ಬೆಂಗಳೂರು:ಒಂಬತ್ತು ತಿಂಗಳು ಹೆತ್ತುಹೊತ್ತು ಸಾಕಿದ ಅಮ್ಮನನ್ನು ವೃದ್ಧಾಪ್ಯದಲ್ಲಿ ಸಲುಹಬೇಕಾದ ಪುತ್ರ, ಆಸ್ತಿ ವಿಚಾರಕ್ಕೆ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಊಟ ಕೊಡದೆ ಹಿಂಸಿಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.
ಲಗ್ಗೆರೆಯ ಮುನೇಶ್ವರ ಬಡಾವಣೆಯ ನಿವಾಸಿ 80 ವರ್ಷದ ವೃದ್ಧೆ ಮುನಿಯಮ್ಮ ಸಂತ್ರಸ್ತೆ. ಪುತ್ರ ವೆಂಕಟೇಶಗೌಡ ತನ್ನ ಪತ್ನಿಯ ಜತೆಗೂಡಿ ಆಸ್ತಿಗಾಗಿ ಹೆತ್ತತಾಯಿಯನ್ನು ಕೂಡಿ ಹಾಕಿದ್ದ. ಈ ವಿಚಾರ ತಿಳಿದ ಪುತ್ರಿಯರು ಪೊಲೀಸರನ್ನು ಕರೆದೊಯ್ದು ತಾಯಿಯನ್ನು ರಕ್ಷಿಸಿದ್ದಾರೆ.
ಸಂತ್ರಸ್ತೆ ಮುನಿಯಮ್ಮ ಕೊಟ್ಟ ದೂರಿನ ಅನ್ವಯ ಪುತ್ರ ವೆಂಕಟೇಶ್ ಗೌಡ, ಸೊಸೆ ಮಧುಮಾಲತಿ, ಮೊಮ್ಮಕ್ಕಳಾದ ಯಶಸ್ವಿನಿ, ತೇಜಸ್ವಿನಿ ಹಾಗೂ ರಾಮ ಮತ್ತು ಲಕ್ಷ್ಮಣ ಎಂಬುವರ ವಿರುದ್ಧ ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ?:ಮುನಿಯಮ್ಮ ಪತಿ ಜತೆ 40 ವರ್ಷಗಳಿಂದ ಲಗ್ಗೆರೆಯ ಮುನೇಶ್ವರ ಲೇಔಟ್​ನಲ್ಲಿ ವಾಸವಿದ್ದರು. 8 ವರ್ಷದ ಹಿಂದೆ ಪತಿ ಚಿಕ್ಕಹನುಮಯ್ಯ ಮೃತಪಟ್ಟಿದ್ದಾರೆ. ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದು ಎಲ್ಲರಿಗೂ ಮದುವೆ ಮಾಡಿಕೊಟ್ಟಿದ್ದಾರೆ. 4 ಮಹಡಿಯ ಕಟ್ಟಡ ನಿರ್ವಿುಸಿದ್ದು, ಅದರಲ್ಲಿನ 16 ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಅದೇ ಕಟ್ಟಡದ ಒಂದು ಮನೆಯಲ್ಲಿ ಹಿರಿಯ ಪುತ್ರ ರೋಹಿತ್ ಕುಟುಂಬದ ಜತೆ ಮುನಿಯಮ್ಮ ವಾಸವಿದ್ದರು. ಪ್ರತಿ ತಿಂಗಳು ಬರುತ್ತಿದ್ದ 60 ಸಾವಿರ ರೂ. ಬಾಡಿಗೆ ಹಣವನ್ನು ಆಕೆ ತೆಗೆದುಕೊಳ್ಳುತ್ತಿದ್ದರು.
ಪತಿ ಚಿಕ್ಕಹನುಮಯ್ಯ ಬದುಕಿದ್ದಾಗ ಲಗ್ಗೆರೆಯಲ್ಲಿರುವ ಮನೆಯ ಅರ್ಧಭಾಗವನ್ನು ಹಿರಿಯ ಪುತ್ರ ರೋಹಿತ್ ಹಾಗೂ ಪುತ್ರಿಯರಾದ ಹನುಮಮ್ಮ, ಭಾಗ್ಯ, ಶಾಂತಿ ಅವರಿಗೆ ಬರೆದುಕೊಟ್ಟಿದ್ದರು. ಮನೆಯ ಇನ್ನರ್ಧ ಭಾಗದ ಆಸ್ತಿಯಲ್ಲಿ ಸಾಲ ತೀರಿಸುವಂತೆ ಸೂಚಿಸಿದ್ದರು. ಕಿರಿಯ ಪುತ್ರ ವೆಂಕಟೇಶ್ ಗೌಡಗೆ ಹೆಸರಘಟ್ಟದ ತಿಮ್ಮೇನಪಾಳ್ಯದಲ್ಲಿರುವ ನಿವೇಶನವನ್ನು ಕೊಡಲಾಗಿತ್ತು.
