ಬೆಂಗಳೂರು:ಬರ ಪರಿಹಾರದ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ರಾಜ್ಯಾದ್ಯಂತ ಪ್ರವಾಸ ಹೊರಟ ಬೆನ್ನಲ್ಲೇ ರಾಜ್ಯ ಸರ್ಕಾರ ಅದೇ ವಿಷಯವಾಗಿ ಕೇಂದ್ರದ ತಾರತಮ್ಯ ಧೋರಣೆ ವಿರುದ್ಧ ಆಕ್ರೋಶ ಹೊರಹಾಕಿದೆ. ಪರಿಹಾರದ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸುವ ನಿರ್ಣಯ ಕೈಗೊಂಡು ಪ್ರತಿ ದಾಳ ಉರುಳಿಸಿದೆ. ಆ ಮೂಲಕ ಕೇಂದ್ರದೊಂದಿಗೆ ಸಂಘರ್ಷಕ್ಕೂ ಮುಂದಾಗಿದೆ.
ಮಳೆ ಕೊರತೆಯಿಂದ ನಾಡಿನ ಬಹುಪಾಲು ಸ್ಥಳಗಳಲ್ಲಿ ಬರ ಆವರಿಸಿದ್ದು, ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಪೂರಕವಾಗಿ ನರೇಗಾ ಮಾನವ ದಿನಗಳನ್ನು ಹೆಚ್ಚಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೇಂದ್ರವನ್ನು ಒತ್ತಾಯಿಸಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಬಾಕಿ ಬಿಡುಗಡೆಗೆ ಅಭಿಯಾನದ ಮೂಲಕ ಆರಂಭಿಸಿದ್ದ ಸಂಘರ್ಷವನ್ನು ಬರ ಪರಿಹಾರದ ವಿಚಾರಕ್ಕೂ ವಿಸ್ತರಿಸಿದೆ. ಸಂಪುಟ ಸಭೆಯಲ್ಲಿ ಬರ ಕುರಿತಂತೆಯೇ ಸುದೀರ್ಘ ಚರ್ಚೆ ನಡೆದಿದೆ. ಸದ್ಯದ ಪರಿಸ್ಥಿತಿ ಹಾಗೂ ಕೇಂದ್ರದ ಅಸಹಕಾರದ ಬಗ್ಗೆ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರದಿಂದ ಪ್ರತಿಸ್ಪಂದನೆ ಇಲ್ಲದೇ ಇರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆಯಲ್ಲಿ ತೀವ್ರ ಆಕ್ಷೇಪ ಹೊರಹಾಕಿದರೆಂದು ಗೊತ್ತಾಗಿದೆ.
ಸ್ಪಂದಿಸದ ಕೇಂದ್ರ:ಬರ ಹಿನ್ನೆಲೆಯಲ್ಲಿ ನರೇಗಾದಡಿ ನೂರು ದಿನ ಕೆಲಸ ಪೂರೈಸಿದ ಕುಟುಂಬಗಳು ಬಹಳಷ್ಟಿವೆೆ. ಹೀಗಾಗಿ ನರೇಗಾ ಮಾನವ ದಿನವನ್ನು 150 ದಿನಕ್ಕೆ ಏರಿಸಲು ಕೇಂದ್ರಕ್ಕೆ ಪತ್ರ ಬರೆದಿದ್ದೆವು. ಅಲ್ಲಿಂದ ಉತ್ತರ ಬಂದಿಲ್ಲ ಎಂದು ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು. ಕೇಂದ್ರ ಸಚಿವರು ಸಹ ನಮ್ಮ ಕಂದಾಯ ಸಚಿವರಿಗೆ ಭೇಟಿಗಾಗಿ ಸಮಯ ಕೊಟ್ಟಿಲ್ಲ. ಹೀಗಾಗಿ ಕಾರ್ಯದರ್ಶಿಯನ್ನು ಭೇಟಿಯಾದೆವು. ಮುಖ್ಯಮಂತ್ರಿಯವರಿಗೆ ಪ್ರಧಾನಿಯವರು ಭೇಟಿ ಅವಕಾಶ ಕೊಡುತ್ತಿಲ್ಲ. ಈ ಎಲ್ಲ ವಿಚಾರ ಸಭೆಯಲ್ಲಿ ಚರ್ಚೆಯಾಗಿದೆ ಎಂದರು. ಕೇಂದ್ರದ ಅಧಿಕಾರಿಗಳು ಬರ ಪರಿಸ್ಥಿತಿ ವೀಕ್ಷಿಸಲು ಬಂದಾಗ ನಮ್ಮ ವರದಿಗೆ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಇಲ್ಲಿಯವರೆಗೆ ಬರ ಪರಿಹಾರ ಬಂದಿಲ್ಲ. ಸಂಪುಟ ಸಭೆಯಲ್ಲಿ ಈ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಕೇಂದ್ರವು ಕೂಡಲೇ ಬರ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಿ ಎಂದು ಸಂಪುಟ ಸಭೆ ಒತ್ತಾಯಿಸಿದೆ ಎಂದರು.
