| ಡಾ. ಆನಂದರಾಮ ಉಪಾಧ್ಯ
ರಾಜಧಾನಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಯಕ್ಷಗಾನ ಸೇವೆ ಮಾಡಿದವರು ಸೂರ್ಯ ನಾರಾಯಣ ಪಂಜಾಜೆ. ಅವರು ಮೂಲತಃ ಕರ್ನಾಟಕ, ಕೇರಳ ಗಡಿಭಾಗದ ಪಂಜಾಜೆ ಗ್ರಾಮದವರು. ಇವರ ತಂದೆ ಶಂಕರ ಭಟ್ಟರು ಕನ್ನಡವನ್ನು ಆ ಭಾಗದಲ್ಲಿ ಉಳಿಸಲು ಶ್ರಮಿಸಿದವರು. ಎಸ್. ಎನ್. ಪಂಜಾಜೆಯವರು ಉದ್ಯೋಗಕ್ಕಾಗಿ ನಾನಾ ಊರುಗಳಲ್ಲಿ ಅಲೆದರು. ಕೊನೆಗೆ ಬೆಂಗಳೂರನ್ನು ಕಾರ್ಯಕ್ಷೇತ್ರ ಮಾಡಿಕೊಂಡರು. ಬೆಂಗಳೂರಿಗೆ ಬರುವ ಮುನ್ನ ಗುತ್ತಿಗೆದಾರರಾಗಿ, ನಾಟಕ ಕಂಪನಿಯ ವ್ಯವಸ್ಥಾಪಕರಾಗಿ, ಹರಿದಾಸರಾಗಿ, ನಾನಾ ವೃತ್ತಿಗಳಲ್ಲಿ ದುಡಿದು ಅಪಾರ ಜೀವನಾನುಭವ ಗಳಿಸಿದ್ದರು.
ಮೊದಲಿಗೆ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅವರು ತಮ್ಮ ಹವ್ಯಾಸವಾದ ಯಕ್ಷಗಾನವನ್ನು ಮರೆಯಲಿಲ್ಲ. ಹವ್ಯಾಸಿ ತಂಡದ ಪ್ರದರ್ಶನಗಳಲ್ಲಿ ವೇಷಧಾರಿಯಾಗಿ, ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಯಕ್ಷಗಾನಕ್ಕಾಗಿ ಅವರು ಮಾಡಿದ ಸೇವೆ ಅನನ್ಯ. ಏರುಸ್ವರದಲ್ಲಿನ ಅವರ ಪಾತ್ರ ನಿರ್ವಹಿಸುವ ವಿಧಾನ ಆಕರ್ಷಕ. ರಾವಣ, ದುರ್ಯೋಧನ, ರಾಕ್ಷಸ ಪಾತ್ರಗಳು ಅವರಿಗೆ ಹೆಚ್ಚಿನ ಹೆಸರನ್ನು ತಂದುಕೊಟ್ಟಿವೆ. ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವನ್ನು ಹುಟ್ಟುಹಾಕಿ ಅದರ ಅಧ್ಯಕ್ಷರಾಗಿ ಆ ತಂಡವನ್ನು ಯಶಸ್ಸಿಯಾಗಿ ಎರಡು ದಶಕಗಳಿಂದ ನಡೆಸಿಕೊಂಡು ಬಂದರು. ಹಾಗಿದ್ದೂ ಎಲ್ಲ ಹವ್ಯಾಸಿ ಕಲಾವಿದರಿಗೆ ಅಣ್ಣನಂತೆ ಪೋ›ತ್ಸಾಹಿಸಿದರು. ಎಳೆಯ ಮಕ್ಕಳಿಗೆ ತಾವೇ ವೇಷ ಕಟ್ಟುತ್ತಿದ್ದರು. ರಂಗದ ಎಲ್ಲ ಅಂಗಾಂಗಗಳ ಮೇಲೆ ಹಿಡಿತವಿದ್ದ ಅವರು ಪ್ರದರ್ಶನ ಎಲ್ಲೂ ಸೋಲದಂತೆ ನೋಡಿಕೊಳ್ಳುತ್ತಿದ್ದರು. ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವು ನಾಡಿನ ಬೇರೆ ಬೇರೆ ಕಡೆ ಪ್ರದರ್ಶನ ನೀಡುವ ಮೂಲಕ ಹೆಸರುಗಳಿಸಿದೆ. ಪಂಜಾಜೆಯವರು ತಮ್ಮ ತಂಡದೊಂದಿಗೆ ವಿದೇಶಗಳಲ್ಲಿ, ಅದರಲ್ಲೂ ಅಮೆರಿಕಾದಲ್ಲಿ ತೆಂಕುತಿಟ್ಟಿನ ಯಕ್ಷಗಾನದ ವೈಭವ ಮೆರೆಸಿದ್ದಾರೆ.
