| ಮಂಜುನಾಥ ಕೋಳಿಗುಡ್ಡ ಬೆಳಗಾವಿರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ, ಮಳೆ ಅಭಾವದಿಂದ ಆದಾಯ ಇಲ್ಲದೆ ಕೆಂಗೆಟ್ಟಿರುವ ರೈತರಿಗೆ ಇದೀಗ ಈರುಳ್ಳಿ ಇಳುವರಿ ಕುಸಿತಗೊಂಡಿರುವುದು ಮತ್ತಷ್ಟು ಸಂಕಷ್ಟಕ್ಕೆ ತಂದೊಡ್ಡಿದೆ. ಮತ್ತೊಂದೆಡೆ ಸಗಟು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಏರಿಕೆ ಕಂಡು ಗ್ರಾಹಕರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ ನೀರಾವರಿ, ಮಳೆಯಾಶ್ರಿತ ಸುಮಾರು 3.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆ ಕಾರಣದಿಂದಾಗಿ 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಸತತ ಎರಡು ವರ್ಷಗಳಿಂದ ಈರುಳ್ಳಿ ಬೆಳೆದು ನಷ್ಟ ಅನುಭವಿಸಿದ್ದ ಬೆಳೆಗಾರರು ಈ ವರ್ಷವೂ ನಷ್ಟ ಉಂಟಾಗಬಹುದು ಎಂಬ ಆತಂಕದಲ್ಲಿದ್ದಾರೆ.
ಈ ಬಾರಿ ಆಗಸ್ಟ್​ನಲ್ಲಿ ಏಕಾಏಕಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗೆ ನೀರಿನ ಕೊರತೆ ಉಂಟಾಯಿತು. ಕೊಳವೆ ಬಾವಿ, ನದಿ, ಹಳ್ಳಗಳಿಗೆ ಅಳವಡಿಸಿದ್ದ ಕೃಷಿ ಪಂಪ್​ಸಟ್​ಗಳಿಗೆ ವಿದ್ಯುತ್ ಸಮಸ್ಯೆ ಎದುರಾಗಿದ್ದರಿಂದ ಸಮೃದ್ಧವಾಗಿ ಬೆಳೆದಿದ್ದ ಬೆಳೆಗೆ ನೀರಿನ ಅಭಾವದಿಂದಾಗಿ ಬೆಂಕಿ ರೋಗ ತಗುಲಿದೆ. ಗಡ್ಡೆ ಕಟ್ಟುವ ಸಂದರ್ಭದಲ್ಲಿಯೇ ರೋಗ ಬಾಧಿಸಿದ್ದು ಇಳುವರಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಸೆಪ್ಟಂಬರ್ ಮೂರನೇ ವಾರದಲ್ಲಿ ಈರುಳ್ಳಿ ಕೊಯ್ಲು ಆರಂಭವಾಗಬೇಕಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬೆಳೆಯದಿರುವುದು ಚಿಂತೆಗೀಡು ಮಾಡಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಹಾನಿಯಾಗಿದೆ. ಸಾಮಾನ್ಯವಾಗಿ ಎಕರೆಗೆ 50 ಕೆಜಿಯ 180 ರಿಂದ 200 ಚೀಲದಷ್ಟು ಈರುಳ್ಳಿ ಇಳುವರಿ ಬರುತಿತ್ತು. ಆದರೆ, ಈ ವರ್ಷ ಬರ, ಬೆಂಕಿ ರೋಗದಿಂದಾಗಿ ಎಕರೆಗೆ 80 ರಿಂದ 100 ಚೀಲ ಮಾತ್ರ ಇಳುವರಿ ಬರುವ ಸಾಧ್ಯತೆಯಿದೆ. ಗಡ್ಡೆಯ ಗಾತ್ರ ಕೂಡ ಚಿಕ್ಕದಾಗಿದ್ದು, ಮಾರುಕಟ್ಟೆಯಲ್ಲಿ ದರ ಕೂಡ ಕಡಿಮೆಯಾಗಲಿದೆ ಎಂದು ಬೆಳೆಗಾರರಾದ ನಿಂಗಪ್ಪ ಹೊರಟ್ಟಿ, ಎಂ.ದೇವರಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ತೀವ್ರ ಬರದಿಂದಾಗಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ. ಕೆಲವೆಡೆ ಬೆಳೆ ನೀರಿಲ್ಲದೆ ಒಣಗಿ ಭೂಮಿಯಲ್ಲೇ ಗೊಬ್ಬರವಾಗಿದೆ. ಪರಿಣಾಮ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಆವಕ ಶೇ.40 ಕಡಿಮೆಯಾಗಿದೆ. ಮತ್ತೊಂದೆಡೆ ಬೇಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀಪಾವಳಿ ವೇಳೆಗೆ ಈರುಳ್ಳಿ ದರದಲ್ಲಿ ಶೇ.23 ಹೆಚ್ಚಳವಾಗುವ ಸಾಧ್ಯತೆ ಇದೆ.
