಿಕೊಂಡವರು, ರೇಬಿಸ್ ಲಸಿಕೆ, ಮೈ ಮೇಲೆ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡವರು 6 ತಿಂಗಳ ಕಾಲ ರಕ್ತದಾನ ಮಾಡಬಾರದು.
ರಕ್ತದಾನದ ಉಪಯೋಗವೇನು?:ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ 48 ಗಂಟೆಗಳೊಳಗೆ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಜ್ಞಾಪಕಶಕ್ತಿಯೂ ಹೆಚ್ಚುತ್ತದೆ, ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಹಾಗೂ ಮಧುಮೇಹ ತಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಯಾವುದೇ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಆಸಕ್ತರು ರಕ್ತದಾನ ಶಿಬಿರಗಳಲ್ಲಿ ಇಲ್ಲವೆ ರಕ್ತ ನಿಧಿ ಘಟಕಗಳಲ್ಲಿ ರಕ್ತದಾನ ಮಾಡಬಹುದಾಗಿದೆ.
8 ಲಕ್ಷ ಯೂನಿಟ್ ರಕ್ತ ಸಂಗ್ರಹದ ಗುರಿ: ರಾಜ್ಯದಲ್ಲಿ ಸುಮಾರು 8 ಕೋಟಿ ಜನ ಇದ್ದು, ಅದರಲ್ಲಿ ಶೇ. 1ರಷ್ಟು ಮಂದಿಗೆ ರಕ್ತದ ಅವಶ್ಯಕತೆ ಇದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿಗೆ 8 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದೆ. ಸರ್ಕಾರದ 43 ಹಾಗೂ ಖಾಸಗಿಯ 260 ರಕ್ತ ನಿಧಿಗಳಿದ್ದು, ಜನರು ತಮ್ಮ ಹತ್ತಿರದ ರಕ್ತ ನಿಧಿಗಳಿಗೆ ಸ್ವಯಂ ಪ್ರೇರಿತರಾಗಿ ತೆರಳಿ ರಕ್ತದಾನ ಮಾಡ ಬಹುದು. ರಕ್ತದಾನಿಗಳನ್ನು ಪ್ರೇರೇಪಿಸಲು ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ನಡೆಸುತ್ತದೆ.
ಬೆಂಗಳೂರೊಂದರಲ್ಲೇ ಶಿಕ್ಷಣ ಸಂಸ್ಥೆಗಳು, ಐಟಿಬಿಟಿ ಕಂಪನಿಗಳು ಸೇರಿ ವಿವಿಧೆಡೆ ಶಿಬಿರಗಳನ್ನು ಆಯೋಜಿಸಿ ತಿಂಗಳಿಗೆ 2000-2500 ಯೂನಿಟ್ ರಕ್ತ ಸಂಗ್ರಹಿಸುತ್ತಿದ್ದೇವೆ. ಕೆಲವೊಮ್ಮೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೂ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುತ್ತಾರೆ. ಹೀಗೆ ವಾರ್ಷಿಕ 30-35 ಸಾವಿರ ಯೂನಿಟ್​ವರೆಗೂ ರಕ್ತ ಸಂಗ್ರಹವಾಗುತ್ತದೆ. ಇದರಲ್ಲಿ ಶೇ. 50ರಷ್ಟು ರಕ್ತವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಉಚಿತವಾಗಿ ನೀಡುತ್ತೇವೆ.
| ವಿಜಯ್ಕುಮಾರ್ ಪಾಟೀಲ್ ಅಧ್ಯಕ್ಷ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಶಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
