ಬೆಂಗಳೂರು:ಮಾಲ್​ಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಬುಧವಾರ ಬೃಹತ್ ಜಾಥಾ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಗುರುವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ಕರವೇ ಹೋರಾಟಗಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇಂಗ್ಲಿಷ್ ನಾಮಫಲಕ ವಿರುದ್ಧ ಸಮರ ಸಾರಿರುವ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್​ನಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಜಾಥಾ ನಡೆಸಿದ್ದರು. ಜಾಥಾ ಮುಂದುವರಿದಂತೆ ತೀವ್ರ ಸ್ವರೂಪ ಪಡೆದುಕೊಂಡು ಪ್ರತಿಭಟನಾಕಾರರು ಆಂಗ್ಲ ನಾಮಫಲಕ ಧ್ವಂಸಗೊಳಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರವೇ ಮುಖಂಡರನ್ನು ಬಂಧಿಸಿ ಕರೆದೊಯ್ದು, ಪೊಲೀಸ್ ವಾಹನ ಚಾಲನಾ ಮತ್ತು ಸಂರಕ್ಷಣಾ ಶಾಲಾ ಒಳಭಾಗದಲ್ಲಿ ಇರಿಸಿದ್ದರು. ನಾರಾಯಣಗೌಡ ಸೇರಿ 53 ಹೋರಾಟಗಾರರ ವಿರುದ್ಧ ಕಬ್ಬನ್​ಪಾರ್ಕ್ ಸೇರಿ ವಿವಿಧ ಠಾಣೆಗಳಲ್ಲಿ 10 ಎಫ್​ಐಆರ್ ದಾಖಲಾಗಿತ್ತು. ಇವರೆಲ್ಲರನ್ನೂ ಬಂಧಿಸಿದ್ದ ಪೊಲೀಸರು, ಬುಧವಾರ ತಡರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತರನ್ನು ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ.
ಇದರಿಂದ ಸಿಟ್ಟಿಗೆದ್ದ ಕರವೇ ಕಾರ್ಯಕರ್ತರು ನಾರಾಯಣಗೌಡ ಸೇರಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಸನ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ನಿಗದಿತ ಗಡುವಿನೊಳಗೆ ವಾಣಿಜ್ಯ ಮಳಿಗೆಗಳು, ಮಾಲ್​ಗಳ ಹಾಗೂ ಅಂಗಡಿ ಮುಂಗಟ್ಟುಗಳು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು. ಹೋರಾಟಗಾರರನ್ನು ಜೈಲಿಂದ ಬಿಡುಗಡೆಗೊಳಿಸಿ ಪ್ರಕರಣ ವಾಪಸ್ ಪಡೆಯಬೇಕೆಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ನಾರಾಯಣಗೌಡ ಆಕ್ರೋಶ:ಕರವೇ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ನಾವೇನು ಭಯೋತ್ಪಾದಕರಾ? ನಾಡು, ನುಡಿ, ನೆಲ, ಜಲ, ಕನ್ನಡದ ಬಗ್ಗೆ ಭಾರಿ ಅಭಿಮಾನ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ, ಕನ್ನಡಪರ ಹೋರಾಟಗಾರರ ಮೇಲೆ ಪೊಲಿಸರಿಂದ ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಿದ್ದರೂ ಸಹಿಸಿಕೊಂಡಿದ್ದಾರೆ. ಗೃಹಸಚಿವರು ಏನು ಮಾಡುತ್ತಿದ್ದಾರೆ? ಹೋರಾಟಗಾರರನ್ನು ಯಾವುದೇ ಸರ್ಕಾರಗಳು ಇಷ್ಟು ಕೀಳುಮಟ್ಟದಲ್ಲಿ ನಡೆಸಿಕೊಂಡಿರಲಿಲ್ಲ ಎಂದು ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡುಗಡೆಗೆ ಬಿಜೆಪಿ ಆಗ್ರಹ:ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದು ಹೋರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮತ್ವ ಆಗಬೇಕು. ಕನ್ನಡ ನೆಲದಲ್ಲಿ ಕನ್ನಡವೇ ಉಸಿರಾಗಬೇಕು. ಬಂಧಿಸಿದವರನ್ನು ಬಿಡುಗಡೆ ಮಾಡ ಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಪಾಲಿಕೆ ಸದಸ್ಯರ ಕನ್ನಡ ಕಡೆಗಣನೆಗೆ ಆಕ್ರೋಶ: ಇಲ್ಲಿನ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಸದಸ್ಯರು ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ ಗುರುವಾರ ಪಾಲಿಕೆ ಆವರಣದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೇಯರ್ ಸೇರಿ ಬಹುತೇಕ ಸದಸ್ಯರು ಕನ್ನಡ ಕಡೆಗಣಿಸಿ ಹಿಂದಿ, ಮರಾಠಿ ಭಾಷೆಯಲ್ಲೇ ರ್ಚಚಿಸಿದ್ದಾರೆ. ಆಡಳಿತ ಭಾಷೆ ಕನ್ನಡವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆಂದೋಲನಕ್ಕೆ ನನ್ನ ಬೆಂಬಲ:ಕನ್ನಡ ಪರ ಆಂದೋಲಕ್ಕೆ ನನ್ನ ಬೆಂಬಲ ಇದೆ. ಆಂದೋಲನ ಹಿಂಸಾತ್ಮಕವಾಗದೇ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಆಂದೋಲನ ಸೂಕ್ತವಾಗಿ ಇರಬೇಕು. ಸರ್ಕಾರ ಪರಿಶೀಲಿಸಬೇಕು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಗತಿಯಲ್ಲಿ ಕ್ರಮ ವಹಿಸಬೇಕು. ಆಗ ಈ ರೀತಿಯ ಘಟನೆಗಳು ನಡೆಯುವುದಿಲ್ಲ. ಕನ್ನಡ ಅಗ್ರಸ್ಥಾನದಲ್ಲಿ ಇರಬೇಕೆಂದು ಕೇಳುವುದರಲ್ಲಿ ತಪ್ಪಿಲ್ಲ. ರಾಜ್ಯದಲ್ಲಿ ಕನ್ನಡ ಅಗ್ರಸ್ಥಾನದಲ್ಲೇ ಇರಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ನಮ್ಮ ಸರ್ಕಾರ ಕನ್ನಡದ ಪರವಾಗಿ ಎಲ್ಲ ರೀತಿಯ ತೀರ್ಮಾನ ತೆಗೆದುಕೊಳ್ಳುವ ಕೆಲಸವನ್ನು ಹಿಂದೆಯೂ ಮಾಡಿದೆ, ಈಗಲೂ ಬದ್ಧವಾಗಿದೆ. ಯಾರೇ ಪ್ರತಿಭಟನೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ. ಪ್ರತಿಭಟನೆ ಹೆಸರಲ್ಲಿ ಅಂಗಡಿ, ಶಾಪಿಂಗ್ ಮಾಲ್​ಗಳ ಮೇಲೆ ದಾಳಿ ಮಾಡಿ, ಸಾರ್ವಜನಿಕರ ಆಸ್ತಿ ಹಾನಿ ಮಾಡುವುದು ಸರಿಯಲ್ಲ.
| ಡಾ. ಜಿ.ಪರಮೇಶ್ವರ ಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
