ಬೆಂಗಳೂರು:ರಾಜ್ಯದ ಪೊಲೀಸರು ದಕ್ಷತೆ, ಪ್ರಾಮಾಣಿಕತೆಗೆ ದೇಶದಲ್ಲಿಯೇ ಹೆಸರುವಾಸಿಯಾಗಿದ್ದಾರೆ. ಪೊಲೀಸ್ ವ್ಯವಸ್ಥೆಯು ಇನ್ನಷ್ಟು ದಕ್ಷತೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಜನಸ್ನೇಹಿಯಾಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಇಲಾಖೆ ಹಿರಿಯ ಅದಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹೊಸ ಸರ್ಕಾರದ ಧ್ಯೇಯ ಮನವರಿಕೆ ಮಾಡಿಕೊಡಲಾಗಿದೆ. ಡ್ರಗ್ಸ್ ದಂಧೆ, ಜೂಜು, ಡಾರ್ಕ್​ವೆಬ್ ಮುಂತಾದ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿ ಅಪರಾಧ ಪ್ರಕರಣಗಳ ಸದೆಬಡಿಯಬೇಕು. ಇದರಿಂದಾಗಿ ಜನರು ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ನಡೆಸುವ ವಾತಾವರಣ ಸೃಷ್ಟಿಯಾಗಲಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ಹತೋಟಿಗೆ ತರುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಆಂತರಿಕ ಭದ್ರತಾ ವಿಭಾಗದ ಬಲವರ್ಧನೆ, ಕೈದಿಗಳ ಆದಾಯ ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಸುಭಿಕ್ಷ ರಾಜ್ಯಕ್ಕೆ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯೇ ಮಾನದಂಡ. ಈ ನಿಟ್ಟಿನಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಪೊಲೀಸರು ಜನಪರವಾಗಿ ಕಾರ್ಯನಿರ್ವಹಿಸಿದರೆ ಅರ್ಧ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಯುತ್ತವೆ ಎಂದು ಬೊಮ್ಮಾಯಿ ಹೇಳಿದರು. ಠಾಣೆಗಳ ಹೊಸ ಕಟ್ಟಡಗಳ ನಿರ್ವಣ, ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ, ಪೊಲೀಸ್ ವಸತಿ ಗೃಹಗಳ ನಿರ್ವಣ, ಮೂಲ ಸವಲತ್ತು ಅಭಿವೃದ್ಧಿ, ಪೊಲೀಸರ ಕಲ್ಯಾಣ ಕಾರ್ಯಕ್ರಮಗಳು ಯಥಾರೀತಿ ಮುಂದುವರಿಯಲಿವೆ ಎಂದು ತಿಳಿಸಿದರು.
ಸಂಭಾವ್ಯ ಕರೊನಾ ಮೂರನೇ ಅಲೆ ತಡೆಗಟ್ಟಲು ಸನ್ನದ್ಧರಾಗಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚು ನಿಗಾವಹಿಸಿ, ಚೆಕ್ ಪೋಸ್ಟ್​ಗಳನ್ನು ಖುದ್ದು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಈ ಸವಾಲು ಸಮರ್ಥವಾಗಿ ಎದುರಿಸಬೇಕು ಎಂದ ಸಿಎಂ, ಪ್ರಾಮಾಣಿಕ, ಅನುಭವಿ ಗೃಹ ಸಚಿವ ಆರಗ ಜ್ಞಾನೇಂದ್ರ ಈಗಾಗಲೆ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ ವಸ್ತುಸ್ಥಿತಿ ಪರಿಶೀಲಿಸಿದ್ದಾರೆ. ಇಲಾಖೆಗೆ ಹೊಸ ಚೈತನ್ಯ ತುಂಬಲು ಉತ್ಸುಕರಾಗಿದ್ದಾರೆ ಎಂದು ಹುರಿದುಂಬಿಸಿದರು.
