| ಸುನಿಲ್ ಪೊನ್ನೇಟಿ ಮಡಿಕೇರಿದೇಶಕ್ಕೆ ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ‘ಸಿ’ ರಾಜ್ಯದ ಸ್ಥಾನಮಾನ ಪಡೆದಿದ್ದ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಇರಲಿಲ್ಲ. 2008ರ ತನಕ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದ ಕೊಡಗು, ಕ್ಷೇತ್ರ ಮರುವಿಂಗಡಣೆ ನಂತರ 2009ರಿಂದ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಂಡಿದೆ. ಸ್ವಾತಂತ್ರ್ಯ ಬಂದ ಮೇಲೆ ಈವರೆಗೆ ಜಿಲ್ಲೆಗೆ ಸೇರಿದ ಇಬ್ಬರು ಮಾತ್ರ ಕೊಡಗನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ನಂತರದ ದಿನಗಳಲ್ಲಿ ಈ ಅವಕಾಶ ಜಿಲ್ಲೆಗೆ ಸಿಗಲೇ ಇಲ್ಲ.
ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಇಲ್ಲ. ಕನಿಷ್ಠ ನಮ್ಮ ಜಿಲ್ಲೆಯವರನ್ನಾದರೂ ಆರಿಸಿ ಕಳುಹಿಸುವ ಅವಕಾಶ ಕೊಡಿ ಎನ್ನುವ ಕೂಗು ಪ್ರತಿ ಚುನಾವಣೆಯಲ್ಲೂ ಕೇಳಿಬರುವುದು ಸಾಮಾನ್ಯ. ಆದರೆ ಚುನಾವಣಾ ರಾಜಕೀಯದಲ್ಲಿ ಮತಗಳ ಲೆಕ್ಕಾಚಾರಕ್ಕೆ ಬಂದಾಗ ಪಕ್ಷಗಳು ಇದಕ್ಕೆ ಮನಸ್ಸು ಮಾಡುತ್ತಿಲ್ಲ.
1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಭಾಗಮಂಡಲದ ನಿಡ್ಯಮಲೆ ಸೋಮಣ್ಣ ಕೊಡಗು ‘ಸಿ’ ರಾಜ್ಯದ ಪ್ರಥಮ ಸಂಸದರಾಗಿದ್ದರು. ಕಾಫಿ ಬೆಳೆಗಾರ ಕೆ.ಟಿ.ಉತ್ತಪ್ಪ ಪಕ್ಷೇತರರಾಗಿ ಸೋತಿದ್ದರು. ಅಂದು ಒಟ್ಟು 94,593 ಮತದಾರರ ಪೈಕಿ 63,813 ಮತ ಚಲಾವಣೆ ಆಗಿತ್ತು. ಸೋಮಣ್ಣ 38,063 ಮತಗಳನ್ನು ಪಡೆದು ಗೆದ್ದಿದ್ದರು.
ಮೈಸೂರು ರಾಜ್ಯದೊಂದಿಗೆ ಕೊಡಗು ವಿಲೀನವಾದ ನಂತರ 1967ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡಗು-ಮಂಗಳೂರು ಕ್ಷೇತ್ರದಿಂದ ಚೆಪ್ಪುಡಿರ ಎಂ.ಪೂಣಚ್ಚ ಗೆಲುವು ಸಾಧಿಸಿದ್ದರು. ಇದಕ್ಕೂ ಮೊದಲು 1964ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ, ಜವಾಹರ್​ಲಾಲ್ ನೆಹರೂ ಸಂಪುಟದಲ್ಲಿ ಮಂತ್ರಿಯೂ ಆಗಿದ್ದರು. 1967ರಿಂದ ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದರು. 1971ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದರಾದರೂ ಸೋತರು. ನಂತರದ ದಿನಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ 1977ರಲ್ಲಿ ಎ.ಕೆ.ಸುಬ್ಬಯ್ಯ, 1989ರಲ್ಲಿ ಪಿ.ಡಿ.ಸುಬ್ಬಯ್ಯ, ಜೆಡಿಎಸ್​ನಿಂದ 1996ರಲ್ಲಿ ಬಿ.ಎ. ಜೀವಿಜಯ, 1998ರಲ್ಲಿ ಮಾತಂಡ ರಮೇಶ್, 2004ರಲ್ಲಿ ಎ.ಕೆ.ಸುಬ್ಬಯ್ಯ ಕೊಡಗಿನವರಾಗಿ ಸ್ಪರ್ಧಿಸಿದರಾದರೂ ಗೆಲುವು ಸಿಕ್ಕಿರಲಿಲ್ಲ. 1980ರಲ್ಲಿ ಐ.ಎಂ.ಕಾರ್ಯಪ್ಪ, ಬೆಳ್ಳಿಯಪ್ಪ ಚಂಗಪ್ಪ, 1996ರಲ್ಲಿ ಬೆಳ್ಳಿಯಪ್ಪ ಚಂಗಪ್ಪ, ಸಿ.ಬಿ. ಬೆಳ್ಯಪ್ಪ, ಪಿ.ಎಂ.ಭೋಜಪ್ಪ, ಕಾಳಚಂಡ ರವಿ ತಮ್ಮಯ್ಯ ಪಕ್ಷೇತರರಾಗಿ ಸ್ಪರ್ಧಿಸಿದ ಕೊಡಗಿನವರಾಗಿದ್ದಾರೆ.
