|ಗಣೇಶ್ ಕಾಮತ್ಮೂಡುಬಿದಿರೆ
ಪ್ರಜಾಪ್ರಭುತ್ವದ ಹಬ್ಬ ಎನ್ನಲಾಗುವ ಮತದಾನದಲ್ಲಿ ತಪ್ಪದೇ ಮತದಾನ ಮಾಡಬೇಕಾಗಿರುವುದು ಕರ್ತವ್ಯ. ನಾನೊಬ್ಬ ವೋಟ್ ಮಾಡದಿದ್ದರೆ ಏನಂತೆ? ಎನ್ನುವವರೂ ಇದ್ದಾರೆ. ಒಂದು ವೋಟಿನಿಂದ ಏನಾಗುತ್ತದೆ ಎನ್ನುವವರು ಈ ಕೆಳಗಿನ ಒಂದು ವೋಟಿನ ಕಥೆ-ವ್ಯಥೆಯನ್ನು ಗಮನಿಸಬೇಕು.
ಒಂದು ವೋಟಿಗೆ ಸೋತ ವಾಜಪೇಯಿ ಸರ್ಕಾರ:ಭಾರತದ ರಾಜಕಾರಣದಲ್ಲಿ 1999ರ ಮಾರ್ಚ್ 17 ವಿಲಕ್ಷಣ ಘಟನೆಯೊಂದಕ್ಕೆ ಸಾಕ್ಷಿಯಾದ ದಿನ. 1998ರಲ್ಲಿ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ 13 ತಿಂಗಳಲ್ಲಿ ಪತನಗೊಂಡದ್ದು ಇತಿಹಾಸ. ಆದರೆ ಬರೇ ಒಂದು ಮತದಿಂದ ಸೋತದ್ದು ಆವರೆಗೆ ನಡೆಯದ ಘಟನೆ. ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದ ವಾಜಪೇಯಿ ತಮಿಳುನಾಡಿನ ಜಯಲಲಿತಾ ಅವರ ಪಕ್ಷದ ನಿಲುವಿನಿಂದ ಅಧಿಕಾರ ಕಳೆದುಕೊಂಡದ್ದು ಗಮನಾರ್ಹ. ಕನ್ನಡಿಗ ಚಿತ್ರನಟ ಅಂಬರೀಷ್ ಅವರೂ ಆಗ ಸಂಸದ. ಅವರಿಗೂ ವಾಜಪೇಯಿ ಸರ್ಕಾರದ ಪರ ವೋಟ್ ಮಾಡುವಂತೆ ವಿನಂತಿಸಲಾಗಿತ್ತಂತೆ. ಮಾಡಿದ್ದರೆ? ಸರ್ಕಾರ ಉಳಿದಿರುತ್ತಿತ್ತೇನೋ.
ಸೋತ ಕೃಷ್ಣಮೂರ್ತಿ:2004ರ ಕರ್ನಾಟಕ ವಿಧಾನಸಭಾ ಚುನಾವಣೆ. ರಾಜ್ಯದಲ್ಲಿ ಇವಿಎಂ ಮತಯಂತ್ರ ಬಳಕೆ ಆರಂಭವಾದ ವರ್ಷ. ಚಾಮರಾಜನಗರದ ಸಂತೇಮರಳ್ಳಿ ಕ್ಷೇತ್ರದಿಂದ ಕೇರಳದ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಮಗ, ಅದಾಗಲೇ ಎರಡು ಬಾರಿ ಗೆದ್ದಿದ್ದ ಎ.ಆರ್.ಕೃಷ್ಣ ಮೂರ್ತಿ ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದರು. ಮೇ 13ರಂದು ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್​ನ ಆರ್.ಧ್ರುವನಾರಾಯಣ ಒಂದು ವೋಟಿನ ಅಂತರದಿಂದ ಗೆದ್ದದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ದುರಂತ ಎಂದರೆ ಅಂದು ಕೃಷ್ಣಮೂರ್ತಿ ತನ್ನ ಜತೆಗೆ ಇದ್ದ ಕಾರು ಚಾಲಕ ಮತಹಾಕಿ ಬರುವುದಾಗಿ ಕೇಳಿದಾಗಲೂ ಅವಕಾಶ ನಿರಾಕರಿಸಿದ ನಿರ್ಧಾರ ಅವರಿಗೇ ಮರೆಯಲಾಗದ ಪಾಠವಾಯಿತು. ನನ್ನ ಶತ್ರುಗಳಿಗೂ ಈ ಸೋಲು ಬರಬಾರದು, ಅದೃಷ್ಟ ಒಂದು ಬಾರಿ ಮಾತ್ರ ಬಾಗಿಲು ತಟ್ಟುತ್ತದೆ ಎನ್ನುವುದರ ಅರಿವಾಗಿದೆ ಎಂದಿದ್ದರು ಹತಾಶ ಕೃಷ್ಣಮೂರ್ತಿ. ಇದು ಧ್ರುವನಾರಾಯಣ ಅವರಿಗೆ ವಿಧಾನಸಭೆಗೆ ಚೊಚ್ಚಲ ಪ್ರವೇಶ ದೊರಕಿಸಿತು. ಮತ್ತೆ ತಿರುಗಿ ನೋಡದ ಧ್ರುವನಾರಾಯಣ 2008ರಲ್ಲೂ ಎ.