|ರಾಜಗುರು ಬಿ.ಎಸ್. ದ್ವಾರಕಾನಾಥ
ಮನುಷ್ಯರು ಕತ್ತಲೆಯನ್ನು ದಾಟಿ ದೀಪದ ಸಾಲುಗಳಲ್ಲಿ, ಬೆಳಕಿನಲ್ಲಿ ಸನ್ಮಾರ್ಗವನ್ನು, ಮುಕ್ತಿಪಥ ಮಾರ್ಗವನ್ನು ಕಂಡುಕೊಳ್ಳಬೇಕೆಂಬ ಕಾರಣಕ್ಕೆ ದೀಪಾವಳಿ ಹಬ್ಬವನ್ನು ಅಚರಿಸಲಾಗುತ್ತದೆ. ಸೂರ್ಯ ಇದ್ದಾಗ ದೀಪದ ಅವಶ್ಯಕತೆ ಇಲ್ಲ. ರಾತ್ರಿ ಕತ್ತಲೆ ಇದ್ದರೂ, ಮನೆಯಲ್ಲಿ ದೀಪ ಇದ್ದರೆ ಸಮಸ್ಯೆಯಾಗುವುದಿಲ್ಲ. ಶಾಶ್ವತವಾಗಿ ದೀಪ ಮತ್ತು ಬೆಳಕು ಇರಬೇಕು ಎಂದರೆ, ಮನೆಯಲ್ಲಿ ಮಹಾಲಕ್ಷ್ಮೀ ಸ್ವರೂಪಿಯಾದ ದೀಪಸ್ತಂಭವೇ ಆಧಾರ. ದೀಪಸ್ತಂಭದ ಕೆಳಗೆ ನೆರಳಿರುತ್ತದೆ. ಬೆಳಕು ಮಾತ್ರ ಸೂಸುತ್ತಿರುತ್ತದೆ. ಆ ಬೆಳಕೇ ಮಹಾಲಕ್ಷ್ಮೀ. ತನ್ನದೇನೂ ಬಯಸದೇ, ಲೋಕದ ಕಲ್ಯಾಣಕ್ಕಾಗಿ ಜ್ಯೋತಿರೂಪದಲ್ಲಿ ಆ ಮಹಾಲಕ್ಷ್ಮೀ ಬೆಳಗುತ್ತಿರುತ್ತಾಳೆ. ಅದಕ್ಕೇ ದೀಪಾವಳಿ ಅಂತ ಹೇಳುತ್ತಾರೆ.
ಆಷಾಢದ ಅಮಾವಾಸ್ಯೆ ದಿನ ಜ್ಯೋತಿರೂಪದಲ್ಲಿ ಈಶ್ವರನು ಬರುತ್ತಾನೆ. ಅಲ್ಲಿಂದ ಕಾರ್ತಿಕ ಮಾಸದಲ್ಲಿ ಎಲ್ಲ ಹಬ್ಬಗಳು ಮುಗಿಯುತ್ತವೆ. ಶ್ರೇಷ್ಠ ಹಬ್ಬ- ವ್ರತಗಳೆಲ್ಲ ಶ್ರಾವಣ ಮಾಸದಲ್ಲೇ ಹೆಚ್ಚಾಗಿ ಬರುತ್ತದೆ. ಗೌರಿ-ಗಣೇಶ, ಗೋಕುಲಾಷ್ಟಮಿ, ಉಪಾಕರ್ಮ, ವಾಮನ ಜಯಂತಿ ಹೀಗೆ ಹಲವು.
ಇನ್ನು, ಕಾರ್ತಿಕ ಮಾಸದಲ್ಲಿ ಕೇದಾರೇಶ್ವರ ವ್ರತವನ್ನು ಆಚರಿಸಲಾಗುತ್ತದೆ. ವ್ರತಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಕೇದಾರೇಶ್ವರ ವ್ರತ. ನಮ್ಮಲ್ಲಿ ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರೂ ಆಚರಿಸಬಹುದಾದ ಎರಡು ವ್ರತಗಳೆಂದರೆ ಗಣೇಶ ವ್ರತ ಮತ್ತು ಕೇದಾರೇಶ್ವರ ವ್ರತ. ಮನುಷ್ಯ ಹುಟ್ಟಿದ ಮೇಲೆ ದುಃಖದಲ್ಲಿ ಕಳೆದರೆ ಹೇಗೆ? ಆತ ಸುಖದಿಂದ ಬಾಳಬೇಕು. ಪ್ರಪಂಚದ ಕ್ಷೇಮವನ್ನು ಬಯಸುವುದೇ ಈ ವ್ರತದ ಉದ್ದೇಶ.
