ಬೆಂಗಳೂರು:ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವುದು ಕಡ್ಡಾಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟಪ್ಪಣೆ ವಿಧಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಕರೆದಿದ್ದ ಎಲ್ಲ ಜಿಪಂ ಸಿಇಒಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿದ ಅವರು, ‘ನೀವು ಹೋಗುವುದಿಲ್ಲ, ಅವರು ಹೆದರುವುದಿಲ್ಲ ಎಂಬ ಪರಿಸ್ಥಿತಿ ತಳಹಂತದಲ್ಲಿದೆ. ಮೂರು ದಶಕಗಳ ಅಧಿಕಾರ ವಿಕೇಂದ್ರೀಕರಣದ ಫಲಿತವನ್ನು ಅವಲೋಕಿಸುವ ಕಾಲ ಇದು. ಏನೂ ಆಗುವುದಿಲ್ಲವೆಂದು ತಿಳಿದುಕೊಳ್ಳಬಾರದು. ನನ್ನ ಆಡಳಿತಶೈಲಿ ಭಿನ್ನವಾಗಿದ್ದು, ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿ ಇದ್ದೀರಿ. ಎಲ್ಲರ ಕೆಲಸ-ಕಾರ್ಯತತ್ಪರತೆ ಗಮನಿಸುತ್ತಿದ್ದೇನೆ’ ಎಂದು ಹೇಳಿದರು. ಸೂಕ್ಷ್ಮತೆ, ಸಂವೇದನಾಶೀಲತೆ, ಕ್ರಿಯಾಶೀಲತೆ ಅಳವಡಿಸಿಕೊಂಡು ವ್ಯವಸ್ಥೆ ಮೇಲಿನ ಜನರ ವಿಶ್ವಾಸ ಪುನರ್ ಸ್ಥಾಪಿಸುವ ಅಗತ್ಯವಿದೆ. ಬಜೆಟ್​ನಲ್ಲಿ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ತೀವ್ರ ತರಾಟೆ:ಶಾಲೆ ಮಕ್ಕಳಿಗೆ ಲಸಿಕೆ ವಿತರಿಸಬೇಕು ಎಂದು ಸೂಚಿಸಲಾಗಿತ್ತು. ಎಷ್ಟು ಜನ ಇದನ್ನು ಗಂಭೀರವಾಗಿ ಪರಿಗಣಿಸಿದ್ದೀರೋ ತಿಳಿಯದು. ಕೆಲವೊಂದು ಜಿಲ್ಲೆಗಳಲ್ಲಿ ಮೂರು ಲಕ್ಷ ಮಕ್ಕಳಿದ್ದು, ನಾಳೆ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಎಂದು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
80 ಲಕ್ಷ ಮನೆಗಳಿಗೆ ನಲ್ಲಿ:ಜಲ ಜೀವನ್ ಮಿಷನ್ ಯೋಜನೆ ಅಡಿ 2023ರ ಮಾರ್ಚ್ ಅಂತ್ಯದೊಳಗೆ 80 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಸಿಎಂ ಬೊಮ್ಮಾಯಿ ಗಡುವು ವಿಧಿಸಿದರು. ಬ್ಯಾಚ್ -1 ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಮುಗಿಸುವ ನಿಟ್ಟಿನಲ್ಲಿ ಜೂ.15ರಂದು ಪರಿಶೀಲಿಸಬೇಕು. ಬ್ಯಾಚ್-2ರ ಕಾಮಗಾರಿಗಳನ್ನು ಜೂ.30ರಂದು ಪರಿಶೀಲಿಸಿದ ನಂತರ ವರದಿ ಸಲ್ಲಿಸುವಂತೆ ಸೂಚಿಸಿದರು.
ನರೇಗಾ ನೆರವಿಗಾಗಿ ಚರ್ಚೆ:ನರೇಗಾದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಂಪೌಂಡ್ ನಿರ್ವಣ, ಅಂಗನವಾಡಿ ಕಟ್ಟಡಗಳ ನಿರ್ವಣಕ್ಕೆ ಒತ್ತು ನೀಡಬೇಕು. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಜತೆಗೆ ರ್ಚಚಿಸಿ ಕ್ರಮವಹಿಸಲಾಗುವುದು. ಯೋಜನೆಯಡಿ ಏಪ್ರಿಲ್​ನಲ್ಲಿ ಮಾನವ ದಿನಗಳ ಸೃಜನೆಯಲ್ಲಿ ಶೂನ್ಯ ಸಾಧಿಸಿದ ಗ್ರಾಮ ಪಂಚಾಯಿತಿಗಳಿಗೆ ಸಿಇಒಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಿಎಂ ಬೊಮ್ಮಾಯಿ ಸೂಚಿಸಿದರು.
ವಸೂಲಿ ಮಂದ:ಸಾಮಾಜಿಕ ಪರಿಶೋಧನೆ ವಸೂಲಾತಿಯಡಿ ವರದಿಯಾಗಿರುವ ಪ್ರಕರಣಗಳಲ್ಲಿ ದುರ್ಬಳಕೆಯಾದ ಒಟ್ಟು 761 ಕೋಟಿ ರೂ.ಗಳ ಪೈಕಿ 15.54 ಕೋಟಿ ರೂ. ವಸೂಲಿಯಾಗಿದ್ದು, ಪ್ರಗತಿ ಮಂದವಾಗಿದೆ ಎಂದು ಬೊಮ್ಮಾಯಿ ಅತೃಪ್ತಿ ವ್ಯಕ್ತಪಡಿಸಿದರು. ಸಾರ್ವಜನಿಕರಿಂದಲೇ ಆಗುವ ಸಾಮಾಜಿಕ ಪರಿಶೋಧನೆಯು ಅನುದಾನ ಮತ್ತು ಕಾಮಗಾರಿಗಳ ಗುಣಮಟ್ಟದಲ್ಲಿ ದುರ್ಬಳಕೆಯಾಗುವುದನ್ನು ತಡೆಯುವ ಸಾಧನವಾಗಿದೆ. ಕೇಂದ್ರ ಸರ್ಕಾರವೂ ಹೆಚ್ಚಿನ ಮಹತ್ವ ನೀಡಿದ್ದು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ನಿರ್ದೇಶಿಸಿದರು.
ಹಲವು ಸಿಇಒಗಳ ವಿರುದ್ಧ ಗರಂ:ಶಿಶು ಮರಣ ಪ್ರಮಾಣ ರಾಜ್ಯದ ಸರಾಸರಿ ಶೇಕಡ 23ರಷ್ಟಿದೆ. ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಕಾಡುತ್ತಿದೆ. ಈ ಸಮಸ್ಯೆಗಳ ನಿವಾರಣೆಗೆ ಕಳೆದ ಮೂರು ದಶಕಗಳಿಂದ ನಿರಂತರ ಕಾರ್ಯಕ್ರಮಗಳು ಜಾರಿಯಲ್ಲಿದ್ದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲವೇಕೆ? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಜಿಪಂ ಸಿಇಒಗಳ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜತೆ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಸುನಿಲ್​ಕುಮಾರ್, ಮುನಿರತ್ನ, ಉಮೇಶ ಕತ್ತಿ, ಪ್ರಭು ಚವ್ಹಾಣ್, ಬಿ.ಸಿ.ನಾಗೇಶ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇದ್ದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 − 3 =
Remember me
