ಕಳೆದ 73 ವರ್ಷದಲ್ಲಿ ಅನೇಕ ಸಾಧನೆಗಳಾಗಿದ್ದರೂ ದೇಶದ ಮುಂದೆ ಇನ್ನೂ ಕೆಲ ಸಮಸ್ಯೆ, ಸವಾಲುಗಳಿವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯ ಏನೆಂದು ಯಾರೂ ಮಾತನಾಡುತ್ತಿಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿರುವ ಲೋಪಗಳ ಬಗ್ಗೆ ಮಾತನಾಡುತ್ತಿದ್ದಾರೆ. ಲೋಪದೋಷಗಳನ್ನು ಸರಿಪಡಿಸಲು ಅನೇಕ ಜನ, ಅನೇಕ ರೀತಿಯ ಸಲಹೆ ಸೂಚನೆಗಳನ್ನು ಈಗಾಗಲೇ ನೀಡಿದ್ದಾರೆ. ಮುಖ್ಯವಾಗಿ ದೇಶದಲ್ಲಿ ಚುನಾವಣಾ ಸುಧಾರಣೆ ಬೇಕಿದೆ. ಜನರಲ್ಲಿ ನೈತಿಕತೆ ಬೆಳೆಸಬೇಕಿದೆ. ಭಾವೋದ್ವೇಗದ ವಿಷಯಗಳ ಬದಲಿಗೆ ಬದುಕಿನ ವಿಷಯಗಳಿಗೆ ಹೆಚ್ಚು ಆದ್ಯತೆ ಕೊಡಬೇಕಿದೆ. ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗುತ್ತಿದೆ. ಇದನ್ನು ತಡೆಗಟ್ಟಲು ಪರಿಣಾಮಕಾರಿಯಾದ ಕಾನೂನುಗಳು ಬೇಕಿವೆ. ನ್ಯಾಯಾಂಗದ ಕ್ರಿಯಾಶೀಲತ್ವ ಬೇಕಿದೆ. ಸಂವಿಧಾನದಲ್ಲಿ ಯಾವುದೇ ದೋಷ ಇಲ್ಲ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ಜಾರಿಗೆ ತರುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಕಳೆದ 73 ವರ್ಷಗಳಲ್ಲಿ 105 ತಿದ್ದುಪಡಿಗಳನ್ನು ತಂದಿದ್ದೇವೆ. ಅದೇ ರೀತಿ ಇಂದಿನ ಅಗತ್ಯತೆಗೆ ತಕ್ಕಂತೆ ಸಂವಿಧಾನಕ್ಕೆ ಕೆಲ ತಿದ್ದುಪಡಿಗಳನ್ನು ತರಬಹುದು. ಆಹಾರ, ಶಿಕ್ಷಣ, ಆರೋಗ್ಯ, ಉದ್ಯೋಗಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡುವ ತಿದ್ದುಪಡಿಗಳನ್ನು ತರುವ ಮೂಲಕ ನಮ್ಮ ಸಂವಿಧಾನವನ್ನು ಮೇಲ್ದರ್ಜೆಗೇರಿಸಿಕೊಳ್ಳೋಣ. ನಿಜವಾಗಿಯೂ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಮುಂದುವರಿಯೋಣ.
