ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಚಾರದಲ್ಲಿನ ಕಿತ್ತಾಟದ ಪೂರ್ವ ಸೂಚನೆಯಾಗಿ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ನಡೆಯುತ್ತಿರುವ ನಿಗೂಢ ಬೆಳವಣಿಗೆ ಮುಂದಿನ ದಿನದಲ್ಲಿ ಸುನಾಮಿ ರೀತಿ ಅಪ್ಪಳಿಸುವ ಸುಳಿವು ನೀಡಿದೆ.
ಈ ಹಿಂದೆ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಬಳಿಕ ಅಪಸವ್ಯಗಳು ನಡೆದಿದ್ದುಂಟು. ಆದರೆ ಈ ಬಾರಿ ಸಂಪುಟ ವಿಸ್ತರಣೆಯಾಗುತ್ತಿಲ್ಲ ಎಂಬ ಕಾರಣವೇ ಪರಸ್ಪರ ದೂಷಣೆ, ಗುಂಪು ಸಭೆ, ಆಂತರಿಕ ಒತ್ತಡ ತಂತ್ರ ಸೇರಿ ಇತ್ಯಾದಿ ವರಸೆಗಳು ಪ್ರಯೋಗವಾಗುತ್ತಿವೆ. ಇದರಿಂದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರಲಾರಂಭವಾಗಿದ್ದು, ಸರ್ಕಾರದ ನೆಮ್ಮದಿ ಭಂಗವಾಗುತ್ತಿದೆ. ಜತೆಗೆ ಈ ಬೆಳವಣಿಗೆಯು ‘ಪಕ್ಷ ಮೂಲ’ ಹಾಗೂ ‘ವಲಸಿಗರು’ ಎಂಬ ಸ್ಪಷ್ಟವಾದ ಕಿತ್ತಾಟಕ್ಕೂ ಮುನ್ನುಡಿ ಬರೆದಂತಾಗಿದೆ. ಆಡಳಿತ ಪಕ್ಷದ ಶಾಸಕರು ತಮ್ಮತಮ್ಮಲೇ ತೊಡೆ ತಟ್ಟಲು ಶುರು ಮಾಡಿದ್ದಾರೆ. ಸರ್ಕಾರ ರಚನೆಗೆ ಯಾರ ಪಾತ್ರ ಎಷ್ಟು ಎಂದು ಪ್ರಶ್ನಿಸಿಕೊಳ್ಳುವ ಹಂತಕ್ಕೂ ತಲುಪಿದೆ. ಚನ್ನಪಟ್ಟಣದಲ್ಲಿ ಸೋತ ಸಿ.ಪಿ.ಯೋಗೇಶ್ವರ್ ವಿಧಾನಪರಿಷತ್ ಸದಸ್ಯರಾಗಿದ್ದು, ಅವರಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕೆಂಬುದು ವಲಸೆ ಶಾಸಕರ ಒಂದು ಗುಂಪಿನ ಪಟ್ಟು. ಇದು ಪಕ್ಷ ಮೂಲ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸದ್ಯಕ್ಕೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡುವುದಕ್ಕೆ ನೇರ ವಿರೋಧ ವ್ಯಕ್ತಪಡಿಸಿದ್ದಾರೆ. ಪರ್ಯಾಯವಾಗಿ ಸಚಿವ ರಮೇಶ್ ಜಾರಕಿಹೊಳಿ ಹೇಗಾದರೂ ಸರಿಯೇ ಸಿಪಿವೈಗೆ ಸಚಿವ ಸ್ಥಾನ ಕೊಡಿಸಲೇಬೇಕೆಂದು ಹಠ ಹಿಡಿದಿದ್ದಾರೆ. ಈ ಬೆಳವಣಿಗೆ ಭಾಗವಾಗಿ ಮಾತಿನ ಘರ್ಷಣೆಗಳೂ ನಡೆದಿವೆ. ಇದು ಇಷ್ಟಕ್ಕೆ ನಿಲ್ಲುವ ಲಕ್ಷಣವೂ ಕಾಣಿಸುತ್ತಿಲ್ಲ. ಎಂ.ಪಿ.ರೇಣುಕಾಚಾರ್ಯ, ಎಂ.ಟಿ.ಬಿ.ನಾಗರಾಜ್, ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕ ಸಭೆಗಳು ನಡೆದಿದ್ದು, ಸಚಿವ ಸಂಪುಟದಲ್ಲಿ ಆದ್ಯತೆ ನೀಡಲು ಮತ್ತು ಬೇಗ ಸಂಪುಟ ವಿಸ್ತರಿಸಬೇಕೆಂಬ ದನಿ ಮೊಳಕೆಯೊಡೆದಿದೆ.
ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಶಾಸಕ ಹರ್ಷವರ್ಧನ್ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಸಂಸದ ವಿ.ಶ್ರೀನಿವಾಸಪ್ರಸಾದ್ ನನ್ನೊಟ್ಟಿಗೆ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್​ಗೆಪಟ್ಟಿ ರವಾನೆ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗಲಿದೆ.
|ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ

ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿದ್ದೇನೆ. ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಮಾತ್ರ ಕೈಬಿಡುತ್ತಾರೆಂಬ ಸುದ್ದಿ ಬರುತ್ತದೆ. ಯಾವ ಕಾರಣಕ್ಕೆ ಬಿಡುತ್ತಾರೆ ಎಂಬುದನ್ನು ಹೇಳಿ ಎಂದು ಜೊಲ್ಲೆ ಪ್ರಶ್ನಿಸಿದ್ದಾರೆ. ಸಚಿವ ಸ್ಥಾನ ಬಿಡಬೇಕು ಎಂಬ ಯಾವುದೇ ಸೂಚನೆ ಪಕ್ಷದ ರಾಷ್ಟ್ರೀಯ ಮಟ್ಟದ ವರಿಷ್ಠರಿಂದಾಗಲಿ, ರಾಜ್ಯ ನಾಯಕರಿಂದ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ 105 ಶಾಸಕರು ಇರುವುದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಲಸೆ ಶಾಸಕರನ್ನು ಗುರುಯಾಗಿಸಿ ಕುಟುಕಿದ್ದಾರೆ. ನಮಗೆ 17 ಶಾಸಕರ ಬಗ್ಗೆ ಗೌರವವಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗಿದೆ. ಆದರೆ 105 ಜನ ಇಲ್ಲದಿದ್ದರೆ ಸರ್ಕಾರ ಬರುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು. 105 ಶಾಸಕರು ಮೊದಲು, ನಂತರ ಉಳಿದವರು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಪಕ್ಷದಲ್ಲಿ 105 ಶಾಸಕರು ಇದ್ದಾಗ ಸರ್ಕಾರ ರಚನೆ ಮಾಡಲು ಏಕೆ ಸಾಧ್ಯವಾಗಲಿಲ್ಲ. 17 ಶಾಸಕರು ಬಂದಿದ್ದರಿಂದಲೇ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ ಎಂಬುದನ್ನು ಮರೆಯಬಾರದು ಎಂದು ವಿಧಾನಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ನಾವೆಲ್ಲ ನಮ್ಮ ಹಿಂದಿನ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ. ಈಗ ನಾವೂ ಬಿಜೆಪಿಯವರೇ ಎಂದು ರೇಣುಕಾಚಾರ್ಯ ಉದ್ದೇಶಿಸಿಯೇ ಪ್ರತಿಕ್ರಿಯೆ ನೀಡಿದರು.

ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಪೈಪೋಟಿ ನಡೆದಿದೆ. ಇದೇ ವೇಳೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಬಾರದು, ಸೋತವರನ್ನು ಸಚಿವರನ್ನಾಗಿ ಮಾಡಬೇಡಿ ಎಂದು ಕೆಲ ಶಾಸಕರು ನನ್ನನ್ನು ಭೇಟಿ ಮಾಡಿ ಹೇಳಿರುವುದು ನಿಜ. ಆದರೆ, ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡುವಂತೆ ಹೋರಾಡುವುದು ನನ್ನ ಧರ್ಮ ಮತ್ತು ಕರ್ತವ್ಯ. ಕೊನೇ ಕ್ಷಣದವರೆಗೆ ಹೋರಾಟ ಮಾಡುತ್ತೇವೆ, ರಾಷ್ಟ್ರೀಯ ನಾಯಕರಿಂದ ಕರೆ ಬಂದಿದೆ. ದೆಹಲಿಗೆ ತೆರಳುತ್ತಿದ್ದೇನೆ ಎಂದರು.
