| ಬೇಲೂರು ಹರೀಶ ಬೆಂಗಳೂರು
ರಾತ್ರಿ, ಹಗಲೆನ್ನದೆ ಉರಿಯುವ ಬೀದಿದೀಪಗಳಿಂದಾಗುವ ವಿದ್ಯುತ್ ಪೋಲನ್ನು ತಡೆಯಲು ಮುಂದಾಗಿರುವ ರಾಜ್ಯ ಸರ್ಕಾರ ಸಾಫ್ಟ್ ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣ ವ್ಯವಸ್ಥೆ(ಸಿಸಿಎಂಎಸ್)ಜಾರಿಗೆ ತೀರ್ವನಿಸಿದೆ. ಒಂದೇ ಕಡೆ ಕುಳಿತು ಇಡೀ ನಗರದ ಎಲ್ಲ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸುವ ಈ ವ್ಯವಸ್ಥೆ ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ.
ಹೊಸ ಯೋಜನೆಯಿಂದ ಶೇ.50 ವಿದ್ಯುತ್ ಹಾಗೂ ಬೊಕ್ಕಸಕ್ಕೆ ಅಂದಾಜು 60 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಪ್ರಾಯೋಗಿಕವಾಗಿ ಜಾರಿಯಾಗುವ ಜಿಲ್ಲೆಗಳಲ್ಲಿ ಯೋಜನೆಯ ಸಾಧಕ ಬಾಧಕ ನೋಡಿಕೊಂಡು ಮುಂದಿನ ದಿನಗಳಲ್ಲಿ ಯೋಜನೆ ವಿಸ್ತರಿಸಲು ಸರ್ಕಾರ ತೀರ್ವನಿಸಿದೆ.
ಹೆಚ್ಚಿದ ಸೋರಿಕೆ: ಮಹಾನಗರ ಪಾಲಿಕೆಗಳು ಹಾಗೂ ನಗರಸಭೆಗಳ ವಾಪ್ತಿಯಲ್ಲಿ ಸೋಡಿಯಂ, ಹ್ಯಾಲೋಜನ್ ಹಾಗೂ ಮರ್ಕ್ಯೂರಿ ದೀಪಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಸ್ವಿಚ್ ಪಾಯಿಂಟ್​ಗಳು ಕೆಟ್ಟು ಹೋಗಿವೆ. ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಹಗಲಿನಲ್ಲೂ ಬೀದಿದೀಪಗಳು ಉರಿಯುತ್ತವೆ. ಕೋಟಿಗಟ್ಟಲೆ ವ್ಯಯ ಮಾಡಿದ್ದರೂ ನಿರ್ವಹಣೆ ಸಮರ್ಪಕವಾಗಿಲ್ಲ. ಕೆಲವೆಡೆ ಅನಗತ್ಯವಾಗಿ ವಿದ್ಯುತ್ ದೀಪ ಅಳವಡಿಸಲಾಗಿದೆ. ಇದರಿಂದ ಅಪಾರ ಪ್ರಮಾಣದ ವಿದ್ಯುತ್ ಸೋರಿಕೆಯಾಗುತ್ತಿದೆ. ಪ್ರತಿ ವರ್ಷ ವಿದ್ಯುತ್ ಬಿಲ್ ಹಾಗೂ ನಿರ್ವಹಣಾ ವೆಚ್ಚ ಸೇರಿ ಅಂದಾಜು 130 ಕೋಟಿ ರೂ. ಖರ್ಚಾಗುತ್ತಿದೆ. ಹೊಸ ಕೇಂದ್ರೀಕೃತ ಯೋಜನೆಯಡಿ ಅತಿ ಹೆಚ್ಚು ವಿದ್ಯುತ್ ಸುಡುವ ಸೋಡಿಯಂ, ಹ್ಯಾಲೋಜನ್ ಹಾಗೂ ಮರ್ಕ್ಯೂರಿ ದೀಪಗಳನ್ನು ತೆಗೆದು ಎಲ್​ಇಡಿ ಲೈಟ್ ಅಳವಡಿಸಲಾಗುತ್ತದೆ. ಸ್ವಯಂಚಾಲಿತ ನಿರ್ವಹಣೆಯಿಂದ ಶೇ.50 ವಿದ್ಯುತ್ ಹಾಗೂ ಬೊಕ್ಕಸಕ್ಕೆ 60 ಕೋಟಿ ರೂ. ಉಳಿತಾಯವಾಗಲಿದೆ.
ಎಲ್ಲೆಲ್ಲಿ ಜಾರಿ (ಪ್ರಾಯೋಗಿಕ)
ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು, ತುಮಕೂರು, ಮಂಗಳೂರು, ವಿಜಯಪುರ, ಕಲಬುರಗಿ, ಬಳ್ಳಾರಿ
ಬೆರಳಲ್ಲೇ ಸ್ವಿಚ್!
