| ಸಹನಾ ವಿಜಯಕುಮಾರ್ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿ ಮನುಷ್ಯನ ಬೌದ್ಧಿಕ, ಭಾವನಾತ್ಮಕ ಸಂಘರ್ಷಗಳಿಗೆ ಹಿಡಿದ ಕೈಗನ್ನಡಿ. ಪುರಾಣ ಕಲ್ಪನೆಗಳ ಆಧಾರವಿರದೆ ತನ್ನ ಸಂಘರ್ಷಗಳನ್ನು ತಾನೇ ಪರಿಹರಿಸಿಕೊಳ್ಳುವ ಮನುಷ್ಯನ ಪ್ರಾಮಾಣಿಕ ಯತ್ನ. ಅವನು ಭೀಷ್ಮ, ಕುಂತಿ, ದ್ರೋಣ, ಕೃಷ್ಣ, ದ್ರೌಪದಿ, ಹೀಗೆ ಹಲವು ಪಾತ್ರಗಳ ಮುಖೇನ ಓದುಗರಿಗೆ ಎದುರಾಗುತ್ತಾನೆ. ತನ್ನ ನೈತಿಕ, ಸಾಮಾಜಿಕ, ಭಾವನಾತ್ಮಕ ತೊಳಲಾಟಗಳನ್ನು ನಮ್ಮೆದುರು ತೆರೆದಿಡುತ್ತ ಧರ್ಮ, ಅಧರ್ಮಗಳ ನೆಲೆಯಲ್ಲಿ ಅವುಗಳನ್ನು ಅನುಭವಿಸುತ್ತಾನೆ. ಭಾರತಕಥೆಯ ನಿಷ್ಠುರಸತ್ಯ, ಕಟು ವಾಸ್ತವತೆಗಳಿಂದಾಗಿ ‘ಪರ್ವ’ ಮೊದಲ ಮುದ್ರಣ ಕಂಡ 44 ವರ್ಷಗಳ ನಂತರವೂ ವಾಚಕರ ಮನಸ್ಸಿನಲ್ಲಿ ಹಚ್ಚಹಸುರಾಗಿದೆ.
ಆದ್ದರಿಂದಲೇ ಈ ಹಿಂದೆ ಮೈಸೂರಿನ ರಂಗಾಯಣದಿಂದ ಅಡ್ಡಂಡ ಕಾರ್ಯಪ್ಪನವರ ನೇತೃತ್ವದಲ್ಲಿ ನಾಟಕರೂಪದಲ್ಲಿ ‘ಪರ್ವ’ ರಾಜ್ಯಾದ್ಯಂತ ಪ್ರದರ್ಶಿಸಲ್ಪಟ್ಟಾಗ ಅಭೂತಪೂರ್ವ ಯಶಸ್ಸು ಕಂಡಿತ್ತು. ಒಟ್ಟು 43 ಪ್ರದರ್ಶನಗಳಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರಲ್ಲದೆ ನಾಟಕ ಮುಗಿದ ನಂತರ ಹಲವು ನಿಮಿಷಗಳ ಕಾಲ ಎದ್ದು ನಿಂತು ಮೆಚ್ಚುಗೆಯ ಕರತಾಡನದ ಮೂಲಕ ತಂಡವನ್ನು ಅಭಿನಂದಿಸಿದ್ದರು. ನಾಟಕವನ್ನು ರಚಿಸಿ, ನಿರ್ದೇಶಿಸಿದ ಪ್ರಕಾಶ್ ಬೆಳವಾಡಿ ಅವರ ವಿರಾಟ್ ಪ್ರತಿಭೆ ಜನಕ್ಕೆ ಮತ್ತೊಮ್ಮೆ ಪರಿಚಯವಾಗಿತ್ತು. ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳದೇ ಮೇಲುಗೈಯಾಗಿ, ಜನರಿಗೆ ಕುಳಿತಲ್ಲಿ ಕೂರಲಾಗದೆ ಮನಸ್ಸಿನ ಏಕಾಗ್ರತೆ ಸಾಧಿಸುವುದೇ ಕಷ್ಟಸಾಧ್ಯವಾಗಿರುವ ಈ ದಿನಗಳಲ್ಲಿ ಸತತ ಎಂಟು ಗಂಟೆಗಳ ಕಾಲ ನೋಡುಗರನ್ನು ಸ್ವಸ್ಥಾನದಿಂದ ಅಲುಗದಂತೆ ಹಿಡಿದಿಟ್ಟಿತ್ತು ನಾಟಕ.