ಜಿಲ್ಲೆ, ತಾಲೂಕುಗಳಲ್ಲಿ ಸಭೆ:ಬರ ನಿರ್ವಹಣೆ ಸಂಬಂಧ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಸಭೆ ನಡೆಸಿ ಮೇವು, ಕುಡಿಯುವ ನೀರು ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ. ತಕ್ಷಣಕ್ಕೆ ಹಣದ ಕೊರತೆ ಇಲ್ಲ. 800 ಕೋಟಿ ರೂ. ಜಿಲ್ಲಾಧಿಕಾರಿಗಳ ಬಳಿ ಇದೆ. ಬರ ಪರಿಹಾರ ಕಾರ್ಯ ಅಡ್ಡಿಯಾದಂತೆ ಕ್ರಮಕೈಗೊಳ್ಳಿ, ಸೂಕ್ತ ರೀತಿಯಲ್ಲಿ ನಿಗಾ ವಹಿಸಲು ಸಚಿವರಿಗೆ ಸೂಚಿಸಿದರು ಎಂದು ವಿವರಿಸಿದರು. ಹಾಗೆಯೇ, ಇನ್​ಪುಟ್ ಸಬ್ಸಿಡಿ ಬಿಡುಗಡೆಗೆ ತಯಾರಾಗಲು ಕೃಷಿ ಇಲಾಖೆಗೆ ತಿಳಿಸಲಾಗಿದೆ. ಸಾಲ ವಸೂಲಿಗೆ ಒತ್ತಡ ಹೇರದಂತೆ ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಈ ಹಿಂದೆಯೇ ವಿನಂತಿ ಮಾಡಲಾಗಿತ್ತು. ಮತ್ತೊಮ್ಮೆ ಸೂಚನೆ ನೀಡಲಾಗುತ್ತದೆ ಎಂದರು.
ಅಸಮಾಧಾನ:ಕೇಂದ್ರದ ತಂಡ ಬರಪೀಡಿತ ಪ್ರದೇಶಕ್ಕೆ ಬಂದು ಸವಿಸ್ತಾರವಾಗಿ ಅಧ್ಯಯನ ನಡೆಸಿದೆ. ಸರ್ಕಾರವೂ ವರದಿ ನೀಡಿದೆ. ಆ ಬಳಿಕವೂ ಕೇಂದ್ರ ನೆರವಿಗೆ ಬರುತ್ತಿಲ್ಲ. ವಿಪಕ್ಷಗಳು ಕೂಡ ದನಿ ಎತ್ತುತ್ತಿಲ್ಲ. ಅದರ ಬದಲು ತಾವೇ ಬರ ಅಧ್ಯಯನ ಮಾಡಲು ಹೊರಟಿವೆ. ಕೇಂದ್ರಕ್ಕೆ ಬಲ ನೀಡಲು ಅಥವಾ ಜನರ ಗಮನ ಬೇರೆಡೆ ಸೆಳೆಯಲು ಹೊರಟಿದ್ದಾರೆ. ಸಂಸದರು ಕೇಂದ್ರಕ್ಕೆ ಹೇಳಬೇಕು, ರಾಜಕೀಯ ನಡೆ ಜನಕಲ್ಯಾಣ ಆಗಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್​ನ ಬರ ಅಧ್ಯಯನವನ್ನು ಸಚಿವ ಎಚ್.ಕೆ. ಪಾಟೀಲ್ ಛೇಡಿಸಿದರು.
