ಬೆಂಗಳೂರು:ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ಎಫ್‌ಎಸ್‌ಎಲ್ ವರದಿಯನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸರ್ಕಾರಕ್ಕೆ ಮುಜುಗರ ಆಗುವಂತದ್ದು ಏನು ಆಗಿಲ್ಲ. ಪ್ರಕರಣವನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದ ಬಿಜೆಪಿಯವರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಎಫ್‌ಎಸ್‌ಎಲ್ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸದನದಲ್ಲಿ ಉತ್ತರಿಸಿದ್ದೆ. ವರದಿಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
ಖಾಸಗಿಯವರು ಸಹ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿದ್ದರು. ನಾವು ಅದನ್ನು ಅಧಿಕೃತ ಎಂದು ಪರಗಣಿಸುವುದಿಲ್ಲ. ನಾವು ಅವರಿಗೆ ಯಾವುದೇ ರೀತಿಯ ಮಾನ್ಯತೆ ನೀಡಿಲ್ಲ. ನಮ್ಮ ಇಲಾಖೆಯ ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಚಿತವಾಗಿದೆ. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯಲಿದ್ದು, ತನಿಖೆಯಿಂದ ಬರುವ ಮಾಹಿತಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ವರದಿ ಬಹಿರಂಗಪಡಿಸುವಂತೆ ಆಗ್ರಹಿಸುತ್ತಿರುವ ಕುರಿತ ಪ್ರಶ್ನೆಗೆ, ಪ್ರತಿಪಕ್ಷದವರು ದಿನಕ್ಕೊಂದು ರೀತಿ ಹೇಳಿಕೆ ನೀಡುತ್ತಾರೆ. ಸಾಕ್ಷ್ಯ ಇಲ್ಲದೆ ಯಾರನ್ನು ಬಂಧಿಸಲಾಗುವುದಿಲ್ಲ. ವರದಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೇನು ಬಹಿರಂಗಪಡಿಸಬೇಕು ಎಂದು ಕೇಳಿದರು.
ಮಂಡ್ಯದಲ್ಲಿ 2022 ನವೆಂಬರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ? ಹಳೆಯ ಪ್ರಕರಣ ಈಗ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಮೇಲೆ ಪ್ರಕರಣ ಒಂದೇ ಅಲ್ಲವೆ? ಕಾನೂನು ಎಲ್ಲರಿಗೂ ಒಂದೆ. ಯಾವ ಸಂದರ್ಭದಲ್ಲಿ ಕೂಗಿದ್ದಾರೆ ಎಂಬುದು ತನಿಖೆಯಿಂದ ಹೊರಬರುತ್ತೆ ಎಂದು ತಿಳಿಸಿದರು.
ಯುಎಪಿಎ ಪ್ರಕರಣಗಳು ನೇರವಾಗಿ ಕೇಂದ್ರದ ತನಿಖಾ ಸಂಸ್ಥೆಗಳಾದ ಎನ್‌ಐಎ ಅಥವಾ ಸಿಬಿಐಗೆ ಬರುತ್ತದೆ. ಹೀಗಾಗಿ ಎನ್‌ಐಎ ಅವರು ಸುಮೋಟೋ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಸಹ ತನಿಖೆ ಮುಂದುವರಿಸುತ್ತಾರೆ. ನಮ್ಮಲ್ಲಿರುವ ಮಾಹಿತಿಯನ್ನು ಎನ್‌ಐಎಗೆ ಹಂಚಿಕೊಳ್ಳಲಾಗುವುದು. ಪ್ರಕರಣ ನಡೆದ ಮರುದಿನ ಸಿಸಿಬಿ ಪೊಲೀಸರು ಸಹ ಜೈಲಿನಲ್ಲಿರುವರನ್ನು ವಿಚಾರಣೆ ನಡೆಸಿದ್ದರು. ಯಾರೇ ತನಿಖೆ ನಡೆಸಿದರು ಒಟ್ಟಾರೆಯಾಗಿ ಆರೋಪಿಯನ್ನು ಪತ್ತೆ ಹಚ್ಚುವುದಷ್ಟೆ ಮುಖ್ಯ ಎಂದು ತಿಳಿಸಿದರು.
ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿದೆಯಾ ಎಂಬ ಪ್ರಶ್ನೆಗೆ, ಸರ್ಕಾರಕ್ಕೆ ಯಾಕೆ ಮುಜುಗರ ಆಗುತ್ತದೆ. ಸರ್ಕಾರ ಯಾರಿಗಾದರೂ ಸ್ಪಾನ್ಸರ್ ಮಾಡಿದೆಯೇ? ಅವನ್ಯಾರೋ ಕೂಗಿದ್ದಾನೆ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಯುತ್ತಿದ್ದೆವು. ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರಕ್ಕೆ ಮುಜುಗರ ಆಗುವಂತದ್ದು ಏನು ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಂಡು ಒಳ್ಳೆ ಕೆಲಸ ಮಾಡಿದೆ. ಇದಕ್ಕೆ ಸರ್ಕಾರವನ್ನು ಪ್ರಶಂಶಿಸಬೇಕು ಎಂದು ಹೇಳಿದರು.ವಿಧಾನಸೌಧದ ಭದ್ರತಾ ವೈಫಲ್ಯ ಇರುವುದು ಕಂಡು ಬಂದರೆ ಇಲಾಖೆಯ ಅಧಿಕಾರಿಗಳು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ. ಯಾರನ್ನೋ ಕೇಳಿ ಕೆಲಸ ಮಾಡುವ ಅಗತ್ಯತೆ ಇಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
