ಬೆಂಗಳೂರು:ಮಳೆ ಅಭಾವ ರೈತರು, ಜನ-ಜಾನುವಾರುಗಳಿಗೆ ಹತ್ತಾರು ಸಮಸ್ಯೆಗಳನ್ನು ತಂದೊಡ್ಡಿ, ಸರ್ಕಾರವನ್ನು ಕಠಿಣ ಪರೀಕ್ಷೆಗೆ ಗುರಿಪಡಿಸಿದೆ. ಆದರೆ, ಅಕ್ರಮ ಮರಳು ದಂಧೆಕೋರರಿಗೆ ವರದಾನವಾಗಿದ್ದು, ಯಾವುದೇ ಅಂಜಿಕೆಯಿಲ್ಲದೆ ಭರ್ಜರಿ ಸುಗ್ಗಿ ಮಾಡುತ್ತಿದ್ದಾರೆ.
ನಾರಾಯಣಪುರ ಜಲಾಶಯದ ಕೆಳಭಾಗದಿಂದ ರಾಜ್ಯದ ಗಡಿಯಲ್ಲಿರುವ ತೆಲಂಗಾಣದ ಜುರಾಲಾ ಅಣೆಕಟ್ಟೆ ಮಾರ್ಗ ಮಧ್ಯೆ ಕೃಷ್ಣಾ ನದಿ ಭೋರ್ಗರೆಯುತ್ತಿಲ್ಲ! ಹಿಟಾಚಿ, ಜೆಸಿಬಿಗಳು ಕೃಷ್ಣೆಯ ಒಡಲು ಬಗೆದು ಮರಳು ರಾಶಿ ಹಾಕಿದರೆ, ಸಾಲುಗಟ್ಟಿ ಟಿಪ್ಪರ್, ಲಾರಿ, ಟ್ರಾ್ಯಕರ್​ಗಳು ತುಂಬಿಕೊಂಡು ಸಾಗುತ್ತಿವೆ. ಯಂತ್ರೋಪಕರಣಗಳ ಮೊರೆತ, ಟಿಪ್ಪರ್​ಗಳದ್ದೇ ಸದ್ದು. ಇವುಗಳ ಆರ್ಭಟಕ್ಕೆ ಮೊಸಳೆಗಳು ಸೇರಿ ಎಲ್ಲ ಜಲಚರಗಳು ಸುರಕ್ಷಿತ ಜಾಗ ಹುಡುಕಿಕೊಂಡು ಕಂದಕ, ತಗ್ಗು-ಗುಂಡಿಗಳನ್ನು ಹುಡುಕಬೇಕಾದ ದುರವಸ್ಥೆಗೆ ಸಿಲುಕಿವೆ. ಮರಳು ಬಗೆಯುವಿಕೆಯಿಂದ ನದಿ ಹರಿವು, ಸ್ವರೂಪವೇ ಬದಲಾಗುವ ಆತಂಕ ಸೃಷ್ಟಿಸಿದೆ. ನೀರು ಮಲಿನವಾಗಿ ಜನಾರೋಗ್ಯ, ಒಟ್ಟಾರೆ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಭೂ, ನೀರಾವರಿ ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ.
ಪ್ರಭಾವಿಗಳ ಶ್ರೀರಕ್ಷೆ:ಗೂಗಲ್, ಗುರ್ಜಾಪುರ ಬ್ಯಾರೇಜ್​ಗಳ ಆಸುಪಾಸಿನ ಸ್ವಲ್ಪ ಜಾಗ ಬಿಟ್ಟರೆ ನದಿ ಎರಡೂ ಬದಿ ಅತ್ತ ಯಾದಗಿರಿ, ಇತ್ತ ರಾಯಚೂರು ಜಿಲ್ಲೆ ಹಳ್ಳಿಗಳು ಕೃಷ್ಣೆಯ ಆರ್ತನಾದಕ್ಕೆ ಮೂಕಸಾಕ್ಷಿಯಾಗಿವೆ. ಅಕ್ರಮ ಮರಳು ಗಣಿಗಾರಿಕೆಗೆ ಪ್ರಭಾವಿಗಳ ಶ್ರೀರಕ್ಷೆ, ನದಿ ದಂಡೆಗೆ ಹೊಂದಿಕೊಂಡ ಹಳ್ಳಿಗಳ ಕೆಲವರಿಗೆ ಸಿಗುತ್ತಿರುವ ಪುಡಿಗಾಸು ಎಲ್ಲರ ಬಾಯಿ ಮುಚ್ಚಿಸಿದೆ. ಅಧಿಕಾರಿಗಳು ಆಗಾಗ್ಗೆ ಎಚ್ಚೆತ್ತು, ಒಂದಿಷ್ಟು ಚಾಟಿ ಬೀಸಿ ಬಳಿಕ ನಿದ್ದೆಗೆ ಜಾರುತ್ತಾರೆ. ಹೊಸ ಸರ್ಕಾರವೂ ಕಿವುಡಾಗಿದೆ.