ಪಂಜಾಜೆಯವರದು ಸ್ನೇಹಮಯ ವ್ಯಕ್ತಿತ್ವ. ಇವೆಲ್ಲದರಿಂದಾಗಿ ಎಲ್ಲ ತಿಟ್ಟಿನವರ ಆದರಕ್ಕೆ ಭಾಜನರು. ಅವರ ಸಂಸ್ಥೆಯಲ್ಲಿ ತೆಂಕುತಿಟ್ಟಿನ ವೇಷಭೂಷಣಗಳಿದ್ದು ಅನೇಕ ಸಂಘಗಳಿಗೆ ನೀಡುತ್ತಿದ್ದರಲ್ಲದೆ, ಪ್ರಸಾಧನಕ್ಕೆ ಅವರೇ ಸಹಾಯ ಮಾಡುತ್ತಿದ್ದರು. ಕಿರಿಯರೆಲ್ಲ ‘ಪಂಜಾಜೆ ಮಾವ’ ಎಂದೇ ಕರೆಯುತ್ತಿದ್ದರು. ಎತ್ತರದ ಆಳು, ಗಟ್ಟಿಯಾದ ದನಿ, ದೃಢಕಾಯವಿದ್ದರೂ ಹೃದಯ ಮಾತ್ರ ಮಗುವಿನ ಸ್ವಭಾವದ್ದು. ಹಿಂದೊಂದು ಮುಂದೊಂದು ಇಲ್ಲ. ಎಲ್ಲವೂ ನೇರ. ಸೀದಾಸಾದ.
ಬೆಂಗಳೂರಿನಲ್ಲಿ ತಾಳಮದ್ದಲೆಯನ್ನು ಪ್ರಚುರಪಡಿಸುವಲ್ಲಿ ಇವರ ಪಾತ್ರ ಹಿರಿದು. ಹಿರಿಯ ಅರ್ಥಧಾರಿಗಳನ್ನು ಆಹ್ವಾನಿಸಿ ಕಳೆಕಟ್ಟುವಂತೆ ನೋಡಿಕೊಳ್ಳುತ್ತಿದ್ದರು. ದೂರದರ್ಶನ ಚಂದನ ವಾಹಿನಿಯ ಮೂಲಕ ಯಕ್ಷಗಾನ ಕಾರ್ಯಕ್ರಮಗಳು, ಕಲಾವಿದರ ಸಂದರ್ಶನಗಳು ಮೂಡಿ ಬರುವಲ್ಲಿ ಇವರ ಪಾತ್ರ ದೊಡ್ಡದು. ಎಲ್ಲಕ್ಕಿಂತ ಮುಖ್ಯವಾಗಿ ಪಂಜಾಜೆ ಯವರು ಹದಿನಾಲ್ಕು ಯಕ್ಷಗಾನ ಸಾಹಿತ್ಯ ಸಮ್ಮೇಳನದ ರೂವಾರಿ.