ಆಶ್ವಿಜ ಮಾಸದಲ್ಲಿ ರಾವಣನ ಸಂಹಾರ ಮಾಡಿ, ಗಜಾಶ್ವ ಪೂಜೆ ಮಾಡಿ, ವಿಜಯದಶಮಿಯಂದು ದಕ್ಷಿಣ ದಿಕ್ಕಿನಿಂದ (ಲಂಕೆಯಿಂದ) ರಾಮನು ವಿಜಯಯಾತ್ರೆ ಪ್ರಾರಂಭಿಸುತ್ತಾನೆ. ಆ ವಿಜಯಯಾತ್ರೆ 21 ದಿನಗಳ ನಂತರ ಅಯೋಧ್ಯೆಯಲ್ಲಿ ಅಂತ್ಯವಾಗುತ್ತದೆ. ಆ 21ನೇ ದಿನ ಭರತಖಂಡದ ಸ್ಥಾಪನೆಯಾಗುತ್ತದೆ. ಅದರ ಸಂಕೇತವೇ ದೀಪಾವಳಿ. ವಿಷ್ಣು ಎಲ್ಲ ರಾಕ್ಷಸರನ್ನು ಸಂಹಾರ ಮಾಡಿ, ಲೋಕವನ್ನು ಕಾಪಾಡಿ, ಲೋಕಕ್ಕೆ ಬೆಳಕು ಕೊಟ್ಟಿದ್ದೇ ದೀಪಾವಳಿ.
ದೀಪಾವಳಿ ಬಹಳ ದೊಡ್ಡ ಸಂದೇಶವನ್ನೇ ನೀಡುತ್ತದೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಹೆಣ್ಣು, ಗಂಡು, ಮನುಷ್ಯ, ಪ್ರಾಣಿ ಎಂಬ ಭೇದವಿಲ್ಲ. ಎಲ್ಲರೂ ಪ್ರೀತಿಯಿಂದ ಇರಬೇಕು ಎಂಬ ಕಾರಣಕ್ಕೆ ಈ ಲೋಕಸೃಷ್ಟಿಯಾಗಿದ್ದು. ಹಿಂಸೆ ಹೆಚ್ಚಾದಾಗಲೆಲ್ಲ ವಿಷ್ಣುವು ಒಂದೊಂದು ಅವತಾರವೆತ್ತಿ, ಅದನ್ನು ಮಟ್ಟ ಹಾಕಿದ್ದಾನೆ. ರಾಕ್ಷಸರನ್ನು ಸಂಹಾರ ಮಾಡಿದ್ದಾನೆ. ಜಗತ್ತು ಕತ್ತಲಲ್ಲಿ ಇದ್ದಾಗಲೆಲ್ಲ ಬೆಳಕು ನೀಡಿದ್ದಾನೆ. ಕತ್ತಲು ಹೋಗಿ ಬೆಳಕು ಬರುವುದೇ ಈ ದೀಪಾವಳಿಯ ಉದ್ದೇಶ. ಕತ್ತಲೆಯನ್ನು ನೀಗುವುದೇ ನರಕಾಸುರನ ಸಂಹಾರದ ಪ್ರತೀಕ. ಮನುಷ್ಯ ತನ್ನ ಕ್ಷೇಮ ಮತ್ತು ಅಭ್ಯುದಯಕ್ಕಾಗಿ, ಆರೋಗ್ಯ ತುಂಬಿದ ಆಯುಷ್ಯದ ಜತೆಗೆ ಧೈರ್ಯ, ಯಶಸ್ಸು, ಕೀರ್ತಿ, ಲಾಭ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ.
