|ಮೃತ್ಯುಂಜಯ ಕಪಗಲ್ಬೆಂಗಳೂರು
ಒಂದೆಡೆ ಮಳೆ ಆಘಾತ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಬೇಸಿಗೆ ಹಂಗಾಮಿಗೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆದ ಅನ್ನದಾತರು ಕಂಗಾಲಾಗಿದ್ದಾರೆ. ನೀರಾವರಿ ಪ್ರದೇಶದ ಕ್ವಿಂಟಾಲ್ ಭತ್ತ ಬೆಳೆಯಲು 2,000 ರೂ. ಖರ್ಚಾಗಿದ್ದರೆ, ಮಳೆಯಾಶ್ರಿತ ಪ್ರದೇಶದ ವೆಚ್ಚ ಸರಾಸರಿ 3,000 ರೂ. ಆಗಿದೆ. ಆದರೆ, ಮಾರುಕಟ್ಟೆಯಲ್ಲಿ ಆರ್​ಎನ್​ಆರ್ ಹೊಸತಳಿ ಹೊರತುಪಡಿಸಿ ಉಳಿದ ಭತ್ತಕ್ಕೆ 1,300 ರಿಂದ 1,500 ರೂ. ಇದೆ. ಲಾಭವಿರಲಿ, ಸುರಿದ ಬಂಡವಾಳವೂ ವಾಪಸ್ ಬಾರದೆ ಸಂಕಷ್ಟಕ್ಕೆ ರೈತರು ಸಿಲುಕಿದ್ದು, ನೆರವಿಗೆ ಸರ್ಕಾರ ಧಾವಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಯೋಜನೆ ಪ್ರಕಾರ ಗ್ರೇಡ್ ಎ ಭತ್ತಕ್ಕೆ ಕ್ವಿಂಟಾಲ್ ಗೆ 1960 ರೂ., ಸಾಮಾನ್ಯ 1,940 ರೂ. ಇದೆ. ಎಂಎಸ್​ಪಿಗಿಂತಲೂ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ನಿಯಮ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಸರ್ಕಾರದತ್ತ ಮುಖ ಮಾಡಿದೆ.
ಸಿಕ್ಕಷ್ಟು ಬೆಲೆಗೆ ಮಾರಾಟ:ಮಳೆ, ಪ್ರತಿಕೂಲ ಹವಾಮಾನದಿಂದ ಕೈಗೆ ಬಂದು ಫಸಲು ಹಾಳಾಗುತ್ತದೆ. ಕಳಪೆ ಗುಣಮಟ್ಟದ ಭತ್ತ ಖರೀದಿಗೆ ಯಾರೂ ಮುಂದೆ ಬರುವುದಿಲ್ಲ ಎಂಬ ಭೀತಿಗೆ ಒಳಗಾದ ನೂರಾರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಶೇಖರಿಸಿಡುವ ವ್ಯವಸ್ಥೆ, ಸಾಲ ಇನ್ನಿತರ ವೆಚ್ಚಗಳನ್ನು ಭರಿಸಬೇಕಾದ ಅನಿವಾರ್ಯತೆ ಇತ್ಯಾದಿ ಕಾರಣಗಳು ಮಾರಾಟದ ಧಾವಂತಕ್ಕೆ ಸೇರಿಕೊಂಡಿವೆ.