ಪ್ರಸ್ತುತ 7 ಸ್ಥಾನ ಭರ್ತಿಗೆ ಅವಕಾಶವಿದೆ. ಸರ್ಕಾರ ರಚನೆಗೆ ಕಾರಣರಾದ ಎಂ.ಟಿ.ಬಿ.ನಾಗರಾಜ್, ಶಂಕರ್ ಮತ್ತು ಮುನಿರತ್ನಗೆ ಅವಕಾಶ ಕೊಡಲೇಬೇಕಾಗುತ್ತದೆ. ಮಸ್ಕಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ವಿಜಯಿಯಾದರೆ ಅವರಿಗಾಗಿಯೂ ಒಂದು ಸ್ಥಾನ ಮೀಸಲಿಡಬೇಕು. ಇನ್ನಿರುವ 3 ಸ್ಥಾನದ ಮೇಲೆ 10ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಪೈಪೋಟಿಗೆ ಬಿದ್ದಿರುವುದು ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಕೂಡ ಸಚಿವಸ್ಥಾನ ಆಕಾಂಕ್ಷಿಗಳೇ. ಅವರೊಂದಿಗೆ ಉಮೇಶ್ ಕತ್ತಿ, ಎಂ.ಪಿ.ಕುಮಾರಸ್ವಾಮಿ, ಅರವಿಂದ ಲಿಂಬಾವಳಿ, ತಿಪ್ಪಾರೆಡ್ಡಿ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ. ಶೀಘ್ರವೇ ಸಂಪುಟ ಭರ್ತಿ ನಡೆಯಬಹುದೆಂದು ಇಷ್ಟುದಿನ ಕಾದಿದ್ದ ಪಕ್ಷದ ಮೂಲ ಶಾಸಕರು ಈಗ ನಿಧಾನವಾಗಿ ದನಿ ಎತ್ತಲು ಆರಂಭಿಸಿದ್ದಾರೆ. ಸಂಪುಟ ಸೇರುವ ಆಕಾಂಕ್ಷೆಯಿಂದಲೇ ಅನರ್ಹತೆ ಪಟ್ಟ ಕಟ್ಟಿಕೊಂಡವರು ಸಹಜವಾಗಿ ತಾವು ಯಾವ ಕ್ಷಣ ಸಚಿವರಾಗುತ್ತೇವೆ ಎಂದು ಕಾಯ್ದಿದ್ದಾರೆ. ಇದೀಗ ಅವರ ತಾಳ್ಮೆಯೂ ಕಡಿಮೆಯಾಗುತ್ತಿದೆ. ಸಂಪುಟ ಪುನಾರಚನೆ ತೀರ್ಮಾನ ಕೈಗೊಂಡರೆ ಹಾಲಿ ಇರುವ ಯಾರನ್ನೇ ಕೈಬಿಟ್ಟರೂ ಅದೇ ವರ್ಗಕ್ಕೆ ಅಥವಾ ಅದೇ ಜಿಲ್ಲೆಗೆ, ಇನ್ಯಾವುದೊಂದು ಕಾರಣಕ್ಕೆ ಪರ್ಯಾಯ ನೀಡಬೇಕಾಗುತ್ತದೆ ಹೊರತು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೆ ಅವಕಾಶ ಕೊಡಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಸಂಪುಟ ಭರ್ತಿ ಪ್ರಕ್ರಿಯೆ ಮುಂದೂಡಲ್ಪಡುತ್ತಿದೆ ಎಂದು ಹೇಳಲಾಗುತ್ತಿದೆ.

ಮೈಸೂರು:ನಾವು ಹೇಳಿದ ಒಬ್ಬರಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿಲ್ಲ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್, ಸುತ್ತೂರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿಯೇ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.ಸುತ್ತೂರಿನಲ್ಲಿ ಸಿಎಂ ಭೇಟಿಗೂ ಮುನ್ನ ಹೊರಗೆ ಮಾಧ್ಯಮಗಳ ಎದುರು ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸಪ್ರಸಾದ್, ಮಹದೇಶ್ವರಸ್ವಾಮಿ ಗದ್ದುಗೆಯಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಸುವ ಸಮಯದಲ್ಲಿ ‘ಅಧಿಕಾರಕ್ಕೆ ಬರಬೇಕಾದರೆ ನಾವು ಬೇಕಿತ್ತು. ಈಗ ನಾವು ಹೇಳಿದ ಒಬ್ಬರಿಗೂ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದರೆ ಅರ್ಥ ಏನು?’ ಎಂದು ಶ್ರೀಗಳ ಎದುರೇ ಪ್ರಶ್ನಿಸಿದರೆನ್ನಲಾಗಿದೆ. ಇದಕ್ಕೆ ಶಾಂತವಾಗಿಯೇ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಆಯ್ತು ಇರಿ. ಇನ್ನು ಹಲವು ನಿಗಮ ಮಂಡಳಿಗಳು ಬಾಕಿ ಇವೆ. ಮೂರು ದಿನಗಳಲ್ಲಿ ಸರಿ ಮಾಡ್ತೀನಿ. ಸಿಟ್ಟು ಮಾಡಿಕೊಳ್ಳಬೇಡಿ ಎಂದು ಸಮಾಧಾನಪಡಿಸಿದಲ್ಲದೆ, ಪ್ರಸಾದ್ ಅವರ ಬಳಿ ಇನ್ನೊಮ್ಮೆ ಬೆಂಬಲಿಗರ ಪಟ್ಟಿ ಪಡೆದುಕೊಂಡರು ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
