ಬೆಂಗಳೂರು:70 ವರ್ಷಗಳ ಸ್ವಾತಂತ್ರಾ್ಯ ನಂತರ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಸಭೆಯಲ್ಲಿ ನಡೆದ ಸಂವಿಧಾನ ಕುರಿತ ಸುದೀರ್ಘ ಚರ್ಚೆಗೆ ತೆರೆ ಬಿದ್ದಿದೆ. ಚರ್ಚೆಯಲ್ಲಿ ವಿಚಾರ ಮಂಡನೆ ಮಾಡಿದ ಶಾಸಕರ ಅಭಿಪ್ರಾಯ, ಸಲಹೆಗಳನ್ನು ಕ್ರೋಡೀಕರಿಸಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಲೋಕಸಭಾ ಅಧ್ಯಕ್ಷರಿಗೆ ಸಲ್ಲಿಸಲಾಗುತ್ತದೆ ಎಂದು ಚರ್ಚೆಯ ಕೊನೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ಈ ವಿಶೇಷ ಚರ್ಚೆಯಲ್ಲಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಸೇರಿ 47 ಸದಸ್ಯರು 28 ಗಂಟೆ ಮಾತನಾಡಿದ್ದಾರೆ. ಸದಸ್ಯರು ತಮ್ಮದೇ ಆದ ಭಾವನೆಗಳನ್ನು ವ್ಯಕ್ತಪಡಿಸಿ ದ್ದಾರೆ. ಕರ್ನಾಟಕದ ಇತಿಹಾಸದಲ್ಲಿ 15ನೇ ವಿಧಾನಸಭೆಯ 6ನೇ ಅಧಿವೇಶನವು ಸುವರ್ಣಾಕ್ಷರಗಳಲ್ಲಿ ಬರೆದಿಡ ಬಹುದಾಗಿದ್ದೆಂದು ಭಾವಿಸಿದ್ದೇವೆ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಇರುವುದರಿಂದ ನಾವಿದ್ದೇವೆ ಎನ್ನುವುದು ನನ್ನ ಪ್ರಾಮಾಣಿಕ ತಿಳುವಳಿಕೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಭೂತ ಕರ್ತವ್ಯ, ಹಕ್ಕುಗಳನ್ನು ತಲುಪಿಸುತ್ತೇವೆ ಎನ್ನುವ ಪ್ರಾಮಾಣಿಕ ಭರವಸೆಯನ್ನು ರಾಜ್ಯದ ಜನತೆಗೆ ನಾವೆಲ್ಲರೂ ನೀಡೋಣ. ಪಕ್ಷ ಬೇದ ಮರೆತು ಸಂವಿಧಾನದ ಆಶಯಗಳೇ ನಮ್ಮ ಆದರ್ಶಗಳು, ಸಂವಿಧಾನದ ತಿರುಳೇ ನಮ್ಮ ಮಂತ್ರ, ಸಂವಿಧಾನದ ವಿಧಿಗಳೇ ನಮ್ಮ ಮಾರ್ಗಸೂಚಿಗಳು ಎಂದು ಪ್ರತಿಜ್ಞೆ ಮಾಡೋಣವೆಂದು ಶಾಸಕರಿಗೆ ಕರೆ ನೀಡಿದರು.
ಮಾಜಿ ಸ್ಪೀಕರ್ ರಮೇಶ್​ಕುಮಾರ್, ಸಂವಿಧಾನದ ಮೇಲಿನ ಚರ್ಚೆಗೆ ಅವಕಾಶ ಕೊಡುವುದರಿಂದ ಸದನದ ಘನತೆ ಹೆಚ್ಚಿಸಿದ್ದೀರಿ, ಶಾಸಕರು ಅನೇಕ ವಿಚಾರ ಅರಿಯುವಂತಾಯಿತು. ಇಡೀ ಸದನದ ಪರವಾಗಿ ನಿಮಗೆ ಸೆಲ್ಯೂಟ್ ಎಂದು ಸ್ಪೀಕರ್​ಗೆ ಕೈ ಮುಗಿದರು. ಆಡಳಿತ ಪಕ್ಷದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜೆಡಿಎಸ್ ಪರವಾಗಿ ಎಚ್.ಕೆ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದರು.
ಸ್ಪೀಕರ್ ಕಣ್ಣೀರು
ಸಂವಿಧಾನದ ಮೇಲಿನ ಚರ್ಚೆಯ ಕೊನೆಯಲ್ಲಿ ಭಾವುಕರಾದ ಸ್ಪೀಕರ್ ಒಂದು ನಿಮಿಷ ಕಾಲ ಭಾಷಣ ನಿಲ್ಲಿಸಿದರು. ಕಣ್ಣಲ್ಲಿ ಬರುತ್ತಿದ್ದ ನೀರು ಒರೆಸಿಕೊಂಡು ಸವಾರಿಸಿಕೊಂಡ ಅವರು ನಂತರ ಭಾಷಣಕ್ಕೆ ಕೊನೆ ಹಾಡಿದರು.
