ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ
ಹುಬ್ಬಳ್ಳಿಯ ಬಿವಿಬಿ ಆವರಣದಲ್ಲಿ ಏರ್ಪಡಿಸಲಾಗಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್​ನಲ್ಲಿ ‘ಭವಿಷ್ಯದ ಕ್ರಾಂತಿಕಾರಕ ಹೆಜ್ಜೆಗಳು: ಒಂದು ದೂರದೃಷ್ಟಿ’ ಕುರಿತು ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಅವರು ಶನಿವಾರ ಮಾತನಾಡಿದರು. ಸಂವಾದದಲ್ಲಿ ಉದ್ಯಮಿಗಳು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯಾವುದೇ ಉದ್ಯಮ, ಉದ್ಯೋಗ ಇರಲಿ ನಿಮ್ಮೊಳಗಿನ ಉತ್ಸಾಹ ಹಾಗೂ ಅದರಲ್ಲಿ ತೊಡಗಿಕೊಳ್ಳುವಿಕೆ ಮೇಲೆ ಅದರ ಯಶಸ್ಸು ಅಡಗಿರುತ್ತದೆ. ಯಾವುದೇ ಕಾರಣಕ್ಕೂ ಮತ್ತೊಬ್ಬರನ್ನು ಕಾಪಿ ಮಾಡಬಾರದು, ತತ್ವ ಸಿದ್ಧಾಂತಗಳನ್ನು ಜತೆಗಿಟ್ಟುಕೊಂಡು ಕೆಲಸ ಮಾಡಿ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಸಲಹೆ ನೀಡಿದರು.
ಇಲ್ಲಿಯ ಬಿವಿಬಿ ಆವರಣದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಲೈಫ್) ವತಿಯಿಂದ ಏರ್ಪಡಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್​ನಲ್ಲಿ ಶನಿವಾರ ‘ಭವಿಷ್ಯದ ಕ್ರಾಂತಿಕಾರಕ ಹೆಜ್ಜೆಗಳು: ಒಂದು ದೂರದೃಷ್ಟಿ’ ಎಂಬ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿರಿಯರಿಂದ ಬಂದಿದೆ, ಆರಾಮವಾಗಿ ನಡೆಸಿಕೊಂಡು ಹೋಗುತ್ತೇನೆ, ಇಷ್ಟೇ ಸಾಕು ಎಂಬ ಮನೋಭಾವ ಉದ್ಯಮದಲ್ಲಿ ಬೇಡ. ಕಂಫರ್ಟ್ ಝೋನ್​ನಿಂದ ಮೊದಲು ಹೊರಗೆ ಬರಬೇಕು. ಆರಾಮದಾಯಕ ವಾತಾವರಣದಿಂದ ಹೊರಗೆ ಬಂದರೆ ಹೊಸತನ್ನು ಮಾಡಲು ಆಲೋಚನೆ ಬರುತ್ತವೆ. ಇನ್ನಷ್ಟು ಸುಧಾರಣೆಗೆ ಅವಕಾಶಗಳು ಹೊಳೆಯುತ್ತವೆ ಎಂದರು.
ತಂದೆ ಡಾ. ವಿಜಯ ಸಂಕೇಶ್ವರ ಅವರಿಂದ ಕೇವಲ ಒಂದು ಟ್ರಕ್​ನಿಂದ ವಿಆರ್​ಎಲ್ ಕಂಪನಿ ಆರಂಭವಾಗಿ ಇಂದು ನಂಬರ್ ಒನ್ ಲಾಜಿಸ್ಟಿಕ್ ಕಂಪನಿಯಾಗಿ ಬೆಳೆದು ಬಂದ ಬಗೆಯನ್ನು ಸ್ಮರಿಸಿದ ಡಾ. ಆನಂದ ಸಂಕೇಶ್ವರ ಅವರು, ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಎಂಬುದಿಲ್ಲ. ಕಠಿಣ ಪರಿಶ್ರಮ, ನಿರಂತರ ಪ್ರಯತ್ನವೊಂದೇ ಬೇಕಾದ ಕಿಟ್, ಜತೆಗೆ ಸಮಯದ ಸದ್ಬಳಕೆ ಮಾಡಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದರು.
