ಕೋಲಾರ:ರಾಜ್ಯದಲ್ಲಿ 62 ಲಕ್ಷಕ್ಕೂ ಅಧಿಕ ಹಿಡುವಳಿದಾರ ರೈತರಿದ್ದು ಇವರಲ್ಲಿ 29 ಲಕ್ಷ ರೈತರು ತಮ್ಮ ಜಮೀನುಗಳ ಮೇಲೆ ಸಾರ್ವಭೌಮತ್ವ ಸಾಧಿಸಲು ಹಲವಾರು ವರ್ಷಗಳಿಂದ ಪಿ ನಂಬರ್ (ಪೈಕಿ ಪಹಣಿ) ಸಮಸ್ಯೆ ಎದುರಿಸುತ್ತಿದ್ದಾರೆ.
ಪೈಕಿ ಪಹಣಿ ಎಂದರೆ, ಗಣಕೀಕರಣದ ಪೂರ್ವದಲ್ಲಿ ಪಹಣಿಗಳನ್ನು ಗ್ರಾಮ ಲೆಕ್ಕಿಗರು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಹಕ್ಕುದಾರರಿಗೆ ಪ್ರತ್ಯೇಕ ಪಹಣಿಗಳನ್ನು ಆಕಾರಬಂದ್ ದುರಸ್ತಿಯಾಗದೇ ಬರೆದಿಡುತ್ತಿದ್ದರು. ಇದರಿಂದಾಗಿ ರೈತರು ಈಗ ಪಿ ನಂಬರ್​ನಿಂದ ಹೊರ ಬರಲಾಗದೆ ತೊಂದರೆ ಅನುಭವಿಸುವಂತಾಗಿದೆ.
ಕೆಲ ಸಂದರ್ಭಗಳಲ್ಲಿ ಭೂ ಮಂಜೂರಾತಿ, ಭೂ ನ್ಯಾಯಮಂಡಳಿ ತೀರ್ಪಿನ ಆದೇಶಗಳಂತೆ ಪ್ರತಿ ಮಂಜೂರಾತಿ ಆದೇಶಕ್ಕೂ ಪ್ರತ್ಯೇಕ ಪಹಣಿಗಳನ್ನು ಬರೆದಿರುವುದರಿಂದ ರೈತರು ಭೂಮಿ ಅಭಿವೃದ್ಧಿಪಡಿಸಲಾಗದೆ, ಅನಿವಾರ್ಯವಾದಾಗ ಮಾರಾಟವನ್ನೂ ಮಾಡಲಾಗದೆ, ಅವುಗಳ ಮೇಲೆ ಸಾಲವನ್ನೂ ಪಡೆಯಲಾಗದೆ ವಂಚಿತರಾಗುತ್ತಿದ್ದಾರೆ.
ಅಲ್ಲದೆ, ಗ್ರಾಮ ಲೆಕ್ಕಿಗರೇ ಪಹಣಿಗಳಲ್ಲಿ ್ಲ ಸರ್ವೆ ನಂಬರ್​ಗಳನ್ನು ನಮೂದಿಸಿದ್ದು, ಆಕಾರಬಂದ್​ನಲ್ಲಿ ಸರ್ವೆ ನಂಬರ್​ಗಳು ದಾಖಲಾಗದೆ ಹಕ್ಕುದಾರರಿಗೆ ಪ್ರತ್ಯೇಕ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪಹಣಿಗಳನ್ನು ಆಧರಿಸಿ ಕ್ರಯ, ವಿಕ್ರಯ, ವಿಭಾಗಗಳ ಮುಖಾಂತರ ಪಿ ನಂಬರ್​ನಿಂದ ಮುಕ್ತರಾಗಿ ಪೋಡಿ ಮೂಲಕ ಪಹಣಿ ಪಡೆಯಲು ರೈತರು ಹೋರಾಟ ಮಾಡುವಂತಾಗಿದೆ.