ಕಾರ್ಯಾಚರಣೆ, ರಕ್ಷಣೆ:ನದಿ ನಡುವಲ್ಲೇ ಯಂತ್ರೋಪಕರಣ ಬಳಸಿ ಮರಳು ತೆಗೆಯಲಾಗುತ್ತಿದೆ. ರಾತೋರಾತ್ರಿ ಸಾಗಣೆ ನಡೆಯುತ್ತದೆ. ಇಡೀ ಕಾರ್ಯಾಚರಣೆಗೆ ಟಿಪ್ಪರ್ ಹಾಗೂ ಟ್ರಾ್ಯಕ್ಟರ್​ಗಳ ಹೆಡ್​ಲೈಟ್ ಬೆಳಕೇ ಆಧಾರ. ಆಸುಪಾಸು ಯಾವ ನರಪಿಳ್ಳೆಯೂ ನುಸುಳದಂತೆ ಬೌನ್ಸರ್​ಗಳು ರಕ್ಷಣೆಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಈ ದಂಧೆಯೊಂದಿಗೆ ಅಡ್ಜಸ್ಟ್ ಆದವರು ನಿರಾಳ. ಉಳಿದ ಜನರು ಬಾಯ್ಬಿಟ್ಟರೆ ಧಮ್ಕಿ ಹಾಕಿ, ಹಲ್ಲೆ ನಡೆಸಲಾಗುತ್ತಿದೆ. ಬಲಿಷ್ಠರು ಹಾಗೂ ರಾಜಕೀಯ ಪುಡಾರಿಗಳ ನೆರವಿಲ್ಲದೆ ಇಂಥ ಅಕ್ರಮ ಅಸಾಧ್ಯವೆಂಬುದು ಸ್ಥಳೀಯರ ಖಚಿತ ನುಡಿ.
ಅಕ್ರಮ ರಸ್ತೆ ತೆರವುಹೆದ್ದಾರಿಯಲ್ಲಿ ಸುತ್ತು ಬಳಸಿ ಸಾಗಿದರೆ ಹೆಚ್ಚು ಡೀಸೆಲ್ ಖರ್ಚು, ಸಮಯ ವ್ಯರ್ಥವಾಗುತ್ತದೆ ಎಂದು ಅರಿತ ದಂಧೆಕೋರರು ಇಲ್ಲಿಯೂ ಅಡ್ಡದಾರಿ ಹಿಡಿದಿದ್ದಾರೆ. ಕೃಷ್ಣಾ ನದಿ ಮಧ್ಯೆ ಸಿಮೆಂಟ್ ಕಾಂಕ್ರಿಟ್ ರಿಂಗ್, ಕೊಳವೆಗಳನ್ನು ಹಾಕಿ ಜೋಳದಹೆಡಗಿಯಿಂದ ಹೊಲಗಳಲ್ಲಿ ಹಾದು ನೇರ ಶಹಪುರ ಹೆದ್ದಾರಿಗೆ ಸಂಪರ್ಕ ರಸ್ತೆಯನ್ನು ಅಕ್ರಮವಾಗಿ ನಿರ್ವಿುಸಲು ಮುಂದಾಗಿದ್ದರು. ದೇವದುರ್ಗ ತಾಲೂಕಿನ ರೈತರು, ಗ್ರಾಮಸ್ಥರ ವಿರೋಧ ಹಾಗೂ ಹೋರಾಟದ ಎಚ್ಚರಿಕೆಯ ಪರಿಣಾಮ ಜೋಳದಹೆಡಗಿ ಭಾಗದ ರಸ್ತೆಯನ್ನು ತೆರವುಗೊಳಿಸಿದ್ದು, ಶಹಪುರ ಭಾಗದ ಅಕ್ರಮ ರಸ್ತೆ ನೋಡಲು ಹಾಗೆಯೇ ಸಿಗುತ್ತದೆ.
