ಬೆಳಗಾವಿ:ವಿಧಾನಸಭೆ ಸ್ಪೀಕರ್ ಪೀಠದ ಕುರಿತು ತೆಲಂಗಾಣ ಚುನಾವಣೆ ವೇಳೆ ಸಚಿವ ಜಮೀರ್ ಅಹ್ಮದ್ ಆಡಿದ ಮಾತುಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಜಂಟಿಯಾಗಿ ಧರಣಿ ನಿರತವಾಗಿರುವಾಗಲೇ ಐದು ಮಹತ್ವದ ವಿಧೇಯಕಗಳು ಚರ್ಚೆ ಇಲ್ಲದೆ ಅಂಗೀಕಾರಗೊಂಡವು.
ಅಧಿವೇಶನದ ಎರಡನೇ ಚರಣ ಸೋಮವಾರ ಆರಂಭವಾಗಿದ್ದು, ಸರ್ಕಾರದ ವಿರುದ್ಧ ಪ್ರತಿಪಕ್ಷ ಸಂಘಟಿತ ಹೋರಾಟ ಕೈಗೊಂಡಿದೆ. ಹಠಕ್ಕೆ ಬಿದ್ದ ಸರ್ಕಾರ ಪ್ರತಿಪಕ್ಷದ ಮನವೊಲಿಕೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡದೆ ವಿಧೇಯಕ ಅಂಗೀಕಾರಕ್ಕೆ ಆದ್ಯತೆ ನೀಡಿತು. ಪರಿಣಾಮ ಚರ್ಚೆಗೆ ಅವಕಾಶ ಇಲ್ಲದಂತೆ ವಿಧೇಯಕಗಳು ಶಾಸನ ಸಭೆಯ ಒಪ್ಪಿಗೆ ಪಡೆದವು. ಆದರೆ ಸಭಾಧ್ಯಕ್ಷ ಖಾದರ್ ಮಾತ್ರ ಬಿಜೆಪಿ ಸದಸ್ಯರಿಗೆ ಪದೇಪದೆ ಆಸನಗಳಿಗೆ ಹೋಗುವಂತೆ ಮನವಿ ಮಾಡಿಕೊಂಡರು. ನೋಟಿಸ್ ಕೊಟ್ಟು ಮಂಗಳವಾರ ಚರ್ಚೆ ಮಾಡಿ ಎಂದು ಹೇಳಿದರೂ ಕೇಳುವ ಸ್ಥಿತಿಯಲ್ಲಿ ವಿಪಕ್ಷಗಳು ಇರಲಿಲ್ಲ.
ಆನ್​ಲೈನ್ ಗೇಮಿಂಗ್​ಗೆ ಜಿಎಸ್​ಟಿ:ಆನ್​ಲೈನ್​ನಲ್ಲಿ ದಂಡನಾರ್ಹ ಕ್ರೀಡೆಗಳಿಗೆ ಶೇ.28 ಜಿಎಸ್​ಟಿ ವಿಧಿಸುವ ಸರಕá-ಸೇವೆಗಳ ತಿದ್ದುಪಡಿ ವಿಧೇಯಕದ ಪರ್ಯಾಲೋಚನೆ ಪ್ರಕ್ರಿಯೆ ನಡೆಯಿತು. ಜಿಎಸ್​ಟಿ ಕೌನ್ಸಿಲ್​ನ 51ನೇ ಸಭೆಯಲ್ಲಿ ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್ ಹಾಗೂ ಲಾಟರಿಗೆ ಶೇ.28 ಜಿಎಸ್​ಟಿ ವಿಧಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದರ ಅನುಸಾರ ಎಲ್ಲ ರಾಜ್ಯಗಳು ಜಿಎಸ್​ಟಿ ಕಾಯಿದೆಗೆ ತಿದ್ದುಪಡಿ ತರಬೇಕಿದ್ದರಿಂದ ಸಂಪುಟದ ಒಪ್ಪಿಗೆಯೊಂದಿಗೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು.