ತೀವ್ರ ಬರ, ಬೆಂಕಿ ರೋಗ ಬಾಧಿಸಿರುವುದರಿಂದ ಈರುಳ್ಳಿ ಇಳುವರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗಿದ್ದು, ಬೇಡಿಕೆ ಪ್ರಮಾಣ ಹೆಚ್ಚಿದೆ. ಪ್ರತಿ ಕ್ವಿಂಟಾಲ್ ಈರುಳ್ಳಿ 2,800 ರೂ.ದರದಂತೆ ಮಾರಾಟವಾಗುತ್ತಿದೆ.
| ಕೆ.ಎಚ್.ಗುರುಪ್ರಸಾದ್, ಬೆಳಗಾವಿ ಎಪಿಎಂಸಿ ಕಾರ್ಯದರ್ಶಿ
ಮಳೆಯಾಶ್ರಿತ ಬೆಳೆ ಸಂಪೂರ್ಣ ನಾಶ:ಮುಂಗಾರು ಅವಧಿಯಲ್ಲಿ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ತಾಲೂಕಿನ 4,779 ಹೆಕ್ಟೇರ್ ಪ್ರದೇಶದಲ್ಲಿ ಹಾಕಲಾಗಿದ್ದ ಈರುಳ್ಳಿ ಬೆಳೆ ಶೇ.100 ನಾಶವಾಗಿದೆ. ಹೀಗಾಗಿ ಬೆಳೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ವಾಸ್ತವಾಂಶದ ವರದಿ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಗಡ್ಡೆಯ ಗಾತ್ರ ಅನುಸರಿಸಿ ರೈತರ ಬಳಿ ಕೆ.ಜಿ.ಗೆ 22 ರಿಂದ 27 ರವರೆಗೂ ವ್ಯಾಪಾರಸ್ಥರು ಖರೀದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.
ಕೆಜಿ ಈರುಳ್ಳಿ 35 ರೂಪಾಯಿ!:ಪ್ರಮುಖ ವಾಣಿಜ್ಯ ಕೇಂದ್ರ ಸ್ಥಾನವಾಗಿರುವ ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ಎಪಿಎಂಸಿಯಲ್ಲಿ ಶನಿವಾರ (ಅ.7) ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬಂದಿಲ್ಲ. ಕ್ವಿಂಟಾಲ್ ಈರುಳ್ಳಿ (ಉತ್ತಮ ದರ್ಜೆ)2,800 ರೂ.ನಿಂದ 3,000 ರೂ., ಮಧ್ಯಮ ಗಾತ್ರದ ಈರುಳ್ಳಿ ಕ್ವಿಂಟಾಲ್​ಗೆ 1,500 ರಿಂದ 2,000 ರೂ. ಹಾಗೂ ಸಣ್ಣ ಈರುಳ್ಳಿ ಕ್ವಿಂಟಾಲ್​ಗೆ 800 ರೂ.ನಿಂದ 1,000 ರೂ.ವರೆಗೆ ಮಾರಾಟವಾಗಿದೆ.
ಮ್ಯಾನೇಜ್​ಮೆಂಟ್ ಮೀಟಿಂಗ್​ನಲ್ಲಿ ಅಂಗಿ ಧರಿಸದೆ ಭಾಗವಹಿಸಿದ ಸಿಇಒ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