| ಎಚ್.ಎನ್. ನಾಗಮೋಹನ್ ದಾಸ್,ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ನಮ್ಮ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸಲೇಬೇಕು. ಮೊದಲು ಜನರು ಭ್ರಷ್ಟಾಚಾರವನ್ನು ಸಹಿಸುವುದನ್ನು ಬಿಡಬೇಕು. ಭ್ರಷ್ಟಾಚಾರದ ಪ್ರಮಾಣ ಶೂನ್ಯಕ್ಕೆ ಇಳಿಯಬೇಕು. ಆಗ ಮಾತ್ರ ನಮ್ಮ ದೇಶ ಮುಂದುವರಿದ ದೇಶವಾಗುತ್ತದೆ. ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಜನರು ಸಂವಿಧಾನದ ಸಂಸ್ಥೆಗಳನ್ನು ಗೌರವಿಸಿ ಅವುಗಳಿಗೆ ಸಹಕಾರ ನೀಡಬೇಕು. ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಎಂಬ ಅಧ್ಯಾಯವಿದೆ. ಅದು ಪ್ರತಿಯೊಬ್ಬ ನಾಗರಿಕನು ಮಾಡಬೇಕಾದ ಕರ್ತವ್ಯಗಳ ಕುರಿತು ಹೇಳುತ್ತದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಅಥವಾ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ದೇಶವು ಅಭಿವೃದ್ಧಿ ಪಥದತ್ತ ಹೋಗುವುದರಲ್ಲಿ ಸಂದೇಹವಿಲ್ಲ. ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಕನಿಷ್ಠ ವೇತನ ಪಡೆಯುವುದು; ಉತ್ತಮ ಆರೋಗ್ಯ ಹೊಂದುವುದು ಸೇರಿ ಹಲವು ಮೂಲಭೂತ ಸೌಕರ್ಯಗಳನ್ನು ಹೊಂದುವುದನ್ನು ನಮ್ಮ ಸಂವಿಧಾನ ನೀಡಿದೆ. ಸರ್ಕಾರಗಳು ಇದ್ದನ್ನು ಒದಗಿಸಿಕೊಟ್ಟಾಗ ದೇಶ ಅಭಿವೃದ್ಧಿಯಾಗುತ್ತದೆ.
| ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಲೋಕಾಯುಕ್ತ

ಇಂದು ಜನ ಪ್ರತಿನಿಧಿಗಳು ಚುನಾಯಿತರಾಗುವ ಮಾರ್ಗದಲ್ಲಿ ಬಹಳ ದೊಡ್ಡ ದೋಷವಿದೆ. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಒಬ್ಬ ಶಾಸಕ ಚುನಾಯಿತನಾದರೆ, ಅವನಿಂದ ಯಾವ ರೀತಿಯ ಪಾರದರ್ಶಕ ಆಡಳಿತ ಕೊಡಲು ಸಾಧ್ಯವಾಗುತ್ತದೆ? ಹಣ ಚೆಲ್ಲಿ ಬಂದವನು ಆ ಹಣ ಹಿಂಪಡೆಯಲು ಭ್ರಷ್ಟಾಚಾರ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಎಂತಹ ಒಳ್ಳೆಯ ಸಂವಿಧಾನವನ್ನು ಕೊಟ್ಟರೂ ಅದನ್ನು ನಿರ್ವಹಣೆ ಮಾಡಲು ಸಾರ್ವಜನಿಕ ಹಿತಾಸಕ್ತಿಯುಳ್ಳ ಉತ್ತಮ ವ್ಯಕ್ತಿಗಳು ಇರದಿದ್ದರೆ, ಆ ಸಂವಿಧಾನ ಉತ್ತಮ ಫಲಿತಾಂಶ ನೀಡಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಆ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಈ ಹಿಂದೆ ವಕೀಲರು, ವೈದ್ಯರು ಪಾರ್ಲಿಮೆಂಟ್​ನಲ್ಲಿರುತ್ತಿದ್ದರು. ಈಗ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿದ್ದಾರೆ. ಅವರಿಂದ, ನಾವು ಯಾವ ಶುದ್ಧ ಆಡಳಿತವನ್ನು ನಿರೀಕ್ಷಿಸಲು ಸಾಧ್ಯ? ಆ ದೃಷ್ಟಿಯಲ್ಲಿ ನೋಡುವುದಾದರೆ, ಚುನಾವಣೆಯ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗುವ ಅವಶ್ಯಕತೆ ಇದೆ. ಎಲ್ಲಿಯವರೆಗೆ ಚುನಾವಣೆ ಪ್ರಕ್ರಿಯೆ ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ಸೂಕ್ತ ಅಭ್ಯರ್ಥಿಗಳು ಚುನಾಯಿತರಾಗಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ.