ಯೋಚನೆ ಮಾಡಿದ್ದು ಎಲ್ಲವೂ ಆಗದಿದ್ದಾಗ ಒಂದಿಷ್ಟು ತ್ಯಾಗ ಮಾಡುವ ಗುಣವನ್ನೂ ಬೆಳೆಸಿಕೊಂಡಿರಬೇಕು. ಬಹು ಮುಖ್ಯವಾಗಿ ಉತ್ಸಾಹವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಮಾಡಿಯೇ ಮಾಡ್ತೀನಿ ಎಂಬ ಛಲ ಎಂತಹದೇ ಸವಾಲುಗಳನ್ನು ಮೆಟ್ಟಿ ನಿಲ್ಲಲು ನಿಮಗೆ ಪ್ರೇರಣೆ ನೀಡುತ್ತದೆ ಎಂದು ತಮ್ಮದೇ ಬದುಕಿನ ಹಲವು ಸಂಗತಿಗಳನ್ನು ತೆರೆದಿಡುವ ಮೂಲಕ ಯುವಕರನ್ನು ಹುರಿದುಂಬಿಸಿದರು.
ನಮ್ಮ ತಂದೆ ಡಾ. ವಿಜಯ ಸಂಕೇಶ್ವರ ಅವರು ನಾನು ಚಿಕ್ಕವನಿದ್ದಾಗಲೇ ಕಂಪನಿಯ ಜವಾಬ್ದಾರಿ ನೀಡಿದರು. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. 10ನೇ ತರಗತಿಯಲ್ಲಿದ್ದಾಗ ತಂದೆಯವರು ಸ್ಪಾಂಡಿಲಿಸಿಸ್ ಚಿಕಿತ್ಸೆಗೆ ಬೆಂಗಳೂರಿಗೆ ಹೋದಾಗ, ಅವರು ಎಂಪಿಯಾಗಿ ಸಂಸತ್ ಅಧಿವೇಶನಕ್ಕೆ ಹೋದಾಗ ಹೀಗೆ ಹಲವು ಸಲ ಕಂಪನಿ ನಿರ್ವಹಣೆಯ ಸವಾಲುಗಳನ್ನು ಅಚ್ಚುಕಟ್ಟಾಗಿ ಎದುರಿಸಿದ್ದೇನೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಎದೆಗುಂದಬಾರದು. ಸವಾಲು ಎದುರಿಸುವವನೇ ಸಾಧಕನಾಗುವುದು ಎಂದರು.
ಜನರ ಆಶೀರ್ವಾದ ಇದೆ
ಉದ್ಯಮದಲ್ಲಿ ಅದರಲ್ಲಿಯೂ ಸಾರಿಗೆ ಉದ್ಯಮದಲ್ಲಿ ಬಹಳಷ್ಟು ಸವಾಲುಗಳು ಎದುರಾಗುತ್ತವೆ. ಕಂಪನಿ ಉನ್ನತ ಹಂತಕ್ಕೆ ಬೆಳೆಯಲು ಜನರ ಆಶೀರ್ವಾದ, ಕುಟುಂಬದವರ ಸಹಕಾರ, ಉದ್ಯೋಗಿಗಳ ಪ್ರಾಮಾಣಿಕತೆ, ಗ್ರಾಹಕರ ಹಾರೈಕೆ ಎಲ್ಲವೂ ಕಾರಣ ಎಂದು ಡಾ. ಆನಂದ ಸಂಕೇಶ್ವರ ಸ್ಮರಿಸಿದರು.