ಉಪಸಮಿತಿ ಸಭೆ ಅನುಮಾನ:ಬೆಂಬಲ ಬೆಲೆ ಖರೀದಿ ಭವಿಷ್ಯ ನಿರ್ಧರಿಸುವ ಸಚಿವ ಸಂಪುಟದ ಉಪಸಮಿತಿ ಸಭೆ ಸೇರುವುದು. ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ನಿಗದಿಪಡಿಸಿ, ರಾಜ್ಯದ ಕೋರಿಕೆಯಂತೆ ಖರೀದಿ ಪ್ರಮಾಣ ಹಾಗೂ ಅವಧಿಗೆ ಅನುಮೋದನೆ ಕೊಟ್ಟಾಗಿದ್ದು, ಗಡುವು ಮುಗಿದಿದೆ. ಕೇಂದ್ರ ಸರ್ಕಾರ ಮುಂದಿನ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಪ್ರಕಟಿಸುವ ದಿನಗಳು ಹತ್ತಿರವಾಗಿವೆ. ನಂತರ ರಾಜ್ಯದ ಸಚಿವ ಸಂಪುಟದ ಉಪಸಮಿತಿ ಸಭೆ ಸೇರಲಿದ್ದು, ಸದ್ಯ ಸಭೆ ಸೇರುವ ಲಕ್ಷಣಗಳಿಲ್ಲ.
ದರ ಏರಿಕೆ ವರವೇ ಶಾಪ!:ಕಳೆದ ಮುಂಗಾರು ಹಂಗಾಮಿಗೆ ಸಕಾಲದಲ್ಲಿ ಬೆಂಬಲ ಬೆಲೆ ಪ್ರಕಟಿಸಿ, ಖರೀದಿ ಕೇಂದ್ರ ತೆರೆಯುವ ಪೂರ್ವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಒಟ್ಟು ಐದು ಲಕ್ಷ ಟನ್ ಭತ್ತ ಖರೀದಿಗೆ ತೀರ್ವನಿಸಿ ಮಾರ್ಚ್ 31ರ ತನಕ ಸರ್ಕಾರ ಕಾಲಮಿತಿ ವಿಧಿಸಿತ್ತು. ಭತ್ತದ ಕಟಾವು ಪೂರ್ತಿ ಮುಗಿಯುವ ಮುನ್ನ ಸರ್ಕಾರದ ಮಧ್ಯೆ ಪ್ರವೇಶದಿಂದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 100 ರೂ. ಏರಿಕೆ ಕಂಡು ರೈತರಿಗೆ ವರದಾನವಾಯಿತು. ತುಂಗಾ, ಭದ್ರಾ, ತುಂಗಭದ್ರಾ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಸೋನಾಮಸೂರಿ, ಆರ್​ಎನ್​ಆರ್ ನ್ಯೂನಂತಹ ಉತ್ತಮ ದರ್ಜೆ ಭತ್ತ ಬೆಳೆಯುತ್ತಿದ್ದು, ಸರ್ಕಾರದ ಪರಿಭಾಷೆಯಲ್ಲಿ ಈ ಭತ್ತ ಸಾಮಾನ್ಯ ದರ್ಜೆಯದು. ಬೆಂಬಲ ಬೆಲೆಗಿಂತ ಹೆಚ್ಚಿನ ದರ ಮಾರುಕಟ್ಟೆಯಲ್ಲಿ ಸಿಕ್ಕಿತು. ಬಿಗಿ ಮಾನದಂಡಗಳ ಕಾರಣ ಖರೀದಿ ಕೇಂದ್ರಗಳತ್ತ ರೈತರು ಸುಳಿಯಲಿಲ್ಲ. ನಿಗದಿತ ಗಡುವಿನಲ್ಲಿ ಕೇವಲ 2.50 ಲಕ್ಷ ಟನ್ ಭತ್ತ ಖರೀದಿಸಲು ಸರ್ಕಾರ ಶಕ್ತವಾಗಿದ್ದು, ದಕ್ಷಿಣ ಕರ್ನಾಟಕದ ರೈತರು ಬೆಳೆದ ಭತ್ತದ್ದೇ ಸಿಂಹಪಾಲು. ಗುರಿ ಮುಟ್ಟದಿರುವುದು ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆದ ರೈತರಿಗೆ ಶಾಪವಾಗಿ ಪರಿಣಮಿಸಿದೆ.
