ಪಲಾಮು:ಭಾರತದ ಸರ್ಜಿಕಲ್ ದಾಳಿಗೆ ಬೆಚ್ಚಿಬಿದ್ದಿರುವ ಪಾಕಿಸ್ತಾನದ ನಾಯಕರು, ಕಾಂಗ್ರೆಸ್​ನ ಯುವರಾಜ (ರಾಹುಲ್ ಗಾಂಧಿ) ಭಾರತದ ಪ್ರಧಾನಿಯಾಗಲಿ ಎಂದು ಬಯಸುತ್ತಿದ್ದಾರೆ. ಆದರೆ ಭಾರತದ ಜನರು ಸದೃಢ ಪ್ರಧಾನಿಯನ್ನು ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಾರ್ಖಂಡ್​ನ ಪಲಾಮುದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣೆ ರ್ಯಾಲಿಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಡಿ.ರಾಮ್ ಪರವಾಗಿ ಪ್ರಚಾರ ಮಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಹೆಸರು ಪ್ರಸ್ತಾಪಿಸದೇ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಆಡಳಿತದಲ್ಲಿ 2019ರಲ್ಲಿ ಬಾಲಾಕೋಟ್ ಪ್ರದೇಶದಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್​ನಿಂದ ಪಾಕಿಸ್ತಾನ ಬೆದರಿದೆ. ಆ ದೇಶದ ಮುಖಂಡರು ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಹಾತೊರೆಯುತ್ತಿದ್ದಾರೆ. ಆದರೆ, ಭಾರತೀಯರು ‘ಸದೃಢ ಪ್ರಧಾನಿಯನ್ನು ಹೊಂದಿರುವ ಬಲಿಷ್ಠ ರಾಷ್ಟ್ರವನ್ನು’ ಬಯಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕರು ಭಾರತದ ಮೇಲೆ ಬಾಂಬ್ ದಾಳಿ ಮಾಡುತ್ತಿದ್ದರು. ಆದರೆ, ನವ ಭಾರತದ ವೈಮಾನಿಕ ದಾಳಿಗಳು ನೆರೆಯ ಪಾಕಿಸ್ತಾನ ತತ್ತರಿಸುವಂತೆ ಮಾಡಿವೆ. ಇನ್ನು ಮುಂದೆ ಭಾರತ ಮಾತೆಗೆ ಮಾಡುವ ಅವಮಾನವನ್ನು ಸಹಿಸುವುದಿಲ್ಲ. ಶತ್ರುಗಳ ಭೂಪ್ರದೇಶಕ್ಕೆ ನುಗ್ಗಿ ಹೊಡೆಯುವುದು ಹೇಗೆಂದು ಭಾರತಕ್ಕೆ ಗೊತ್ತಿದೆ ಎಂದರು. ಸ್ವಾತಂತ್ರ್ಯ ಹೋರಾಟಗಾರ ಬುಡಕಟ್ಟು ಜನಾಂಗದ ಬಿರ್ಸಾ ಮುಂಡಾ ಅವರನ್ನು ಶ್ಲಾಘಿಸಿದ ಮೋದಿ, ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವವನ್ನು ‘ಜಂಜಾಟಿಯ ಗೌರವ್ ವರ್ಷ್’ ಎಂದು ಆಚರಿಸಲಾಗುವುದು ಎಂದು ಭರವಸೆ ನೀಡಿದರು.
ಮತದಿಂದ ರಾಮಮಂದಿರ ನಿರ್ಮಾಣ:ನೀವು ನೀಡಿದ ಒಂದು ಮತದಿಂದಾಗಿ ಸತತ 500 ವರ್ಷಗಳ ರಾಮ ಜನ್ಮಭೂಮಿ ಹೋರಾಟಕ್ಕೆ ಜಯ ದೊರಕಿತು. ನಮ್ಮ ಅನೇಕ ತಲೆಮಾರುಗಳು ಮಂದಿರಕ್ಕಾಗಿ ಹೋರಾಡುತ್ತಿದ್ದರು. ಲಕ್ಷಾಂತರ ಜನರು ಕಾಯುತ್ತಿದ್ದರು. ಬಹುಶಃ ಅಯೋಧ್ಯೆಯಲ್ಲಿ ನಡೆದಷ್ಟು ಸುದೀರ್ಘ ಹೋರಾಟ ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲಿಕ್ಕಿಲ್ಲ. ಇಂದು ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಮತದಾರರ ಕೊಡುಗೆ ಇದೆ ಎಂದು ಪ್ರಧಾನಿ ಶ್ಲಾಘಿಸಿದರು.