ಶ್ರೀ ಶಿವಶಕ್ತಿ ಧಾಮಕ್ಕೆ ಬನ್ನಿ
ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಸದಿಚ್ಛೆಯಿಂದ ತಂದೆಯವರ ಸಂಕಲ್ಪದಂತೆ ಹುಬ್ಬಳ್ಳಿ ಸಮೀಪದ ಪಾಲಿಕೊಪ್ಪದಲ್ಲಿ ಶ್ರೀ ಶಿವಶಕ್ತಿ ಧಾಮ ದೇವಸ್ಥಾನ ಸಮುಚ್ಛಯ ನಿರ್ವಿುಸಲಾಗಿದೆ. ಎಲ್ಲರೂ ದೇವಸ್ಥಾನ ಸಂದರ್ಶಿಸಿ ವೀಕ್ಷಣೆ ಮಾಡಿ ದೇವರ ಕೃಪೆಗೆ ಪಾತ್ರರಾಗಿ ಎಂದು ಅವರು ಮನವಿ ಮಾಡಿದರು.
ಪ್ರಶ್ನೆಗಳಿಗೂ ಕಿವಿಯಾದರು
ಒಂದೂವರೆ ತಾಸು ಸಂವಾದ ನಡೆಸಿ ಕೊಟ್ಟ ಡಾ. ಆನಂದ ಸಂಕೇಶ್ವರ ಅವರು ಕೇಳುಗರ ಪ್ರಶ್ನೆಗಳಿಗೂ ಅಷ್ಟೇ ಉತ್ಸಾಹದಿಂದ ಉತ್ತರಿಸಿದರು. ಉದ್ಯಮ ಹಾಗೂ ಜೀವನದ ಎಲ್ಲ ಆಯಾಮಗಳ ಬಗ್ಗೆ ಕೇಳಿಬಂದ ಪ್ರಶ್ನೆಗಳಿಗೆ ಅಷ್ಟೇ ಸಮಾಧಾನದ ಉತ್ತರ ನೀಡಿದರು. ಕೇಳುಗರು ಕೂಡ ಯಶಸ್ವಿ ಉದ್ಯಮಿಯ ಉತ್ತರಗಳನ್ನು ಪಡೆದುಕೊಂಡು ಇಡೀ ಸಂವಾದವನ್ನು ತದೇಕಚಿತ್ತದಿಂದ ಆಲಿಸಿದರು. ಅಪಾಯಗಳನ್ನು ಎದುರಿಸದೇ ಇದ್ದರೆ ಯಾವುದೇ ಕೆಲಸವೂ ಆಗುವುದಿಲ್ಲ. ಹಾಗಾಗಿ ಉದ್ಯಮದಲ್ಲಿ ಬಹುಮುಖ್ಯವಾಗಿ ರಿಸ್ಕ್ ತೆಗೆದುಕೊಳ್ಳಬೇಕು. ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಅದಮ್ಯ ಉತ್ಸಾಹ ತುಂಬಿದರು. ಉದ್ಯಮ ಕ್ಷೇತ್ರಕ್ಕೆ ಬರುವವರಿಗೆ ಪ್ರೇರಣೆಯಾದರು. ಹಲವು ಬಿಜಿನೆಸ್​ಗಳನ್ನು ಏಕಕಾಲಕ್ಕೆ ಕೈಗೊಳ್ಳುವ ಬದಲು ಒಂದರ ಮೇಲೆ ಮೊದಲು ಗಮನ ಕೇಂದ್ರೀಕರಿಸಿ, ಆಗ ವೈಫಲ್ಯ ಕಡಿಮೆಯಾಗಲಿದೆ ಎಂದು ಸಲಹೆ ನೀಡಿದರು. ಐಟಿ ಎಂದರೆ ಕೇವಲ ಬೆಂಗಳೂರು, ಪುಣೆ ಎಂಬಂತಾಗಿದೆ. ನೀವು ಕೂಡ ಐಟಿ ಉದ್ಯಮಕ್ಕೆ ಬರಬಹುದಲ್ಲವೇ? ಎಂಬ ಕೇಳುಗರ ಪ್ರಶ್ನೆಗೆ, ಇದು ನಮ್ಮ ಗಮನದಲ್ಲಿ ಇದೆ. ಆದರೆ, ಯಾವಾಗ ಜಾರಿ ಎಂಬುದು ಸದ್ಯಕ್ಕೆ ಗೊತ್ತಿಲ್ಲ ಎಂದು ಉತ್ತರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + twelve =
Remember me