ಆರ್. ಕೃಷ್ಣಮೂರ್ತಿ ವಿರುದ್ಧವೇ ಗೆದ್ದರು. 2009ರಲ್ಲಿ ಲೋಕಸಭೆಗೆ ಮೊದಲ ಬಾರಿ ಸ್ಪರ್ಧಿಸಿದಾಗಲೂ ಕೃಷ್ಣಮೂರ್ತಿ ಅವರ ವಿರುದ್ಧವೇ ನಾಲ್ಕು ಸಾವಿರದ ಎರಡು ಮತಗಳ ಅಂತರದಲ್ಲಿ ಗೆದ್ದು ಲೋಕಸಭೆಗೂ ಪ್ರವೇಶಿಸಿದರು. ವಿಚಿತ್ರ ಎಂದರೆ ಬದಲಾದ ಪರಿಸ್ಥಿತಿಯಲ್ಲಿ 2018ರಲ್ಲಿ ಕಾಂಗ್ರೆಸ್ ಸೇರಿದ ಎ.ಆರ್.ಕೃಷ್ಣಮೂರ್ತಿ ತನಗೆ ಒಂದು ಮತದ ಸೋಲುಣಿಸಿದ್ದ ಧ್ರುವನಾರಾಯಣ ಪರ ಪ್ರಚಾರ ನಡೆಸಬೇಕಾಗಿ ಬಂತು. ಧ್ರುವನಾರಾಯಣ ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ್ದು ಎ.ಆರ್. ಕೃಷ್ಣಮೂರ್ತಿಗೆ ಅದೃಷ್ಟ ಕೈ ಹಿಡಿಯುತ್ತದೋ ಕಾದು ನೋಡಬೇಕು.
ಒಂದೇ ವೋಟಿಗೆ ಸೋತ ಸಿಎಂ ಅಭ್ಯರ್ಥಿ:ಇದು 2008ರ ರಾಜಸ್ಥಾನ ಅಸೆಂಬ್ಲಿ ಚುನಾವಣೆಯಲ್ಲಿ ನಡೆದ ಘಟನೆ. ಡಿಸೆಂಬರ್ 4ರಂದು ಫಲಿತಾಂಶ ಪ್ರಕಟವಾದಾಗ ಮುಖ್ಯಮಂತ್ರಿ ಅಭ್ಯರ್ಥಿ ಕಾಂಗ್ರೆಸ್​ನ ಸಿ.ಪಿ.ಜೋಶಿ ಒಂದು ಮತದಿಂದ ಬಿಜೆಪಿಯ ಕಲ್ಯಾಣ್ ಸಿಂಗ್ ಚೌಹಾಣ್​ಗೆ ಶರಣಾದರು. ಜೋಶಿಯವರ ಜತೆಗೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಬಳಿಕ ಕಮಲ ಪಾಳಯ ಸೇರಿದ್ದ ಕಲ್ಯಾಣ್ ಸಿಂಗ್ ತನ್ನ ಗೆಳೆಯನ ಮತದಾನದ ನಿರ್ಲಕ್ಷ್ಯಕ್ಕೆ ತಕ್ಕ ಬೆಲೆ ತೆರುವಂತೆ ಮಾಡಿದ್ದು ಸುಳ್ಳಲ್ಲ.

ಇಲ್ಲಿ ಗಮನಿಸಬೇಕಾದ್ದೆಂದರೆ ಕಲ್ಯಾಣ್ ಸಿಂಗ್ ಚುನಾವಣೆಯಲ್ಲಿ ಎಂದೂ ಸೋತ ವರೇ ಅಲ್ಲ. ಜೋಶಿ ಸ್ಥಾನಕ್ಕೆ ಟ್ರಬಲ್ ಶೂಟರ್ ಆಗಿದ್ದ ಅಶೋಕ್ ಗೆಹಲೋತ್ ಎರಡನೇ ಬಾರಿ ಸಿಎಂ ಗದ್ದುಗೆ ಏರುವಂತಾಯಿತು. 2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರಿದಾಗ ಇದೇ ಗೆಹಲೋತ್ 3ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅಂದು ಅವರೆದುರು ಸೋತಿದ್ದ ಸಿ.ಪಿ.ಜೋಶಿ ಈಗ ಅದೇ ರಾಜಸ್ಥಾನ ಅಸೆಂಬ್ಲಿಯ ಸ್ಪೀಕರ್. ತಮಾಷೆಯ ಘಟನೆ ಎಂದರೆ ಕಳೆದ ಬಜೆಟ್ ಮಂಡನೆ ವೇಳೆ ಇದೇ ಗೆಹಲೋತ್ ಪ್ರಮಾದದಿಂದ ಹಿಂದಿನ ವರ್ಷದ ಬಜೆಟ್ ಮಂಡಿಸಿ ಸುದ್ದಿಯಾಗಿದ್ದರಲ್ಲ. ಆಗ ಸ್ಪೀಕರ್ ಆಗಿರುವ ಸಿ.ಪಿ ಜೋಶಿ ಅವರಿಗೆ ಹೇಗನ್ನಿಸಿರಬೇಡ?
