ಬೆಂಗಳೂರು:ವಿಶ್ವದ ನೆಮ್ಮದಿ ಕಸಿದಿರುವ ಕರೊನಾ ವೈರಸ್ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೂ ಸಂಕಷ್ಟ ತಂದಿದೆ. ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತೆಗಳೂ ಸೇರಿದಂತೆ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಕರೊನಾ ಚಿಕಿತ್ಸೆಗೆ ಮೀಸಲಿರಿಸಲಾಗಿರುವುದರಿಂದಾಗಿ ಬೇರೆ ಬೇರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದಂತಾಗಿದೆ.
ರಾಜ್ಯದ ಬಹುತೇಕ ಕಡೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ, ಜನರು ನರಳುವ ಸ್ಥಿತಿ ಇದೆ. ಮತ್ತೊಂದೆಡೆ ತುರ್ತು ಚಿಕಿತ್ಸೆ ಪಡೆಯಲು ಸೂಕ್ತ ಸಾರಿಗೆ ಸೇವೆ ಸಿಗದೆ ಸಾವನ್ನಪು್ಪತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ.
ಕಳೆದ 15 ದಿನದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಶೇ. 80 ಇಳಿಕೆಯಾಗಿದೆ.
ಲಾಕ್​ಡೌನ್​ಗೆ ಮುನ್ನ ಮಾರ್ಚ್​ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 60,305, ಖಾಸಗಿಯಲ್ಲಿ 6,997 ಮಂದಿ ಚಿಕಿತ್ಸೆ ಪಡೆದಿದ್ದರು. ಆದರೆ ಲಾಕ್ ಡೌನ್ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 3,756 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,774 ಮಂದಿ ಮಾತ್ರ ಚಿಕಿತ್ಸೆ ಪಡೆದಿದ್ದು, ಇದರಲ್ಲಿ 1,483 ತುರ್ತು ಚಿಕಿತ್ಸೆ ನೀಡಲಾಗಿದೆ.
ರೋಗಿಗಳಿಗೆ ಸಂಕಷ್ಟ:ವಿಕ್ಟೋರಿಯಾ ಆಸ್ಪತ್ರೆ ರಾಜ್ಯದ ಮುಖ್ಯ ರೆಫರಲ್ ಆಸ್ಪತ್ರೆಯಾಗಿದ್ದು, ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಇಲ್ಲಿ ಚಿಕಿತ್ಸೆ ದೊರೆಯುತ್ತಿತ್ತು. ವಾಣಿವಿಲಾಸ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ, ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿಗೆ, ಇಎನ್​ಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು,ಗಂಟಲು, ದೊಡ್ಡ ಸಮಸ್ಯೆಗಳಿಗೆ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್​ಎಸ್​ವೈ), ಕಿಡ್ನಿ ಸಮಸ್ಯೆಗೆ ನೆಫ್ರೋ ಯುರಾಲಜಿ ಸಂಸ್ಥೆ, ಸುಟ್ಟ ಗಾಯಗಳಿಗೆ ಬರ್ನಿಂಗ್ ವಿಭಾಗ, ಆಪಘಾತ ಸೇರಿದಂತೆ ತುರ್ತು ಚಿಕಿತ್ಸೆಗೆ ಎಮರ್ಜೆನ್ಸಿ ಟ್ರಾಮಾ ಸೆಂಟರ್ ಸೇರಿದಂತೆ ಒಂದೇ ಸೂರಿನಡಿ ಎಲ್ಲ ಸಮಸ್ಯೆಗಳಿಗೂ ಚಿಕಿತ್ಸೆ ದೊರೆಯುತ್ತಿತ್ತು. ಪ್ರಯೋಗಾಲಯ ಹಾಗೂ ರಕ್ತ ನಿಧಿ ಸೌಲಭ್ಯವೂ ಇತ್ತು. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಮಂದಿ ಹೊರ ರೋಗಿಗಳಾಗಿ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ವಿಕ್ಟೋರಿಯಾ ಆಸ್ಪತ್ರೆಯನ್ನು ಕರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಈ ಒಂದೇ ಆವರಣದಲ್ಲಿ ಸಾವಿರಾರು ಸೋಂಕಿತರಿಗೆ ವ್ಯವಸ್ಥೆ ಮಾಡುವ ಸಲುವಾಗಿ ವಾಣಿವಿಲಾಸ, ನೆಫ್ರೋ ಯುರಾಲಜಿ ಸಂಸ್ಥೆ, ಸುಟ್ಟ ಗಾಯಗಳ ವಿಭಾಗ ಹೊರತು ಪಡಿಸಿ ಉಳಿದೆಲ್ಲ ವಿಭಾಗಗಳ ಸೇವೆಯನ್ನು ನಗರದ ನಾನಾ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ವಿಕ್ಟೋರಿಯಾದಲ್ಲಿರುವ ವೈದ್ಯರು ಕರೊನಾ ಬಿಟ್ಟು ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆ ದೊರೆಯದೆ ಸಮಸ್ಯೆಗೀಡಾಗಿದ್ದಾರೆ. ಈ ಸಮಸ್ಯೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಇದೆ.