ಕನ್ನಡ ನಾಟಕವನ್ನು ರಚಿಸಿದಾಗ ಪ್ರಕಾಶ್ ಬೆಳವಾಡಿ ಅವರಿಗೆ ನಟರ ಆಯ್ಕೆಯ ಸ್ವಾತಂತ್ರ್ಯವಿರಲಿಲ್ಲ. ಈಗ ಅವರು ತಮ್ಮಿಚ್ಛೆಯ ನಟ-ನಟಿಯರ ಬಳಗದೊಂದಿಗೆ ‘ಪರ್ವ’ದ ಆಂಗ್ಲ ಅವತರಣಿಕೆಯ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಈ ವರ್ಷದ ಜುಲೈ ತಿಂಗಳಿನಿಂದಲೇ ನಾಟಕದ ಪ್ರದರ್ಶನಪೂರ್ವ ಅಭ್ಯಾಸ ಭರದಿಂದ ನಡೆದಿದೆ. ಐದು ಅಂಕಗಳ ನಾಟಕ ಒಟ್ಟು ಎಂಟುಗಂಟೆಗಳಲ್ಲಿ (ನಾಲ್ಕು ವಿರಾಮಗಳೊಂದಿಗೆ) ಅಮೋಘವಾಗಿ ಮೂಡಿಬರಲಿದೆ. ಇದೇ ತಿಂಗಳ 19ರಿಂದ 22ರವರೆಗೂ ಚೌಡಯ್ಯ ಸ್ಮಾರಕ ಭವನದಲ್ಲಿ ನಾಟಕ ಪ್ರದರ್ಶನ ಕಾಣಲಿದೆ. ಇದನ್ನು ಸವಿಯಲು ಟಿಕೇಟುಗಳನ್ನು ‘ಬುಕ್ ಮೈ ಶೋ’ ಆಪ್ ಮುಖಾಂತರ ಖರೀದಿಸಬಹುದು.
| ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯ
-ಪ್ರಕಾಶ್ ಬೆಳವಾಡಿ ಪ್ರತಿಭಾವಂತ ನಿರ್ದೇಶಕರು. ಅವರು ಸ್ವತಃ ನಟರೂ ಹೌದು. ನಾಟಕಗಳ ತಂತ್ರ, ಚಲನಚಿತ್ರಗಳ ತಾಂತ್ರಿಕತೆ ಎರಡೂ ಅವರಿಗೆ ಸಂಪೂರ್ಣ ಕರಗತವಾಗಿದೆ. ‘ಪರ್ವ’ದ ಹೂರಣ ಅರ್ಥವಾಗಿರುವುದರಿಂದ ಅದರ ಸಂಘರ್ಷ, ಭಾವಸಾಮಗ್ರಿಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಭಾಷೆ ಬೇರೆಯಾದರೂ ಕಾದಂಬರಿಯ ರಸ, ಧ್ವನಿ, ಔಚಿತ್ಯಗಳು ಮೂಲದಂತೆಯೇ ಇವೆ.
-‘ಪರ್ವ’ ಕರ್ನಾಟಕದ ವಸ್ತು ಮಾತ್ರವಲ್ಲ. ಅದು ಸಮಸ್ತ ಭಾರತಕ್ಕೆ ಸೇರಿದ್ದು. ಕೃತಿಯು ಕನ್ನಡವಲ್ಲದೆ ಪ್ರಾದೇಶಿಕ ಭಾಷೆಗಳಿಗೂ ಅನುವಾದಗೊಂಡಿದೆ. ಆದರೆ ಇಂದಿನ ಯುವಜನರ ಸಮಸ್ಯೆಯೆಂದರೆ ಎಲ್ಲರೂ ಇಂಗ್ಲಿಷ್ ಮೀಡಿಯಮ್ಲ್ಲಿ ಶಿಕ್ಷಣ ಪಡೆದು ಟೆಕ್ನಿಕಲ್ ಕೆಲಸಕ್ಕೆ ಸೇರಿರುತ್ತಾರೆ. ಕನ್ನಡಕ್ಕಿಂತ ಅಥವಾ ತಮ್ಮ ಮಾತೃಭಾಷೆಗಳಿಗಿಂತ ಇಂಗ್ಲಿಷ್ ಅವರಿಗೆ ಹೆಚ್ಚು ಸಮೀಪದ್ದಾಗಿರುತ್ತೆ. ಭಾರತೀಯರೆಲ್ಲರಿಗೂ ಅರ್ಥವಾಗುವ, ಅವರು ಸಂವಹಿಸುವ ಭಾಷೆ ಇಂಗ್ಲಿಷ್. ಆ ಭಾಷೆಗೂ ಹಲವು ಛಾಯೆಗಳಿವೆ. ಆದರೆ ನಮ್ಮದು ಭಾರತೀಯ ಇಂಗ್ಲಿಷ್. ಎಂದರೆ ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಅನುವಾದಿಸುವಾಗ ನಮ್ಮದೇ ನಿರ್ದಿಷ್ಟ ಪದಪುಂಜಗಳನ್ನು ಕಂಡುಕೊಂಡಿದ್ದೇವೆ. ಆ ಅಭಿವ್ಯಕ್ತಿಯನ್ನು ಅನುಸರಿಸಿದರೆ ಎಲ್ಲವೂ ಅರ್ಥವಾಗುತ್ತೆ. ‘ಪರ್ವ’ ಮೂಡಿಬರುತ್ತಿರುವುದೂ ಅದೇ ಇಂಗ್ಲಿಷಿನಲ್ಲೇ.
