ಬೆಂಗಳೂರು:ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಹೊಸ ಮರಳು ನೀತಿಗೆ ಗುರುವಾರ ಸಂಪುಟ ಅನುಮೋದನೆ ನೀಡಿದೆ. ಪ್ರತಿ ಮೆಟ್ರಿಕ್ ಟನ್ ಮರಳಿಗೆ 700 ರೂ. ದರ ನಿಗದಿ ಮಾಡಿರುವ ಸರ್ಕಾರ, ಮರಳು ಬ್ಲಾಕ್ ಗುರುತಿಸುವ ಹಾಗೂ ಅದನ್ನು ಅಗತ್ಯ ಇರುವವರಿಗೆ ಒದಗಿಸುವ ಜವಾಬ್ದಾರಿಯನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಿದೆ.
ಸಂಪುಟ ಸಭೆ ಬಳಿಕ ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಹೊಸ ಮರಳು ನೀತಿಯನ್ನು ಸಿದ್ಧಪಡಿಸಿ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ. ನದಿ ಪಾತ್ರಗಳಲ್ಲಿ ಕೆಲವು ಬ್ಲಾಕ್ ಗುರುತಿಸಿ ಆಕ್ಷನ್ ಮಾಡಿ ಕೊಡುವ ಪದ್ಧತಿ ಇತ್ತು. ಈ ಪಟ್ಟಾ ಭೂಮಿ, ಕೆರೆ ಅಂಗಳ ಮತ್ತು ಗ್ರಾಮೀಣ ಭಾಗದ ಹಳ್ಳಕೊಳ್ಳದ ಪ್ರದೇಶದಲ್ಲಿ ಮರಳು ಗುರುತಿಸಿ ಜನತಾ ಮನೆ ಕಟ್ಟುವವರಿಗೆ, ಸಣ್ಣಪುಟ್ಟ ಕೆಲಸ ಮಾಡುವವರಿಗೆ ಕೊಡಬಹುದಾಗಿದೆ ಎಂದರು. ಮರಳು ಬ್ಲಾಕ್ ಗುರುತಿಸುವುದು ಮತ್ತು ಹಂಚಿಕೆ ಸಂಬಂಧ ತಹಶೀಲ್ದಾರ್ ಮತ್ತು ಎಇಇ ಸಂಯೋಜನೆ ಕೆಲಸ ಮಾಡಲಿದ್ದಾರೆ. ಗ್ರಾಮ ಪಂಚಾಯಿತಿ ಹಂತದಲ್ಲೇ ಮರಳು ಹಂಚಿಕೆ ಜವಾಬ್ದಾರಿ ಇರಲಿದೆ ಎಂದರು. ಈ ಹಿಂದೆ ಮರಳು ದಂಧೆ ವ್ಯಾಪಕವಾಗಿತ್ತು. ಈ ಹೊಸ ನೀತಿಯಿಂದಾಗಿ ಅಕ್ರಮಕ್ಕೆ ಕಡಿವಾಣ ಹಾಕಬಹುದೆಂದುಕೊಂಡಿದ್ದೇವೆ. ಈವರೆಗೆ ಮರಳಿನಿಂದಲೇ ವಾರ್ಷಿಕ 130 ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿತ್ತು. ಹೊಸ ನೀತಿ ಜಾರಿಯಿಂದಾಗಿ ಇನ್ನೂ 60-70 ಕೋಟಿ ರೂ. ಹೆಚ್ಚುವರಿಯಾಗಿ ರಾಜಸ್ವ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ದಂಡನೆ ವರ್ಗೀಕರಣ:ಕರ್ನಾಟಕ ನಾಗರಿಕ ಸೇವಾ ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ (ತಿದ್ದುಪಡಿ) ನಿಯಮಗಳು 2020ಕ್ಕೆ ಅನುಮೋದನೆ ನೀಡಲಾಗಿದೆ. ಈ ಹಿಂದೆ ಸಿಬ್ಬಂದಿಯ ತಪ್ಪುಗಳಿಗೆ ದಂಡನೆ ವಿಧಿಸುವ ಅವಕಾಶವಿತ್ತು, ಆದರೆ, ಕೆಟಗರಿ ಮಾಡಿರಲಿಲ್ಲ. ಯಾರು ಯಾವ ದಂಡನೆಗೆ ಪಾತ್ರರಾಗಬೇಕು ಎಂಬುದಿರಲಿಲ್ಲ. ಅದನ್ನೀಗ ಸ್ಪಷ್ಟಮಾಡಿಕೊಳ್ಳಲಾಗಿದೆ.