ಒಟಿ ಖಾಲಿ ಖಾಲಿ:ಸರ್ಕಾರಿ ಆಸ್ಪತ್ರೆಗಳ ಅಪರೇಷನ್ ಥಿಯೇಟರ್​ಗಳು ಖಾಲಿ ಖಾಲಿ ಕಾಣುತ್ತಿವೆ. ಸಿಜೇರಿಯನ್ ಒಳಗೊಂಡಂತೆ ಅತ್ಯಂತ ಗಂಭೀರ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ನಡೆಸಲಾಗುತ್ತಿದೆ. ಹರ್ನಿಯ, ಅಪೆಂಡಿಕ್ಸ್, ಪೈಲ್ಸ್..ನಂತಹ ಕಾಯಿಲೆಗಳಿಗೆ ಮಾತ್ರೆ ನೀಡಿ ಶಸ್ತ್ರಚಿಕಿತ್ಸೆ ಮುಂದೂಡಲಾಗುತ್ತಿದೆ. ಹಾಗಾಗಿ ಅನೇಕ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಕರಿಗೆ ಕೆಲಸವೇ ಇಲ್ಲದಾಗಿದೆ.
1.07 ಕೋಟಿ ಕಾರ್ಡ್ ವಿತರಣೆ:ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸುವರ್ಣ ಸುರಕ್ಷಾ ಟ್ರಸ್ಟ್​ನಲ್ಲಿ ಈವರೆಗೆ ಸುಮಾರು 800 ಆಸ್ಪತ್ರೆಗಳು ಜನರಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ನೋಂದಣಿ ಮಾಡಿಕೊಂಡಿವೆ. ಈ ಯೋಜನೆಯಡಿ 900 ತೃತೀಯ ಹಂತದ ಚಿಕಿತ್ಸಾ ವಿಧಾನ ಸೇರಿದಂತೆ 1650 ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಸವಲತ್ತು ನೀಡಲು 1.07 ಕೋಟಿ ಆರೋಗ್ಯ ಕಾರ್ಡ್ ವಿತರಿಸಲಾಗಿದೆ.
ನೋಂದಣಿಗೆ ಅವಕಾಶ:ಸರ್ಕಾರ ಕೋವಿಡ್ ಮತ್ತು ನಾನ್ ಕೋವಿಡ್ ಆಸ್ಪತ್ರೆಗಳನ್ನು ಸ್ಪಷ್ಟವಾಗಿ ಪ್ರತ್ಯೇಕಗೊಳಿಸಿ ಚಿಕಿತ್ಸಾ ವ್ಯವಸ್ಥೆ ಮಾಡುವ ಅಗತ್ಯವಿದೆ. ಕೆಲವು ಕಡೆ ತುರ್ತು ಚಿಕಿತ್ಸೆಗೆ ಅನಿವಾರ್ಯವಾಗಿ ದಾಖಲಾಗುವ ಬಡರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಆರೋಗ್ಯ ಟ್ರಸ್ಟ್ ನಲ್ಲಿ ನೋಂದಣಿ ಮಾಡಿಕೊಳ್ಳದ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನಿಗದಿಪಡಿಸಿರುವ ಮೊತ್ತಕ್ಕೆ ಸೀಮಿತಗೊಳಿಸಿ ಚಿಕಿತ್ಸೆ ನೀಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆಯಾ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಂಪ್ಯಾನಲ್ ಆಗದ ಖಾಸಗಿ ಆಸ್ಪತ್ರೆ ಗುರುತಿಸಿ ಎಬಿಎಆರ್​ಕೆ ಯೋಜನೆ ಅಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸಮಸ್ಯೆಗಳೇನೇನು?