ನಿನ್ನೆ ನೀರು ತುಂಬುವ ಹಬ್ಬ. ಇಂದು ನರಕ ಚತುರ್ದಶಿ. ಈ ಸಂದರ್ಭದಲ್ಲಿ ಮಹಾವಿಷ್ಣುವನ್ನು ಪೂಜೆ ಮಾಡಲಾಗುತ್ತದೆ. ನಾಳೆ (ಮಂಗಳವಾರ) ಅಮಾವಾಸ್ಯೆ. ಸಂಪತ್ತು ವೃದ್ಧಿಗೆ ಅಮಾವಾಸ್ಯೆಯಂದು ನಾವು ಲಕ್ಷ್ಮೀಪೂಜೆ ಮಾಡುತ್ತೇವೆ. ಈ ಬಾರಿ ಸೂರ್ಯಗ್ರಹಣ ಸಹ ಇದೇ ದಿನದಂದು ಬಂದಿದೆ. ಸೂರ್ಯಗ್ರಹಣ ಮುಗಿದ ಮೇಲೆ ಅಂದೇ ಧನಲಕ್ಷ್ಮೀ ಪೂಜೆಯನ್ನೂ ಮಾಡಲಾಗುತ್ತದೆ. ಸಂಜೆ ಪಾಡ್ಯ ಬರುತ್ತದೆ. ಬಲೀಂದ್ರ ವ್ರತ ಇರುವವರು ವ್ರತ ಮಾಡುತ್ತಾರೆ. ಬುಧವಾರ ಬಲಿಪಾಡ್ಯಮಿ.
ಮೇಷ:ಭರಣಿ ನಕ್ಷತ್ರದಲ್ಲಿ ಗ್ರಹಣ ಆಗುವುದರಿಂದ ಗ್ರಹಣ ಶಾಂತಿ ಬೇಕು. ಸುಬ್ರಹ್ಮಣ್ಯ ದೇವರ ಪೂಜೆ ಮಾಡಿ. ಗ್ರಹಣಬಾಧೆಯಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು. ಆ ರಾಶಿಯವರು ಸತತವಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು.
ವೃಷಭ:ಈ ರಾಶಿಯವರಿಗೆ ಸದ್ಯ 11ನೇ ಮನೆಯಲ್ಲಿ ಗುರುವಿದ್ದಾನೆ. ಈಗಾಗಲೇ ಸರ್ವತೋಮುಖ ಬೆಳವಣಿಗೆಯಾಗಿದೆ. ಖರ್ಚು ಜಾಸ್ತಿಯಾಗಿ, ಸಂಪಾದನೆ ಕಡಿಮೆಯಾಗಿದೆ. 11ನೇ ಮನೆಗೆ ಶನಿ ಬಂದ ಮೇಲೆ ಅನುಕೂಲವಾಗುತ್ತದೆ.
ಮಿಥುನ:ಕೈಕಾಲು, ಕೀಲು, ಮಾಂಸಖಂಡಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನೇ ಮಾಡಬೇಕು. ಮಿತಿಮೀರಿದರೆ ಸಮಸ್ಯೆ ಎದುರಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ.
ಕಟಕ:ಒಂಬತ್ತನೇ ಮನೆಯಲ್ಲಿ ಗುರು ಇದ್ದಾನೆ, ಏಳರಲ್ಲಿ ಶನಿ ಇದ್ದಾನೆ. ಒಬ್ಬ ಚೆನ್ನಾಗಿದ್ದರೆ ಏನು ಬೇಕಾದರೂ ಪಡೆದುಕೊಳ್ಳಬಹುದು. ಹಾಗಾಗಿ, ಗುರುವಿಗಾಗಿ ದತ್ತಾತ್ರೇಯನ 14ನೇ ಅಧ್ಯಾಯ ಪಾರಾಯಣ ಮಾಡಿ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
ಸಿಂಹ:ಈ ರಾಶಿಯವರಿಗೆ ಶನಿಕಾಟ ಇದೆ. ಆರನೇ ಮನೆಯಲ್ಲಿ ಶನಿ ಇದ್ದಾನೆ. ಗುರು ಆರನೇ ಮನೆಯಲ್ಲಿದ್ದಾನೆ. ಆದರೆ, ಆಕ್ರಮಣಕಾರಿ ಅಥವಾ ಆತಂಕಕಾರಿ ಸನ್ನಿವೇಶ ಎದುರಾಗುವುದಿಲ್ಲ. ಧನಲಾಭವಾಗುತ್ತದೆ.
ಕನ್ಯಾ:ಆಡಿದ ಮಾತಿಗೆ ತಪ್ಪಬೇಡಿ. ಪುಣ್ಯಕೋಟಿಯಂತೆ ಆಡಿದ ಮಾತನ್ನು ಉಳಿಸಿಕೊಳ್ಳಿ. ಯಾರಿಂದಾದರೂ ಏನಾದರೂ ಪಡೆದಿದ್ದರೆ, ಅದನ್ನು ವಾಪಸ್ಸು ಹಿಂದಿರುಗಿಸಿ. ಇಲ್ಲವಾದರೆ ಶಾಪವಾಗಿ ಪರಿಣಮಿಸುತ್ತದೆ. ಸೂರ್ಯ ನಮಸ್ಕಾರ ಮಾಡಿ.