ಅಕ್ರಮದ ನೆಲೆಗಳುರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜೋಳದಹೆಡಗಿ, ಲಿಂಗದಹಳ್ಳಿ, ಬಾಗೂರು, ನಿಲುವಂಜಿ, ಪರ್ತಾಪೂರ, ಮ್ಯಾದರಗೋಳ, ರ್ಕಹಳ್ಳಿ, ಹಿರೇರಾಯಕುಂಪಿ, ಗೂಗಲ್. ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಗಡೆಸೂಗೂರು, ಬೆಂಡೆಬೊಂಬಳ್ಳಿ, ಕುಮನೂರು, ಗೊಂದೆನೂರು, ಚೆನ್ನೂರು, ಕೊಂಕಲ್, ಗೋನಲ್, ಕೊಂಗಂಡಿ, ಮದರಕಲ್ ಕೊಳ್ಳೂರು, ಮೊಮನಹಳ್ಳಿ, ಹುಲಕಲ್, ಹಿರೇತುಮಕೂರು, ಐಕೂರು, ಗೋಡಿಹಾಳ, ಕಂದಳ್ಳಿ, ರೊಟ್ನಡಗಿ ಮರಳು ಮಾಫಿಯಾ ಅಕ್ರಮ ಗಣಿಗಾರಿಕೆ ನೆಲೆಗಳಾಗಿವೆ.
ನಿಯಮ ಹೇಳುವುದೇನು ?* ಹಿಟಾಚಿ, ಜೆಸಿಬಿ ಮತ್ತಿತರ ಯಂತ್ರೋಪಕರಣ, ಟಿಪ್ಪರ್, ಟ್ರಾ್ಯಕ್ಟರ್​ಗಳನ್ನು ನದಿಗೆ ಇಳಿಸಬಾರದು.* ನದಿಯಲ್ಲಿ ಎರಡು ಅಡಿಗಿಂತ ಹೆಚ್ಚು ಆಳ ತೋಡಬಾರದು.* ನದಿಯಿಂದ 500 ಮೀಟರ್ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಕೂಲಿ ಕಾರ್ವಿುಕರಿಂದ ಮರಳು ತುಂಬಿಸಬೇಕು.* ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪರವಾನಗಿ ಪಡೆದಷ್ಟು ಮರಳು ಸಾಗಿಸಬೇಕು.* ನೀರು ಸೋರುವ ಮರಳು ಸಾಗಿಸುವಂತಿಲ್ಲ.
