|ರುದ್ರಣ್ಣ ಹರ್ತಿಕೋಟೆಬೆಂಗಳೂರು
ವಿವಿಧ ಕಂಪನಿಗಳು ಷೇರು ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯಲು ಮುಗಿಬೀಳುತ್ತಿರುವುದು ರಾಜ್ಯದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್​ಪಿಎಸ್) ನೌಕರರನ್ನು ಆತಂಕಕ್ಕೆ ದೂಡಿದೆ. ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಜತೆಯಲ್ಲೇ ರಾಜಸ್ಥಾನ ಹಾಗೂ ಛತ್ತೀಸ್​ಗಢ ಮಾದರಿ ಅನುಸರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಹೋರಾಟದ ಹಾದಿ ತುಳಿದಿದ್ದಾರೆ.
ರಾಜ್ಯದಲ್ಲಿ 2006ರಲ್ಲಿ ನೂತನ ಪಿಂಚಣಿ ಯೋಜನೆ ಜಾರಿಯಾದ ನಂತರ 2,54,311 ನೌಕರರಿಂದ ಕಡಿತ ಮಾಡಿದ ವಂತಿಗೆ ಹಾಗೂ ಸರ್ಕಾರದ ಪಾಲನ್ನು ಫೆನ್ಶನ್ ಫಂಡ್ ರೆಗ್ಯುಲೇಟರಿ ಡೆವಲಪ್​ವೆುಂಟ್ ಅಥಾರಿಟಿ ಮೂಲಕ ಟ್ರಸ್ಟಿ ಬ್ಯಾಂಕ್​ಗೆ ಜಮಾ ಮಾಡಲಾಗುತ್ತದೆ. ನಂತರ ಆ ಮೊತ್ತದ ನಿರ್ವಹಣೆ ಜವಾಬ್ದಾರಿ ಮೂರು ಸಂಸ್ಥೆಗಳಿಗೆ ನೀಡಲಾಗಿದೆ. ಅವುಗಳ ಮೂಲಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
2 ರಾಜ್ಯದ ಮಾದರಿಗೆ ಪಟ್ಟು:ಖಾಸಗಿ ಹೂಡಿಕೆ ಮೊತ್ತಕ್ಕೆ ಯಾವುದೇ ಖಾತ್ರಿ ಇಲ್ಲದಿರುವುದರಿಂದ ರಾಜಸ್ಥಾನ, ಛತ್ತೀಸ್​ಗಢದಲ್ಲಿ ಎನ್​ಪಿಎಸ್ ಹಿಂದಕ್ಕೆ ಪಡೆಯಲಾಗಿದೆ. ಇದೇ ರೀತಿಯಲ್ಲೇ ರಾಜ್ಯದಲ್ಲಿಯೂ ವಾಪಸ್ ಹಳೆಯ ಪದ್ಧತಿಗೆ ಹೋಗಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಛತ್ತೀಸ್​ಗಢ ಸರ್ಕಾರ ಪೆನ್ಷನ್ ಫಂಡ್ ರೆಗ್ಯುಲೇಟರಿ ಡೆವಲಪ್​ವೆುಂಟ್ ಅಥಾರಿಟಿಗೆ ಪತ್ರ ಬರೆದು ರಾಜ್ಯದ ಮೊತ್ತ 17 ಸಾವಿರ ಕೋಟಿ ರೂ. ವಾಪಸ್ ಮಾಡುವಂತೆ ಒತ್ತಾಯಿಸಿದೆ. ಪಶ್ಚಿಮ ಬಂಗಾಲದಲ್ಲಿ ಎನ್​ಪಿಎಸ್ ಜಾರಿಯೇ ಮಾಡಲಿಲ್ಲ.
