ಆರ್. ತುಳಸಿಕುಮಾರ್ಬೆಂಗಳೂರು:ರಾಜ್ಯದಲ್ಲಿ ಸಹಕಾರಿಗಳಿಗೆ ನಗದುರಹಿತ ಆರೋಗ್ಯ ಚಿಕಿತ್ಸೆ ಒದಗಿಸುವ ‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳಿಗೆ ಯೂನಿಕ್ ಐಡಿ ಒಳಗೊಂಡ ಕಾರ್ಡ್​ಗಳನ್ನು ವಿತರಿಸದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪರದಾಡಬೇಕಾದ ಸ್ಥಿತಿ ನಿರ್ವಣವಾಗಿದೆ.
ರಾಷ್ಟ್ರದಲ್ಲೇ ವಿನೂತನ ರೀತಿಯ ಯೋಜನೆ ಎಂಬುದಾಗಿ ಖ್ಯಾತಿ ಪಡೆದಿರುವ ಯಶಸ್ವಿನಿ ಆರಂಭಗೊಂಡು ನಾಲ್ಕು ತಿಂಗಳೇ ಕಳೆದಿದ್ದರೂ, ಈವರೆಗೆ ಬಹುತೇಕ ಫಲಾನುಭವಿಗಳಿಗೆ ಕಾರ್ಡ್​ಗಳೇ ವಿತರಣೆಯಾಗಿಲ್ಲ. ಇದರಿಂದ ತುರ್ತು ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ತೆರಳಿದರೆ ‘ಕಾರ್ಡ್ ಇದ್ದರೆ ಒಳ ಬನ್ನಿ’ ಎಂಬ ಮಾತುಗಳು ರೈತರಾದಿಯಾಗಿ ಸಹಕಾರಿಗಳಿಗೆ ಕಿರಿಕಿರಿ ಉಂಟು ಮಾಡಿದೆ. ಕಾರ್ಡ್​ಗಳನ್ನು ಕೊಡುವಂತೆ ಸದಸ್ಯರು ಸಹಕಾರ ಸಂಘಗಳ ಸಿಬ್ಬಂದಿ ಬಳಿ ವಿಚಾರಿಸಿದರೆ, ಸಹಕಾರ ಇಲಾಖೆ ಅಥವಾ ಯಶಸ್ವಿನಿ ಟ್ರಸ್ಟ್​ನವರನ್ನೇ ಕೇಳಿ ಎಂಬ ಸಬೂಬು ನೀಡಿ ಸಾಗಹಾಕಲಾಗುತ್ತಿದೆ. ಇದರಿಂದಾಗಿ ಸಹಕಾರಿಗಳ ಕುಟುಂಬಗಳಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಚಿಕಿತ್ಸೆ ದೊರೆಯದೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ ಪಾವತಿಸುವಂತಾಗಿದೆ. ಕೆಲ ಪ್ರಕರಣಗಳಲ್ಲಿ ಸಹಕಾರ ಸಂಘಗಳು
ಟ್ರಸ್ಟ್​ಗೆ ಪತ್ರ ಬರೆದು ಚಿಕಿತ್ಸೆ ಒದಗಿಸುವಂತೆ ಒತ್ತಾಯಿಸಿದ್ದಕ್ಕೆ ಅಂತಹವುಗಳಿಗೆ ಮಾತ್ರ ಮಾನ್ಯ ಮಾಡಲಾಗಿದೆ. ಇದರ ಹೊರತಾಗಿಯೂ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಕಾರ್ಡ್ ಸಿಗದ ಕಾರಣ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಗ್ರಾಮೀಣ ಭಾಗದಲ್ಲಿರುವ ಅನ್ನದಾತರು ಸಹಕಾರ ಸಂಘ ಅಥವಾ ಟ್ರಸ್ಟ್ ಸಂರ್ಪಸಲು ಸಾಧ್ಯವಾಗದೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿರುವ ಉದಾಹರಣಗಳೂ ಇವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಟ್ರಸ್ಟ್ ಫಲಾನುಭವಿಗಳ ಸಮಸ್ಯೆಗೆ ಸ್ಪಂದಿಸಲು ವಿಫಲವಾಗಿವೆ.