ಭಯೋತ್ಪಾದನೆಗೆ ಬ್ರೇಕ್:ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿದಿನ ಏನಾಗುತ್ತದೆಯೋ ಎಂಬ ಆತಂಕ ಇತ್ತು. ಬಾಂಬ್ ಸ್ಪೋಟಗಳು ಸದ್ದು ಮಾಡುತ್ತಿದ್ದವು. ಆದರೆ, ನೀವು ಹಾಕಿದ ಒಂದೇ ಒಂದು ವೋಟ್​ನ ಪ್ರತಿಫಲವಾಗಿ 370ನೇ ವಿಧಿ ರದ್ದು ಮಾಡಿದ ನಂತರ ಭಯೋತ್ಪಾದನೆಗೆ ಬ್ರೇಕ್ ಬಿದ್ದಿದೆ. ಜಾರ್ಖಂಡ್, ಛತ್ತೀಸ್​ಗಢ, ಆಂಧ್ರ, ಪಶುಪತಿಯಿಂದ ತಿರುಪತಿಯವರೆಗೆ ನಕ್ಸಲಿಸಂ ಹರಡಿತ್ತು. ಉಗ್ರರ ದಾಳಿಗೆ ಅದೆಷ್ಟೊ ತಾಯಂದಿರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಈಗ ಭಾರತ ನಕ್ಸಲಿಸಂ ಮುಕ್ತವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆ ಕುರಿತು ಹೇಳಿದರು.
ಒಂದು ಮತದ ಮಹತ್ವ:ನಿಮ್ಮ ಒಂದು ಮತದ ಬಲದಿಂದ ಪ್ರಸ್ತುತ ಭಾರತ ಇಡೀ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. 2014ರಲ್ಲಿ ನೀವು ಚಲಾಯಿಸಿದ ಒಂದು ಮತವು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು, ಎನ್​ಡಿಎ ಸರ್ಕಾರ ರಚನೆಗೆ ಕಾರಣವಾಯಿತು. ಅಲ್ಲದೆ, ವಿಶ್ವದ ಮುಂದೆ ಭಾರತದ ಪ್ರಜಾಪ್ರಭುತ್ವದ ಶಕ್ತಿ ಅನಾವರಣವಾಯಿತು ಎಂದು ಮೋದಿ ವಿಶ್ಲೇಷಿಸಿದರು.
ಸಂವಿಧಾನ ಬದಲಾಗಲ್ಲ:ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳು ನಿಮ್ಮ ಭೂಮಿಯನ್ನು ಕಬಳಿಸಲು ಬಯಸುತ್ತಿವೆ. ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಮೀಸಲಾತಿ ಕಿತ್ತುಕೊಂಡು ಸಂವಿಧಾನ ಬದಲಿಸುವ ಮೂಲಕ ಮುಸ್ಲಿಮರಿಗೆ ಅನುಕೂಲ ಮಾಡಿಕೊಡಲು ಮುಂದಾಗಿವೆ. ನಾನು ಬದುಕಿರುವವರೆಗೂ ಸಂವಿಧಾನ ಬದಲಿಸುವ ಕಾಂಗ್ರೆಸ್ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಮೋದಿ ಹೇಳಿದರು.
ಭ್ರಷ್ಟಾಚಾರ ಮಾಡಿಲ್ಲ:ಕಳೆದ 25 ವರ್ಷಗಳಲ್ಲಿ ಗುಜರಾತ್ ಮುಖ್ಯಮಂತ್ರಿ ಮತ್ತು ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದು, ನನ್ನ ಮೇಲೆ ಯಾವುದೇ ಭಷ್ಟಾಚಾರ ಆರೋಪವಿಲ್ಲ. ನನಗೆ ಸ್ವಂತ ಮನೆ ಇಲ್ಲ, ಸೈಕಲ್ ಸಹ ಇಲ್ಲ. ಆದರೆ, ಭ್ರಷ್ಟ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಮತ್ತು ಕಾಂಗ್ರೆಸ್ ನಾಯಕರು ತಮ್ಮ ಮಕ್ಕಳಿಗಾಗಿ ಅಪಾರ ಪ್ರಮಾಣದ ಹಣ, ಆಸ್ತಿ ಕೂಡಿ ಹಾಕಿದ್ದಾರೆ ಎಂದು ಮೋದಿ ಟೀಕೆ ಮಾಡಿದರು.