ಪ್ರಕರಣ ಮುಕ್ತಾಯ:ಶಿಕ್ಷಣ ಇಲಾಖೆಯಲ್ಲಿ ನಾಲ್ಕು ಅಧಿಕಾರಿಗಳ ಮೇಲಿನ ಹೆಚ್ಚುವರಿ ತನಿಖೆ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿದೆ. ಶಿಕ್ಷಕರಿಗೆ ವೇತನ ನೀಡಲು ಸಮಸ್ಯೆಯಾದ ಸಂದರ್ಭದಲ್ಲಿ ಹೆಡ್ ಆಫ್ ಅಕೌಂಟ್ ಬದಲಿಸಿ ಸಂಬಳ ಕೊಟ್ಟಿದ್ದರ ಬಗ್ಗೆಯೇ ಆಪಾದನೆ ಮಾಡಿ ಲೋಕಾಯುಕ್ತ ತನಿಖೆ ಆಗಿತ್ತು. ಮತ್ತೊಮ್ಮೆ ತನಿಖೆಗೆ ಹೋಗಬೇಕೆಂದಿತ್ತು. ಆದರೆ, ಸರ್ಕಾರದ ದೃಷ್ಟಿಯಲ್ಲಿ ಅವರು ಶಿಕ್ಷಕರ ಸಂಬಳ ಕೊಟ್ಟಿದ್ದನ್ನೇ ದೊಡ್ಡ ಪ್ರಕರಣ ಆಗಿ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟು ಪ್ರಕರಣ ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ಪಿ.ಬಿ.ಬಸವರಾಜ, ನಂಜಯ್ಯ, ಶಾಕೀರ್ ಅಲಿಖಾನ್, ಎಚ್.ಜಿ.ರಾಜಶೇಖರ್ ಪ್ರಕರಣದಿಂದ ಮುಕ್ತರಾದವರಾಗಿದ್ದಾರೆ.
ಖಿನ್ನತೆ ಸುದ್ದಿ ಬೇಡ:ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಭಯಭೀತರಾಗುವ, ಆತಂಕಕ್ಕೊಳಗಾಗುವ, ಖಿನ್ನತೆಗೊಳಗಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡದೇ ಸಕಾರಾತ್ಮಕ ಸುದ್ದಿ ಪ್ರಸಾರ ಮಾಡಿ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಕರೊನಾ ಸಂಬಂಧ ಸರ್ಕಾರದ ನಿರ್ದೇಶನಗಳನ್ನು ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದು, ಅಭಿನಂದನೆ ಸಲ್ಲಿಸುವೆ. ಹಾಗೆಯೇ ಸಾರ್ವಜನಿಕರು ಲಾಕ್​ಡೌನ್ ಅವಧಿಯಲ್ಲಿ ಅಭೂತಪೂರ್ವ ಬೆಂಬಲ ನೀಡಿ, ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ ಕರೊನಾ ವೈರಸ್ ನಿಯಂತ್ರಣದಲ್ಲಿರಲು ತಮ್ಮ ಕೊಡುಗೆ ನೀಡಿದ್ದಾರೆಂದರು. ಮಾಧ್ಯಮಗಳು ಸಕಾರಾತ್ಮಕ ಸಂಗತಿಗಳ ಬಗ್ಗೆ ಮತ್ತಷ್ಟು ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದ ಅವರು ಮಾಧ್ಯಮಗಳ ಸಲಹೆ ಮತ್ತು ಮಾರ್ಗದರ್ಶನ ಗಳನ್ನು ಸರ್ಕಾರ ಸದಾ ಸ್ವೀಕರಿಸುತ್ತದೆ. ಇಂತಹ ಸೂಕ್ಷ್ಮ ಮತ್ತು ವಿಷಮ ಪರಿಸ್ಥಿತಿಯಲ್ಲಿ ತಮ್ಮ ಪಾತ್ರ ಗಣನೀಯವಾಗಿದೆ ಎಂದರು.
