ಹುಬ್ಬಳ್ಳಿ:ಅತಿವೃಷ್ಟಿ, ನೆರೆಯ ನೆಪ ಮಾಡಿಕೊಂಡು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ವ್ಯಾಪಾರಿಗಳು ಅದೇ ಈರುಳ್ಳಿಗೆ ಸಗಟು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ ನಿಗದಿ ಮಾಡುತ್ತಿರುವುದರಿಂದ ಬೆಳೆಗಾರನ ಶ್ರಮಕ್ಕೆ ಬೆಲೆಯಿಲ್ಲದಂತಾಗಿದೆ. ಇದು ಕಳೆದೊಂದು ತಿಂಗಳಿಂದ ಹುಬ್ಬಳ್ಳಿ ಎಪಿಎಂಸಿಯಲ್ಲಿ ನಡೆಯುತ್ತಿರುವ ಗೋಲ್ಮಾಲ್! ಹೇಳಿಕೊಳ್ಳಲು ಒಂದೆರಡು ಲಾಟ್​ಗಳಿಗೆ 5 ಸಾವಿರ ರೂ. ಕ್ವಿಂಟಾಲ್​ನಂತೆ ದರ ಕೂಗುವ ವರ್ತಕರು ಬಳಿಕ ಬಹುತೇಕ ಲಾಟ್​ಗಳಿಗೆ 2 ಸಾವಿರ ರೂ. ದಾಟಿಸುವುದಿಲ್ಲ. ಹುಬ್ಬಳ್ಳಿ ಎಪಿಎಂಸಿಯಲ್ಲಿ ದಸರಾ ನಂತರ ಮಂಗಳವಾರದ ಟೆಂಡರ್​ನಲ್ಲಿ ಸ್ಥಳೀಯ ಈರುಳ್ಳಿ ಕ್ವಿಂಟಾಲ್​ಗೆ ಕನಿಷ್ಠ 500 ರೂ.ನಿಂದ 5000 ರೂ.ವರೆಗೆ ಇತ್ತು. 760 ಕ್ವಿಂಟಾಲ್ ಸ್ಥಳೀಯ ಬೆಳೆ ಆವಕವಾಗಿತ್ತು. ಒಣಗಿದ್ದೆನ್ನುವ ಕಾರಣಕ್ಕೆ ಪುಣೆ ಈರುಳ್ಳಿಗೆ ಬೆಲೆ ಹೆಚ್ಚಿದ್ದು, ಕನಿಷ್ಠ 1500 ರೂ.ನಿಂದ 6500 ರೂ.ವರೆಗೆ ಮಾರಾಟವಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಕುಂದಗೋಳ, ಧಾರವಾಡ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ವರ್ಷದ ಮುಂಗಾರಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿತ್ತು. ಆದರೆ, ಶೇ. 90 ಬೆಳೆ ನಾಶವಾಗಿ ಎಪಿಎಂಸಿ ಮಾರುಕಟ್ಟೆಗೆ ಆವಕ ಕುಸಿದಿದೆ. ಈಗ ಏನಿದ್ದರೂ ಪುಣೆ ಉಳ್ಳಾಗಡ್ಡಿಯೇ ಆಸರೆಯಾಗಿದೆ.
ಪ್ರತಿ ವರ್ಷ ಇದೇ ಸೀಸನ್​ನಲ್ಲಿ ಹುಬ್ಬಳ್ಳಿ ಎಪಿಎಂಸಿಗೆ ಸ್ಥಳೀಯ ಉಳ್ಳಾಗಡ್ಡಿ ದಿನಕ್ಕೆ ಅಂದಾಜು 20 ಸಾವಿರ ಕ್ವಿಂಟಾಲ್​ವರೆಗೆ ಆವಕವಾಗುತ್ತಿತ್ತು. ಈ ವರ್ಷ ಅದು ಸಾವಿರ ಕ್ವಿಂಟಾಲ್​ಗೂ ತಲುಪುತ್ತಿಲ್ಲ! ಸಗಟು ಮಾರಾಟ ಬೆಲೆ ಕ್ವಿಂಟಾಲ್​ಗೆ 500 ರೂ. ಇದ್ದದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 80 ರೂ., 100 ರೂ.ಗೆ ಹೇಗೆ ಹೋಗುತ್ತದೆ ಎಂಬುದು ಗ್ರಾಹಕರ ಪ್ರಶ್ನೆ.