ಬೀದಿದೀಪ ನಿರ್ವಹಣೆಯ ಆನ್ ಮತ್ತು ಆಫ್ ಕಾರ್ಯ ಕೇಂದ್ರಿಕೃತ ಕಚೇರಿಯಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ನಡೆಯಲಿದೆ. ಇದಕ್ಕಾಗಿ ಸಾಫ್ಟ್​ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ಕಡಿಮೆ ವಿದ್ಯುತ್ ಬಳಕೆಯಾಗುವುದರ ಜತೆಗೆ ಹೆಚ್ಚು ಬೆಳಕೂ ಸಿಗಲಿದೆ. ಯಾವ ದೀಪ ಉರಿಯುತ್ತಿಲ್ಲ ಎಂಬ ಮಾಹಿತಿಯೂ ಲಭ್ಯವಾಗುತ್ತದೆ. ಜತೆಗೆ, ಇಡೀ ನಗರದ ಎಲ್ಲ ದೀಪಗಳನ್ನು ಏಕಕಾಲದಲ್ಲಿ ಬೆರಳ ತುದಿ ಯಲ್ಲೇ ಬೆಳಗಿಸಬಹುದು.
ಸ್ವಿಚ್ ಪಾಯಿಂಟ್ ಇಲ್ಲ
ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಇಷ್ಟೇ ಪ್ರಮಾಣದ ಬೆಳಕು ಇರಬೇಕೆಂಬ ನಿಯಮವಿದೆ. ಸೋಡಿಯಂ ಲೈಟ್ ಹಾಗೂ ಟ್ಯೂಬ್​ಲೈಟ್ ಜಾಸ್ತಿ ಇರುವುದರಿಂದ ವಿದ್ಯುತ್ ಬಿಲ್ ಜಾಸ್ತಿ ಬರಲಿದೆ. ಕೆಲವೆಡೆ ಅವಶ್ಯಕತೆ ಮೀರಿ ಲೈಟ್​ಗಳಿವೆ. ಕೆಲವೆಡೆ ದುರಸ್ತಿ ಆಗುತ್ತಿವೆ. ಈ ನ್ಯೂನತೆ ಸರಿಪಡಿಸಲು ಲೈಟ್ ಮ್ಯಾನ್ಯುಫ್ಯಾಕ್ಚರಿಂಗ್ ಹಾಗೂ ಸ್ಮಾರ್ಟ್ ಸ್ವಿಚ್ ಸೇರಿ 4 ಗುತ್ತಿಗೆದಾರರ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಆಯಾ ಜಿಲ್ಲೆಗಳಲ್ಲಿ ಎಷ್ಟು ಬೀದಿದೀಪಗಳಿವೆ, ಎಷ್ಟು ದೀಪಗಳು ಕೆಲಸ ಮಾಡುತ್ತಿವೆ, ಎಷ್ಟು ದುರಸ್ತಿಯಾಗಿವೆ ಹಾಗೂ ಅನವಶ್ಯಕವಾಗಿ ಎಲ್ಲಿ ವಿದ್ಯುತ್ ಪೋಲಾಗುತ್ತದೆ ಎಂಬುದನ್ನು ಸೇರಿ ಎಲ್ಲವನ್ನೂ ಸರಿಪಡಿಸಿ ಎಲ್​ಇಡಿ ಲೈಟ್ ಅಳವಡಿಸಲಾಗುತ್ತದೆ. ಹೊಸ ವ್ಯವಸ್ಥೆ ಅಳವಡಿಸಿದ ಬಳಿಕ ಸ್ವಿಚ್ ಪಾಯಿಂಟ್​ಗಳೇ ಇರುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಸಹಭಾಗಿತ್ವ
ಅಹಮದಾಬಾದ್, ಚೆನ್ನೈ ಹಾಗೂ ವಿಶಾಖಪಟ್ಟಣದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮಹಾನಗರಗಳ ಬೀದಿದೀಪ ವ್ಯವಸ್ಥೆ ಬದಲಾವಣೆಗೆ ಪಾಲಿಕೆ ಅಥವಾ ಸರ್ಕಾರವು ಹಣ ಹೂಡಿಕೆ ಮಾಡುವುದಿಲ್ಲ. ಬದಲಾಗಿ ಖಾಸಗಿ ಸಹಭಾಗಿತ್ವ (ಪಿಪಿಪಿ) ವ್ಯವಸ್ಥೆಯಲ್ಲಿ ಗುತ್ತಿಗೆದಾರ ಕಂಪನಿಯೇ ಎಲ್​ಇಡಿ ಬಲ್ಬ್ ಬದಲಾಯಿಸಲಿದೆ. ಎಲ್​ಇಡಿ ಅಳವಡಿಕೆಯಿಂದ ಪ್ರತಿ ತಿಂಗಳು ಉಳಿತಾಯವಾಗುವ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಗುತ್ತಿಗೆದಾರರಿಗೆ ನೇರವಾಗಿ ಪಾವತಿಸಲಿದೆ. ಜತೆಗೆ, ಗುತ್ತಿಗೆದಾರ ಕಂಪನಿಯೇ ನಿರ್ವಹಣೆ ಮಾಡಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