ನಿಮ್ಮ ಜಾಗ್ರತೆಯಲ್ಲಿ ನೀವಿರಿ:ಸಚಿವರಿಗೆ ಸೋಂಕು ಕಾಣಿಸಿಕೊಂಡರೆ, ಕ್ವಾರಂಟೈನ್ ಆದರೆ ಕಷ್ಟ ಆಗಲಿದೆ. ಇಲ್ಲಿಯವರೆಗೆ ನಾವು ಮಾಡಿದ್ದ ಪ್ರಯತ್ನ ಎಲ್ಲವೂ ವ್ಯರ್ಥವಾಗಲಿದೆ. ನೀವು ಜನರಿಗೆ ಮಾದರಿ ಆಗಬೇಕು ಎಂದು ಸಂಪುಟ ಸದಸ್ಯರಿಗೆ ಸಿಎಂ ಬುದ್ಧಿವಾದ ಹೇಳಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಹಾರ ವಿತರಣೆ, ದಿನಸಿ ವಿತರಣೆ ನೆಪದಲ್ಲಿ ಗುಂಪು ಸೇರಿಸಬಾರದು. ಪ್ರವಾಸದ ಸಂದರ್ಭದಲ್ಲಿ ಕೂಡ ಎಚ್ಚರದಿಂದಿರಿ ಎಂದು ಸಲಹೆ ನೀಡಿದರು ಎಂದು ತಿಳಿದುಬಂದಿದೆ. ಕ್ವಾರಂಟೈನ್ ಕಾರಣಕ್ಕೆ ಸಂಪುಟ ಸಭೆಯಿಂದ ಮೂವರು ಸಚಿವರು ದೂರ ಉಳಿದಿದ್ದರು.
ಪ್ರಯಾಣದ ಖರ್ಚನ್ನು ಕಾರ್ವಿುಕರೇ ಭರಿಸಬೇಕು:ಕಾರ್ವಿುಕರು ಮೂಲ ರಾಜ್ಯಗಳಿಗೆ ತೆರಳಲು ಅವಕಾಶ ಕೊಡಬೇಕೆಂದು ಕೋರಿದರೆ ವ್ಯವಸ್ಥಿತವಾಗಿ ಹೋಗಲು ಬಿಡಿ ಎಂದು ಕೇಂದ್ರವೇ ಹೇಳಿದೆ. ಅವರಿಗೆ ತೆರಳಲು ವ್ಯವಸ್ಥೆ ಮಾಡುವಾಗ ಉಂಟಾಗುವ ಖರ್ಚನ್ನು ಯಾರು ಒದಗಿಸಬೇಕೆಂಬ ಚರ್ಚೆ ಸಂಪುಟ ಸಭೆಯಲ್ಲಿ ನಡೆಯಿತು. ಅಂತಿಮವಾಗಿ ಎಷ್ಟು ಸಂಖ್ಯೆಯಲ್ಲಿ ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಿಲ್ಲದ ಕಾರಣ ಯಾರಾದರೂ ಅಪೇಕ್ಷೆ ಪಟ್ಟಲ್ಲಿ ಅನುಮತಿ ಕೊಡುತ್ತೇವೆ. ಒಂದು ಕುಟುಂಬ, ಒಂದಿಬ್ಬರು ಹೋಗುವುದಾದರೆ ಟ್ಯಾಕ್ಸಿ ಬಳಸಬಹುದು. ಬಹಳ ಜನ ಇದ್ದು ಒಟ್ಟಿಗೆ ವ್ಯವಸ್ಥೆ ಮಾಡಿ ಎಂದು ಕೋರಿದರೆ ಕೆಎಸ್​ಆರ್​ಟಿಸಿ ಬಸ್ ಬಳಸಬಹುದು. ಇದಕ್ಕೆ ತಗಲುವ ವೆಚ್ಚವನ್ನು ಕಾರ್ವಿುಕರೇ ಭರಿಸಬೇಕು ಎಂಬ ಅಭಿಪ್ರಾಯಕ್ಕೆ ಬರಲಾಯಿತು’ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು. ‘ರಾಜ್ಯಕ್ಕೆ ಮರಳುವವರಿಗೂ ಅವಕಾಶ ಮಾಡಿಕೊಡುತ್ತೇವೆ. ಆದರೆ, ಬರುವವರು ಸ್ಯಾಂಪಲ್ ಟೆಸ್ಟ್ ಮಾಡಿಸಿಕೊಂಡು ಬರಬೇಕಾಗುತ್ತದೆ’ ಎಂದರು.