ಬೆಂಬಲ ಬೆಲೆಗೆ ಭತ್ತ ಖರೀದಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಲಾಗು ವುದು. ಎಲ್ಲ ರಾಜ್ಯಗಳಿಗೆ ಒಂದೇ ಕಾನೂನು, ಅದರಂತೆಯೇ ಕರ್ನಾಟಕದ ಪ್ರಸ್ತಾವನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.
|ಶೋಭಾ ಕರಂದ್ಲಾಜೆಕೇಂದ್ರ ಕೃಷಿಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ
ಬೆಂಬಲ ಬೆಲೆ ಯೋಜನೆಯಡಿ ಮಾರ್ಚ್ 31ರವರೆಗೆ ಭತ್ತ ಖರೀದಿಗೆ ಅವಕಾಶ ನೀಡಿದ್ದರೂ ರೈತರು ಸೂಕ್ತವಾಗಿ ಸ್ಪಂದಿಸ ಲಿಲ್ಲ. ಗಡುವು ಮುಗಿದಿರುವ ಕಾರಣ ಮತ್ತೆ ವಿಸ್ತರಿಸುವುದು ಕಷ್ಟಸಾಧ್ಯ. ಭತ್ತ ಬೆಳೆದ ರೈತರ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಗಮನಸೆಳೆದಿರುವೆ.
|ಉಮೇಶ್ ಕತ್ತಿಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
ಆಂಧ್ರ-ತೆಲಂಗಾಣದತ್ತ ಬೊಟ್ಟು:ಈ ಬಾರಿ 1.10 ಲಕ್ಷ ಟನ್ ರಾಗಿ ಖರೀದಿಗೆ ಸರ್ಕಾರ ನಿರ್ಧರಿಸಿತ್ತು. ಆದರೆ ರಾಗಿ ಬೆಳೆದ ಜಿಲ್ಲೆಗಳ ಒತ್ತಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಣಿದು, ಕೇಂದ್ರದ ಮನವೊಲಿಸಿ ಹೆಚ್ಚುವರಿ ಎರಡು ಲಕ್ಷ ಟನ್ ರಾಗಿ ಖರೀದಿಗೆ ಅನುಮತಿ ಪಡೆದಿದ್ದಾರೆ. ಅದೇ ರೀತಿ ಭತ್ತ ಖರೀದಿಗೂ ಅವಧಿ ವಿಸ್ತರಣೆಗೆ ಕೇಂದ್ರವನ್ನು ಒಪ್ಪಿಸಬೇಕು ಎನ್ನುವುದು ರೈತರ ಮುಖಂಡರ ಆಗ್ರಹ. ಖರೀದಿ ಅವಧಿ, ತಿಂಗಳುಗಳನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಕೇಂದ್ರ ಬಿಟ್ಟಿದ್ದು, ಇದರ ಲಾಭ ಪಡೆದ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಹೆಚ್ಚಿನ ಕಾಲಾವಕಾಶ ಪಡೆದಿದ್ದರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
13.49 ಲಕ್ಷ ಟನ್ ಉತ್ಪಾದನೆ ಅಂದಾಜು:ಇಲಾಖೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಪ್ರಸಕ್ತ ಬೇಸಿಗೆ ಹಂಗಾಮಿಗೆ 3,07,033 ಹೆಕ್ಟೇರ್​ನಲ್ಲಿ ಭತ್ತ ನಾಟಿಯಾಗಿದ್ದು, 13.49 ಲಕ್ಷ ಟನ್ ಉತ್ಪಾದನೆ ಅಂದಾಜಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿದೆ. ನಂತರದ ಸ್ಥಾನಗಳಲ್ಲಿ ದಾವಣಗೆರೆ, ಮಂಡ್ಯ, ಶಿವಮೊಗ್ಗ, ಮೈಸೂರು, ಯಾದಗಿರಿ, ಹಾವೇರಿ ಜಿಲ್ಲೆಗಳಿವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಬೆಳೆದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
