| ವಿಲಾಸ ಮೇಲಗಿರಿ ಬೆಂಗಳೂರುಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿ ಮತ್ತಿತರ ಕಾರಣಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದಕ್ಕೆ ಹೋಗುತ್ತಲೇ ಇವೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಪೆಟ್ಟು ಬಿದ್ದಿದೆ. ಅಧಿಕಾರ ವಿಕೇಂದ್ರೀಕರಣದ ಆಶಯಗಳಿಗೆ ಧಕ್ಕೆ ಬಂದೊದಗಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದಿಂದ ಬರುವ ವಾರ್ಷಿಕ 375 ಕೋಟಿ ರೂ.ಗಳ ಅನುದಾನಕ್ಕೂ ಕತ್ತರಿ ಬಿದ್ದಿದೆ!
ಅಧಿಕಾರ ವಿಕೇಂದ್ರೀಕರಣದ ಮೊದಲ ಮೆಟ್ಟಿಲು ಗ್ರಾಮ ಪಂಚಾಯಿತಿಗಳು ಸುಸೂತ್ರವಾಗಿ ನಡೆಯುತ್ತಿವೆ. ಆದರೆ ಎರಡು ಮತ್ತು ಮೂರನೇ ಮೆಟ್ಟಿಲುಗಳು ಎಂದು ಕರೆಯಲ್ಪಡುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಚುನಾಯಿತ ವ್ಯವಸ್ಥೆ ಇಲ್ಲದೆ ಎರಡು ವರ್ಷಗಳಿಂದ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಇಲ್ಲವಾಗಿದೆ. ಕಲುಷಿತ ನೀರು ಸೇವಿಸಿ ಜನರು ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ನೈರ್ಮಲ್ಯ ಸಮಸ್ಯೆ ಬಗ್ಗೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲರೇ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದಾರೆ.
15ನೇ ಹಣಕಾಸು ಯೋಜನೆ:ಈ ಎಲ್ಲದರ ನಡುವೆ ಸರ್ಕಾರ 15ನೇ ಹಣಕಾಸು ಯೋಜನೆ ಕಾರ್ಯರೂಪಕ್ಕೆ ಕ್ರಿಯಾ ಯೋಜನೆ ತಯಾರಿಸಲು ಗ್ರಾ.ಪಂ.ಗಳಿಗೆ ಸೂಚನೆ ನೀಡಿದೆ. 15ನೇ ಹಣಕಾಸು ಯೋಜನೆಯಡಿ ರಾಜ್ಯದ ಪಾಲು 2,490 ಕೋಟಿ ರೂ.ಗಳನ್ನು 2023-24ನೇ ಸಾಲಿಗೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.
ಈ ಪೈಕಿ ಶೇ.85 ಅಂದರೆ 2,116 ಕೋಟಿ ರೂ.ಗಳ ಕಾಮಗಾರಿಗಳಿಗೆ ಗ್ರಾ.ಪಂ.ಗಳು ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ರಾಜ್ಯ ಸರ್ಕಾರದ ಪಾಲಿನಲ್ಲಿ ಶೇ.30 ಕುಡಿಯುವ ನೀರು, ಶೇ.30 ಗ್ರಾಮ ನೈರ್ಮಲ್ಯ, ಉಳಿದ ಶೇ.40 ಅನಿರ್ಬಂಧಿತ ಕಾಮಗಾರಿಗಳಿಗೆ ಖರ್ಚು ಮಾಡಲಾಗುತ್ತದೆ.
ಸ್ವಾಯತ್ತೆ ಮೇಲೆ ಪ್ರಹಾರ:15ನೇ ಹಣಕಾಸು ಯೋಜನೆಯ ಅನುದಾನ ಬಳಕೆ ಸಾರ್ವಜನಿಕ ಲೆಕ್ಕ ಪರಿಶೋಧನೆಗೆ ಒಳಪಡುತ್ತದೆ. ಏನಾದರೂ ಅವ್ಯವಹಾರ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಆದರೂ ಸರ್ಕಾರಗಳು ಸ್ಥಳಿಯಾಡಳಿತದ ಸ್ವಾಯತ್ತೆ ಮೇಲೆ ಪ್ರಹಾರ ಮಾಡುತ್ತಿವೆ ಎಂಬ ಆರೋಪ ವ್ಯಾಪಕವಾಗಿದೆ.
ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆ:ಕಳೆದ ವರ್ಷ ಜಲಜೀವನ್ ಮಿಷನ್ ಯೋಜನೆಗೆ ರಾಜ್ಯ ಸರ್ಕಾರ ತಾನು ಭರಿಸಬೇಕಾದ ಪಾಲು ಶೇ.15 ರಷ್ಟನ್ನು ನೀಡುವ ಬದಲು 15ನೇ ಹಣಕಾಸು ಯೋಜನೆಯಡಿ ಗ್ರಾ.ಪಂ.ಗಳಿಗೆ ದೊರೆಯುವ ಹಣವನ್ನೇ ಬಳಕೆ ಮಾಡಿಕೊಂಡಿತ್ತು. ಈ ಬಗ್ಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬಳಿಕ ಆ ಹಣವನ್ನು ಸರ್ಕಾರ ಮರುಪಾವತಿ ಮಾಡಿತ್ತು.
ರಾಜ್ಯ ಸರ್ಕಾರ 5ನೇ ಹಣಕಾಸು ಆಯೋಗ ರಚನೆ ಮಾಡಬೇಕು. 2021ನೇ ಸಾಲಿಗೆ ನಾಲ್ಕನೇ ಆಯೋಗದ ಅವಧಿ ಮುಕ್ತಾಯಗೊಂಡಿದೆ. 2022ಕ್ಕೆ ಆಯೋಗ ರಚನೆಯಾಗಬೇಕಿತ್ತು. ಆದರೆ ಈವರೆಗೆ ರಚನೆ ಮಾಡಿಲ್ಲ. 2024ರ ಒಳಗಾಗಿ ಆಯೋಗ ರಚನೆ ಮಾಡದೇ ಹೋದರೆ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ದೊರೆಯಬೇಕಾದ ಪಾಲಿಗೆ ಕತ್ತರಿ ಬೀಳುತ್ತದೆ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ 5ನೇ ಹಣಕಾಸು ಆಯೋಗ ರಚನೆಗೆ ಮುಂದಾಗಬೇಕಿದೆ.
ತೆರಿಗೆ ಪಾಲು ಹಂಚಿಕೆ, ತಾರತಮ್ಯ ಆರೋಪ:ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದಿದೆ. ಆದರೆ, ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆ ಸೇರಿದಂತೆ ವಿವಿಧ ಯೋಜನೆಗೆ ಅನುದಾನ ನೀಡುತ್ತಿಲ್ಲವೆಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಆದರೆ, ಕೇಂದ್ರದಿಂದ ದೊರೆಯುವ ಪಾಲನ್ನು ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಕೂಡ ಹೆಚ್ಚಿನ ಆಸಕ್ತಿ ತೋರಬೇಕಿದೆ. ತಾ.ಪಂ., ಜಿ.ಪಂ. ಚುನಾವಣೆ ನಡೆಸಿ ಕೇಂದ್ರದಿಂದ ದೊರೆಯುವ ಅನುದಾನ ಕೈತಪ್ಪದಂತೆ ನೋಡಿಕೊಳ್ಳಬೇಕಿದೆ.
ಅನಿರ್ಬಂಧಿತ ಹಣದ ಮೇಲೂ ನಿರ್ಬಂಧ:ಪ್ರತಿ ಗ್ರಾಮ ಪಂಚಾಯಿತಿಗೆ ಅಂದಾಜು 35 ರಿಂದ 40 ಲಕ್ಷ ರೂ. ಈ ಯೋಜನೆಯಡಿಯೇ ದೊರೆಯುತ್ತದೆ. ಈ ಹಣದ ಖರ್ಚಿನ ಸಂಪೂರ್ಣ ಹೊಣೆಗಾರಿಕೆ ಗ್ರಾಮ ಪಂಚಾಯಿತಿಗಳದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಪರೋಕ್ಷವಾಗಿ ಈ ಹಣದ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಒಂದು ಕಡೆ ನಿಮ್ಮದೇ ಜವಾಬ್ದಾರಿ ಎಂದು ಹೇಳುವ ಸರ್ಕಾರ ಇನ್ನೊಂದೆಡೆ ಸಿಇಒ/ಇಒ ಮೂಲಕ ನಿರ್ಬಂಧ ಹೇರುತ್ತಿದೆ. ಅನಿರ್ಬಂಧಿತ ಹಣದ ಮೇಲೂ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
‘ಕರಾಳ ಶನಿವಾರ: 37 ಜನರ ಸಾವು..’ ಎಂದು ಕಿವಿಮಾತು ಹೇಳಿದ ಅಲೋಕ್​ ಕುಮಾರ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