ಪತ್ನಿ, ಬಾಮೈದರಿಂದ ಹಲ್ಲೆ!:ವೆಂಕಟೇಶ್ ಗೌಡ 5 ತಿಂಗಳಿಂದ ಮುನಿಯಮ್ಮನನ್ನು ಮನೆಯಲ್ಲಿಯೇ ಕೂಡಿಹಾಕಿದ್ದಾನೆ. ಹೊರ ಹೋಗಲು ಮತ್ತು ಸಂಬಂಧಿಕರ ಭೇಟಿಗೂ ಬಿಟ್ಟಿಲ್ಲ.
ಅಲ್ಲದೆ, ಸರಿಯಾದ ಸಮಯಕ್ಕೆ ಊಟ, ತಿಂಡಿಯನ್ನೂ ಕೊಟ್ಟಿಲ್ಲ. ಕೋರ್ಟ್​ಗೆ ಹೋಗಿ ಸಾಕ್ಷ್ಯ ಹೇಳದಂತೆ ಒತ್ತಾಯಿಸಿ ಸೊಸೆ ಮಧುಮಾಲತಿ ಹಾಗೂ ಆಕೆಯ ಸಹೋದರರಾದ ರಾಮ
ಮತ್ತು ಲಕ್ಷ್ಮಣ ಎಂಬುವರು ಬಾಯಿಗೆ ಬಟ್ಟೆ ತುರುಕಿ ಪೈಪ್​ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೃದ್ಧೆ ಮುನಿಯಮ್ಮ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ.
ತಂದೆ ಸತ್ತ ಬಳಿಕ ಖ್ಯಾತೆ!
ತಂದೆ ಚಿಕ್ಕಹನುಮಯ್ಯ ಮೃತಪಟ್ಟ ಬಳಿಕ ವೆಂಕಟೇಶ್ ಗೌಡ ತನ್ನ ಕುಟುಂಬದ ಜತೆ ಲಗ್ಗೆರೆ ಮನೆಗೆ ಬಂದು ವಾಸವಿದ್ದ. ಈ ವೇಳೆ ಸಹೋದರ ರೋಹಿತ್ ಜತೆ ಜಗಳ ಮಾಡಿ, ಆತನ ಕುಟುಂಬವನ್ನು ಅಲ್ಲಿಂದ ಕಳುಹಿಸಿ ತಾಯಿಯನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದ. 2014ರಲ್ಲಿ ಜಗಳ ಮಾಡಿಕೊಂಡಿದ್ದರು. ಬಳಿಕ ತಾಯಿ ಮುನಿಯಮ್ಮ, ಸಹೋದರ ರೋಹಿತ್, ಸಹೋದರಿಯರಾದ ಹನುಮಮ್ಮ ಮತ್ತು ಭಾಗ್ಯ ವಿರುದ್ಧ ವೆಂಕಟೇಶ್ ಗೌಡ ಪತ್ನಿ ಮಧು ಮಾಲತಿ ದೂರು ದಾಖಲಿಸಿದ್ದರು. ಈ ಕುರಿತು ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿತ್ತು.
ಪೊಲೀಸರು ಬಾಗಿಲು ತೆಗೆಸಿದಾಗ ಬೆಳಕಿಗೆ
ಫೆ.26ರಂದು ವೆಂಕಟೇಶ್ ಗೌಡ ಕೋರ್ಟ್​ಗೆ ಹಾಜರಾದಾಗ ತಾಯಿ ಮನೆಯಲ್ಲಿ ಇಲ್ಲ ಎಂದು ಹೇಳಿಕೆ ನೀಡಿದ್ದ. ಬಳಿಕ ಫೆ.29ರ ಮಧ್ಯಾಹ್ನ 1.30 ಗಂಟೆಗೆ ಮುನಿಯಮ್ಮನ ಪುತ್ರಿಯರು ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಹೋಗಿ ಕೊಠಡಿ ಬಾಗಿಲು ತೆಗೆಸಿದಾಗ ಮುನಿಯಮ್ಮ ಅವರನ್ನು ಕೊಠಡಿಯಲ್ಲಿ ಕೂಡಿಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಆಕೆ ಕೊಟ್ಟ ಹೇಳಿಕೆ ಆಧರಿಸಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 18 =
Remember me
