ಬೆಳಗಾವಿ:ಮದ್ಯದಂಗಡಿ ಪರವಾನಗಿ ನೀಡುವಲ್ಲಿ ಕಾನೂನು ಉಲ್ಲಂಘಿಸಿರುವ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ತನಿಖೆಗೆ ಆಗ್ರಹಿಸಿದ ಪ್ರಸಂಗ ಜರುಗಿತು.
ಸಿಎಲ್ 7 ಸನ್ನದು ಪರವಾನಗಿಯಂತೂ ದಂಧೆಯಾಗಿದೆ. ಸಾವಿರ ಕೋಟಿ ರೂ. ಹಗರಣವಾಗಿದೆ. ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯರು ಪಕ್ಷ ಬೇಧ ಮರೆತು ಆರೋಪಿಸಿದರು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಮದ್ಯದ ಅಂಗಡಿ ಲೈಸನ್ಸ್ ನೀಡಲಾಗಿದೆ ಎಂಬ ಕಾಂಗ್ರೆಸ್ ಸದಸ್ಯರ ಆಕ್ಷೇಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಹಿಂದಿನ ಅಬಕಾರಿ ಸಚಿವರೂ ಆಗಿದ್ದ ಶಾಸಕ ಗೋಪಾಲಯ್ಯ, ಸರ್ಕಾರಕ್ಕೆ ಧೈರ್ಯ ಮತ್ತು ಕಾಳಜಿ ಇದ್ದರೆ ಈ ಬಗ್ಗೆ ತನಿಖೆ ಮಾಡಿ ಅಕ್ರಮವಾಗಿರುವುದನ್ನು ರದ್ದು ಮಾಡಿ ಎಂದು ಸವಾಲು ಹಾಕಿದರು.
ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್​ನ ಎಸ್.ಎನ್.ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದಲ್ಲಿ ನಿಯಮ ಮೀರಿ ಸಿಎಲ್ 7 ಪರವಾನಗಿ ನೀಡಲಾಗಿದೆ. ಇದರಲ್ಲಿ ಶೇ.80 ನಿಯಮಗಳ ಉಲ್ಲಂಘನೆಯಾಗಿದೆ. ಜಿಲ್ಲಾ ಅಬಕಾರಿ ಕಚೇರಿಯಲ್ಲಿ ಸೂಪರಿಟೆಂಡೆಂಟ್ ನಿಯಮ ಮೀರಿ ಪರವಾನಗಿಗಳನ್ನು ಕೊಟ್ಟಿದ್ದಾರೆ. ಪರವಾನಗಿ ಕೊಟ್ಟಿರುವ ಮದ್ಯದಂಗಡಿಗಳಲ್ಲಿ ಅವರೇ ಪಾಲುದಾರರಾಗುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಿಎಲ್ 7 ಪರವಾನಗಿಗಳನ್ನು ನೀಡಬೇಕಾದರೆ 18 ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಬಹುತೇಕ ಎಲ್ಲ ಸನ್ನದ್ಧುದಾರರಲ್ಲೂ ಪ್ರಮಾಣಪತ್ರಗಳಿವೆ. ಆದರೆ ಕಟ್ಟಡ ವಿನ್ಯಾಸ ಮತ್ತು ರ್ಪಾಂಗ್ ಸ್ಥಳದ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ತಮ್ಮ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ನಿಯಮಗಳನ್ನು ರೂಪಿಸಲಿದೆ ಎಂದು ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ಕೆ.ಎಂ.ಶಿವಲಿಂಗೇಗೌಡ ಸಿಎಲ್ 7 ದಂಧೆಯಾಗಿದೆ ಎಂದರೆ, ಇದು ಸುಮಾರು 1 ಸಾವಿರ ಕೋಟಿ ರೂ.ಗಳಷ್ಟು ಹಗರಣ. ಈ ಬಗ್ಗೆ ತನಿಖೆಯಾಗಬೇಕು ಎಂದು ಬೇಳೂರು ಗೋಪಾಲಕೖಷ್ಣ ಒತ್ತಾಯಿಸಿದರು. ನಿಯಮ ಉಲ್ಲಂಘನೆಯಾಗಿದ್ದರೆ ಯಾರ ಕಾಲದಲ್ಲಿ ನೀಡಿರುವ ಲೈಸನ್ಸ್ ಆಗಿದ್ದರೂ ರದ್ದು ಮಾಡಿ ಎಂದು ಆರ್.ಅಶೋಕ್ ಆಗ್ರಹಿಸಿದರು.