ಹೈಟೆಕ್ ಹಾರ್ವೆಸ್ಟಿಂಗ್:ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 300 ಹೈಟೆಕ್ ಹಾರ್ವೆಸ್ಟರ್ ಹಬ್​ಗಳನ್ನು ಹಂತ ಹಂತವಾಗಿ ಸ್ಥಾಪಿಸ ಲಾಗುತ್ತದೆ. 2023-24ನೇ ಸಾಲಿನಲ್ಲಿ 100 ಹಾರ್ವೆಸ್ಟರ್ ಹಬ್​ಗಳನ್ನು ಶೇ.70 ರಷ್ಟು ಸಹಾಯಧನದಲ್ಲಿ ಪ್ರತಿ ಘಟಕಕ್ಕೆ 1 ಕೋಟಿ ರೂ.ಗೆ ಮೀರದಂತೆ ಅನುಷ್ಠಾನಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರತಿ ಹೈಟೆಕ್ ಹಾರ್ವೆಸ್ಟರ್ ಹಬ್​ನಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬಳಸಲಾಗುತ್ತದೆ. ಅದನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ಒದಗಿಸಲಾಗುತ್ತದೆ.
ಇವತ್ತಿನವರೆಗೆ ಒಂದು ನಯಾಪೈಸೆ ಬರ ಪರಿಹಾರ ಬಂದಿಲ್ಲ. ಇದರ ಬಗ್ಗೆ ಸಂಪುಟ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗದ ಹಾಗೆ ನಾವು ಒತ್ತಾಯ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.
| ಎಚ್.ಕೆ. ಪಾಟೀಲ್, ಕಾನೂನು ಸಚಿವ
ಕೃಷಿ ಹೊಂಡಗಳಿಗೆ 100 ಕೋಟಿ ರೂ.:ಮಳೆಯಾಶ್ರಿತ ಪ್ರದೇಶದ ಅನುಕೂಲಕ್ಕಾಗಿ 24 ಜಿಲ್ಲೆಯ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಕ್ಷೇತ್ರ ಬದು, ಕೃಷಿ ಹೊಂಡ ನಿರ್ವಣ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಸುವುದು, ಕೃಷಿ ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್​ಸೆಟ್, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಇದರಲ್ಲಿ ಒಳಗೊಂಡಿರುತ್ತದೆ. ಪ್ರತಿ ತಾಲೂಕಲ್ಲಿ 152 ಘಟಕಗಳ ನಿರ್ವಣಕ್ಕೆ ಪ್ರತಿ ತಾಲೂಕಿಗೆ ತಲಾ 1.85 ಕೋಟಿ ರೂ. ಒದಗಿಸಲಾಗುತ್ತದೆ.
ಸಾವರ್ಕರ್ ಫೋಟೋಗೆ ಕೊಕ್?:ಬೆಳಗಾವಿ ವಿಧಾನಸಭೆ ಆವರಣದಲ್ಲಿ ಅಳವಡಿಸಿರುವ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಫೋಟೋವನ್ನು ತೆಗೆದು ಹಾಕಲು ಸರ್ಕಾರ ಬಯಸಿದೆ. ಈ ಸಂಬಂಧ ಸಂಪುಟ ಸಭೆ ಹೊರತಾಗಿ ಅನೌಪಚಾರಿಕ ಚರ್ಚೆ ನಡೆದಿದೆ. ಆ ಜಾಗದಲ್ಲಿ ನೆಹರೂ ಫೋಟೋ ಅಳವಡಿಸಲು ಉದ್ದೇಶಿಸಲಾಗಿದ್ದು, ಅಧಿವೇಶನ ಆರಂಭದಲ್ಲೇ ಇದರ ಅನಾವರಣ ಸಾಧ್ಯತೆ ಇದೆ. ಈ ಬಗ್ಗೆ ಕಾನೂನು ಸಚಿವರು ಪ್ರತಿಕ್ರಿಯೆ ನೀಡಲು ಬಯಸಲಿಲ್ಲ. ಈ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದಷ್ಟೇ ಹೇಳಿದರು. ಟಿಪು್ಪ ಜಯಂತಿ ಬಗ್ಗೆಯೂ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