25 ಕೋಟಿ ಮಂದಿ ಬಡತನಮುಕ್ತ:ಎನ್​ಡಿಎ ಸರ್ಕಾರದ 10 ವರ್ಷದ ಆಡಳಿತದಲ್ಲಿ 25 ಕೋಟಿ ಜನರು ಬಡತನದಿಂದ ಮುಕ್ತವಾಗಿದ್ದಾರೆ ಎಂದ ಪ್ರಧಾನಿ, ಕಾಂಗ್ರೆಸ್ ಎಂದಿಗೂ ಬಡವರ ಬಗ್ಗೆ ಚಿಂತಿಸಿಲ್ಲ. ಪಕ್ಷದ ರಾಜಕುಮಾರ ಬೆಳ್ಳಿ ಚಮಚದೊಂದಿಗೆ ಜನಿಸಿದ್ದಾರೆ. ಅವರು ಬಡವರ ಮನೆಗೆ ಭೇಟಿ ನೀಡಿದಾಗ ಪೋಸ್ ನೀಡುತ್ತಾರೆ. ಆದರೆ, ಭಾರತವನ್ನು ಅಭಿವೃದ್ಧಿ ಮಾಡುವುದು ನನ್ನ ಬದ್ಧತೆಯಾಗಿದೆ ಎಂದು ಹೇಳಿದರು.

ಗೋಧ್ರಾ ದುರಂತ ಪ್ರಸ್ತಾಪ:ದರ್ಭಾಂಗಾ: ವಿರೋಧ ಪಕ್ಷಗಳು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿವೆ. ಈ ಕಾರಣಕ್ಕಾಗಿಯೇ ಗೋಧ್ರಾ ರೈಲು ದುರಂತದಲ್ಲಿ 60 ಕರಸೇವಕರ ಸಜೀವ ದಹನಕ್ಕೆ ಕಾರಣರಾದವರನ್ನು
ಆರ್​ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಬಚಾವ್ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಉತ್ತರ ಬಿಹಾರದ ದರ್ಭಾಂಗಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿ, ಬಿಹಾರದ ರಾಜಕುಮಾರ (ತೇಜಸ್ವಿ ಯಾದವ್) ಗೋಧ್ರಾ ರೈಲು ದಹನದಲ್ಲಿ ಭಾಗಿಯಾದವರನ್ನು ಉಳಿಸಲು ಪ್ರಯತ್ನಿಸಿದರು. ಇದಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಮೇಡಂ ನೇತೃತ್ವದ ಆಡಳಿತ ಕೂಡ ಸಹಕಾರ ನೀಡಿತ್ತು. ಮೇವು ಹಗರಣದಲ್ಲಿ ಆರೋಪಿಯಾಗಿರುವ ಲಾಲು ಪ್ರಸಾದ್ ಆಗ ರೈಲ್ವೆ ಸಚಿವರಾಗಿದ್ದರು. ಅವರು ಸ್ವತಃ ತನಿಖಾ ಸಮಿತಿ ರಚಿಸಿ ತಪ್ಪಿತಸ್ಥರನ್ನು ದೋಷಮುಕ್ತಗೊಳಿಸುವ ವರದಿ ಪಡೆದರು. ಆದರೆ, ಈ ವರದಿಯನ್ನು ನ್ಯಾಯಾಲಯ ತಿರಸ್ಕರಿಸಿತು ಎಂದು ಹೇಳುವ ಮೂಲಕ ತಾವು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ನಡೆದ ದುಘರ್ಟನೆ ನೆನಪಿಸಿಕೊಂಡರು.
ಸಿಪಾಯಿ:ಮುಂಬರುವ 5 ವರ್ಷಗಳಲ್ಲಿ ಎನ್​ಡಿಎ ಸರ್ಕಾರ ಭ್ರಷ್ಟಾಚಾರಿಗಳ ಮುಖವಾಡವನ್ನು ಕಳಚಲಿದ್ದು, ತಪ್ಪಿತಸ್ಥರು ಕಾನೂನಿನಡಿಯಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು. ಜಾರ್ಖಂಡ್​ನ ಗುಮ್ಲಾದ ಸಿಸಾಯಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಐಎನ್​ಡಿಐಎ ಮೈತ್ರಿಕೂಟದ ನಾಯಕರು ಭ್ರಷ್ಟರನ್ನು ಬೆಂಬಲಿಸಲು ದೆಹಲಿ ಮತ್ತು ರಾಂಚಿ ಸೇರಿ ಇತರ ಕಡೆಗಳಲ್ಲಿ ರ‍್ಯಾಲಿ ನಡೆಸುತ್ತಿದ್ದಾರೆ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಬಂಧಿತ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 2004ರಿಂದ 2014ರವರೆಗಿನ ಯುಪಿಎ ಆಡಳಿತ ಅವಧಿಯಲ್ಲಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಕೊಳೆಯುತ್ತಿದ್ದವು ಅದೇ ಸಮಯದಲ್ಲಿ ಬುಡಕಟ್ಟು ಜನಾಂಗದ ಮಕ್ಕಳು ಹಸಿವಿನಿಂದ ಮೃತಪಟ್ಟರು ಎಂದು ಆರೋಪಿಸಿದ ಮೋದಿ, ಬುಡಕಟ್ಟು ಜಿಲ್ಲೆಗಳು ಹಿಂದುಳಿದಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 14 =
Remember me