ಪೊಲೀಸರ ಅನುಚಿತ ವರ್ತನೆ ಕುರಿತು ಅಲ್ಲಲ್ಲಿ ಕೆಲವು ಘಟನೆಗಳು ವರದಿಯಾಗಿದ್ದು, ಇಂತಹದ್ದಕ್ಕೆ ಅವಕಾಶ ನೀಡಬಾರದು. ಭೂಮಾಫಿಯಾ ಜತೆಗೆ ಕೈಜೋಡಿಸುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸದು. ಈಗಾಗಲೆ ಪತ್ತೆಯಾದ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮವಹಿಸಲಾಗಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಕೋರ್ಟ್ ಆದೇಶದಂತೆ ಕ್ರಮ:ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಹೂಡಲಾದ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಯಡಿಯೂರಪ್ಪ ಆಡಳಿತಾವಧಿಯಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಾತ್ರವಲ್ಲದೆ, ಕನ್ನಡಪರ ಮತ್ತು ರೈತ ಚಳವಳಿಗಾರರ ವಿರುದ್ದ ಹೂಡಿದ್ದ ಹಲವು ಮೊಕದ್ದಮೆಗಳನ್ನು ಕೈಬಿಟ್ಟಿದ್ದು, ಉಳಿದ ದಾವೆಗಳನ್ನು ಹಿಂಪಡೆಯುವ ವಿಷಯದಲ್ಲಿ ಕೋರ್ಟ್​ಗಳ ಸೂಚನೆಯನ್ನು ಸರ್ಕಾರ ಪಾಲಿಸಲಿದೆ ಎಂದು ಪುನರುಚ್ಚರಿಸಿದರು.
ಹೆಸರಿಗೆ ಕಳಂಕ ತರುವುದು ಬೇಡ:ಡಾರ್ಕ್​ವೆಬ್ ಬೇಧಿಸುವುದು, ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಪೊಲೀಸರು ಮುಂದಿದ್ದು, ಅನೇಕ ಅಧಿಕಾರಿಗಳು ನಿದರ್ಶನೀಯ ಸಾಧನೆಗಳ ಮೂಲಕ ಇಲಾಖೆಗೆ ಕೀರ್ತಿ ತಂದಿದ್ದಾರೆ ಎಂದು ಬೊಮ್ಮಾಯಿ ಸಭೆಯಲ್ಲಿ ಪ್ರಶಂಸಿಸಿದ್ದಾರೆ. ಯಾರೋ ಕೆಲವರ ಎಸಗುವ ಲೋಪ-ದೋಷಗಳು ಇಲಾಖೆಗೆ ಕಳಂಕ ತರುವ ಸಾಧ್ಯತೆಗಳಿದ್ದು, ಇಂತಹವರ ವಿರುದ್ಧ ಹಿರಿಯ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮವಹಿಸಬೇಕು ಎಂಬ ಖಡಕ್ ಸೂಚನೆ ನೀಡಿದ್ದಾರೆ. ದೂರು, ಅಹವಾಲು ಹೇಳಿಕೊಳ್ಳಲು ಬಂದವರ ಜತೆಗೆ ಸಹನೆಯ ನಡವಳಿಕೆ ಮುಖ್ಯವಾಗಿದ್ದು, ನಿಷ್ಪಕ್ಷಪಾತವಾಗಿ ಎಫ್​ಐಆರ್ ದಾಖಲಿಸಿಕೊಳ್ಳಬೇಕು. ಅಪರಾಧಗಳ ಸ್ವರೂಪ ಬದಲಾದಂತೆ ಇಲಾಖೆ ಕಾರ್ಯವೈಖರಿ ಸುಧಾರಣೆಯಾಗಬೇಕು. ಇಲಾಖೆ ಸಲ್ಲಿಸಿರುವ ಬೇಡಿಕೆಗಳನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎನ್ನುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಇಲಾಖೆಯ ಸುಧಾರಣೆ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆಗೆ ಮುಖ್ಯಮಂತ್ರಿಗಳಿಂದ ಬೆಂಬಲ ದೊರೆಯಲಿದೆ. ಇಲಾಖೆಯು ಅಪರಾಧ ಪ್ರಕರಣಗಳ ತ್ವರಿತ ತನಿಖೆಗೆ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ವಿಳಂಬ ಧೋರಣೆ ಸಲ್ಲದು.
|ಆರಗ ಜ್ಞಾನೇಂದ್ರಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
