ಬೆಂಗಳೂರು:ರಾಜ್ಯದ ಖಾಸಗಿ ಶಾಲೆಗಳು ಶುಲ್ಕದ ಆಸೆಗೆ ಬಿದ್ದು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಹೊರಿಸಿದ್ದ ಆನ್​ಲೈನ್ ಪಾಠದ ಹೊರೆಯನ್ನು ಇಳಿಸಿರುವ ಸರ್ಕಾರ, ಎಲ್​ಕೆಜಿಯಿಂದ 5ನೇ ತರಗತಿವರೆಗೆ ಎಲ್ಲ ಪಠ್ಯಕ್ರಮದ (ರಾಜ್ಯ, ಸಿಬಿಎಸ್​ಇ, ಐಸಿಎಸ್​ಇ) ಶಾಲೆಗಳಿಗೂ ಅನ್ವಯಿಸುವಂತೆ ಆನ್​ಲೈನ್ ಶಿಕ್ಷಣವನ್ನು ರದ್ದುಗೊಳಿಸಿದೆ. ತನ್ಮೂಲಕ ಆನ್​ಲೈನ್ ಶಿಕ್ಷಣದ ವಿರುದ್ಧ ಸತತ 4 ದಿನಗಳ ಕಾಲ ವಿಜಯವಾಣಿ ನಡೆಸಿದ ಅಭಿಯಾನಕ್ಕೆ ಗೆಲುವು ದೊರೆತಂತಾಗಿದೆ.
ಬುಧವಾರ ಶಿಕ್ಷಣ ತಜ್ಞರು, ಖಾಸಗಿ ಶಾಲಾ ಸದಸ್ಯರೊಂದಿಗೆ ಸುದೀರ್ಘ ಸಭೆ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಂಜೆ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿವೇಚನಾ ರಹಿತವಾಗಿ ಆನ್​ಲೈನ್​ನಲ್ಲಿ ಬೋಧನೆ ಮಾಡುತ್ತಿರುವುದಾಗಿ ಪಾಲಕರಿಂದ ದೂರುಗಳು ಬಂದಿದ್ದವು. ಎಷ್ಟೋ ಪಾಲಕರ ಬಳಿ ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್​ಟಾಪ್ ಇಲ್ಲ. ಇದೂ ಒಂದು ರೀತಿಯಲ್ಲಿ ಹಿಂಸೆ ಆಗಿದೆ. ಹೀಗಾಗಿ ಈ ಕೂಡಲೇ ಆನ್​ಲೈನ್ ತರಗತಿಗಳನ್ನು ರದ್ದು ಮಾಡಬೇಕು. ಆನ್​ಲೈನ್ ಕಲಿಕೆ ಹೆಸರಲ್ಲಿ ಶುಲ್ಕವನ್ನೂ ಸಂಗ್ರಹಿಸಬಾರದೆಂದು ಸಚಿವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಶಿಕ್ಷಣ ತಜ್ಞರಾದ ಡಾ. ಎಂ.ಕೆ.ಶ್ರೀಧರ್, ಡಾ. ಗುರುರಾಜ ಕರಜಗಿ, ನಿರಂಜನಾರಾಧ್ಯ, ಅಜೀಂ ಪ್ರೇಮ್ ಜೀ ಫೌಂಡೇಶನ್ ಸದಸ್ಯ ಋಷಿಕೇಶ್, ಕ್ಯಾಮ್್ಸ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕಲಿಕೆಗೆ ತಂತ್ರಜ್ಞಾನ ಸ್ಪರ್ಶ:ತಂತ್ರಜ್ಞಾನ ಬಳಸಿಕೊಂಡು ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಲು ಯಾವ ಮಾದರಿ ಕ್ರಮ ಕೈಗೊಳ್ಳಬೇಕೆಂಬ ಸಲಹೆ ಪಡೆಯಲು ಶಿಕ್ಷಣ ತಜ್ಞ ಡಾ. ಎಂ.ಕೆ.ಶ್ರೀಧರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದರಲ್ಲಿ ಶಿಕ್ಷಣ ತಜ್ಞರಾದ ಗುರುರಾಜ ಕರಜಗಿ, ನಿರಂಜನರಾಧ್ಯ ಸೇರಿದಂತೆ ಇನ್ನೂ ಕೆಲವರಿದ್ದು, ಮುಂದಿನ 10 ದಿನಗಳಲ್ಲಿ ವರದಿ ನೀಡುವಂತೆ ಸಚಿವರು ಸೂಚಿಸಿದರು. ನಗರದಲ್ಲಿರುವ ಮಕ್ಕಳಿಗೆ ತಂತ್ರಜ್ಞಾನದ ಲಭ್ಯತೆ ಇದ್ದು, ಗ್ರಾಮೀಣ ಭಾಗದ ಜನರು ಇದರಿಂದ ವಂಚಿತರಾಗಿದ್ದಾರೆ. ಇವರು ಕಲಿಕೆಯಿಂದ ಹಿಂದುಳಿಯಬಾರದು. ಈ ಹಿನ್ನೆಲೆಯಲ್ಲಿ ಬಹಳಷ್ಟು ಆಲೋಚನೆ ಮಾಡಿ ಮಾರ್ಗಸೂಚಿಯನ್ನು ರಚಿಸಬೇಕೆಂದು ಸಮಿತಿಗೆ ತಿಳಿಸಿದ್ದಾರೆ. ಪ್ರತಿ ವಿದ್ಯಾರ್ಥಿ ದಿನದಲ್ಲಿ ಆನ್​ಲೈನ್ ಕಲಿಕೆಗೆ ಲಕ್ಷ್ಯ ನೀಡುವ ಸಮಯವನ್ನು ಸ್ಕ್ರೀನ್ ಟೈಮಿಂಗ್ ಎಂದು ಕರೆಯುತ್ತಿದ್ದಾರೆ. ಇದರ ಅವಧಿ 45 ನಿಮಿಷ ಇದೆ. ಈ ಅವಧಿ ಬಳಸಿಕೊಂಡು ಉಳಿದ ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಬಹುದು ಎಂಬುದನ್ನು ಲೆಕ್ಕಚಾರ ಹಾಕಿ ಸಮಿತಿ ವರದಿ ನೀಡಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಜುಲೈನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ
ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಗೊಂದಲ, ವದಂತಿ ಬೇಡ. ಸುರಕ್ಷತಾ ಕ್ರಮದಡಿ ಪರೀಕ್ಷೆಯನ್ನು ನಡೆಸಿಯೇ ನಡೆಸುತ್ತೇವೆ ಎಂದು ಸಚಿವರು ಪುನರುಚ್ಚರಿಸಿದರು. ಕೆಲವು ಕಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದಿಲ್ಲವೆಂದು ಸುಳ್ಳು ಸುದ್ದಿ ಹರಡಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈಗಾಗಲೇ ನಿಗದಿ ಪಡಿಸಿರುವಂತೆ ಜೂ.25ರಿಂದ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ಮಾಸ್ಕ್, ಸ್ಯಾನಿಟೈಸರ್​ಗಳನ್ನು ವಿದ್ಯಾರ್ಥಿಗಳಿಗೆ ನೀಡಲಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸುತ್ತೇವೆ ಎಂದರು.
ವಿಜಯವಾಣಿ ಅಭಿಯಾನಕ್ಕೆ ಜಯ
ಆನ್​ಲೈನ್ ತರಗತಿಯಿಂದ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮಗಳ ಕುರಿತಂತೆ ಶಿಕ್ಷಣ ತಜ್ಞರು, ವೈದ್ಯರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರ ಅಭಿಪ್ರಾಯ ಪಡೆದು ಜೂ.5ರಂದು ‘ಬೇಡಮ್ಮ ಆನ್​ಲೈನ್ ಗುಮ್ಮ’ ಶೀರ್ಷಿಕೆ ಅಡಿ ಅಭಿಯಾನ ಆರಂಭಿಸಿದ್ದ ವಿಜಯವಾಣಿ ಆನ್​ಲೈನ್ ಪಾಠ ಬೇಡವೆಂಬ ಸಾವಿರಾರು ಪಾಲಕರ ಬೇಡಿಕೆಗೂ ದನಿಯಾಗಿತ್ತು. ಸತತ ನಾಲ್ಕು ದಿನ ನಡೆಸಲಾದ ಅಭಿಯಾನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಪಾಲಕರು, ಶಿಕ್ಷಣ ತಜ್ಞರು ಹಾಗೂ ಶಿಕ್ಷಕರು ಆನ್​ಲೈನ್ ಪಾಠ ಬೇಡವೇ ಬೇಡ ಎಂಬ ಬೇಡಿಕೆ ಇಟ್ಟು ಇ ಮೇಲ್ ಮುಖಾಂತರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಜೂ.6ರಿಂದಲೇ ಅಧಿಕಾರಿಗಳ ಜತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ ನೀಡಿದ್ದರು.
ಶುಲ್ಕ ಹೆಚ್ಚಿಸಿದ್ದ 1000 ಶಾಲೆಗೆ ನೋಟಿಸ್
ಜನರು ಸಂಕಷ್ಟದಲ್ಲಿರುವುದರಿಂದ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಿಸಬಾರದೆಂದು ಸೂಚನೆ ನೀಡಲಾಗಿತ್ತು. ಆದರೂ ಹಲವು ಶಾಲೆಗಳು ಶುಲ್ಕ ಹೆಚ್ಚಳ ಮಾಡಿವೆ. ಹೀಗಾಗಿ ಒಂದು ಸಾವಿರ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದೆ. 350 ಶಾಲೆಗಳು ಶುಲ್ಕ ಇಳಿಸಿವೆ. ಉಳಿದ ಶಾಲೆಗಳು ಭಂಡತನ ತೋರಿದರೆ ನಿಯಮದ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಚರ್ಚೆಯಾಗಿದ್ದು
ಸೂಚನೆ ಏನು?
ಕಡಿತಕ್ಕಷ್ಟೇ ಅವಕಾಶ
https://www.vijayavani.net/aaditya-thackeray-lists-covid-19-stats-for-mumbai/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − nine =
Remember me