ಚರ್ಚೆಗೆ ಪ್ರೇರಣೆ ಏನು?
ಸಂವಿಧಾನ ಮೇಲಿನ ಚರ್ಚೆ ಮಾಡಲು ನಿಮಗೆ ಯಾರ ಪ್ರೇರಣೆ? ಎಂದು ನೇರವಾಗಿ ಸ್ಪೀಕರ್ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು. ನಾವಂತೂ ಯಾರೂ ಸಂವಿಧಾನ ಮೇಲಿನ ಚರ್ಚೆ ಮಾಡಿ ಎಂದು ಒತ್ತಾಯಿಸಿರಲಿಲ್ಲ. ಬೇರೆಯವರೂ ಕೇಳಿರಲಿಲ್ಲ. ಆದರೂ ಈ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ದು ಏನು ವಿಶೇಷ ಎಂದು ಪ್ರಶ್ನಿಸಿದರು. ‘ಸಂವಿಧಾನಕ್ಕೆ 70 ವರ್ಷ ತುಂಬಿದ ಹೊತ್ತಿನಲ್ಲಿ ಚರ್ಚೆ ನಡೆಯಲಿ ಎಂದು ನಾನೇ ನಿರ್ಧರಿಸಿದೆ’ ಎಂದು ಸ್ಪೀಕರ್ ಕಾಗೇರಿ ಹೇಳಿದ ಬಳಿಕ, ಹಾಗಾದರೆ ನಾನು ನಿಮಗೆ ಅಭಿನಂದಿಸುತ್ತೇನೆ ಎಂದರು. 65 ಜನ ಶಾಸಕರು ಸದನದಲ್ಲಿ ಸಂವಿಧಾನ ಬಗ್ಗೆ ಚರ್ಚೆ ಮಾಡಿರುವುದು. ಇಷ್ಟು ಸುದೀರ್ಘ ಅವಧಿ ತನಕ ಒಂದೇ ವಿಷಯ ಬಗ್ಗೆ ಚರ್ಚೆ ಆಗಿರುವುದನ್ನು ನಾನಂತೂ ನೋಡಿರಲಿಲ್ಲ ಎಂದರು.
18 ವರ್ಷಗಳ ಬಳಿಕ ಸಚಿವರಾದ ಗೌಡರು
ಎಚ್.ಡಿ.ದೇವೇಗೌಡರು ಶಾಸಕರಾಗಿ 18 ವರ್ಷದ ಬಳಿಕ ಸಚಿವರಾದರು. ನಾನು ಶಾಸಕನಾಗಿ 18 ತಿಂಗಳಿಗೆ ಸಚಿವನಾದೆ. ಕುಮಾರಸ್ವಾಮಿ ಅವರಿಗೆ ಮೊದಲು ಶಾಸಕರಾದ ಅವಧಿಯಲ್ಲಿಯೇ ಸಿಎಂ ಆಗುವ ಯೋಗ ಕೂಡಿ ಬಂತು ಎಂದು ಎಚ್.ಡಿ.ರೇವಣ್ಣ ಹೇಳಿದ್ದು ಸದನದಲ್ಲಿ ಚರ್ಚೆಗೆ ಗ್ರಾಸವಾಯಿತು. ‘ಓ ನಿಮ್ಮ ಹಣೆಬರಹವನ್ನು ಇಲ್ಲಿ ಹೇಳಿಕೊಳ್ಳುತ್ತಿದ್ದೀರಾ?’ ಎಂದು ಜೆ.ಸಿ.ಮಾಧುಸ್ವಾಮಿ ಕಿಚಾಯಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಜಾತಕ ಚೆನ್ನಾಗಿದೆ. ಶಾಸಕರಾದ ಮೊದಲ ಅವಧಿಯಲ್ಲಿಯೇ ಸಿಎಂ ಆಗುವ ಯೋಗವಿದೆ ಎಂದು ದೇವೇಗೌಡರು ತುಂಬಾ ಹಿಂದೆಯೇ ನಮಗೆ ಹೇಳಿದ್ದರು. ಆದರೆ ಯಾಕೋ ರೇವಣ್ಣ ಜಾತಕ ದೇವೇಗೌಡರ ಜಾತಕ ಜತೆಗೆ ಸೇರಿಕೊಂಡಿದೆ. ಅವರಿಗಿನ್ನೂ ಅದೃಷ್ಟ ಒಲಿದುಬರಬೇಕು ಎಂದಾಗ ಸದನ ನಗೆಗಡಲಿನಲ್ಲಿ ತೇಲಿತು.