* ಜಿಲ್ಲಾ ಆಸ್ಪತ್ರೆಗಳು ಕರೊನಾ ಚಿಕಿತ್ಸೆಗಾಗಿ ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆಗೊಂಡಿವೆ
* ಗ್ರಾಮೀಣ ಹಾಗೂ ಬಡರೋಗಿಗಳಿಗೆ ಕಿಡ್ನಿ, ಕ್ಯಾನ್ಸರ್, ಹೃದ್ರೋಗದಂತಹ ಸಮಸ್ಯೆಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ
* ಖಾಸಗಿ ಆಸ್ಪತ್ರೆಗಳಿಗೆ ತೆರಳುವುದಕ್ಕೆ ಸಾರಿಗೆ ಸೌಕರ್ಯವಿಲ್ಲ
* ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಒಳಪಡದ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ಕೊಟ್ಟು ಚಿಕಿತ್ಸೆ ಪಡೆಯುವುದೂ ಬಡವರಿಂದ ಸಾಧ್ಯವಾಗುತ್ತಿಲ್ಲ.
* ಕಿಡ್ನಿ ವೈಫಲ್ಯ, ಹೃದ್ರೋಗ, ಲಿವರ್ ಸೇರಿದಂತೆ ನಾನಾ ಅಂಗಾಂಗ ವೈಫಲ್ಯದಿಂದ ರಾಜ್ಯದಲ್ಲಿ 4,293 ಮಂದಿ ಅಂಗಾಂಗ ಕಸಿಗಾಗಿ ದಾನಿಗಳ ಎದುರು ನೋಡುತ್ತಿದ್ದಾರೆ
* ಲಾಕ್​ಡೌನ್​ನಿಂದಾಗಿ ಹದಿನೈದು ದಿನಗಳಿಂದ ಯಾವುದೇ ಅಂಗಾಂಗ ಕಸಿ ನಡೆದಿಲ್ಲ
* ಕರೊನಾ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ದಾನಿಯ ಆರೋಗ್ಯ ತಪಾಸಣೆ ಅಗತ್ಯವಾದ್ದರಿಂದ ನಾಲ್ಕು ಪ್ರಕರಣಗಳಲ್ಲಿ ಅಂಗಾಂಗ ದಾನ ಪಡೆಯಲಾಗಿಲ್ಲ
* ಬೆಂಗಳೂರು ಸೇರಿ ಜಿಲ್ಲಾ, ತಾಲೂಕು ಸರ್ಕಾರಿ ಆಸ್ಪತ್ರೆಗಳು ಕರೊನಾ ಚಿಕಿತ್ಸಕ ಕೇಂದ್ರಗಳಾಗಿರುವುದರಿಂದ ಸಾಮಾನ್ಯ ರೋಗಕ್ಕೆ ಚಿಕಿತ್ಸೆ ಪಡೆಯಲು ಜನರು ಭಯದಿಂದ ಹಿಂಜರಿಯುತ್ತಿದ್ದಾರೆ
* ಇಂತಹ ಒಪಿಡಿಗಳ ವೈದ್ಯರಿಗೆ ಕೆಲಸ ಇಲ್ಲದಂತಾಗಿದೆ, ರಕ್ತ ನಿಧಿ ಕೇಂದ್ರಗಳೂ ತಾತ್ಕಾಲಿಕವಾಗಿ ಬಂದ್ ಆಗಿವೆ
| ಪಂಕಜ ಕೆ.ಎಂ/ವಿಲಾಸ ಮೇಲಗಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
