|ಶ್ರೀಕಾಂತ ಶೇಷಾದ್ರಿಬೆಂಗಳೂರು
ಕಳೆದ ಸಾಲಿನ ಬಜೆಟ್ ಘೋಷಣೆಗಳಲ್ಲಿ ಪ್ರಸ್ತುತ ಸುಮಾರು ಶೇ.60ರಷ್ಟು ಅನುಷ್ಠಾನಗೊಂಡಿವೆ, ಶೇ.20ರಷ್ಟು ಪ್ರಗತಿಯಲ್ಲಿದೆ, ಇನ್ನು ಕೆಲವು ಅಂತಿಮ ತೀರ್ವನವಾಗುವ ಹಂತದಲ್ಲಿದೆ. ಬಜೆಟ್ ಘೋಷಣೆಗಳು ಹಾಗೂ ಅವುಗಳ ಅನುಷ್ಠಾನ ಪ್ರಗತಿಯ ಹಂತವನ್ನು ವಿಜಯವಾಣಿ ಬೆನ್ನತ್ತಿದಾಗ ಈ ಸಂಗತಿ ಕಂಡುಬಂದಿದೆ.
ರೈತರ ಖಾತೆಗೆ ಧನಶಕ್ತಿ:ರೈತ ಶಕ್ತಿ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ.ಗಳಂತೆ ಡೀಸೆಲ್ ಸಹಾಯಧನಕ್ಕೆಂದು 600 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈ ಯೋಜನೆಯನ್ನು ಜೂನ್​ನಿಂದ ಆರಂಭಿಸುವುದಾಗಿ ಹೇಳಿದರೂ ಅದು ಜಾರಿಯಾಗಿದ್ದು ಎಂಟು ತಿಂಗಳ ಬಳಿಕ. ಅಂದರೆ ಫೆ.1ರಂದು ಸಾಂಕೇತಿಕವಾಗಿ ಉದ್ಘಾಟಿಸಿದ್ದು, 51.80 ಲಕ್ಷ ರೈತರಿಗೆ 383 ಕೋಟಿ ರೂ. ಜಮೆಯಾಗಿದೆ. ಪರಿಷ್ಕೃತ ರೂಪದಲ್ಲಿ ಯಶಸ್ವಿನಿ ಮರುಜಾರಿ ಮಾಡಲಾಗಿದ್ದು, 300 ಕೋಟಿ ಅನುದಾನ ಒದಗಿಸಲಾಗಿದೆ. ಪ್ರಸ್ತುತ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಆಸ್ಪತ್ರೆ ಎಂಪ್ಯಾನಲ್ ಸಮಸ್ಯೆ ಬಿಟ್ಟರೆ ಉಳಿದಂತೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದೇ ಹೇಳಬಹುದು.
ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು, ಫೆಬ್ರವರಿಯಲ್ಲಿ ಸಂಪುಟ ಅನುಮೋದನೆ ಕೊಟ್ಟಿದೆ. ಇನ್ನಷ್ಟೇ ಮುಂದಿನ ಚಟುವಟಿಕೆ ಆರಂಭವಾಗಬೇಕು. ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಪ್ರಾರಂಭಿಸುವ ಸರ್ಕಾರದ ಮಹತ್ವಾಕಾಂಕ್ಷೆಗೆ ರಿಸರ್ವ್ ಬ್ಯಾಂಕ್ ಅವಕಾಶ ನೀಡಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆಗೆ ಸಿಲುಕಿದೆ. ರಾಜ್ಯದಲ್ಲಿ ಗೋಶಾಲೆಯನ್ನು 100ಕ್ಕೆ ಹೆಚ್ಚಿಸುವ ಆರಂಭಿಸುವ ಗುರಿ ನಿರೀಕ್ಷಿತ ಗುರಿಮುಟ್ಟಿಲ್ಲ. ‘ಪುಣ್ಯಕೋಟಿ’ ದತ್ತು ಯೋಜನೆ ಕುಂಟುತ್ತಾ ಸಾಗಿದೆ. ವಲಸೆ ಕುರಿಗಾರರ ಕುಟುಂಬಕ್ಕೆ ಐದು ಲಕ್ಷ ರೂ. ವಿಮಾ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಮಾಡಿದ್ದು, ಅರ್ಜಿ ಕರೆಯಲಾಗಿದೆ.
ಆರೋಗ್ಯ ಆಯಾಮ:ಆರೋಗ್ಯ ಕ್ಷೇತ್ರಕ್ಕೆ ಬಂದರೆ 438 ನಮ್ಮ ಕ್ಲಿನಿಕ್ ಸ್ಥಾಪನೆ ಪ್ರಗತಿಯಲ್ಲಿದ್ದು, ಸಾಕಷ್ಟು ಕಡೆ ಸೇವೆ ಆರಂಭವಾಗಿದೆ. ಏಳು ತಾಲೂಕು ಆಸ್ಪತ್ರೆಗಳ ಹಾಸಿಗೆ ಸಂಖ್ಯೆ ಹೆಚ್ಚಳ ಮಾಡಲು ಅನುಮೋದನೆ ನೀಡಲಾಗಿದೆ.