ಒಂದೆಡೆ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಗ್ರಾಹಕರಿಗೂ ದರ ಭಾರ ಎನಿಸುತ್ತಿದೆ. ಕೇಂದ್ರ ಸರ್ಕಾರ ದಾಸ್ತಾನು ಮಿತಿ ಪರಿಷ್ಕರಣೆ ಮಾಡಿದ ನಂತರ ಉಳ್ಳಾಗಡ್ಡಿ ಬೆಲೆ ಇಳಿಕೆಯಾಗಬೇಕಿತ್ತು. ಆದರೂ ಪ್ರತಿ ಕೆಜಿಗೆ ನೂರು ರೂ. ಇರುವುದನ್ನು ನೋಡಿದರೆ ಮಧ್ಯವರ್ತಿಗಳ ಪಾಲೇ ಹೆಚ್ಚಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಈರುಳ್ಳಿ ನಾಶ:ನಿರಂತರ ಮಳೆಯಿಂದ ಕೊಳೆಯುತ್ತಿದ್ದ ಉಳ್ಳಾಗಡ್ಡಿ ಬೆಳೆಯನ್ನು ರೈತರೊಬ್ಬರು ಟ್ರ್ಯಾಕ್ಟರ್​ನಿಂದ ರಂಟಿ ಹೊಡೆದು ನಾಶಪಡಿಸಿದ ಘಟನೆ ರಾಣೆಬೆನ್ನೂರಲ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಜಿಲ್ಲಾವಾರು ದರ ಮಾಹಿತಿ (ಎಪಿಎಂಸಿ ವಹಿವಾಟು)
*ಹಾವೇರಿ -ರಾಣೆಬೆನ್ನೂರಲ್ಲಿ ಸ್ಥಳೀಯ ಗುಣಮಟ್ಟದ ಉಳ್ಳಾಗಡ್ಡಿ ಕ್ವಿಂಟಾಲ್​ಗೆ 2ರಿಂದ 6 ಸಾವಿರ ರೂ. ವರೆಗೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸ್ಥಳೀಯ ಉಳ್ಳಾಗಡ್ಡಿ ಕೆಜಿಗೆ 60 ರೂ. ವರೆಗೆ ಮಾರಾಟವಾಗಿದೆ.
*ಗದಗ -ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 80ರೂ.ನಿಂದ 100 ರೂ. ಎಪಿಎಂಸಿಯಲ್ಲಿ ಸರಾಸರಿ ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 600 ರೂ.ದಿಂದ ಗರಿಷ್ಠ 4000 ರೂ. ವರೆಗೆ ಮಾರಾಟವಾಗುತ್ತಿದೆ.
*ಬಾಗಲಕೋಟೆ- ಎಪಿಎಂಸಿಯಲ್ಲಿ ಕ್ವಿಂಟಾಲ್​ಗೆ 5200-6000 ರೂ.
ಸಾಮಾನ್ಯ ಮಾರುಕಟ್ಟೆಯಲ್ಲಿ ಒಣಗಡ್ಡಿ ಕೆಜಿಗೆ 80 ರೂ./ಹಸಿಗಡ್ಡಿ ಕೆಜಿಗೆ 40 ರೂ.ಗೆ ಮಾರಾಟವಾಗಿದೆ. ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸದ್ಯ ಪ್ರತಿ ಕೆಜಿ ಈರುಳ್ಳಿ 60-80 ರೂಪಾಯಿವರೆಗೆ ಮಾರಾಟವಾಗಿದೆ.
*ಮಂಗಳೂರು-ಮಂಗಳವಾರ 60-65 ರೂ.ವರೆಗೆ ಮಾರಾಟವಾಗಿದ್ದು, ಚಿಲ್ಲರೆ ವ್ಯವಹಾರದಲ್ಲಿ 70-80 ರೂ.ವರೆಗೆ ಮಾರಾಟವಾಗಿದೆ.
