ಬೆಂಗಳೂರು:ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಏಪ್ರಿಲ್​ನಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ನಡೆಸಲು ನಿರ್ಧರಿಸಿತ್ತು. ಅದಕ್ಕಾಗಿ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನೂ ರಚಿಸಿದೆ. ಆದರೆ ಇದೀಗ ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಮರುಪರಿಶೀಲನೆ ಮಾಡಬೇಕಾಗಿದೆ.
ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಲು ಮುಂದಾದರೆ ವ್ಯಾಪಕ ವಿರೋಧ ಎದುರಾಗುತ್ತದೆ ಎಂಬುದನ್ನು ಬಲ್ಲ ಸಿಎಂ ಬಸವರಾಜ ಬೊಮ್ಮಾಯಿ, ಗ್ರಾಮೀಣಾ ಭಿವೃದ್ಧಿ ಸಚಿವ ಈಶ್ವರಪ್ಪ ಮುಂದಿನ ವಾರ ರಾಜ್ಯದ ಅಡ್ವೋಕೇಟ್ ಜನರಲ್, ಹಿರಿಯ ಕಾನೂನು ತಜ್ಞರ ಜತೆ ರ್ಚಚಿಸಲು ನಿರ್ಧರಿಸಿದ್ದಾರೆ.
ಸುಪ್ರೀಂ ಮೊರೆ ಹೋಗಬೇಕೆ ಅಥವಾ ಪರ್ಯಾಯ ಮಾರ್ಗಗಳು ಇವೆಯೇ ಎಂಬ ಬಗ್ಗೆ ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ. ಸುಪ್ರೀಂ ತೀರ್ಪಿನ ಅನ್ವಯ ಯಾವ ರಾಜ್ಯದಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿರಲಿಲ್ಲ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಪ್ರಕರಣವೊಂದರಲ್ಲಿ ಕಳೆದ ಡಿಸೆಂಬರ್​ನಲ್ಲಿ ಬಂದಿರುವ ಸುಪ್ರೀಂಕೋರ್ಟ್ ಆದೇಶ ಅಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಆಯ್ಕೆಯಾದವರನ್ನು ರದ್ದು ಮಾಡಿದೆ.
ಪರಿಶಿಷ್ಟ ಜಾತಿ ಹಾಗೂ ವರ್ಗವನ್ನು ಹೊರತುಪಡಿಸಿದರೆ ಉಳಿದ ಎಲ್ಲ ಸ್ಥಾನಗಳು ಸಾಮಾನ್ಯ ವೆಂದು ಸುಪ್ರೀಂಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ಮಹಾರಾಷ್ಟ್ರ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಚರ್ಚೆ ನಡೆಸಲು ಮುಂದಾಗಿದೆ.
ಸುಪ್ರೀಂ ಹೇಳಿದ್ದೇನು?:ಇತರ ಹಿಂದುಳಿದ ವರ್ಗಗಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಸಲುವಾಗಿ ಇರುವ ಮೀಸಲಾತಿಯನ್ನು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಥಾವತ್ತಾಗಿ ರಾಜಕೀಯ ಮೀಸಲಾತಿಗೆ ಅಳವಡಿಸಲು ಸಾಧ್ಯವಿಲ್ಲ. ಎಷ್ಟು ಮೀಸಲಾತಿ ಇರಬೇಕಾಗುತ್ತದೆ ಎಂಬುದನ್ನು ಸಮೀಕ್ಷೆ ಆಧಾರದಲ್ಲಿ ಮಾನದಂಡ ನಿಗದಿ ಮಾಡಿ ನಿರ್ಧಾರ ಮಾಡಬೇಕು ಎಂದು 2010ರಲ್ಲಿ ಕೃಷ್ಣಮೂರ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.
ಹಿಂದೆಯೂ ಚರ್ಚೆಯಾಗಿದೆ:ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ. ಜಯಚಂದ್ರ ತಜ್ಞರ ಜತೆ ರ್ಚಚಿಸಿದ್ದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಯನ ಮಾಡಲು ಹೇಳಿತ್ತು. ಆದರೆ ರಾಜಕೀಯ ಮೀಸಲಾತಿಯ ಅಧ್ಯಯನ ಮಾಡಲು ಕಾಯ್ದೆಗೆ ತಿದ್ದುಪಡಿಯಾಗಬೇಕೆಂದು ಆಯೋಗ ತಿಳಿಸಿತ್ತು. ಆ ಬಗ್ಗೆ ಚರ್ಚೆ ಮಾಡಲು ಸಚಿವರ ಸಮಿತಿ ರಚನೆ ಮಾಡಲಾಗಿತ್ತು. ಅದಕ್ಕೆ ಆಯೋಗದ ಅಧ್ಯಕ್ಷರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಸಮಿತಿ 4-5 ಸಭೆ ನಡೆಸಿತ್ತು. ಅಷ್ಟರೊಳಗೆ ಚುನಾವಣೆ ಬಂದು ಸರ್ಕಾರ ಬದಲಾದ ನಂತರ ಮುಂದುವರಿಯಲಿಲ್ಲ.
ಸಮಸ್ಯೆ ಮೂಲ ಎಲ್ಲಿ?:ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಂವಿಧಾನದ 73 ಹಾಗೂ 74 ನೇ ತಿದ್ದುಪಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಆದರೆ ಒಬಿಸಿ ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದಲೇ ಸಮಸ್ಯೆಯಾಗಿದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ.
ಕಾನೂನುಬದ್ಧವಾಗಿ ಚುನಾವಣೆ:ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರೊಂದಿಗೆ ಅಧ್ಯಯನ ನಡೆಸುವುದರಿಂದ ಸದ್ಯಕ್ಕೆ ಚುನಾವಣೆ ಮುಂದಕ್ಕೆ ಹೋಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ನಮ್ಮ ಸರ್ಕಾರ ಕ್ಷೇತ್ರ ಪುನರ್ವಿಂಗಡನೆ ಹಾಗೂ ಮೀಸಲಾತಿಯನ್ನು ಸಿದ್ಧ ಮಾಡಿಕೊಂಡಿತ್ತು. ಈಗ ತೀರ್ಪು ಬಂದಿದೆ. ಆದ್ದರಿಂದ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇವೆ. ಕಾನೂನುಬದ್ಧವಾಗಿ ಚುನಾವಣೆ ನಡೆಸಲಿದ್ದೇವೆ. ಪ್ರತಿಪಕ್ಷಗಳು ಇದರ ಬಗ್ಗೆ ಮಾತನಾಡಲಿ ಎಂದರು.
ರಾಜ್ಯದ ಮತ್ತೊಂದು ಶಾಲೆಯಲ್ಲೂ ನಮಾಜ್; ಹಿಜಾಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + six =
Remember me