ನೇಕಾರರಿಗೆ ಸಮ್ಮಾನ:ನೇಕಾರರ ಸಮ್ಮಾನ್ ಯೋಜನೆಯಡಿ ನೋಂದಾಯಿತ ಕೈಮಗ್ಗ ನೇಕಾರರ ವಾರ್ಷಿಕ ನೆರವನ್ನು 5 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. ನೇಕಾರರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ ಜಾರಿ ಮಾಡಲಾಗಿದೆ. 12 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಟ್ಟಡ ಕಾರ್ವಿುಕರಿಗೆ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭಿಸಲು ಅನುಮೋದನೆ ದೊರೆತಿದ್ದು, ಅನುಷ್ಠಾನಕ್ಕೆ ಪ್ರಯತ್ನ ನಡೆದಿದೆ. ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ.ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರಿಗೆ ಗೌರವಧನ ಹೆಚ್ಚಳ, ಪೌರ ಕಾರ್ವಿುಕರಿಗೆ ಸಂಕಷ್ಟ ಭತ್ಯೆ, ಪ್ರವಾಸಿ ಗೈಡ್​ಗಳಿಗೆ ಪ್ರೋತ್ಸಾಹಕ ಘೋಷಣೆ ಅನುಷ್ಠಾನಗೊಂಡಿದೆ.
ಅಸ್ಮಿತೆಗೆ ಬಲ:ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಬ್ರಾ್ಯಂಡಿಂಗ್ ಮೌಲ್ಯವರ್ಧನೆ, ಪ್ಯಾಕಿಂಗ್ ಸೌಲಭ್ಯ ಒದಗಿಸಿ, ಮಾರುಕಟ್ಟೆ ಒದಗಿಸಲು ‘ಅಸ್ಮಿತೆ’ ಹೆಸರಿನಡಿ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಹೋಬಳಿ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಆಯೋಜಿಸುವ ಉದ್ದೇಶವಿತ್ತು, ಏಪ್ರಿಲ್​ನಲ್ಲೇ ಆದೇಶ ಹೊರಟಿದೆ. ಸ್ಮರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಮುಖ್ಯಮಂತ್ರಿಗಳ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆ ಜಾರಿಮಾಡಿದ್ದು, ಕೋಚಿಂಗ್ ಸೆಂಟರ್ ಗುರುತಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಮೈಷುಗರ್ ಕಾರ್ಖಾನೆ ನಡೆಸಲು 50 ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿತ್ತು, ಪೂರ್ಣ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಬೇಕಿದೆ. ಕಲಬುರಗಿ, ವಿಜಯಪುರದಲ್ಲಿ ಮೆಗಾ ಟೆಕ್ಸ್​ಟೈಲ್ಸ್ ಪಾರ್ಕ್ ಸ್ಥಾಪನೆ ಸಂಬಂಧ ಕೇಂದ್ರದ ನೆರವು ಬಯಸಿರುವ ಸರ್ಕಾರ, ಪ್ರಕ್ರಿಯೆಯನ್ನು ಚಾಲನೆಯಲ್ಲಿಟ್ಟಿದೆ.
ಸರ್ವರಿಗೆ ಸೂರು ಕಲ್ಪನೆಯಲ್ಲಿ 5 ಲಕ್ಷ ಹೊಸ ಮನೆಗಳ ನಿರ್ವಣದ ಗುರಿಯಲ್ಲಿ ಅರ್ಧದಷ್ಟೂ ಪ್ರಗತಿ ಸಾಧಿಸಿಲ್ಲ; ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಾಗಿ ಹೇಳಿತ್ತು, ಈ ಬಗ್ಗೆ ದೊಡ್ಡ ಬೆಳವಣಿಗೆ ನಡೆದಂತೆ ಕಾಣಿಸುತ್ತಿಲ್ಲ; ನವ ಕರ್ನಾಟಕ ನಿರ್ವಣಕ್ಕಾಗಿ ಪ್ರತಿ ವಿಭಾಗದಲ್ಲಿ ತಲಾ ಒಂದು ಯೋಜನಾಬದ್ಧ ಪರಿಸರಸ್ನೇಹಿ ನವನಗರ ನಿರ್ವಿುಸುವುದಾಗಿ ಸರ್ಕಾರ ಹೇಳಿಕೊಂಡಿತ್ತು
ನೀರಾವರಿಗೆ ಹರಿದ ಹಣವೆಷ್ಟು?:ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ಕ್ಕೆ 5 ಸಾವಿರ ಕೋಟಿ ರೂ., ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ 1 ಸಾವಿರ ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ, ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗೆ ಒಂದಷ್ಟು ಖರ್ಚು ಮಾಡಲಾಗಿದೆ. ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್​ಲ್ಯಾಂಡ್ ಯೋಜನೆ ಅನುಷ್ಠಾನಕ್ಕೆ ಹಣ ಬಿಡುಗಡೆ ಮಾಡಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಸಮಗ್ರ ಕಲ್ಪನೆಯಲ್ಲಿ 3 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, 93 ತಾಲೂಕಲ್ಲಿ ಶಿಕ್ಷಣ ಗುಣಮಟ್ಟ ವೃದ್ಧಿ, 100 ತಾಲೂಕಲ್ಲಿ ಆರೋಗ್ಯ ಸೇವೆ ಬಲಪಡಿಸುವುದು ಮತ್ತು 102 ತಾಲೂಕುಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಎಂದು ಹೇಳಲಾಗಿತ್ತು, ಈ ಪ್ರಯತ್ನ ಕುಂಟುತ್ತಾ ಸಾಗಿದೆ. ಕೆಲವು ತಾಲೂಕುಗಳ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ.