| ಅಶೋಕ್ ಹಾರನಹಳ್ಳಿ, ಮಾಜಿ ಅಡ್ವೊಕೇಟ್ ಜನರಲ್
ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಬಗ್ಗೆ ಸಂವಿಧಾನ ಆರ್ಟಿಕಲ್ 15 ಮತ್ತು 16ರಲ್ಲಿ ಹೇಳಲಾಗಿದೆ. ಸಮಾಜದಲ್ಲಿ ಅಸಮಾನತೆಯಲ್ಲಿರುವವರನ್ನು ಸಮಾನತೆಗೆ ತರಬೇಕು. ಆರ್ಟಿಕಲ್ 39ರ ಅಡಿಯಲ್ಲಿ ಶಿಕ್ಷಣದ ಹಕ್ಕು, ಕುಡಿಯುವ ನೀರಿನ ಹಕ್ಕು, ಆರೋಗ್ಯ ಪಡೆಯುವ ಬಗ್ಗೆ ಹೇಳಲಾಗಿದೆ. ಸರ್ಕಾರಗಳು ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಸೌಲಭ್ಯಗಳನ್ನು ಕಲ್ಪಿಸದೇ ಇಡೀ ರಾಜ್ಯ ಅಥವಾ ದೇಶಕ್ಕೆ ಸಮಾನವಾಗಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಚುನಾವಣಾ ಆಯೋಗದ ನೀತಿ ಸಂಹಿತೆ ಕೆಲವೇ ತಿಂಗಳುಗಳಿಗೆ ಸೀಮಿತವಾಗಬಾರದು. ಯಾವುದೇ ರಾಜಕೀಯ ಪಕ್ಷಗಳು ಜನರಿಗೆ ಅಸಂವಿಧಾನವಾಗಿ ಉಚಿತವಾಗಿ ಅದು ಕೊಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾಗ ಕೈಕಟ್ಟಿಕೂರಬಾರದು. ಇದರಿಂದ ದೇಶದ ಆರ್ಥಿಕತೆಗೆ ಅಪಾಯ ಉಂಟಾಗುತ್ತದೆ. ಒಂದು ಪಕ್ಷ 2 ಸಾವಿರ, ಮತ್ತೊಂದು ಪಕ್ಷ 4 ಸಾವಿರ ಇನ್ನೊಂದು ಪಕ್ಷ 6 ಸಾವಿರ ರೂ. ಹಣವನ್ನು ಹಂಚುತ್ತದೆ. ಆ ಹಣ ಅವರಿಗೆ ಎಲ್ಲಿಂದ ಬರುತ್ತದೆ? ಜನ ದುಡ್ಡಿಗಾಗಿ ಮತ್ತು ವಸ್ತುಗಳಿಗಾಗಿ ಮಾರು ಹೋಗಿ ಮತ ಚಲಾಯಿಸದೇ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ಇಲ್ಲವಾದರೆ, ಶ್ರೀಲಂಕಾ, ಪಾಕಿಸ್ತಾನ, ವೆನಿಜುವೆಲಾ ರೀತಿ ದೇಶವಾಗುತ್ತದೆ.