ನೋಂದಣೆ ವಿಸ್ತರಣೆ ಕಾರಣ: 2022ರ ಅ.12ರಂದು ಯಶಸ್ವಿನಿ ಯೋಜನೆ ಮರುಜಾರಿಗೆ ಸರ್ಕಾರಿ ಆದೇಶ ಹೊರಡಿಸಲಾಯಿತು. ನ.1ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೆ ಗಡುವು ವಿಧಿಸಲಾಯಿತು. ಆ ಬಳಿಕ ಎರಡು ಬಾರಿ ಗಡುವು ವಿಸ್ತರಣೆ ಮಾಡಿದ್ದರಿಂದ ಕಾರ್ಡ್​ಗಳನ್ನು ಮುದ್ರಿಸಿಕೊಡಲು ಟ್ರಸ್ಟ್​ಗೆ ಸಾಧ್ಯವಾಗಿಲ್ಲ. ಇಡೀ ರಾಜ್ಯಕ್ಕೆ ಒಂದೇ ಏಜನ್ಸಿಗೆ ಕಾರ್ಡ್ ಮುದ್ರಿಸಿ ವಿತರಿಸುವ ಹೊಣೆ
ನೀಡಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಜತೆಗೆ ಖಾಸಗಿ ಆಸ್ಪತ್ರೆಗಳು ಟ್ರಸ್ಟ್​ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಫಲಾನುಭವಿಗಳಿಗೆ ಚಿಕಿತ್ಸೆ ದೊರೆಯದಂತಾಗಿದೆ. ಇದರಿಂದಾಗಿ ಜನವರಿ 1ರಿಂದ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ ಎಂಬ ಟ್ರಸ್ಟ್ ನೀಡಿದ್ದ ವಾಗ್ದಾನ ಹುಸಿಯಾಗಿದೆ.
ನಮ್ಮ ತಾಯಿಗೆ ತುರ್ತು ಚಿಕಿತ್ಸೆ ಕೊಡಿಸಲು ಖಾಸಗಿ ಆಸ್ಪತ್ರೆಗೆ ಹೋದಾಗ ಯೂನಿಕ್ ಐಡಿ ಕಾರ್ಡ್ ಕೇಳಿದರು. ಕಾರ್ಡ್ ಇಲ್ಲ ಎಂದಿದ್ದಕ್ಕೆ ಚಿಕಿತ್ಸೆ ದೊರೆಯದು ಎಂಬ ಉತ್ತರ ಬಂತು. ಕೊನೆಗೆ ಟ್ರಸ್ಟ್ ಸಂರ್ಪಸಿದಾಗ 2-3 ಗಂಟೆ ಬಳಿಕ ಆಸ್ಪತ್ರೆಯವರು ದಾಖಲಿಸಿಕೊಂಡರು.
| ಹರೀಶ್ ದೇವನಹಳ್ಳಿ
ರಾಜ್ಯದೆಲ್ಲೆಡೆ 35 ಲಕ್ಷಕ್ಕೂ ಹೆಚ್ಚು ಮಂದಿ ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಯೂನಿಕ್ ಐಡಿ ಕಾರ್ಡ್ ವಿತರಣೆ ಪ್ರಗತಿಯಲ್ಲಿದೆ. ನೋಂದಣಿ ಅವಧಿ ವಿಸ್ತರಣೆ ಆಗಿರುವುದರಿಂದ ಜಿಲ್ಲೆಗಳಿಂದ ಪೂರ್ಣ ಮಾಹಿತಿ ಇನ್ನಷ್ಟೇ ಬರಬೇಕಿದೆ. ಈ ತಿಂಗಳಲ್ಲಿ ಬಾಕಿ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
| ವೆಂಕಟಸ್ವಾಮಿ ಸಿಇಒ, ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + two =
Remember me