2004ರ ಫೆ. 7, 8 ಹಾಗೂ 9 ರಂದು ಚೊಚ್ಚಲ ಪ್ರಯತ್ನವಾಗಿ ಅಖಿಲ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಇವರು ಯಕ್ಷಗಾನ ಕೇವಲ ಕರಾವಳಿಯ ಕಲೆಯೆಂದು ಕರೆಯುವವರಲ್ಲ. ಯಕ್ಷಗಾನ ಇಡೀ ಕರ್ನಾಟಕದ ಕಲೆ. ಇದರ ಇತರ ಪ್ರಕಾರಗಳಾದ ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ಘಟ್ಟದ ಕೋರೆ ಮುಂತಾದ ಕಲಾಪ್ರಕಾರಗಳ ಕಲಾವಿದರನ್ನು ಸೇರಿಸಿಕೊಂಡಾಗ ಮಾತ್ರ ಸಮಗ್ರ ಯಕ್ಷಗಾನ ಸಮ್ಮೇಳನವಾಗುತ್ತದೆ ಎಂದು ದೃಢವಾಗಿ ನಂಬಿದವರು. ಅದೇ ರೀತಿ ಸಮ್ಮೇಳನ ನಡೆಸಿದರು.
2004 ರಲ್ಲಿ ಪ್ರಾರಂಭಗೊಂಡ ಅಖಿಲ ಭಾರತ ಯಕ್ಷಗಾನ ಬಯಲಾಟ ಸಮ್ಮೇಳನ ನಿರಂತರ ಹದಿನಾಲ್ಕು ಬಾರಿ ನಡೆಯಿತು. ಬೆಂಗಳೂರು, ಗದಗ, ಉಡುಪಿ, ಮಂಗಳೂರು, ಮೈಸೂರು, ಬಳ್ಳಾರಿ, ಶಿರಸಿ, ಪುತ್ತೂರು, ಶಿವಮೊಗ್ಗ, ಸಾಣೆಹಳ್ಳಿ, ಕುಂದಾಪುರ ಮುಂತಾದ ನಗರಗಳಲ್ಲಿ ಏರ್ಪಾಡಾಗಿತ್ತು. ಹದಿನೈದನೆಯ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ನಡೆಸಬೇಕೆಂಬ ಆಸೆ ಅವರಿಗಿತ್ತು. ಪಂಜಾಜೆಯವರ ಇನ್ನೊಂದು ಆಸಕ್ತಿಯ ಕ್ಷೇತ್ರ ಚಲನಚಿತ್ರ. ಅವರು ನಟರಾಗಿ, ನಿರ್ದೇಶಕರಾಗಿಯೂ ಈ ರಂಗವನ್ನು ಪ್ರವೇಶಿಸಿದ್ದರು.
ಇದೇ ವರ್ಷ ಕರ್ನಾಟಕ ಯಕ್ಷಗಾನ ಅಕಾಡೆಮಿಯು ನಡೆಸಿದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಪಂಜಾಜೆಯವರು ಗೌರವಿಸಲ್ಪಟ್ಟರು. 70ರ ಹರೆಯದಲ್ಲೂ ಚುರುಕಿನಿಂದ ಓಡಾಡಿಕೊಂಡಿದ್ದ ಅವರು ಹಠಾತ್ತನೆ ಇಲ್ಲವಾದದ್ದು ಬೆಂಗಳೂರಿನ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ.
ಇಂದು ಕಾರ್ಯಕ್ರಮ:ಬೆಂಗಳೂರಿನ ಯಕ್ಷಗಾನ ವಲಯದಲ್ಲಿ ಚಿರಪರಿಚಿತರಾಗಿದ್ದ ಸೂರ್ಯ ನಾರಾಯಣ ಪಂಜಾಜೆ ಹದಿನಾಲ್ಕು ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಗಮನ ಸೆಳೆದವರು. ಇತ್ತೀಚೆಗೆ ವಿಧಿವಶರಾದ ಅವರ ನೆನಪಿನಲ್ಲಿ ಇಂದು, ಜೂನ್ 4 ರಂದು ಬೆಂಗಳೂರಿನ ಕೋರಮಂಗಲದ ಎಡನೀರು ಮಠದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.
(ಲೇಖಕರು ಯಕ್ಷಗಾನ ವಿದ್ವಾಂಸರು)
ಯುವನಿಧಿ ಯೋಜನೆ ಅನುಷ್ಠಾನಕ್ಕೆ ಆದೇಶ; ಏನಿದೆ ಷರತ್ತು? ತಪ್ಪಿಗೆ ದಂಡವೂ ಇದೆ ಎಚ್ಚರಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 10 =
Remember me