| ನ್ಯಾ.ಸುಭಾಶ್ ಬಿ.ಅಡಿ, ನಿವೃತ್ತ ಉಪ ಲೋಕಾಯುಕ್ತ

ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದೇವೆ. ಸಂವಿಧಾನದ ಆಶೋತ್ತರಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂದು ನೋಡಿದರೆ ಖಂಡಿತ ಅಸಮಾಧಾನ, ನಿರಾಸೆಗಳು ಉಂಟಾಗುತ್ತವೆ. ಸ್ವಾತಂತ್ರ್ಯ ಬಂದು ಕೆಲ ವರ್ಷಗಳವರೆಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕೆಲ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಅವರೂ ಸಮಾನತೆಯ ಹಕ್ಕು ಪಡೆದು ಎಲ್ಲರಂತೆ ಬದುಕಲಿ ಎಂಬ ಉದ್ದೇಶದಿಂದ ಮೀಸಲಾತಿ ನೀಡಲಾಯಿತು. ಈಗಲೂ ಮೀಸಲಾತಿ ಮುಂದುವರಿದಿದೆ. ಸಾಲದೆಂಬಂತೆ ಹೊಸ ಹೊಸ ಮೀಸಲಾತಿಗಳನ್ನೂ ಸೃಷ್ಟಿಸುತ್ತಿದ್ದೇವೆ. ಇದು ನಿಜಕ್ಕೂ ವಿಪರ್ಯಾಸ. ನಮ್ಮ ಹಿಂದಿನ ನಾಯಕರು ಜನಪರ ಕಾರ್ಯಗಳು ಹಾಗೂ ಯೋಜನೆಗಳಿಂದ ಜನರ ವಿಶ್ವಾಸ ಗಳಿಸಿ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದರು. ಈಗ ಹಣ ಬಲ ಇದ್ದವರು ಮಾತ್ರ ಚುನಾವಣೆಗೆ ನಿಲ್ಲಬಹುದು ಹಾಗೂ ಗೆಲ್ಲಬಹುದು. ಅಧಿಕಾರ ಪಡೆಯಲು ಹಾಗೂ ಉಳಿಸಿಕೊಳ್ಳಲು ಹಣ ಬೇಕು. ಹಣ ಗಳಿಸಲು ಭ್ರಷ್ಟಾಚಾರ ನಡೆಸಬೇಕು. ಹಣ ಹಂಚಿ, ಆಮಿಷ ಒಡ್ಡಿ ಅಧಿಕಾರ ಪಡೆಯುವವರು ಜನರಿಗೇನು ಮಾಡಲು ಸಾಧ್ಯ? ಈ ಬಗ್ಗೆ ಜನರಲ್ಲಿ ತಿಳಿವಳಿಕೆ, ಪ್ರಾಮಾಣಿಕತೆ ಮೂಡಬೇಕು. ಅರ್ಹ ವ್ಯಕ್ತಿಯನ್ನು ಆರಿಸಿ ಕಳುಹಿಸುತ್ತೇನೆಂಬ ಬದ್ಧತೆ ಇರಬೇಕು. ಆಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ.
| ನ್ಯಾ.ಡಿ.ವಿ. ಶೈಲೇಂದ್ರಕುಮಾರ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ನಾವು ಸಣ್ಣವರಿದ್ದಾಗ ನಾವಿದ್ದ ಸಮಾಜ ಹೇಗಿತ್ತೆಂದರೆ, ಒಬ್ಬ ವ್ಯಕ್ತಿ ಅಪರಾಧವೆಸಗಿ ಜೈಲಿಗೆ ಹೋದರೆ, ಅವನ ಮನೆಯ ಮುಂದೆಯೂ ಸುಳಿಯದಂತಹ ವಾತಾವರಣವಿತ್ತು. ಭ್ರಷ್ಟರನ್ನು ಬಹಿಷ್ಕರಿಸುವಂತಹ ಭಾವನೆ ಅಂದಿನ ಸಮಾಜದಲ್ಲಿತ್ತು. ಆದರೆ, ಈಗ ಜೈಲಿಗೆ ಹೋಗಿ ಜಾಮೀನು ತೆಗೆದುಕೊಂಡು ಬರುವವರಿಗೆ ಹಾರ ಹಾಕುವ, ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಇಂತಹ ಸಾಮಾಜಿಕ ಭಾವನೆಯನ್ನು ಬದಲಿಸಿದರೆ ನಿಜವಾದ ಪ್ರಜಾಪ್ರಭುತ್ವದ ಅರ್ಥ ಬರುತ್ತದೆ ಎನ್ನುವುದು ನನ್ನ ಅನಿಸಿಕೆ. ಅದು ಸಾಧ್ಯವಾಗಬೇಕೆಂದರೆ ತೃಪ್ತಿ ಮತ್ತು ಮಾನವೀಯತೆ ಎಂಬ 2 ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಆಗ ಮತ್ತೊಬ್ಬರ ಜೇಬಿಗೆ ಕೈ ಹಾಕಿ, ಮತ್ತೊಬ್ಬರ ಹೊಟ್ಟೆಗೆ ಕಲ್ಲು ಹಾಕಿ ಸಂಪತ್ತು ಗಳಿಸುವ ಸಂದರ್ಭ ಬರುವುದಿಲ್ಲ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಜನರೂ ತಮ್ಮ ಧರ್ಮ-ಜಾತಿಯವನೆಂದು ನೋಡದೆ, ಸಮಾಜಕ್ಕೆ ಅವನಿಂದ ಏನು ಉಪಯೋಗವಿದೆ ಎಂದು ಗಮನಿಸಬೇಕು.
| ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನಿವೃತ್ತ ಲೋಕಾಯುಕ್ತರು


ಹಕ್ಕು-ಬಾಧ್ಯತೆಗಳು ಒಂದೇ ನಾಣ್ಯದ ಎರಡು ಮುಖಗಳೆಂಬುದು ನಿಸ್ಸಂಶಯ. ಇತ್ತೀಚಿನ ದಿನಗಳಲ್ಲಿ ಜನತೆ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದರಲ್ಲಿ ಮಗ್ನರಾಗಿದ್ದಾರೆ ಹೊರತು ತಮ್ಮ ಬಾಧ್ಯತೆಗಳೇನು ಎಂಬುದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಜಗಜ್ಜಾಹೀರಾಗಿದೆ. ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಂವಿಧಾನ ಹೇಗೆ ಸಂರಕ್ಷಿಸಿ ಸುಭದ್ರಪಡಿಸಿದೆಯೋ ಅದೇ ರೀತಿ ಮೂಲಭೂತ ಕರ್ತವ್ಯಗಳ ಬಗ್ಗೆ ಸಹ ಸಾಕಷ್ಟು ಒತ್ತು ಕೊಟ್ಟಿದೆ. ಭಾರತದ ಪ್ರಜೆಗಳಾದ ನಾವು ನಮಗೇ ಅರ್ಪಿಸಿಕೊಂಡಿರುವ ಸಂವಿಧಾನಕ್ಕೆ ವಿಧೇಯತೆ ಅನುಚ್ಛೇದ 51-ಅ ಯಲ್ಲಿ ನಮೂದಿಸಿರುವ ಆದ್ಯ ಕರ್ತವ್ಯ. ದೇಶದಿಂದ ನಮಗೆ ದತ್ತವಾಗಿರುವ ಸ್ವಾತಂತ್ರ್ಯ ಸವಲತ್ತುಗಳನ್ನು ಅನುಭವಿಸುವಾಗ ದೇಶಕ್ಕೆ ನಮ್ಮ ಕೊಡುಗೆಯೇನೆಂದು ಪ್ರಶ್ನಿಸಿಕೊಂಡು ಸಂವಿಧಾನ ಪಾಲನೆಯನ್ನು ತಪ್ಪದೇ ಮಾಡಿಕೊಂಡು ಹೋಗುವುದು ಅತ್ಯವಶ್ಯ. ಜನಪ್ರತಿನಿಧಿಗಳಿಗೆ ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಹೆಚ್ಚಿನ ಜವಾಬ್ದಾರಿ ಇರುತ್ತದೆ. ರಾಜಕೀಯ ಲಾಭಗಳಿಗೋಸ್ಕರ ಸಾಂವಿಧಾನಿಕ ಸೂತ್ರಗಳನ್ನು ಗಾಳಿಗೆ ತೂರುವ ಜನನಾಯಕರ ಗೀಳು ತೊಲಗಬೇಕು. ಸ್ವಾಮಿಕಾರ್ಯ-ಸ್ವಕಾರ್ಯ ಎರಡನ್ನೂ ಸಾಧಿಸುವ ಉತ್ಸುಕತೆ ನಮ್ಮಲ್ಲಿ ಬೆಳೆದರೆ ಸರ್ವಾಂಗೀಣ ಅಭಿವೃದ್ಧಿ ಶತಸ್ಸಿದ್ಧ.