ಈ ಸುಗ್ರೀವಾಜ್ಞೆಯನ್ನು ಈಗ ಕಾಯಿದೆ ರೂಪದಲ್ಲಿ ಜಾರಿಗೆ ತರಲು ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿತ್ತು. ಹಣಕಾಸು ವಹಿವಾಟು ಹೊಂದಿರುವ ಎಲ್ಲ ಬಗೆಯ ಆನ್​ಲೈನ್ ಗೇಮ್ ಕಾನೂನು ಪ್ರಕಾರ ತಾತ್ಕಾಲಿಕ ಅಥವಾ ಅನುಮತಿ ಪಡೆದ ಆಟಗಳು (ಚಾನ್ಸ್ , ಸ್ಕಿಲ್ ) ದಂಡನಾರ್ಹ ಕ್ರೀಡೆಗಳು ಎಂದು ಪರಿಗಣಿಸಲ್ಪಟ್ಟ ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ, ಆನ್​ಲೈನ್ ಮನಿ ಗೇಮಿಂಗ್ ಇದರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ.
ಮುದ್ರಾಂಕ ಶುಲ್ಕ ಹೆಚ್ಚಳ:ಸಾಲದ ಕರಾರು ಪತ್ರ, ಅಡಮಾನ, ದತ್ತು, ಹಸ್ತಾಂತರ ಪ್ರಮಾಣಪತ್ರ, ಒಪ್ಪಂದ ಪತ್ರ ಸೇರಿ 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಕನಿಷ್ಠ ಎರಡರಿಂದ ನಾಲ್ಕು ಪಟ್ಟು ಹೆಚ್ಚಿಸಲು ಮುದ್ರಾಂಕ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ವಿವಾಹ ವಿಚ್ಛೇದನ ಪ್ರಮಾಣಪತ್ರ, ವಿಭಾಗ ಪತ್ರ, ಬಾಂಡ್​ಗಳು, ಗುತ್ತಿಗೆ ಒಪ್ಪಂದಗಳೂ ಈ ಮಸೂದೆ ವ್ಯಾಪ್ತಿಯಲ್ಲಿವೆ. ಕಂಪನಿ ಆರಂಭಕ್ಕೆ ಸಂಬಂಧಿಸಿದ ಒಪ್ಪಂದ, ಚಿಟ್ ಫಂಡ್ ಒಪ್ಪಂದ, ವಕೀಲರ ಅಫಿಡವಿಟ್​ಗಳ ಮುದ್ರಾಂಕ ಶುಲ್ಕ ಹೆಚ್ಚಿಸಲಾಗುತ್ತದೆ.
ಈ ಮಸೂದೆಯ ಪರ್ಯಾಲೋಚನೆ ವೇಳೆ ವಿವರಣೆ ನೀಡಿದ ಕಂದಾಯ ಸಚಿವರು, ನೋಂದಣಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ ಎಂಬ ತಪು್ಪ ಅಭಿಪ್ರಾಯ ರವಾನೆಯಾಗಿದೆ. ಆದರೆ ಇದು ನೋಂದಣಿಯೇತರ ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾತ್ರವಾಗಿದೆ ಎಂದರು. ಬ್ರಿಟಿಷ್ ಕಾಲದಿಂದಲೂ ಈ ಶುಲ್ಕ ವಿಧಿಸಲಾಗುತ್ತಿದೆ. 1994ರ ಬಳಿಕ ಪರಿಷ್ಕರಣೆಯಾಗಿಲ್ಲ, 5, 10,20 ರೂ.ನಷ್ಟಿದ್ದ ಶುಲ್ಕವನ್ನು ಈಗ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತಿದೆ. ಆದಾಯ ಸೋರಿಕೆ ತಡೆಗಟ್ಟುವ ಪ್ರಯತ್ನದ ಭಾಗವಾಗಿ ಪರಿಷ್ಕರಣೆ ನಡೆದಿದೆ ಎಂದರು.