ವಿಚಿತ್ರ ಎಂದರೆ ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಕಂಡ ಈ ಒಂದು ಮತದ ಅಂತರದ ಸೋಲುಗಳೆರಡೂ ಪ್ರಕಟವಾಗಿದ್ದು ಗುರುವಾರವೇ. ವಿಶೇಷ ಎಂದರೆ ಎರಡೂ ಪ್ರಕರಣಗಳಲ್ಲಿ ಗೆದ್ದ ಚೌಹಾಣ್ ಮಾತ್ರವಲ್ಲ ಧ್ರುವನಾರಾಯಣ ಅವರೂ ಈಗ ನಮ್ಮೊಂದಿಗಿಲ್ಲ. ಇನ್ನೊಂದೆಡೆ ಒಂದು ಮತದಿಂದ ಸರ್ಕಾರ ಕಳಕೊಂಡ ವಾಜಪೇಯಿ ಸರ್ಕಾರದ ಪತನಕ್ಕೆ ಕಾರಣರಾದ ಜಯಲಲಿತಾ ಕೂಡ ಇಲ್ಲ.
ಅಂದ ಹಾಗೆ… 1983ರಲ್ಲಿ ಅದುವರೆಗೂ ಕೈವಶವಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಒಂದು ವೋಟಿನಿಂದ ಗೆದ್ದರು ಎಂಬ ಸುದ್ದಿ ಹೊರಬಿದ್ದಿತ್ತು. ಮೊದಲ ಬಾರಿ ಕೈ ತಪ್ಪಿದ ಕ್ಷೇತ್ರದ ಗೆಲುವಿನ ಬಗ್ಗೆ ಕಾಂಗ್ರೆಸ್​ನ ಜಿ.ಎಸ್.ಆಚಾರ್ ಆಕ್ಷೇಪಿಸಿ ಮರುಎಣಿಕೆಗೆ ಒತ್ತಾಯಿಸಿದರು. ಆಗ ಅಪ್ಪಣ್ಣ ಹೆಗ್ಡೆ ಗೆಲುವಿನ ಅಂತರ ಏಳು ವೋಟಿಗೆ ಏರಿತು. ಕೊನೆಗೆ ಮತ್ತೊಂದು ಸುತ್ತಿನ ಮರುಎಣಿಕೆಗೂ ಒತ್ತಡ ಬಂದಾಗ ಅಂತಿಮವಾಗಿ ಅಪ್ಪಣ್ಣ ಹೆಗ್ಡೆ ಗೆಲುವಿನ ಅಂತರ 24 ವೋಟಿಗೇರಿತ್ತು. ಆಗಿನ್ನೂ ಸೋಶಿಯಲ್ ಮೀಡಿಯಾದ ಅಬ್ಬರ ಇರಲಿಲ್ಲ. ಆಗಿನ್ನೂ ಮತಪತ್ರಗಳ ಕೌಂಟಿಂಗ್ ಕಾಲ. ಫಲಿತಾಂಶ ಘೊಷಣೆಯಾದಾಗ ಮಧ್ಯರಾತ್ರಿಯಾಗಿತ್ತಂತೆ!
ಇಂಥ ನಾಟಕೀಯ ಘಟನೆಗಳೂ ಸ್ಥಳೀಯ ಚುನಾವಣೆಗಳಲ್ಲೂ ಸಾಕಷ್ಟು ನಡೆದಿರಬಹುದು. ಆದರೆ ದೊಡ್ಡ ಸುದ್ದಿಯಾಗುವುದಿಲ್ಲ. ದ.ಕ ಜಿಲ್ಲೆಯ ಮೂಡುಬಿದಿರೆಯ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿಯ ನವೀನ್​ಚಂದ್ರ ಶೆಟ್ಟಿ ಕಳೆದ ಚುನಾವಣೆಯಲ್ಲಿ ಬರೇ ಒಂದು ಮತದಿಂದ ಗೆದ್ದಿದ್ದರು. ತಮಾಷೆಯೆಂದರೆ ಮತದಾನದ ದಿನ ಸಂಜೆ ನವೀನರಿಗೆ ಮಾತಿಗೆ ಸಿಕ್ಕಿದ ವಿಪಕ್ಷೀಯರ ಸಂಬಂಧಿಯೋರ್ವರು ನಮಗೆ ಅನ್ಯಾಯವಾಗಿದೆ, ಹಾಗಾಗಿ ನಾನು ವೋಟ್ ಹಾಕಲು ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಂತೆ! ತನ್ನ ಗೆಲುವಿಗೆ ಅದೂ ಸಹಕಾರಿಯಾಗಿರಬೇಕು ಎಂದು ಭಾವುಕರಾಗಿದ್ದರು ನವೀನ್.
ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
