
ಬೆಳಗಾವಿ: ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರನ್ನು ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಸಚಿವರು ಹಾಗೂ ಎಲ್ಲ ಪಕ್ಷಗಳ ಶಾಸಕರು ಅಭಿನಂದಿಸಿದರು.ಆರ್.ಅಶೋಕ್‌ರನ್ನು ಪ್ರತಿ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವ ವಿಷಯವನ್ನು ಸದನದ ಗಮನಕ್ಕೆ ತಂದ ಸ್ಪೀಕರ್, ದೀರ್ಘ ಕಾಲದ ರಾಜಕೀಯ ಜೀವನದ ಅನುಭವ ಇರುವ ಅಶೋಕ್, ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಈಗ ಅವರಿಗೆ ಮಹತ್ವದ ಸ್ಥಾನ ಸಿಕ್ಕಿದೆ. ಸದನವು ಸಮರ್ಥ, ಸೌಹಾರ್ದಯುತವಾಗಿ ನಡೆಯಲು ಸಹಕಾರ ಕೊಡುವಂತೆ ಕೋರಿದರು.ಸರ್ಕಾರದ ಪರವಾಗಿ ಆರ್.ಅಶೋಕ್‌ರನ್ನು ಅಭಿನಂದಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರತಿಪಕ್ಷ ನಾಯಕನ ಸ್ಥಾನ ಅತ್ಯಂತ ಮಹತ್ವದ ಜವಾಬ್ದಾರಿ. ಈ ಸ್ಥಾನವನ್ನು ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರ್ಯಾಯ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ವಿರೋಧ ಮಾಡಲೆಂದೆ ವಿರೋಧಿಸುವುದು ಸರಿಯಲ್ಲ. ವಿಪಕ್ಷಗಳ ಟೀಕೆ, ಟಿಪ್ಪಣಿಗಳು ರಚನಾತ್ಮಕವಾಗಿರಲಿ ಎಂದರು.ವಿರೋಧ ಪಕ್ಷಗಳು ಜನತೆಯ ಒಳಿತಿಗಾಗಿ ಉತ್ತಮ ಆಡಳಿತ ನೀಡುವಂತಹ ಸಲಹೆಗಳನ್ನು ನೀಡಿದರೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತದೆ ಎಂದು ಹೇಳಿದರು.ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್, ಚಿಕ್ಕ ವಯಸ್ಸಿನಿಂದಲೂ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಸಾರಿಗೆ, ಗೃಹ, ಆರೋಗ್ಯ ಸೇರಿದಂತೆ ಅನೇಕ ಸಚಿವ ಸ್ಥಾನದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ತಮ್ಮಲ್ಲಿರುವ ಅನುಭವ, ಜ್ಞಾನದ ಆಧಾರದ ಮೇಲೆ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾರೆ. ಟೀಕೆಗಾಗಿ ನಾವು ಟೀಕೆ ಮಾಡುವುದಿಲ್ಲ. ಸರ್ಕಾರ ಜನ ವಿರೋಧಿಯಾಗಿ ವರ್ತಿಸಿದರೆ ಅದನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.ಬಿಜೆಪಿಯ ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್, ಬಿ.ವೈ.ವಿಜಯೇಂದ್ರ, ಜೆಡಿಎಸ್ ಸದಸ್ಯ ಸಿ.ಎನ್.ಬಾಲಕೃಷ್ಣ, ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ, ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಾಕ್ಸ್:ಪ್ರತಿಪಕ್ಷ ನಾಯಕ ನೇಮಕದ ಕೀರ್ತಿ ನಮಗೆ ಸಲ್ಲಬೇಕು. ಆರು ತಿಂಗಳಿಂದ ನಾವು ವಿರೋಧ ಪಕ್ಷದ ನಾಯಕ ಸ್ಥಾನಭರ್ತಿ ಮಾಡುವಂತೆ ಒತ್ತಾಯ ಮಾಡಿದ ಪರಿಣಾಮವಾಗಿ ಅಶೋಕ್ ನೇಮಕವಾಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಾಕ್ಸ್:ಅಭಿನಂದಿಸಲು ನಿರಾಕರಿಸಿದ ಯತ್ನಾಳ್!ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಅಭಿನಂದಿಸಿ ಮಾತನಾಡಲು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೇಟು ಹಾಕಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.ಬೇರೆ ಬೇರೆ ಸದಸ್ಯರು ಮಾತನಾಡಿದ ಬಳಿಕ ಸ್ಪೀಕರ್ ಖಾದರ್, ಯತ್ನಾಳ್ ಅವರಿಗೆ ನೀವು ಮಾತನಾಡುತ್ತೀರಾ? ಎಂದು ಕೇಳಿದರು. ಆಗ ಯತ್ನಾಳ್ ಮಾತನಾಡಲು ನಿರಾಕರಿಸಿದರು!
ಬಾಕ್ಸ್:ವಾಜಪೇಯಿ-ಅಡ್ವಾಣಿ ನನಗೆ ಮಾದರಿ: ಆರ್.ಅಶೋಕ್ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ.ಅಡ್ವಾಣಿ ನನಗೆ ಮಾದರಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.ವಿಧಾನಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬಿಜೆಪಿಯ 66 ಹಾಗೂ ಜೆಡಿಎಸ್ ಪಕ್ಷದ 19 ಸದಸ್ಯರು ಸೇರಿ ವಿರೋಧ ಪಕ್ಷದಲ್ಲಿ 85 ಮಂದಿ ಶಾಸಕರಿದ್ದೇವೆ. ಆಡಳಿತ ಪಕ್ಷದಲ್ಲಿ 135 ಜನರಿದ್ದಾರೆ. ನಮ್ಮ ಸಂಖ್ಯೆ ಕಡಿಮೆ ಇದೆ ಎಂದು ನಿರ್ಲಕ್ಷ್ಯ ಮಾಡಬೇಡಿ ಎಂದರು.ಸರ್ಕಾರದ ತಪ್ಪು ನಿರ್ಧಾರಗಳನ್ನು ನಿರ್ಭಿತಿಯಿಂದ ಟೀಕಿಸುತ್ತೇನೆ. ಈ ಸ್ಥಾನಕ್ಕೆ ನಾನು ಹಾಗೆಯೆ ಬಂದು ಕುಳಿತಿಲ್ಲ. 20 ವರ್ಷ ಯಾವುದೇ ಅಧಿಕಾರ ಇಲ್ಲದೆ ಪಕ್ಷಕ್ಕಾಗಿ ದುಡಿದ್ದಿದ್ದೇನೆ. ನಾನು 17 ವರ್ಷ ವಯಸ್ಸಿನಲ್ಲೆ ನಾನು ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದೆ ಎಂದು ಅಶೋಕ್ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 12 =
Remember me