| ರಾಘವೇಂದ್ರ ಶ್ರೀವತ್ಸ, ಸುಪ್ರೀಂಕೋರ್ಟ್ ವಕೀಲರು

ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ, ಸಮಾನತೆಗೆ ಉತ್ತೇಜನ, ಬಡವ, ಹಿಂದುಳಿದ ಮತ್ತು ದಲಿತರ ಕಲ್ಯಾಣವು ಸಂವಿಧಾನದ ಪ್ರಮುಖ ಗುರಿಗಳಾಗಿವೆ. ಆಡಳಿತ ರಚನೆಯು ಸಾಂವಿಧಾನಿಕ ಉದ್ದೇಶಗಳನ್ನು ಪೂರೈಸುತ್ತಿದೆಯೇ, ಭವಿಷ್ಯದ ಸವಾಲವನ್ನು ಎದುರಿಸಲು ತಿದ್ದುಪಡಿ ಅಥವಾ ಸುಧಾರಣೆಗಳು ಸಂವಿಧಾನದಲ್ಲಿ ಅಗತ್ಯವಿದೆಯೇ ಎಂಬ ಪರಿಶೀಲನೆಗಳಾಗುತ್ತಿರಬೇಕು. ಏಳು ದಶಕಗಳಲ್ಲಿ 105 ಬಾರಿ ಸಂವಿಧಾನದಲ್ಲಿ ತಿದ್ದುಪಡಿ ತರಲಾಗಿದೆ. ಭೂಸೂಧಾರಣೆ ಕ್ರಮಗಳನ್ನು ಜಾರಿ ಮಾಡಿರುವುದು, ಬ್ಯಾಂಕ್​ಗಳ ರಾಷ್ಟ್ರೀಕರಣ, ಹಿಂದಿನ ರಾಜ ಮನೆತನದ ವಾರಸುದಾರರಿಗೆ ಪ್ರೖವಿ ಪರ್ಸ್ ರದ್ದುಗೊಳಿಸುವುದು, ಪಂಚಾಯತ್ ರಾಜ್ ವ್ಯವಸ್ಥೆಯ ಸ್ಥಾಪನೆ ಇತ್ಯಾದಿ ತಿದ್ದುಪಡಿಗಳಿಗೆ ಸಂವಿಧಾನ ಸಾಕ್ಷಿಯಾಗಿದೆ. ಹಾಗಾದರೆ ಮುಂದೇನು? ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಸರ ಸಮಸ್ಯೆ, ಬಹುಭಾಷಾ ಮಧ್ಯಮ ವರ್ಗದ ಅನಿಯಂತ್ರಿತ ಆಕಾಂಕ್ಷೆಗಳು, ನೂರಾರು ವರ್ಷಗಳಿಂದ ನರಳುತ್ತಿರುವ ಬಡವರು, ಹಿಂದುಳಿದವರ ಹತಾಶೆಗಳು, ಕೃತಕ ಬುದ್ಧಿಮತ್ತೆಯಲ್ಲಿನ ವ್ಯಾಪಕ ತಾಂತ್ರಿಕ ಪ್ರಗತಿ ಹೊಂದಿರುವ 21ನೇ ಶತಮಾನದಲ್ಲಿದ್ದೇವೆ. ಅದಕ್ಕೆ ಅನುಗುಣವಾಗಿ ಸಂವಿಧಾನವು ಪ್ರಸ್ತುತತೆಯ ಪರೀಕ್ಷೆ ಎದುರಿಸುತ್ತಿರಬೇಕು.
| ಮೋಹನ್ ಕಾತರಕಿ, ಹಿರಿಯ ವಕೀಲರು ಸುಪ್ರೀಂ ಕೋರ್ಟ್
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 6 =
Remember me