ಭೂಗಳ್ಳರ ಮೇಲಾಟ: ಬಹುತೇಕ ಜಿಲ್ಲೆಗಳಲ್ಲಿ ಪೋಡಿ ಮಾಡಿ ಪಿ ನಂಬರ್ ತೆಗೆಯುವುದಕ್ಕೆ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ಭೂಗಳ್ಳರ ಮೇಲಾಟ ಹೆಚ್ಚಾಗುತ್ತಿದೆ. ಇಂಥವರಿಂದ ರೈತರು ತಮ್ಮ ಸ್ವತ್ತು ಉಳಿಸಿಕೊಳ್ಳುವುದು ತಬರನ ಕಥೆಯಂತಾಗಿದೆ. ಪಿ ನಂಬರ್ ಸಮಸ್ಯೆ ಹೊಸದೇನಲ್ಲ. ಅನೇಕ ವರ್ಷಗಳಿಂದ ರೈತರು ಇದನ್ನು ಅನುಭವಿಸುತ್ತಿದ್ದಾರೆ. ಆದರೂ ಪರಿಹಾರ ಸಿಕ್ಕಿಲ್ಲ. ಇದನ್ನೆಲ್ಲ ಗಮನಿಸಿ, ರೈತರ ಭೂಮಿಯನ್ನು ಕಬಳಿಸುವ ಗಿರಾಕಿಗಳು ಹೆಚ್ಚಾಗಿದ್ದಾರೆ. ಈ ಸಮಸ್ಯೆ ಇನ್ನೂ ಬಗೆಹರಿಯದಿರುವುದರಿಂದ ರೈತರಿಗೆ ಮಾತ್ರವಲ್ಲ, ಸರ್ಕಾರಕ್ಕೂ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
ಸರ್ಕಾರಕ್ಕೆ ಬೇಕಿದೆ ಇಚ್ಛಾಶಕ್ತಿ: ಸರ್ಕಾರ ಒಂದು ಹೋಬಳಿಗೆ ಒಂದು ಗ್ರಾಮವನ್ನು ಆಯ್ಕೆ ಮಾಡಿ ಕೊಂಡು ಪೋಡಿ ಆಂದೋಲನ ಮಾಡಿದರೆ ಸಮಸ್ಯೆ ಬಗೆಹರಿಸಲು ಅನೇಕ ವರ್ಷ ಹಿಡಿಯುತ್ತದೆ. ಇದರ ಬದಲು ರೈತರ ಜಮೀನುಗಳನ್ನು ಪಾರದರ್ಶಕವಾಗಿ ಒಗ್ಗೂಡಿಸಿ ್ಲ ಸರ್ವೆ ಮಾಡಿದರೆ ಪಹಣಿ ವಿತರಣೆಗೆ ಸಹಾಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಸರ್ಕಾರ ಪಿ ನಂಬರ್ ಸಮಸ್ಯೆ ನಿವಾರಿಸಲು ಇಚ್ಛಾಶಕ್ತಿ ತೋರಬೇಕಾಗಿದೆ. ಕಂದಾಯ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಪೋಡಿ ಆಂದೋಲನ ಚುರುಕುಗೊಳಿಸಬೇಕಾಗಿದೆ. ಮೊದಲ 6 ತಿಂಗಳಲ್ಲಿ ಸಮಸ್ಯೆ ಇಲ್ಲದ ಅರ್ಜಿಗಳನ್ನು ವಿಲೇವಾರಿ ಮಾಡಲು ಗುರಿ ನಿಗದಿಪಡಿಸಿಕೊಂಡು ರೈತರಿಗೆ ಆನ್​ಲೈನ್ ಮೂಲಕ ಭೂದಾಖಲೆ ಬದಗಿಸಲು ಕ್ರಮ ಕೈಗೊಳ್ಳಬೇಕಿದೆ. ಭೂ ವ್ಯಾಜ್ಯಗಳನ್ನು ಒಳಗೊಂಡ ಪ್ರಕರಣಗಳನ್ನು ಇನ್ನುಳಿದ 6 ತಿಂಗಳಲ್ಲಿ ಕಾನೂನಾತ್ಮಕವಾಗಿ ಇತ್ಯರ್ಥಪಡಿಸಲು ಬದ್ಧತೆ ತೋರಬೇಕಾಗಿದೆ. ಈ ರೀತಿ ನಡೆದರೆ ಒಂದು ವರ್ಷದೊಳಗೆ ರಾಜ್ಯದ 29 ಲಕ್ಷ ಹಿಡುವಳಿದಾರರಿಗೆ ಸ್ಪಷ್ಟ ಭೂ ದಾಖಲೆ ಒದಗಿಸುವುದು ಕಷ್ಟವಾಗುವುದಿಲ್ಲ.