ಹಟ್ಟಿ ಕಂಪನಿ ನಿರುತ್ಸಾಹಅಕ್ರಮ ಮರಳು ಗಣಿಗಾರಿಕೆ, ನಿಯಮಗಳ ಉಲ್ಲಂಘನೆಯನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಗೆ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿದ್ದವು. ಈ ಕಾರಣಕ್ಕೆ ಹಟ್ಟಿ ಚಿನ್ನದ ಗಣಿ ಕಂಪನಿಯವರಿಗೆ ಮೇಲ್ವಿಚಾರಣೆ ಒಪ್ಪಿಸಲಾಗಿದೆ. ಆದರೆ, ಕಂಪನಿ ಅಧಿಕಾರಿಗಳು ಈ ಬ್ಲಾಕ್​ಗಳತ್ತ ಸುಳಿದಿಲ್ಲ, ಹೊಣೆಗಾರಿಕೆ ನಿಭಾಯಿಸಲು ನಿರುತ್ಸಾಹ ತೋರಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಯಾದಗಿರಿ ಜಿಲ್ಲೆಯ ಗೌಡೂರು, ಸೂಗೂರು ಮರಳು ಬ್ಲಾಕ್​ಗಳಲ್ಲಿ ಮರಳು ಗಣಿಗಾರಿಕೆಗೆ ಪರವಾನಗಿಯಿದೆ. ಅದೇ ರೀತಿ ದೇವದುರ್ಗ ತಾಲೂಕಿನ ಮೆದರಗೋಳ-2, ಹಿರೇರಾಯಕುಂಪಿ, ಹೇರುಂಡಿ, ಬಾಗೂರು, ಕೋಣಚಪ್ಲಿಯಲ್ಲಿ ತಲಾ ಒಂದು ಬ್ಲಾಕ್​ಗಳನ್ನು ಗುರುತಿಸಿ ಟೆಂಡರ್ ಕರೆದಿದ್ದು, ಮುಂದಿನ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಗೂಗಲ್​ನಿಂದ ತಿಂಥಣಿ ಬ್ರಿಜ್​ವರೆಗೆ 57 ಕಿ.ಮೀ. ವ್ಯಾಪ್ತಿಯಲ್ಲಿ 28 ಸ್ಟಾಕ್ ಯಾರ್ಡ್​ಗಳಿದ್ದರೆ, 18 ಸ್ಟಾಕ್​ಯಾರ್ಡ್​ಗಳು ಚಾಲ್ತಿಯಲ್ಲಿವೆ. ಪರವಾನಗಿ ಪಡೆದವರು ಇಲ್ಲಿಂದಲೇ ಮರಳು ಸಾಗಿಸುತ್ತಾರೆ ಎನ್ನುವುದು ಅಧಿಕಾರಿಗಳ ಸಬೂಬು.
ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇರೆ ಮೀರಿದೆ. ಸರ್ಕಾರ, ಸ್ಥಳೀಯ ಶಾಸಕರು ಬದಲಾದರೂ ಮರಳು ಮಾಫಿಯಾ ನಿಂತಿಲ್ಲ. ನೈಸರ್ಗಿಕ ಸಂಪತ್ತು, ಜಲಚರ, ಅಂತರ್ಜಲ ರಕ್ಷಣೆಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
| ಶಿವರಾಜ ನಾಯಕ, ಕೊತ್ತದೊಡ್ಡಿ
ರಾಜಾರೋಷ ಸಂಚಾರದೇವದುರ್ಗ, ವಡಿಗೇರಾ, ಸುರಪುರ ತಾಲೂಕುಗಳ ಹೆದ್ದಾರಿಯಲ್ಲಿ ಮರಳು ತುಂಬಿಕೊಂಡು ನಿತ್ಯ ತಡರಾತ್ರಿಯಿಂದ ಬೆಳಗ್ಗೆ 4ರವರೆಗೆ ಟಿಪ್ಪರ್​ಗಳು ರಾಜಾರೋಷವಾಗಿ ಸಂಚರಿಸುತ್ತವೆ. ದೇವದುರ್ಗ, ಶಹಪುರ, ಭೀಮರಾಯನಗುಡಿ ಬಳಿ ಚೆಕ್ ಪೋಸ್ಟ್​ಗಳ ಮುಂದೆಯೇ ಸಾಗುತ್ತವೆ. ಅಲ್ಲದೆ, ಹೆದ್ದಾರಿಯ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್​ಗಳಿವೆ ಎನ್ನುವಲ್ಲಿಗೆ ಅವುಗಳ ಕರ್ತವ್ಯ ಸೀಮಿತ.