ಮುಂದುವರಿಕೆ?:ಕರೊನಾ ಇನ್ನೂ 2- 3 ತಿಂಗಳು ಮುಂದುವರಿದರೂ ಆಶ್ಚರ್ಯವಿಲ್ಲ. ಹೀಗಾಗಿ ಕರೊನಾ ನಿಯಂತ್ರಣ ಮತ್ತು ಆರ್ಥಿಕ ಚಟುವಟಿಕೆ ಎರಡೂ ಒಟ್ಟೊಟ್ಟಿಗೆ ನಡೆಯಬೇಕಿದೆ. ಬಿಗಿ ನಿಲುವು ಮುಂದುವರಿಸಿ, ಆರ್ಥಿಕ ಚಟುವಟಿಕೆ ಆರಂಭಿಸಲು ಏನೆಲ್ಲ ಸಾಧ್ಯತೆ ಇದೆಯೋ ಅದನ್ನೆಲ್ಲ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಲಾಕ್​ಡೌನ್ ಸರಳೀಕರಣದ ಬಗ್ಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬರಲಿದ್ದು, ಮೇ 4ರ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಅನಿಸುತ್ತಿದೆ. ಇದೇ ರೀತಿ ಮುಂದುವರಿಸಿದರೆ ಬೆಂಗಳೂರಲ್ಲಿ ಸುತ್ತಮುತ್ತ ಕೈಗಾರಿಕೆ ಆರಂಭಿಸಲು ಅನುಕೂಲವಾಗುತ್ತದೆ. ಮುಂದಿನ 2-3 ದಿನ ಕಾಯುತ್ತೇವೆ ಎಂದರು.
1. ಕ್ಷೌರಿಕರಿಗೆ ಅವಕಾಶ ನೀಡುವ ಬಗ್ಗೆ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಕ್ಷೌರಿಕರು ಜನರ ನೇರ ಸಂಪರ್ಕದಲ್ಲೇ ಕರ್ತವ್ಯ ನಿರ್ವಹಿಸುವುದರಿಂದ ಯಾವ ತೀರ್ಮಾನ ಮಾಡಬೇಕೆಂದು ಮೇ 3ರ ನಂತರ ನಿರ್ಧರಿಸಲಾಗುತ್ತದೆ.
2. ಮದ್ಯ ಮಾರಾಟಕ್ಕೆ ಅವಕಾಶ ಕೊಡುವ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಮೇ 3ರ ಬಳಿಕ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ವಿವೇಚನೆಗೆ ಬಿಡಲು ಸಂಪುಟ ಸಭೆ ತೀರ್ವನಿಸಿತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 14 =
Remember me