– ಕೃತಿಯ ವಿಸ್ತಾರ, ಮಹತ್ವ ಗಮನಿಸಿದಾಗ ಎಂಟು ಗಂಟೆ ದೀರ್ಘ ಅವಧಿ ಎನಿಸುವುದಿಲ್ಲ. ನಾನು ಮಹಾಭಾರತ ಯುದ್ಧವನ್ನು ಕೇಂದ್ರವಾಗಿ ಇರಿಸಿಕೊಂಡು ಯುದ್ಧಸಿದ್ಧತೆಯಿಂದ ಕಾದಂಬರಿಯನ್ನು ಆರಂಭಿಸಿದ್ದೀನಿ. ಮುಖ್ಯಪಾತ್ರಗಳು ತಮ್ಮ ಗತಜೀವನದ ಅವಲೋಕನದಲ್ಲಿ, ವರ್ತಮಾನದ ಆಗುಹೋಗುಗಳಲ್ಲಿ, ಜೀವನಮೌಲ್ಯವನ್ನು ಕಂಡುಕೊಳ್ಳಲು ಹೆಣಗುತ್ತವೆ. ನಂತರ ಯುದ್ಧ ಆರಂಭವಾಗುತ್ತೆ. ಅದರ ವಿವರಣೆ, ಮುಕ್ತಾಯ, ಹೀಗೆ ಕಥಾವಸ್ತು ವಿಶಾಲವಾಗಿದೆ. ಸಂಕೀರ್ಣವಾಗಿದೆ. ಅದರ ಸಾಂದ್ರತೆಯನ್ನು ನಾಟಕ ರೂಪದಲ್ಲಿ ಬಿಡಿಸಿ ತೋರಿಸಬೇಕಾದರೆ ಅಷ್ಟು ಅವಧಿ ಬೇಕು. ಪ್ರಕಾಶ್ ಬೆಳವಾಡಿ ಗೆದ್ದಿರುವುದು ಎಲ್ಲಿ ಎಂದರೆ ನಾಟಕ ನೋಡುತ್ತಿರುವಷ್ಟು ಹೊತ್ತು ಜನರಿಗೆ ಸಮಯ ಸರಿದದ್ದೇ ತಿಳಿಯುವುದಿಲ್ಲ.
– ನಿಸ್ಸಂದೇಹವಾಗಿ ‘ಪರ್ವ’. ಇದರಲ್ಲಿ ಇತರ ನಾಟಕಗಳಲ್ಲಿ ಮಾಡಿರುವಂತೆ ಸೀಮಿತ ಅವಧಿಯಲ್ಲಿ ಕಥೆಯನ್ನು ಹಿಸುಕಿ ಮುಗಿಸಿಲ್ಲ. ಕಾದಂಬರಿಯ ಹರಹಿನಂತೆಯೇ ನಾಟಕಕ್ಕೂ ಬೆಳೆಯುವ ಅವಕಾಶ ನೀಡಲಾಗಿದೆ. ಮೌಲ್ಯಮೀಮಾಂಸೆ, ಸಂಬಂಧ ಸೂಕ್ಷ್ಮ ಗಳಿರುವ ದೊಡ್ಡ ಕೃತಿಗಳಿಗೆ ಅವಧಿಯೂ ಹೆಚ್ಚು ಬೇಕು. ನಿರ್ದೇಶಕರಿಗೆ ಸೂಕ್ಷ್ಮಗಳನ್ನು ಗ್ರಹಿಸುವ ಶಕ್ತಿ, ಹಾಗೇ ಅದನ್ನು ಪಾತ್ರಧಾರಿಗಳಿಗೆ ಮನದಟ್ಟು ಮಾಡಿಸುವ ನೈಪುಣ್ಯ ಬೇಕು.
ಮ್ಯಾನೇಜ್​ಮೆಂಟ್ ಮೀಟಿಂಗ್​ನಲ್ಲಿ ಅಂಗಿ ಧರಿಸದೆ ಭಾಗವಹಿಸಿದ ಸಿಇಒ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