ನಿತ್ಯ 2-3 ಕೋಟಿ ರೂ. ವಹಿವಾಟುಈ ದಂಧೆಯ ಜಾಲವು ನೇರವಾಗಿ ಹೈದರಾಬಾದ್, ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ, ಮೀರಜ್​ವರೆಗೆ ಚಾಚಿಕೊಂಡಿದೆ. ಆಸುಪಾಸಿನ ಸ್ಥಳಗಳಲ್ಲಿ 30 ಟನ್​ನ ಒಂದು ಟಿಪ್ಪರ್ ಉಸುಕಿಗೆ 55 ರಿಂದ 60 ಸಾವಿರ ರೂ, ಕಲಬುರಗಿ ಜಿಲ್ಲೆಯಲ್ಲಿ 80 ಸಾವಿರದಿಂದ ಒಂದು ಲಕ್ಷ ರೂ.ವರೆಗಿದೆ. ಬೇರೆ ರಾಜ್ಯಗಳಲ್ಲಿ ಒಂದೂವರೆ ಲಕ್ಷ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರತಿದಿನ 400 ರಿಂದ 500 ಟಿಪ್ಪರ್​ಗಳು ಓಡಾಡುತ್ತವೆ. ಟ್ರಾ್ಯಕ್ಟರ್​ಗಳ ಲೆಕ್ಕ ಬೇರೆ. ಪ್ರತಿ ಟಿಪ್ಪರ್​ಗೆ 35 ಟನ್, ಪ್ರತಿದಿನ 500 ಟ್ರಿಪ್​ನಂತೆ ಲೆಕ್ಕಹಾಕಿದರೆ 45 ರಿಂದ 50 ಸಾವಿರ ಟನ್ ಮರಳು ಬೇರೆಡೆ ಸಾಗಣೆಯಾಗುತ್ತದೆ. ವಹಿವಾಟು ಗಾತ್ರ ದಿನವೂ 2-3 ಕೋಟಿ ರೂ. ಅಂದ ಮೇಲೆ ಯಾರ ಕೈಗೆ ಎಷ್ಟು ಸೇರುತ್ತದೆ? ನಿಸರ್ಗದತ್ತವಾದ ಈ ಸಂಪತ್ತು ಕೊಳ್ಳೆ ಹೊಡೆಯುವುದಕ್ಕೆ ಹೇಗೆಲ್ಲ ಸಾಥ್ ಸಿಗುತ್ತದೆ ಎಂಬುದನ್ನು ಸುಲಭವಾಗಿ ಊಹಿಸಬಹುದು.
ಯಾದಗಿರಿ, ಶಹಪುರ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಲಾಗಿದೆ. ಸುರಪುರ ತಾಲೂಕಿನಲ್ಲಿ ಅನುಮತಿ ಪಡೆದವರು ಮರಳು ಎತ್ತುವಳಿ ಮಾಡಿ ಕಲಬುಗರಿ, ವಿಜಯಪುರಕ್ಕೆ ಸಾಗಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯಿಂದ ತೆಲಂಗಾಣ ಕಡೆಗೆ ಸಾಗಣೆಯಾಗುತ್ತಿಲ್ಲ. ರಾಯಚೂರು ಜಿಲ್ಲೆಯ ಕೃಷ್ಣಾ ನದಿ ತೀರದ ಮರಳು ಬ್ಲಾಕ್​ಗಳಿಂದ ಹೋಗುತ್ತಿರಬಹುದು.
| ಶರಣಬಸಪ್ಪ ದರ್ಶನಾಪುರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿರುವೆ. ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರ್ಕಾರದ ಮೇಲೆ ಒತ್ತಡ ತಂದಿರುವೆ. ತಾಲೂಕುಮಟ್ಟದ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ. ಹೀಗಾಗಿ ಖುದ್ದಾಗಿ ಮಧ್ಯರಾತ್ರಿ 2-3 ಕಡೆ ದಾಳಿ ಮಾಡಿ ಅಕ್ರಮ ತಡೆದಿದ್ದೇನೆ.
| ಕರೆಮ್ಮನಾಯಕ ದೇವದುರ್ಗ ಶಾಸಕಿ
ಇದಪ್ಪಾ ಅದೃಷ್ಟ ಅಂದ್ರೆ! 279 ರೂ. ಕೊಟ್ಟು ಬಿರಿಯಾನಿ ತಿಂದಿದ್ದಕ್ಕೆ 7 ಲಕ್ಷ ರೂ. ಮೌಲ್ಯದ ಕಾರು ಗಿಫ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 2 =
Remember me
