|ಕೀರ್ತಿನಾರಾಯಣ ಸಿ.ಬೆಂಗಳೂರು
ಕಟ್ಟಡ ನಿರ್ಮಾಣ ಕಾಮಗಾರಿ ಸಾಮಗ್ರಿ, ದಿನಬಳಕೆ ವಸ್ತುಗಳು ಸೇರಿ ಭಾರಿ ಸರಕು ಸಾಮಗ್ರಿ ಸಾಗಿಸುವ ಲಾರಿ, ಟ್ರಾ್ಯಕ್ಟರ್ ಹಾಗೂ ಟ್ರಕ್​ಗಳಂಥ ವಾಹನಗಳಿಗೆ ಸಾಗಾಟ ಸಾಮರ್ಥ್ಯದ ’ಪರವಾನಗಿ’ ಕೊಡುವುದರಲ್ಲೂ ಕಳ್ಳಾಟ ಬೆಳಕಿಗೆ ಬಂದಿದೆ. ಅನುಮತಿ ಕೊಡುವ ಮುನ್ನ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸಬೇಕೆಂಬ ನಿಯಮವಿದ್ದರೂ ಉಪೇಕ್ಷಿಸುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್​ಟಿಒ), ಸಲ್ಲಿಕೆಯಾದ ನಕಲಿ ದಾಖಲಾತಿಗಳನ್ನೇ ಪರಿಗಣಿಸಿ ನೋಂದಣಿಗೆ ಒಪ್ಪಿಗೆಯ ಮುದ್ರೆಯೊತ್ತುತ್ತಿದ್ದಾರೆ.
ದೇಶದ ಬಹುತೇಕ ಕಂಪನಿಗಳ ಸರಕು-ಸಾಮಗ್ರಿಗಳನ್ನು ಆರ್ಟಿಕ್ಯುಲೇಟೆಡ್ (ಗೂಡ್ಸ್) ಲಾರಿ ಮತ್ತು ಟ್ರಕ್​ಗಳ ಮೂಲಕ ಸಾಗಿಸಲಾಗುತ್ತದೆ. ಸರಕು ಸಾಗಣೆ ವಾಹನಗಳ ಓವರ್​ಲೋಡ್ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂತಹ ವಾಹನಕ್ಕೆ ಇಂತಿಷ್ಟೇ ಭಾರ ತುಂಬಬೇಕು ಎಂಬ ನಿಯಮವನ್ನು ಜಾರಿಗೆ ತಂದಿದ್ದರೂ ಹೆಚ್ಚಿನ ಹಣ ಗಳಿಸಲು ಮನಬಂದಂತೆ ಲೋಡ್ ಮಾಡುವುದರಿಂದ ವಾಹನಗಳು ಪಲ್ಟಿಯಾಗುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇ.21 ರಿಂದ ಶೇ.28ರಷ್ಟು ಅಪಘಾತಗಳು ಸರಕು ಸಾಗಣೆಯ ಭಾರಿ ವಾಹನಗಳು ಎಂಬುದು ಗಮನಾರ್ಹ.
ಓವರ್​ಲೋಡ್​ನಿಂದ ಅಪಘಾತ ಸಂಭವಿಸಿದರೆ ಅದಕ್ಕೆ ಸಾರಿಗೆ ಇಲಾಖೆಗಳೇ ಜವಾಬ್ದಾರಿ ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಆದೇಶವಿದೆ. ಹೀಗಿದ್ದರೂ ಸಾಗಾಟ ಸಾಮರ್ಥ್ಯದ ಪರವಾನಗಿ ಕೊಡುವಾಗ ಆರ್​ಟಿಒ ಅಧಿಕಾರಿಗಳು ನಿಯಮಾವಳಿ ಪಾಲಿಸುತ್ತಿಲ್ಲ. ತಲಾ ವಾಹನಕ್ಕೆ 10 ರಿಂದ 20 ಸಾವಿರ ರೂ. ಲಂಚ ಪಡೆದು 45 ಟನ್ ಸರಕು ಸಾಗಿಸುವ ಸಾಮರ್ಥ್ಯವಿರುವ ವಾಹನಕ್ಕೆ 55 ಟನ್ ಸಾಗಿಸುವ ಸಾಮರ್ಥ್ಯವಿದೆ ಎಂದು ಅನುಮತಿ ಕೊಡುತ್ತಿರುವ ಆರೋಪವಿದೆ.
ಆರ್​ಟಿಒ ಅಧಿಕಾರಿಗಳ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 40 ರಿಂದ 50 ಸಾವಿರ ವಾಹನಗಳು ನಿಯಮಬಾಹಿರ ನೋಂದಣಿಯಾಗಿ ಓಡಾಡುತ್ತಿವೆ. ಸಾಮರ್ಥ್ಯವಿಲ್ಲದಿದ್ದರೂ ಬ್ರೇಕ್ ಇನ್​ಸ್ಪೆಕ್ಟರ್​ಗಳೇ ಹೆಚ್ಚಿನ ಸರಕು ಸಾಗಾಟಕ್ಕೆ ಅನುಮತಿ ಕೊಟ್ಟು ಓವರ್​ಲೋಡ್​ಗೆ ಅವಕಾಶ ಕಲ್ಪಿಸುತ್ತಿರುವ ಆಪಾದನೆ ಇದೆ.