ಸಿದ್ದರಾಮಯ್ಯನವರೇ, ಗರ ಬಡಿದಂತಿದ್ದೀರಿ:ಸಿದ್ದರಾಮಯ್ಯ ಮೊದಲ ಅವಧಿಗೂ ಈಗಲೂ ಸಾಕಷ್ಟು ವ್ಯತ್ಯಾಸವಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಾಖ್ಯಾನಿಸಿ ಅಚ್ಚರಿ ಮೂಡಿಸಿದರು. ಬರದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಈ ಹಿಂದೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದೀರಿ, ಸಿದ್ದರಾಮಯ್ಯ ಅಂದರೆ ಖಡಕ್ ಎಂಬಂತಿತ್ತು. ಆದರೆ, ಈಗ ಗರ ಬಡಿದಂತಿದ್ದೀರಿ. ಯಾವ ಗಾಳಿ ಹೊಡೆದಿದೆಯೋ? ಮುಖ್ಯಮಂತ್ರಿಯಾಗಿ ಈ ರೀತಿ ನಿಮ್ಮನ್ನು ನೋಡಿಲ್ಲ ಎಂದು ಕಾಲೆಳೆದರು. ಅವರಿಗೆ ಯಾವ ಗಾಳಿ ಸೋಕಿದೆಯೋ, ಮಾಟ ಮಂತ್ರ ಆಗಿದೆಯೋ ತಿಳಿಯದಾಗಿದೆ ಎಂದು ಜೆಡಿಎಸ್​ನ ರೇವಣ್ಣನವರನ್ನು ಈ ಚರ್ಚೆಗೆ ಎಳೆದು ತಂದರು. ರೇವಣ್ಣ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಯಾವ ಮಾಟ ಮಂತ್ರವೂ ತಾಗಲ್ಲ. ಎಲ್ಲವೂ ರಿವರ್ಸ್ ಆಗಲಿದೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಶೋಕ್ ಉದ್ದೇಶಿಸಿ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.
ಅಶೋಕ್ ಭಾಷಣಕ್ಕೆ ಆಡಳಿತ ಪಕ್ಷದ ವ್ಯಾಖ್ಯಾನ:ಪ್ರತಿಪಕ್ಷ ನಾಯಕ ಆರ್. ಅಶೋಕ್ ಭಾಷಣದ ಬಗ್ಗೆ ಆಡಳಿತ ಪಕ್ಷದ ಕಡೆಯಿಂದ ವಿಶೇಷ ರೀತಿ ವ್ಯಾಖ್ಯಾನ ನಡೆಯಿತು. ತಮ್ಮ ಮೊದಲ ಭಾಷಣದ ವೇಳೆ ಕಲಾಪದಲ್ಲಿ ಹಾಜರಿರಬೇಕೆಂದು ಮುಖ್ಯಮಂತ್ರಿಯವರನ್ನು ಕೋರಿದ್ದ ಅಶೋಕ್, ಸ್ಪೀಕರ್ ಅವರಲ್ಲೂ ಸಹ ಸಮಯಾವಕಾಶ ಮಿತಿ ಹಾಕದಂತೆ ಕೋರಿದ್ದರು. ಆದರೆ, ಆಡಳಿತ ಪಕ್ಷದ ಸಾಲಿನಲ್ಲಿದ್ದವರು ಸನ್ನೆಯಿಂದಲೇ ಭಾಷಣವನ್ನು ಲಘುವಾಗಿ ಪರಿಗಣಿಸಿದ್ದು ಕಾಣಿಸಿತು. ಅಶೋಕ್ ಭಾಷಣದ ನಡುವೆಯೇ ಮಾತನಾಡಿದ ರಾಯರಡ್ಡಿ, ನಿಮ್ಮಿಂದ ಈ ರೀತಿ ಭಾಷಣ ನಿರೀಕ್ಷೆ ಮಾಡಿರಲಿಲ್ಲ. ಒಂದು ರೀತಿಯ ಬ್ಯಾಲೆನ್ಸ್​ನಲ್ಲಿ ಮಾತನಾಡುತ್ತಿದ್ದೀರಿ ಎಂದು ಕಾಲೆಳೆದರು. ಲಕ್ಷ್ಮಣ ಸವದಿ ಕೂಡ ಮಧ್ಯ ಪ್ರವೇಶಿಸಿ, ನಿಮ್ಮನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಿದ್ದು ಬಿಜೆಪಿಯ ಶಾಸಕರಿಗೆ ಇಷ್ಟವಿಲ್ಲ. ಹೀಗಾಗಿಯೆ ನಿಮ್ಮ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಹಾಸ್ಯ ಮಾಡಿದರು.