ಲೋಪ ಸರಿಪಡಿಕೆ
ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಕೆಲ ಲೋಪಗಳಾಗಿದ್ದು, ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನಡೆಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ವಿಧಾನಸಭೆಯಲ್ಲಿ ಶೂನ್ಯ ವೇಳೆ ಎಚ್.ಡಿ.ರೇವಣ್ಣ ಪ್ರಸ್ತಾಪಿಸಿದ್ದ ವಿಷಯಕ್ಕೆ ಉತ್ತರಿಸಿ, ಅಧ್ಯಕ್ಷ- ಉಪಾದ್ಯಕ್ಷರ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದ ಕಾರಣ ವಿಳಂಬವಾಗಿತ್ತು. ಈಗ ಅಧಿಸೂಚನೆ ಹೊರಡಿಸಲಾಗಿದ್ದರೂ ಇನ್ನೂ ಲೋಪದೋಷಗಳಿವೆ ಎಂದರು.
ಸದನದಲ್ಲಿ ಅಣ್ಣ-ತಮ್ಮಂದಿರ ಜಗಳ್​ಬಂದಿ
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡುವಾಗ ಆಗಿಂದಾಗ್ಗೆ ಮಧ್ಯೆ ಪ್ರವೇಶ ಮಾಡುತ್ತಿದ್ದ ಎಚ್.ಡಿ.ರೇವಣ್ಣ ಅವರ ಜಗಳ್​ಬಂದಿ ಸದನದಲ್ಲಿ ಗಮನ ಸೆಳೆಯಿತು. ಭ್ರಷ್ಟ ವ್ಯವಸ್ಥೆ ಬಗ್ಗೆ ಸಿಎಂ ಗಮನ ಹರಿಸಬೇಕು. ನಾನು ಸಿಎಂ ಆಗಿದ್ದಾಗ, ಕೆಲ ಅಧಿಕಾರಿಗಳು ನನ್ನ ಬಳಿ ಬಂದಿದ್ದರು. ಅವರನ್ನು ಮುಲಾಜಿಲ್ಲದೆ ಆಚೆ ಇಟ್ಟಿದ್ದೆ. ಅದೇ ಅಧಿಕಾರಿಗಳು ಈಗ ನಿಮ್ಮ ಬಳಿ ಬಂದಿದ್ದಾರೆ ಎಂದು ಎಚ್​ಡಿಕೆ ಮುಖ್ಯಮಂತ್ರಿಗಳ ಗಮನ ಸೆಳೆದರು. ಆಗ ಮಧ್ಯ ಪ್ರವೇಶಿಸಿದ ರೇವಣ್ಣ, ಅವರು ಯಾರೆಂದು ಹೇಳಬೇಕು ಎಂದು ಒತ್ತಾಯಿಸಿದರು. ಅವರ ಹೆಸರೆಲ್ಲವೂ ಇಲ್ಲಿ ಬೇಡ ಎಂದು ಎಚ್​ಡಿಕೆ ಹೇಳಿದರೆ, ಇಲ್ಲ ಹೇಳಲೇಬೇಕು ಎಂದು ರೇವಣ್ಣ ಪಟ್ಟು ಹಿಡಿದರು. ನೀವು ಹೇಳದಿದ್ದರೂ ಪರವಾಗಿಲ್ಲ. ನಾನೇ ಹೇಳುತ್ತೇನೆ ಎಂದು ಮಾತಿಗೆ ಮುಂದಾದ ರೇವಣ್ಣರಿಗೆ ಎಚ್​ಡಿಕೆ ಬ್ರೇಕ್ ಹಾಕಿದರು. ನಾನು ಮಾತನಾಡುವಾಗ ಯಾಕೆ ಮಧ್ಯೆ ಬರ್ತೀಯಾ? ನೀನು ಆಮೇಲೆ ಮಾತನಾಡು ಎಂದರೂ ರೇವಣ್ಣ ಆಗಿಂದಾಗ್ಗೆ ಎದ್ದು ನಿಲ್ಲುವುದನ್ನು ಬಿಡಲಿಲ್ಲ.
VIDEO| ರಜಿನಿ, ಕಮಲ್​ರಿಂದ ಹಿಡಿದು ಬೇಬಿ ಶಾಲಿನಿ ಸೇರಿ 4 ನಿಮಿಷದಲ್ಲಿ 51 ಧ್ವನಿ ಮಿಮಿಕ್ರಿ ಮಾಡುವ ಕೇರಳ ಯುವತಿಗೆ ಎಲ್ರೂ ಫಿದಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