ಬೆಂಗಳೂರಿನ ಕೋರಮಂಗಲ ಆರ್​ಟಿಒ (ಕೆಎ01), ಎಲೆಕ್ಟ್ರಾನಿಕ್ಸ್ ಸಿಟಿ ಆರ್​ಟಿಒ (ಕೆಎ51), ಇಂದಿರಾನಗರ ಆರ್​ಟಿಒ (ಕೆಎ03) ಸೇರಿ ರಾಜ್ಯದ ಕೆಲವು ಆರ್​ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಸರಕು ಸಾಗಾಟಕ್ಕೆ ನೋಂದಣಿ ಮಾಡಲಾಗಿದೆ. ಅದರಲ್ಲೂ ಕೋರಮಂಗಲ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿಯಲ್ಲಿ ಹೆಚ್ಚು ನೋಂದಣಿಯಾಗಿವೆ. ಬೆಂಗಳೂರು, ಮಧುಗಿರಿ ಮತ್ತು ಆಂಧ್ರಪ್ರದೇಶದ ಪಲಮನೇರು ಬಳಿ ಆರ್​ಟಿಒ ಅಧಿಕಾರಿಗಳು, ವಾಹನಗಳನ್ನು ಪರಿಶೀಲಿಸಿದಾಗ ಉತ್ಪಾದಕ ಕಂಪನಿ ಕೊಟ್ಟಿರುವ ದಾಖಲೆಗಳಲ್ಲಿ ಸಾಗಘಾಟ ಸಾಮರ್ಥ್ಯ ಒಂದಿದ್ದರೆ, ಆರ್​ಟಿಒ ಅಧಿಕಾರಿಗಳು ಕೊಟ್ಟಿರುವ ನೋಂದಣಿ ಪತ್ರದಲ್ಲಿ ಮತ್ತೊಂದಿರುವುದು ಗೊತ್ತಾಗಿದೆ. ಈ ವಾಹನಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಲು ಶಿಫಾರಸು ಮಾಡಿದ್ದಾರೆ.
ಲಾಂಗ್ ಕರ್ವ್​ನಲ್ಲಿ ಪಲ್ಟಿ ಜಾಸ್ತಿ:ಸಾಮರ್ಥ್ಯಕ್ಕಿಂತ ಲೋಡ್ ಹೆಚ್ಚಾದಾಗ ವಾಹನಗಳು ಚಾಲನೆ ವೇಳೆ ಚಾಲಕನ ನಿಯಂತ್ರಣ ತಪ್ಪುತ್ತವೆ. ಹೀಗಾಗಿಯೇ ಲಾಂಗ್ ಕರ್ವ್ (ದೀರ್ಘ ತಿರುವು) ಇರುವ ರಸ್ತೆಗಳಲ್ಲಿ ಇಂತಹ ವಾಹನಗಳು ಪಲ್ಟಿಯಾಗುವುದು ಸಾಮಾನ್ಯ. ಓವರ್​ಲೋಡ್​ನಿಂದ ಪ್ರತಿವರ್ಷ ಸಾವಿರಾರು ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಅದರಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಲೋಡ್ ಪ್ರಮಾಣ ಪರಿಷ್ಕರಿಸಿದ್ದ ಕೇಂದ್ರ ಸರ್ಕಾರ, ಸಾಮರ್ಥ್ಯಕ್ಕಿಂತ ಶೇ.5ರಷ್ಟು ಮಾತ್ರ ಹೆಚ್ಚು ತುಂಬಲು ಅವಕಾಶ ಕೊಟ್ಟಿದೆ.