1977, 1980, 1984, 1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್​ನ ಜನಾರ್ದನ ಪೂಜಾರಿ ಅವರೇ ಆಯ್ಕೆ ಆಗಿ ಕೊಡಗನ್ನು ಪ್ರತಿನಿಧಿಸಿದ್ದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಭದ್ರಕೋಟೆ ಭೇದಿಸಿದ ಬಿಜೆಪಿಯ ವಿ. ಧನಂಜಯಕುಮಾರ್ ಅಧಿಪತ್ಯ ಶುರು ಮಾಡಿದರು. 1991, 1996, 1998 ಹಾಗೂ 1999ರ ಚುನಾವಣೆಗಳಲ್ಲಿ ಅವರೇ ಆಯ್ಕೆ ಆಗುವ ಮೂಲಕ ಬಿಜೆಪಿ ಪ್ರಾಬಲ್ಯ ಮುಂದುವರಿಸಿದರು. 2004ರಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡ ಕೊಡಗು-ಮಂಗಳೂರು ಕ್ಷೇತ್ರದ ಸಂಸದರಾದರು.
ಕ್ಷೇತ್ರ ಮರುವಿಂಗಡಣೆ ನಂತರ 2009ರಲ್ಲಿ ಕಾಂಗ್ರೆಸ್​ನ ಎಚ್.ವಿಶ್ವನಾಥ್ ಸಂಸದರಾದರು. 2014ರಲ್ಲಿ ಕ್ಷೇತ್ರವನ್ನು ಬಿಜೆಪಿ ವಶಕ್ಕೆ ಪಡೆದುಕೊಳ್ಳುವ ಮೂಲಕ ಪ್ರತಾಪ್ ಸಿಂಹ ಸಂಸದರಾದರು. 2019ರಲ್ಲೂ ಅವರೇ ಮುಂದುವರಿದರು. ಇದೀಗ ರಾಜಕೀಯ ವಾತಾವರಣ ಬದಲಾಗಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಜೆಡಿಎಸ್ ಬೆಂಬಲವಾಗಿ ನಿಂತಿದೆ. ಕಾಂಗ್ರೆಸ್​ನಿಂದ ಲಕ್ಷ್ಮಣ್ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಹಾಗಾಗಿ ಕ್ಷೇತ್ರವನ್ನು ಯಾರು ಪ್ರತಿನಿಧಿಸುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಕೊಡಗಿನ ರಾಜಕಾರಣಿಗಳು ಅಲ್ಪತೃಪ್ತರು. ಸಿಎಂ ಆಗಿದ್ದ ಆರ್. ಗುಂಡೂರಾವ್ ಆದಿಯಾಗಿ ಬಹುತೇಕರು ಜಿಲ್ಲೆಗಷ್ಟೇ ರಾಜಕಾರಣ ಸೀಮಿತಗೊಳಿಸಿಕೊಂಡ ಪರಿಣಾಮ ರಾಷ್ಟ್ರಮಟ್ಟಕ್ಕೆ ಹೋಗುವ ಚಿಂತನೆ ನಡೆಸಲಿಲ್ಲ. ಒಮ್ಮೆ ಜಿಲ್ಲೆಯಿಂದ ಹೊರಗೆ ತೆರಳಿ ಚುನಾವಣೆಯಲ್ಲಿ ಸೋತುಬಿಟ್ಟರೆ ಮತ್ತೆ ಪ್ರಯತ್ನ ನಡೆಸುವುದೂ ಇಲ್ಲ. ಜಾತಿ, ಹಣ, ಪಕ್ಷ ಎಂದು ತಮಗೆ ತಾವೇ ಲಕ್ಷ್ಮಣರೇಖೆ ಎಳೆದುಕೊಂಡು ಅದರೊಳಗೇ ಇದ್ದುಬಿಡುವ ಪ್ರಯತ್ನ ನಡೆಸುತ್ತಾರೆ.
| ಭಾರದ್ವಾಜ್ ಕೆ. ಆನಂದ ತೀರ್ಥ, ರಾಜಕೀಯ ವಿಶ್ಲೇಷಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