ಕರಗುತ್ತಿದೆ ಮೊತ್ತ:ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆಗಿಂತ ಇಳಿಕೆ ಹೆಚ್ಚಾಗಿದೆ. ಜತೆಗೆ ನೌಕರರ ಖಾತೆಯಲ್ಲೂ ಕನಿಷ್ಠ 5 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳ ತನಕ ಮೊತ್ತ ಕಡಿಮೆಯಾಗಿದೆ ಎಂಬ ದೂರು ಕೇಳಿಬಂದಿದೆ.
ಸರ್ಕಾರದ ಬಳಿ ಉತ್ತರವಿಲ್ಲ:ಷೇರು ಮಾರುಕಟ್ಟೆಯಲ್ಲಿ ನೌಕರರ ಹಣ ಹೂಡಿಕೆ ಮಾಡಿಕೊಳ್ಳುವ ಕಂಪನಿಗಳು ಅದರಿಂದ ಬರುವ ಲಾಭದಲ್ಲಿ 30-35 ವರ್ಷಗಳ ನಂತರ ಪಿಂಚಣಿ ನೀಡುತ್ತವೆ ಎಂಬ ಮಾತಿದೆ. ಆದರೆ ಈ ಸಂಬಂಧ ನಿರ್ದಿಷ್ಟ ಕಾನೂನು ರಚನೆ ಆಗಿಲ್ಲ, ಭದ್ರತೆಯನ್ನೂ ನೀಡಿಲ್ಲ ಎಂಬುದು ನೌಕರರ ದೂರು. ಮಾರುಕಟ್ಟೆ ಬಿದ್ದು ಹೋದರೆ ಮುಂದೇನು ಎಂಬ ಪ್ರಶ್ನೆಯನ್ನು ನೌಕರರು ಎತ್ತುತ್ತಿದ್ದಾರೆ. ಸರ್ಕಾರದ ಬಳಿಯಲ್ಲಿ ಅದಕ್ಕೆ ಉತ್ತರವೇ ಇಲ್ಲ.
ವರದಿ ನಿರೀಕ್ಷೆ:ಕೇರಳ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಎನ್​ಪಿಎಸ್ ರದ್ದು ಮಾಡುವುದಕ್ಕಾಗಿ ಸಮಿತಿ ರಚನೆ ಮಾಡಿ ವರದಿ ನಿರೀಕ್ಷೆ ಮಾಡಲಾಗುತ್ತಿದೆ.
ಸಭೆಯೇ ನಡೆಯಲಿಲ್ಲ:ಎನ್​ಪಿಎಸ್ ರದ್ದತಿಗೆ ಒತ್ತಡ ಹೆಚ್ಚಾದಾಗ ಇಂಧನ ಇಲಾಖೆ ಎಸಿಎಸ್ ಆಗಿದ್ದ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಒಂದು ಸಭೆ ನಡೆಸಿತು. ರವಿಕುಮಾರ್ ಮುಖ್ಯ ಕಾರ್ಯದರ್ಶಿಯಾದ ನಂತರ ಮತ್ತೊಂದು ಸಮಿತಿ ರಚನೆ ಮಾಡಲೇ ಇಲ್ಲ. ಆದ್ದರಿಂದ ಎನ್​ಪಿಎಸ್ ರದ್ದು ಮಾಡುವ ವಿಚಾರ ನನೆಗುದಿಗೆ ಬಿದ್ದಿದೆ.
ಸರ್ಕಾರಕ್ಕೆ ಸಿಗಲಿದೆ ಹಣ:ಎನ್​ಪಿಎಸ್ ರದ್ದು ಮಾಡಿದ್ದೇ ಆದರೆ ಪಿಎಫ್​ಆರ್​ಡಿಎ ನಲ್ಲಿ ಹೂಡಿಕೆ ಮಾಡಿರುವ 13,400 ಕೋಟಿ ರೂ. ರಾಜ್ಯಕ್ಕೆ ಲಭ್ಯವಾಗುತ್ತದೆ. ನೌಕರರು ಸಹ 2 ವರ್ಷ ಎಂಥದ್ದೇ ಸಂದರ್ಭದಲ್ಲಿಯೂ ಜಿಪಿಎಫ್ ಹಿಂದಕ್ಕೆ ಪಡೆಯುವುದಿಲ್ಲವೆಂದು ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯ, ನೌಕರರಿಗೆ ಕೇಂದ್ರ ಮಾದರಿ ವೇತನ ಯಾವುದಕ್ಕಾದರೂ ಬಳಸಬಹುದಾಗಿದೆ.