7ನೇ ವೇತನ ಆಯೋಗ ವರದಿ ಜಾರಿಗೆ ಪಟ್ಟು: ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ವಿಧಾನಪರಿಷತ್​ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮಂಗಳವಾರ ಒಕ್ಕೊರಲಿನಿಂದ ಧ್ವನಿ ಎತ್ತಿದರು. ನಿಯಮ 330ರಡಿ ಬಿಜೆಪಿಯ ಡಾ. ವೈ.ಎ. ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, 7ನೇ ಆಯೋಗದ ವರದಿ ತಯಾರಾಗಿ ಆರು ತಿಂಗಳು ಕಳೆದರೂ ಸರ್ಕಾರ ವರದಿ ಸ್ವೀಕರಿಸಿ ವೇತನ ಜಾರಿ ಮಾಡಿಲ್ಲ. ಸರ್ಕಾರ ಕಾಲ ಹರಣ ಮಾಡುತ್ತಿದೆ. ಆಯೋಗ ತನ್ನ ಕೆಲಸವನ್ನು ಮುಗಿಸಿದೆ. ಆದರೂ ಅಯೋಗದ ಸದಸ್ಯರಿಗೆ ಸುಮ್ಮನೆ ವೇತನ ಹಾಗೂ ಭತ್ಯೆ ಕೊಡಲಾಗುತ್ತಿದೆ. ವರದಿ ಸ್ವೀಕರಿಸಿ ವೇತನ ಜಾರಿಗೊಳಿಸುವ ಬಗ್ಗೆ ಸರ್ಕಾರದಿಂದ ಉತ್ತರ ಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಸಭಾನಾಯಕ ಎನ್.ಎಸ್. ಬೋಸರಾಜು, ವೇತನ ಪರಿಷ್ಕರಣೆ ಕುರಿತಂತೆ ವೇತನ ಆಯೋಗವು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸುವ ಹಾಗೂ ಸೂಕ್ತ ಅಧ್ಯಯನ ನಡೆಸುವ ಅಗತ್ಯತೆಯನ್ನು ಮನಗಂಡು ರಾಜ್ಯ ಸರ್ಕಾರವು ವೇತನ ಆಯೋಗದ ಕಾಲಮಿತಿಯನ್ನು 2024ರ ಮಾರ್ಚ್ 15ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಸರ್ಕಾರದಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದ ಪ್ರಸಂಗ ನಡೆಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಧರಣಿ ಮುಂದುವರಿಸಿದ್ದರಿಂದ ಸಭಾಪತಿ, ಸದನವನ್ನು ಬುಧವಾರಕ್ಕೆ ಮುಂದೂಡಿದರು. ಮುಖ್ಯಮಂತ್ರಿ ಅವರು ಕಳುಹಿಸಿದ ಉತ್ತರದಲ್ಲಿ ಉಪು್ಪ, ಖಾರ, ಹುಳಿ ಏನು ಇಲ್ಲ. ಕಾಟಾಚಾರಕ್ಕೆ ಏನೋ ಉತ್ತರ ನೀಡಿದ್ದಾರೆ. ಮುಖ್ಯಮಂತ್ರಿ ಅವರೇ ಬಂದು ಉತ್ತರ ನೀಡಬೇಕು ಎಂದು ಬಿಜೆಪಿ ಸದಸ್ಯರು, ಪಟ್ಟು ಹಿಡಿದರು.
ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ: ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಕಡ್ಡಾಯ ಗ್ರಾಮೀಣ ಸೇವಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಸಭೆಯಲ್ಲಿ ತಿದ್ದುಪಡಿ ವಿಧೇಯವನ್ನು ಮಂಗಳವಾರ ಮಂಡಿಸಿದರು. ಈ ಹಿಂದೆ ವೈದ್ಯರ ಕಡ್ಡಾಯ ಗಾಮೀಣಸೇವೆ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇತ್ತು. ಹೀಗಾಗಿ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದವರು, ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಪ್ರಮಾಣಪತ್ರ ಪಡೆಯಬೇಕು ಎಂಬ ನೀತಿಯನ್ನು ಸರ್ಕಾರ ಅನುಸರಿಸಿತ್ತು. ಆದರೆ ಇತ್ತೀಚೆಗೆ ವೈದ್ಯಕೀಯ ಸ್ನಾತಕೋತ್ತರ ಹಾಗೂ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಹೊರಬರುತ್ತಿರುವುದರಿಂದ, ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವೈದ್ಯರ ಕಡ್ಡಾಯ ಒಂದು ವರ್ಷದ ಸೇವೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಗ್ರಾಮ ಸ್ವರಾಜ್ ವಿಧೇಯಕ ತಿದ್ದುಪಡಿ:ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ತಿದ್ದುಪಡಿ ವಿಧೇಯಕವನ್ನು ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದರು. ಹೈಕೋರ್ಟ್​ನ ರಿಟ್ ಅರ್ಜಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ತಾಲೂಕುಗಳನ್ನು ಹೊರತುಪಡಿಸಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗೆ ಅನುಪಾತದಲ್ಲಿ ಕ್ಷೇತ್ರ ನಿಗದಿ ಮಾಡುವುದು ವಿಧೇಯಕದ ತಿದ್ದುಪಡಿ ಉದ್ದೇಶವಾಗಿದೆ.
ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ: ಕರಾವಳಿ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆ ಮತ್ತು ಅನುಷ್ಠಾನ ಸಮಿತಿ ರಚನೆಗೆ ಅವಕಾಶ ಕಲ್ಪಿಸುವ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಮಂಡಿಸಿದರು.
ಸದನಕ್ಕೆ ಹರಿಪ್ರಸಾದ್ ಹಾಜರಿ, ಬೆನ್ನಿಗೆ ಚೂರಿ!:ಸಿದ್ದರಾಮಯ್ಯ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಮಂಗಳವಾರ ಮೊದಲ ಬಾರಿ ಸದನಕ್ಕೆ ಹಾಜರಾದರು. ಮಾತಿಗಿಳಿದ ಹರಿಪ್ರಸಾದ್ ವೈಯಕ್ತಿಕವಾಗಿ ನಾನು ಯಾರನ್ನೂ ದ್ವೇಷಿಸಿಲ್ಲ. ವಿಚಾರ, ಸಿದ್ದಾಂತಗಳ ವಿಷಯದಲ್ಲಿ ವಿರೋಧ ವ್ಯಕ್ತಪಡಿಸಿರುವೆ. ಸಭಾಪತಿ ಸೇರಿ ಎರಡೂ ಕಡೆಯ ಸದಸ್ಯರ ಮಾತುಗಳು, ಶೈಲಿ, ನೈತಿಕತೆಯಲ್ಲಿ ನಿದರ್ಶನೀಯವಾಗಿದ್ದಾರೆ ಎಂದರು. ವಿರೋಧ ಪಕ್ಷದವರ ಬಗ್ಗೆ ನನಗೆ ಹೆದರಿಕೆಯಿಲ್ಲ. ಆದರೆ ಜತೆಗಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಇರಿದರು ಎಂದಾಗ ಬಿಜೆಪಿಯ ಎನ್.ರವಿಕುಮಾರ್ ನಿಮ್ಮ ನೋವಿನೊಂದಿಗೆ ನಾವಿದ್ದೇವೆ ಎಂದರೆ, ಬಸನಗೌಡ ಪಾಟೀಲರನ್ನು ಮೊದಲು ಸಮಾಧಾನ ಮಾಡಿ ಎಂದು ಕಾಂಗ್ರೆಸ್ ಸದಸ್ಯರು ತಿವಿದರು.
ಮೀಸಲಾತಿ ಜಾರಿಗೆ ಕಾಯ್ದೆ ತಿದ್ದುಪಡಿ: ಕಾಂಗ್ರೆಸ್​ನ ನರೇಂದ್ರಸ್ವಾಮಿ, ಪರವಾನಗಿ ನೀಡುವುದರಲ್ಲಿ ಮೀಸಲಾತಿ ಪಾಲನೆಯಾಗಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ತಿಮ್ಮಾಪುರ್, 3975 ಸಿಎಲ್ 2 ಪರವಾನಗಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ತಲಾ 65 ಹಂಚಿಕೆ ಮಾಡಲಾಗಿದೆ. 3024 ಸಿಎಲ್ ಲೈಸನ್ಸ್ ನಲ್ಲಿ ಪರಿಶಿಷ್ಟ ಜಾತಿಗೆ 49, ಪರಿಶಿಷ್ಟ ಪಂಗಡಕ್ಕೆ 34, ಸಿಎಲ್ 7ರ 2444 ರಲ್ಲಿ ಪರಿಶಿಷ್ಟ ಜಾತಿಗೆ 96, ಪರಿಶಿಷ್ಟ ಪಂಗಡಕ್ಕೆ 68 ಪರವಾನಗಿ ನೀಡಲಾಗಿದೆ. ಮೀಸಲಾತಿ ಜಾರಿಯಾಗಿಲ್ಲ ಎಂಬುದು ಸರಿಯಿದೆ. ಈ ಕುರಿತು ಅನುಸೂಚಿತ ಜಾತಿ ಮತ್ತು ಪಂಗಡಗಳ ಸಮಿತಿಯೂ ವರದಿ ನೀಡಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