ತುಲಾ:ಆರರಲ್ಲಿ ಗುರು ಇದ್ದಾನೆ. ಸದ್ಯದಲ್ಲೇ ಸಪ್ತಮಕ್ಕೆ ಬರುತ್ತಾನೆ. ಮುಂದೆ ಒಳ್ಳೆಯ ದಿನಗಳು ಬರಲಿವೆ. ವೃತ್ತಿ, ಉದ್ಯೋಗದಲ್ಲಿ ಒಳ್ಳೆಯ ಹೆಸರು ಬರಲಿದೆ.
ವೃಶ್ಚಿಕ:ಜನವರಿ 17ರವರೆಗೂ ಏನು ಬೇಕಾದರೂ ಸಾಧಿಸಬಹುದು. ಅಂತಹ ಅದ್ಭುತವಾದ ಸಮಯ. ಮುಂದಿನ ಮೂರು ತಿಂಗಳು ಅತ್ಯಂತ ಶುಭವಾದ ಕಾಲ. ಋಣಬಾಧೆ ದೂರವಾಗಲಿದೆ. ಸದಾ ಗಣಪತಿ ಮತ್ತು ನಾಗದೇವತೆಯನ್ನು ಧ್ಯಾನ ಮಾಡಿ.
ಧನುಸ್ಸು:ಶನಿ ಬಿಡುವುದಕ್ಕೆ ಇನ್ನೆರಡು ತಿಂಗಳುಗಳು ಮಾತ್ರ ಇವೆ. ತಾಳಿದವನು ಬಾಳಿಯಾನು ಎಂಬ ಗಾದೆಯಂತೆ, ಗುರಿಯನ್ನು ಮುಟ್ಟಬೇಕಾದರೆ ಸಂಯಮ, ಸದ್ಗುಣ ಮತ್ತು ತಾಳ್ಮೆ ಬಹಳ ಮುಖ್ಯ.
ಮಕರ:ಎರಡು ತಿಂಗಳು ಸ್ವಲ್ಪ ಭಯಾನಕವಾಗಿದೆ. ಹಾಗಂತ ಚಿಂತೆ ಮಾಡುವುದು ಬೇಡ. ಯಾರಾದರೂ ಕೈಹಿಡಿದು ನಡೆಸುತ್ತಾರೆ. ಯಾರಾದರೂ ಅನುಕೂಲ ಮಾಡಿಕೊಡುತ್ತಾರೆ. ಕಷ್ಟ-ಕಾರ್ಪಣ್ಯಗಳು ಕಳೆಯಲಿವೆ. ದತ್ತಾತ್ರೇಯ ಪಾರಾಯಣ ಮಾಡಿ.
ಕುಂಭ:ಶನಿಕಾಟ ಇದ್ದಿದ್ದರಿಂದ ಏನು ಸಿಗಬೇಕಿತ್ತೋ ಅದು ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ಸಿಗಬೇಕಿದ್ದರಲ್ಲಿ ಸ್ವಲ್ಪ ಕಡಿಮೆಯಾಗಿದೆ. ಶನಿ ಪೂಜೆ ಮಾಡಲೇಬೇಕು. ಶನಿ ಸ್ತೋತ್ರ ಪಠಣ ಮಾಡಿ, ಆಧ್ಯಾತ್ಮ ರಾಮಾಯಣದ ಮೂರನೇ ಅಧ್ಯಾಯ ಪಾರಾಯಣ ಮಾಡಿ.
ಮೀನ:ಆತಂಕ ಸೃಷ್ಟಿ ಮಾಡಿಕೊಳ್ಳಬೇಡಿ. ನೀವೇ ಮಾಡಿಕೊಂಡರೆ, ಅದಕ್ಕೆ ಯಾರು ಹೊಣೆ? ಸಿಗುವುದನ್ನು ಪಡೆದುಕೊಳ್ಳಿ. ಸ್ವಚ್ಛವಾದ ಮನಸ್ಸಿನಲ್ಲಿ ಶುದ್ಧವಾದ ಪ್ರಾರ್ಥನೆ ಮಾಡಿ. ಆಸೆ-ಆಕಾಂಕ್ಷೆಗಳನ್ನು ದತ್ತಾತ್ರೇಯರು ಪೂರೈಸುತ್ತಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 8 =
Remember me