ಸರ್ವೆಯರ್ ಸಂಖ್ಯೆ ಕಡಿಮೆ
ಕಂದಾಯ ಇಲಾಖೆಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಸರ್ವೆಯರ್​ಗಳ ಸಂಖ್ಯೆ ತೀರಾ ಕಡಿಮೆ. ಇವರನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಪೋಡಿ ಆಂದೋಲನ ಸಮರ್ಪಕವಾಗಿ ನಡೆಸಲು ಆಗುತ್ತಿಲ್ಲ. ಸರ್ಕಾರ ಪಿ ನಂಬರ್ ಸಮಸ್ಯೆ ನಿವಾರಣೆಗಾಗಿಯೇ ಪ್ರತ್ಯೇಕವಾಗಿ ಸಿಬ್ಬಂದಿ ನೇಮಿಸಬೇಕಾಗಿದೆ. ಈ ಸಮಸ್ಯೆ ಬಗೆಹರಿಸಲು ಈ ಸಾಲಿನ ರಾಜ್ಯ ಬಜೆಟ್​ನಲ್ಲಿ ಗಮನ ಹರಿಸಬಹುದೆಂಬ ನಿರೀಕ್ಷೆ ಹಲವರದಾಗಿತ್ತು.
ಆದರೆ ಈ ದಿಸೆಯಲ್ಲಿ ಬಜೆಟ್ ನಿರಾಸೆಯನ್ನುಂಟು ಮಾಡಿದೆ. ಪಿ ನಂಬರ್ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಅಧಿಕಾರ ನೀಡಿದ್ದಾರಾದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಭೂದಾಖಲೆಗಳನ್ನು ಆನ್​ಲೈನ್ ಮೂಲಕ ಪಡೆಯುವ ವ್ಯವಸ್ಥೆ ಕೂಡಲೇ ಜಾರಿಗೆ ತರಬೇಕಿದೆ. ಸಮರೋಪಾದಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಿಬ್ಬಂದಿ ಹಾಗೂ ಅನುದಾನವನ್ನು ಸರ್ಕಾರ ಒದಗಿಸಬೇಕಿದೆ.
ಪೋಡಿ ಪರಿಹಾರಕ್ಕೆ ಅಧಿಕಾರಿಗಳ ಗ್ರಾಮ ಭೇಟಿ
ಬೆಂಗಳೂರು:ಪೋಡಿ ಸೇರಿ ಜನರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್​ಗಳು ಒಂದು ಗ್ರಾಮಕ್ಕೆ ಭೇಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಬೆಳ್ಳಿ ಪ್ರಕಾಶ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ರಾಜ್ಯದಲ್ಲಿ ಪೋಡಿಮುಕ್ತ ಗ್ರಾಮ ಅಭಿಯಾನದ ವೇಗ ಹೆಚ್ಚಿಸಲಾಗುವುದು.
ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 315 ಗ್ರಾಮಗಳಿದ್ದು, 16 ಮಂದಿ ಸರ್ಕಾರಿ ಭೂಮಾಪಕರು ಹಾಗೂ 11 ಮಂದಿ ಪರವಾನಗಿ ಪಡೆದ ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 86 ಗ್ರಾಮಗಳನ್ನು ಅಳತೆಗೆ ಆಯ್ಕೆ ಮಾಡಿಕೊಂಡಿದ್ದು, 82 ಗ್ರಾಮಗಳಲ್ಲಿ ಅಳತೆ ಪೂರ್ಣಗೊಳಿಸಲಾಗಿದೆ. 72 ಗ್ರಾಮಗಳಲ್ಲಿ ದುರಸ್ತಿ ಪೂರ್ಣವಾಗಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್​ನ ರಮೇಶ್​ಕುಮಾರ್, ಮಾರ್ಗಸೂಚಿಯಲ್ಲಿ 10 ನಿಬಂಧನೆಗಳಿವೆ. 1ರಿಂದ 5ಕ್ಕೆ ಸೀಮಿತಗೊಳಿಸಿದರೆ ಪೋಡಿ ಪ್ರಕರಣ ಬಗೆಹರಿಯುತ್ತದೆ ಎಂದರು. ಜೆಡಿಎಸ್​ನ ಎ.ಟಿ.ರಾಮಸ್ವಾಮಿ ಮಾತನಾಡಿ, ಪೋಡಿ ವಿಚಾರದಲ್ಲಿ ನಿರಂತರ ಶೋಷಣೆಯಾಗುತ್ತಿದೆ.
ನಿಬಂಧನೆಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್​ನ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಡಾ.ರಂಗನಾಥ್, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮತ್ತಿತರರು ಮಾತನಾಡಿ, ಭೂ ಸರ್ವೆ ಕಾರ್ಯದ ಸಮಸ್ಯೆಗಳನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಮೀನುಗಳ ಸರ್ವೆ ದೊಡ್ಡ ಕಗ್ಗಂಟಾಗಿದೆ. ಸರ್ವೆ ನಂಬರ್​ವೊಂದರಲ್ಲಿ 100 ಎಕರೆ ಜಮೀನಿದ್ದರೆ 150 ಎಕರೆಯಷ್ಟು ಮಂಜೂರಾಗಿರುತ್ತದೆ. ಇಂತಹ ಪ್ರಕರಣಗಳನ್ನು ಬೇಧಿಸಬೇಕಾಗಿದೆ. ತಹಸೀಲ್ದಾರ್​ರು ನಿವೃತ್ತಿ ನಂತರವೂ ಸಹಿ ಮಾಡಿ ಮಂಜೂರಾತಿ ನೀಡಿರುವ ಪ್ರಕರಣಗಳಿವೆ. ಇಂತಹ ಪ್ರಕರಣಗಳಿಂದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದರು.
ಪಿ ನಂಬರ್ ಸಮಸ್ಯೆ ಬಗೆಹರಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದುಂಡು ಮೇಜಿನ ಸಭೆಗಳನ್ನು ನಡೆಸಿದ್ದೇವೆ. ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಕೆಲ ಶಾಸಕರಲ್ಲಿ ಮನವಿ ಮಾಡಿದ್ದೆವು. ಬಜೆಟ್​ನಲ್ಲಿ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಹುಸಿಯಾಗಿದೆ. ಈಗಲೂ ಕಾಲ ಮಿಂಚಿಲ್ಲ. ಮಾರ್ಚ್ ತಿಂಗಳೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಏಪ್ರಿಲ್ ತಿಂಗಳಲ್ಲಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.
| ಜಿ.ಸಿ. ಬಯ್ಯಾರೆಡ್ಡಿ ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ, ಬೆಂಗಳೂರು
| ಪಾ.ಶ್ರೀ. ಅನಂತರಾಮ್ ಕೋಲಾರ
VIDEO| ಬಿಸಿಲೂರು ಕಲಬುರಗಿಯಲ್ಲಿ ನಸುಕಿನಲ್ಲಿ ಸುರಿದ ಮಳೆ: ವರ್ಷಧಾರೆಗೆ ತಂಪಾದ ಭೂಮಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − nine =
Remember me