ಮಾತಿಗೆ ತಪ್ಪಿದ ಸಿಎಂ:ಎನ್​ಪಿಎಸ್ ರದ್ದತಿ ಸಂಬಂಧ ರಾಜಸ್ಥಾನದಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಷತ್​ನಲ್ಲಿ ಭರವಸೆ ನೀಡಿದ್ದರು. ಆದರೆ ಈವರೆಗೆ ಸಿಎಂ ಸಚಿವಾಲಯದಿಂದ ಆ ರಾಜ್ಯಕ್ಕೆ ಒಂದು ಪತ್ರ ಸಹ ಬರೆದಿಲ್ಲ ಎಂದು ಮೂಲಗಳು ಹೇಳುತ್ತವೆ.
ಮತ್ತೆ ಹೋರಾಟ:ಎನ್​ಪಿಎಸ್ ನೌಕರರು ಜೂನ್​ನಿಂದ ಹಂತ ಹಂತದ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಮೊದಲು ತಾಲೂಕು ಮಟ್ಟದಲ್ಲಿ ಪ್ರತಿಭಟನೆ, ನಂತರ ಪಾದಯಾತ್ರೆ ಹಾಗೂ ಫ್ರೀಡಂ ಪಾರ್ಕ್​ನಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡಲಿ ನಿರ್ಧರಿಸಿದ್ದಾರೆ.
ಎನ್​ಪಿಎಸ್ ರದ್ದತಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕು. ನಮ್ಮ ಹಣ ಮಾರುಕಟ್ಟೆಯಲ್ಲಿ ಹೂಡಿಕೆ ಆಗುತ್ತಿರುವ ಬಗ್ಗೆ ನಮಗೆ ಆತಂಕವಿದೆ. ಆದ್ದರಿಂದ ರದ್ದತಿಗೆ ಒತ್ತಡ ತರಲು ಜೂನ್​ನಿಂದ ತೀವ್ರ ಹೋರಾಟ ನಡೆಸಲಿದ್ದೇವೆ.
|ಶಾಂತಾರಾಮಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ
ಎಷ್ಟಿದೆ ಮೊತ್ತ?:ರಾಜ್ಯದ ಎನ್​ಪಿಎಸ್ ನೌಕರರ ವೇತನ ಕಡಿತ ಮೊತ್ತ 6154 ಕೋಟಿ ರೂ.ಗಳಿದ್ದರೆ, ಸರ್ಕಾರದ ವಂತಿಗೆ 7298 ಕೋಟಿ ರೂ.ಗಳಿದೆ. ಒಟ್ಟಾರೆ 13,400 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ಟ್ರಸ್ಟಿ ಬ್ಯಾಂಕ್​ನಿಂದ ಮೂರು ಸಂಸ್ಥೆಗಳಲ್ಲಿ ಹೂಡಿಕೆಯಾಗಿದೆ. ಹೂಡಿಕೆ ಮೊತ್ತಕ್ಕೆ ಬಡ್ಡಿ ಬರುವುದು ದೂರದ ಮಾತು. ಸರ್ಕಾರವೇ ಪ್ರತಿ ವರ್ಷ 4.01 ಕೋಟಿ ರೂ. ಸೇವಾ ಶುಲ್ಕವಾಗಿ ಪಾವತಿಸುತ್ತದೆ.