ದತ್ತು ಪ್ರಮಾಣಪತ್ರದ ಮುದ್ರಾಂಕ ಶುಲ್ಕವು 500ರಿಂದ 1,000 ರೂ.ಗಳಿಗೆ ಹೆಚ್ಚಳವಾಗಲಿದೆ. ಅಫಿಡವಿಟ್ ಶುಲ್ಕ 20ರಿಂದ 100 ರೂ.ಗಳಿಗೆ, 1 ಲಕ್ಷದವರೆಗಿನ ಚಿಟ್​ಫಂಡ್ ಒಪ್ಪಂದದ ಮುದ್ರಾಂಕ ಶುಲ್ಕವನ್ನು 100ರಿಂದ 500 ರೂ.ಗಳಿಗೆ, 1 ಲಕ್ಷದವರೆಗಿನ ಸಾಲದ ಒಪ್ಪಂದದ ಮೇಲಿನ ಮುದ್ರಾಂಕ ಶುಲ್ಕವನ್ನು ಶೇ. 0.1ರಿಂದ ಶೇ 0.5ಕ್ಕೆ ಹೆಚ್ಚಿಸಲಾಗುತ್ತಿದೆ. ಕಂಪನಿ ಆರಂಭಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳಿಗೆ ಪ್ರಸ್ತುತ 10ರಿಂದ 50 ಲಕ್ಷದವರೆಗಿನ ಮೌಲ್ಯದ ಕಂಪನಿಗಳಿಗೆ ಪ್ರತಿ ಹತ್ತು ಲಕ್ಷಕ್ಕೆ 1,000 ರೂ. ಶುಲ್ಕವಿದೆ. ಅದನ್ನು ಪ್ರತಿ ಹತ್ತು ಲಕ್ಷದಿಂದ 1 ಕೋಟಿಯವರೆಗಿನ ಮೌಲ್ಯದ ಕಂಪನಿಗಳಿಗೆ ಪ್ರತಿ ಹತ್ತು ಲಕ್ಷಕ್ಕೆ 5,000 ರೂ. ಶುಲ್ಕ ವಿಧಿಸಲಾಗುತ್ತದೆ.
ಜನಸಂಖ್ಯೆ ನಿಗದಿ:ಜಿಪಂ ಸ್ಥಾನಗಳಿಗೆ ಜನಸಂಖ್ಯೆ ನಿಗದಿ ಮಾಡುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಲಾಯಿತು. ಕೊಡಗು ಹಾಗೂ ಶೃಂಗೇರಿ ಶಾಸಕರು ಸರ್ಕಾರ ನಿಗದಿ ಮಾಡಿರುವ ಸಂಖ್ಯೆಯ ಬಗ್ಗೆ ಆಕ್ಷೇಪಿಸಿದರು. ಮಲೆನಾಡು ಭಾಗದಲ್ಲಿ 30-35 ಸಾವಿರ ಜನಸಂಖ್ಯೆಗೆ ಒಂದು ಕ್ಷೇತ್ರ ಎಂದು ನಿಗದಿ ಮಾಡಲಾಗಿದ್ದು, ಇಷ್ಟೊಂದು ನಿಗದಿ ಮಾಡಿದರೆ ಭೌಗೋಳಿಕವಾಗಿ ದೊಡ್ಡ ಕ್ಷೇತ್ರವಾಗುತ್ತದೆ ಎಂಬುದು ಆಡಳಿತ ಪಕ್ಷದ ಶಾಸಕರ ಆಕ್ಷೇಪವಾಗಿತ್ತು.
ಕರಾವಳಿ ಅಭಿವೃದ್ಧಿ ಮಂಡಳಿ:ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಪರ್ಯಾಲೋಚನೆ ನಡೆಸಲಾಯಿತು. ಯಾವೊಬ್ಬ ಶಾಸಕರೂ ಈ ವಿಧೇಯಕದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ.
ಗ್ರಾಮೀಣ ಸೇವೆ ಕಡ್ಡಾಯವಲ್ಲ:2023ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಲಾಯಿತು. ಈವರೆಗೆ ವೈದ್ಯರ ಕೊರತೆ ಇತ್ತು, ಅದನ್ನು ನೀಗಿಸಲು ಕಡ್ಡಾಯ ಸೇವೆಗೆ ಅವಕಾಶ ಮಾಡಿಕೊಳ್ಳಲಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಅವಕಾಶಗಳನ್ನು ಇಟ್ಟುಕೊಂಡು ಕಾಯ್ದೆ ತರಲಾಗಿದೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