*ಬೆಳಗಾವಿ-ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್​ಗೆ ಕನಿಷ್ಠ 3,800 ರೂ., ಗರಿಷ್ಠ 7,000 ರೂ. ವರೆಗೆ ಇದೆ. ಎಪಿಎಂಸಿ ಹೊರತುಪಡಿಸಿ ಒಣ ಈರುಳ್ಳಿ ಕೆಜಿಗೆ 100-120 ರೂ., ಹಸಿ ಈರುಳ್ಳಿ ಕೆಜಿಗೆ 80 ರಿಂದ 100 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
*ವಿಜಯಪುರ- ಎಪಿಎಂಸಿಯಲ್ಲಿ ಕ್ವಿಂಟಾಲ್​ಗೆ 4000- 6000 ರೂ., ಮುಕ್ತ ಮಾರುಕಟ್ಟೆಯಲ್ಲಿ ಕೆಜಿಗೆ 80 ರಿಂದ 100 ರೂ. ವರೆಗೆ ಬೆಲೆ ಇದೆ.
*ರಾಯಚೂರು-3,900 -5,000 ರೂ.ವರೆಗೆ ಖರೀದಿಸಲಾಗುತ್ತಿದೆ. ಹೊರಗಡೆ ಕೆ.ಜಿ.ಗೆ 100 ರೂ.ನಿಂದ 120 ರೂ.ಗೆ ಮಾರಾಟ ಮಾಡಲಾಗುತ್ತಿದೆ.
* ಕೊಪ್ಪಳ -ಎಪಿಎಂಸಿಯಲ್ಲಿ 3,000 ರೂ. ಬೆಲೆಯಿದ್ದು, ಹೊರಗಡೆ ಕೆಜಿಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ.
* ಬಳ್ಳಾರಿ- ಎಪಿಎಂಸಿಯಲ್ಲಿ ಕ್ವಿಂಟಾಲ್​ಗೆ 6,000 ರೂ. ಇದೆ. ಮಾರುಕಟ್ಟೆಯಲ್ಲಿ ಕಿಲೋಗೆ 70 ರಿಂದ 80 ರೂ. ಇದೆ.
*ಚಿಕ್ಕಮಗಳೂರು-ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ ಆರರಿಂದ ಆರೂವರೆ ಸಾವಿರ ರೂ. ಹಾಗೂ ಕೆ.ಜಿಗೆ 60 ರಿಂದ 65 ರೂ. ಮುಕ್ತ ಮಾರುಕಟ್ಟೆಯಲ್ಲಿ 70 ರಿಂದ 75 ರೂ. ದರವಿದೆ.
ಬೆಂಗಳೂರಲ್ಲಿ ಇಳಿಕೆ
ಕೆಲ ದಿನಗಳ ಹಿಂದೆ 100 ರೂ. ಗಡಿ ದಾಟಿದ್ದ ಕೆಜಿ ಈರುಳ್ಳಿ ಬೆಲೆ ಇದೀಗ 60 ರಿಂದ 70ರೂ.ಗೆ ಮಾರಾಟವಾಗುತ್ತಿದೆ. ಮಂಗಳವಾರ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಯಶವಂತಪುರ ಎಪಿಎಂಸಿ ಹಾಗೂ ದಾಸನಪುರ ಮಾರುಕಟ್ಟೆಗೆ 43855 ಬ್ಯಾಗ್​ಗಳ 255 ಟ್ರಕ್ ಈರುಳ್ಳಿ ಆಮದಾಗಿದೆ. ಎಕ್ಸ್​ಟ್ರಾ ಸೂಪರ್ ಕ್ವಾಲಿಟಿ 100 ಕೆಜಿ ಈರುಳ್ಳಿ 6000-6500 ರೂ. ದರವಿದೆ. ದೊಡ್ಡ ಗಾತ್ರದ ಈರುಳ್ಳಿ 5500ರಿಂದ 6000, ಮುಕ್ಕಾಲು ಗಾತ್ರಕ್ಕೆ 5 ರಿಂದ 6 ಸಾವಿರ ಬೆಲೆ ನಿಗದಿಯಾಗಿದೆ. ಒಟ್ಟಾರೆ ನೆರೆರಾಜ್ಯದಿಂದ ಬಂದ ಈರುಳ್ಳಿ ಸರಾಸರಿ 3 ರಿಂದ 4ಸಾವಿರವರೆಗೆ ಮಾರಾಟ ಕಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