ಆತಂಕ ಏಕೆ?:ಮಾರುಕಟ್ಟೆಯಲ್ಲಿ ಲಾಭ ಬಂದರಷ್ಟೇ ನೌಕರರಿಗೆ ಅನುಕೂಲ. ನಷ್ಟವಾದರೆ ಅದರ ಹೊಣೆ ಯಾವ ಸಂಸ್ಥೆ ಹೊರುತ್ತದೆ ಎಂಬುದಕ್ಕೆ ಯೋಜನೆ ಜಾರಿಗೆ ಬಂದು 16 ವರ್ಷವಾದರೂ ಸ್ಪಷ್ಟತೆ ಇಲ್ಲ. ಒಪ್ಪಂದದ ಸಂದರ್ಭದಲ್ಲೇ ಮಾರುಕಟ್ಟೆ ಆಧಾರಿತ ಎಂಬ ಷರತ್ತಿಗೆ ಸರ್ಕಾರ ಒಪ್ಪಿ ಸಹಿ ಹಾಕಿರುವುದರಿಂದಲೇ ನೌಕರರನ್ನು ಚಿಂತೆಗೆ ದೂಡಿದೆ.
ಗೊಂದಲ, ಗೋಜಲು:ಗ್ರಾಮೀಣಾಭಿವೃದ್ಧಿ, ಪೌರಾಡಳಿತ, ಶಿಕ್ಷಣ ಇಲಾಖೆಗಳಲ್ಲಿ ಗುತ್ತಿಗೆ ಮೇಲೆ ಕೆಲಸ ಮಾಡುತ್ತ ಇತ್ತೀಚೆಗೆ ಸೇವೆ ಕಾಯಂ ಆಗಿರುವ ನೌಕರರದ್ದು ಮತ್ತೊಂದು ಸಮಸ್ಯೆ ಇದೆ. 20-25 ವರ್ಷದ ಸೇವೆ ನಂತರ ಕಾಯಂ ಆಗಿರುವ ಈ ನೌಕರರನ್ನು ಎನ್​ಪಿಎಸ್ ವ್ಯಾಪ್ತಿಗೆ ತರಲಾಗಿದೆ. ಅವರು ನಿವೃತ್ತರಾದರೆ ಸಿಗುವ ಪಿಂಚಣಿ 1500 ರೂ. ದಾಟುವುದಿಲ್ಲ. ಗ್ರಾಮೀಣಾಭಿವೃದ್ಧಿಯಲ್ಲಿ 10,000, ಶಿಕ್ಷಣ ಇಲಾಖೆಯಲ್ಲಿ 7000, ಪೌರಾಡಳಿತದಲ್ಲಿ 8 ಸಾವಿರ ನೌಕರರಿದ್ದಾರೆ. ಬೀದಿಗೆ ಬೀಳಬೇಕಾಗಿರುವ ಇವರಿಗೆ ನ್ಯಾಯ ಒದಗಿಸುವಂತೆ ಕೆಎಟಿ ಆದೇಶದ ವಿರುದ್ಧ ಸರ್ಕಾರ ಹೈಕೋರ್ಟ್​ಗೆ ಹೋಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 47 ಸಾವಿರ ನೌಕರರದ್ದು ಇನ್ನೊಂದು ಸಮಸ್ಯೆ. ಅಲ್ಲಿ ಪಿಂಚಣಿ ಮೊತ್ತದ ಪಾಲನ್ನು ಸಂಸ್ಥೆ ಪಾವತಿಸಬೇಕೆ, ಸರ್ಕಾರ ಪಾವತಿಸಬೇಕೆ ಎಂಬ ಗೊಂದಲ ಇದೆ.
ಮಂಡ್ಯ ಹುಡುಗ್ರ ಅಭಿಮಾನ ನೋಡಿ ‘ಓ ಮೈ ಗಾಡ್’ ಎಂದ ಸನ್ನಿ ಲಿಯೋನ್​!; ನಿಮಗಾಗಿ ರಕ್ತದಾನ ಮಾಡುವೆ ಅಂದ್ರು ನಟಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + sixteen =
Remember me