ಆರ್ಟಿಕ್ಯುಲೇಟೆಡ್ ವಾಹನಗಳ ಸರಕು ಸಾಗಣೆ ಸಾಮರ್ಥ್ಯಕ್ಕಿಂತ ಹೆಚ್ಚು ಲೋಡ್ ತುಂಬುವಂತೆ ನಿಯಮಕ್ಕೆ ವಿರುದ್ಧವಾಗಿ ರಿಜಿಸ್ಟ್ರೇಷನ್ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಎಷ್ಟು ವಾಹನಗಳಿವೆ ಎಂಬುದರ ಬಗ್ಗೆ ನೋಂದಣಿ ಪ್ರಾಧಿಕಾರದಲ್ಲಿ ಮಾಹಿತಿ ಪಡೆದು, ಅಕ್ರಮ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
|ಸಿ. ಮಲ್ಲಿಕಾರ್ಜುನ್ಅಪರ ಸಾರಿಗೆ ಆಯುಕ್ತ (ಎನ್​ಫೋರ್ಸ್​ವೆುಂಟ್) ದಕ್ಷಿಣ ವಿಭಾಗ
ಸಿಕ್ಕಿಬಿದ್ದ 55,000 ಕೆಜಿ ಸ್ಟೀಲ್ ಸಾಗಾಟದ ಟ್ರಕ್:ಇತ್ತೀಚೆಗೆ ಮಂಗಳೂರಿನಿಂದ ಮಧುಗಿರಿ ಮಾರ್ಗವಾಗಿ ಹಿಂದೂಪುರಕ್ಕೆ ಹೋಗುತ್ತಿದ್ದ ಸ್ಟೀಲ್ ತುಂಬಿದ ಸೆಮಿ ಟ್ರೇಲರ್ ಟ್ರಕ್ (ಕೆಎ01-ಎಎಂ-4192) ಅನ್ನು ಮಧುಗಿರಿಯಲ್ಲಿ ಆರ್​ಟಿಒ ಅಧಿಕಾರಿಗಳು ತಡೆದು ಪರಿಶೀಲಿಸಿದ್ದರು. 55 ಸಾವಿರ ಕೆಜಿ ಸ್ಟೀಲ್ ಸಾಗಾಟ ಮಾಡಲಾಗುತ್ತಿತ್ತು. ದಾಖಲಾತಿಗಳಲ್ಲೂ 55 ಸಾವಿರ ಕೆಜಿ ಲೋಡ್​ಗೆ ಅನುಮತಿ ನೀಡಲಾಗಿತ್ತು. ಆದರೆ, ಅಷ್ಟು ಲೋಡ್ ತುಂಬುವ ಸಾಮರ್ಥ್ಯ ವಾಹನಕ್ಕೆ ಇಲ್ಲ ಎಂಬುದು ದೃಢವಾಗಿದೆ. ವಾಹನ ಜಪ್ತಿ ಮಾಡಿ, ಕೇಸ್ ದಾಖಲಿಸಿ, ದಾಖಲೆ ಒದಗಿಸುವಂತೆ ಮಾಲೀಕರಿಗೆ ಬ್ರೇಕ್ ಇನ್​ಸ್ಪೆಕ್ಟರ್ ನೋಟಿಸ್ ಜಾರಿ ಮಾಡಿದ್ದಾರೆ. ತನಿಖೆ ಮುಂದುವರಿಸಿದಾಗ ಕೆಎ-01-ಎಎಂ-4192 ಹಾಗೂ ಕೆಎ-01-ಎಎಂ-4194 ಸಂಖ್ಯೆಯ ಇನ್ನೂ ಎರಡು ವಾಹನಗಳ ಕಳ್ಳಾಟ ಬಯಲಾಗಿದೆ.
ರಾಜ್ಯದ 2 ವಾಹನ ಆಂಧ್ರದಲ್ಲಿ ಸೀಜ್:ಕಬ್ಬಿಣ ತುಂಬಿಕೊಂಡು ಹೊರಟಿದ್ದ ಕರ್ನಾಟಕದಲ್ಲಿ ನೋಂದಣಿಯಾದ ಕೆಎ-01-ಎಎಂ-1983 ಮತ್ತು ಕೆಎ-01-ಎಎಂ-1986 ಸಂಖ್ಯೆ ಎರಡು ಟ್ರಕ್​ಗಳನ್ನು ಆಂಧ್ರದ ಪಲಮನೇರಿನಲ್ಲಿ ಅಲ್ಲಿನ ಆರ್​ಟಿಒ ಇನ್​ಸ್ಪೆಕ್ಟರ್ ಮಧುಸೂದನ್ ಜಪ್ತಿ ಮಾಡಿದ್ದಾರೆ. 55 ಸಾವಿರ ಕೆಜಿ ತೂಕ ಸಾಗಾಟದ ಸಾಮರ್ಥ್ಯವಿರುವುದಾಗಿ ರಿಜಿಸ್ಟ್ರೇಷನ್ ಆಗಿದೆ. ಆದರೆ, ಟ್ರೇಲರ್ ಪರಿಶೀಲಿಸಿದಾಗಿ 44 ಸಾವಿರಕ್ಕಿಂತ ಕಡಿಮೆ ಸಾಮರ್ಥ್ಯವಿರುವುದು ಗೊತ್ತಾಗಿದೆ. ಎರಡೂ ವಾಹನ ಜಪ್ತಿ ಮಾಡಿ, ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ಆರ್ಟಿಕ್ಯುಲೇಟೆಡ್ ವಾಹನಗಳ ತಯಾರಿಕೆ ಕಂಪನಿಗಳೇ ಅದರ ಸಮಗ್ರ ಮಾಹಿತಿಯನ್ನು ವಾಹನ್-4ಗೆ ಅಪ್​ಲೋಡ್ ಮಾಡಿದರೆ ಇಂತಹ ಅಕ್ರಮಗಳು ನಡೆಯುವುದಿಲ್ಲ. ನಕಲಿ ದಾಖಲೆ ಸೃಷ್ಟಿಸಿ, ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಹೊರರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಇಲ್ಲೂ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.
|ಎಚ್. ರಾಜಣ್ಣಜ್ಞಾನಭಾರತಿ ಎಆರ್​ಟಿಒ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + fifteen =
Remember me