ಶೈಕ್ಷಣಿಕ ಯೋಜನೆ:ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ಮಾಡಿ ಶಾಲೆಗಳ ಉನ್ನತೀಕರಣ ಪ್ರಯತ್ನ ಆರಂಭವಾಯಿತಾದರೂ ಚುನಾವಣೆ ಎದುರಿರುವಾಗ ಶಾಲೆಗಳ ವಿಲೀನದಿಂದ ಸಮಸ್ಯೆಯಾಗುತ್ತದೆ ಎಂಬ ಕೂಗು ಜನಪ್ರತಿನಿಧಿಗಳಿಂದ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೈಬಿಟ್ಟಿದೆ. 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ವಿುಸಲು ಅನುಮೋದನೆ ನೀಡಿ ‘ವಿವೇಕ’ ಎಂದು ಹೆಸರಿಟ್ಟಿದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯ ಸ್ಥಾಪನೆ ಘೋಷಿಸಿತು. ಆದರೆ ಧಾರಾಳ ಅನುದಾನ ನೀಡಲು ಕಂಜೂಸುತನ ತೋರಿತು. 250 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರಿನಲ್ಲಿ ಒಂದು ಸಾವಿರ ಸಾಮರ್ಥ್ಯದ ಬಹು ಮಹಡಿ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸಮುಚ್ಚಯ ಸ್ಥಾಪನೆಗೆ ಇನ್ನೂ ಜಾಗ ಹುಡುಕಾಟ ನಡೆದಿದೆ. ಕೆಲವೆಡೆ ಜಾಗ ಅಂತಿಮಗೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಯನ್ನು ಎಪಿಜೆ ಅಬ್ದುಲ್ ಕಲಾ ವಸತಿ ಶಾಲೆಯಾಗಿ ಮರು ನಾಮಕರಣ ಮಾಡಿ ಪದವಿಪೂರ್ವ ತರಗತಿ ಆರಂಭಿಸುತ್ತಿದೆ, ಸಿಬಿಎಸ್​ಇ ಮಾನ್ಯತೆ ಪಡೆಯಲಾಗಿದೆ. ರಾಜ್ಯದಲ್ಲಿ ನಾಲ್ಕು ನಾರಾಯಣಗುರು ವಸತಿ ಶಾಲೆ ಆರಂಭಿಸಿದ್ದು, ಇನ್ನೂ ಹತ್ತು ಕಡೆ ಆರಂಭಿಸಲು ಕಾರ್ಯೋನ್ಮುಖವಾಗಿದೆ.
ಹೇಳಿದ್ದು ಆಗಿದ್ದು:ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ ಇನ್ನೂ ಟೇಕಾಫ್ ಆಗಬೇಕಷ್ಟೆ. ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಪ್ರತಿ ಟನ್ ದ್ವಿದಳ ರೇಷ್ಮೆಗೆ 10 ಸಾವಿರ ರೂ. ಪ್ರೋತ್ಸಾಹಧನ, ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಪ್ರೋತ್ಸಾಹಧನ ಇನ್ನಷ್ಟೇ ಕೊಡಬೇಕು. 100 ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಪ್ರಾರಂಭಿಸುವುದಾಗಿ ಬಜೆಟ್​ನಲ್ಲಿ ಹೇಳಿಕೊಂಡಿತ್ತು, ಯಾವೆಲ್ಲ ಕ್ಷೇತ್ರದಲ್ಲಿ ಆರಂಭಿಸಲಾಗುತ್ತದೆ, ಎಲ್ಲೆಲ್ಲಿ ಜಾಗ ಗುರುತಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ, ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನ, ಬೆಳಗಾವಿ ಶಹಾಪುರದಲ್ಲಿ ಮೊಳಕಾಲ್ಮೂರು ಸೀರೆ ಮೈಕ್ರೋ ಕ್ಲಸ್ಟರ್ ಅಭಿವೃದ್ಧಿಪಡಿಸುವ ಕಲ್ಪನೆಗೆ ಮೂರ್ತರೂಪ ಬಂದಂತೆ ಕಾಣಿಸುತ್ತಿಲ್ಲ.
ಈ ಐ ಡ್ರಾಪ್ಸ್​ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!
ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
