ಬೆಂಗಳೂರು:ಕೆಲ ದಿನಗಳಿಂದ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ‘ಜನತಾ ಲಾಕ್​ಡೌನ್’ ಆರಂಭವಾಗಿದೆ. ರಾಜ್ಯದಲ್ಲಿ ಸಂಭಾವ್ಯ ಕರೊನಾ ಸ್ಫೋಟ ತಡೆಯುವ ಉದ್ದೇಶದಿಂದ ಜನರು ಸ್ವಯಂಪ್ರೇರಿತ ಲಾಕ್​ಡೌನ್ ಮತ್ತು ಸೀಲ್​ಡೌನ್​ಗೆ ಮೊರೆಹೋಗಿದ್ದಾರೆ.
ಹಲವೆಡೆ ರಸ್ತೆಗಳು, ಬೀದಿಗಳನ್ನು ಜನರು ಬಂದ್ ಮಾಡಿದರೆ, ವರ್ತಕರು ವ್ಯಾಪಾರ ನಿಲ್ಲಿಸಿ ಮಾರುಕಟ್ಟೆಗಳನ್ನು ಸೀಲ್​ಡೌನ್ ಮಾಡುತ್ತಿದ್ದಾರೆ. ಸರ್ಕಾರದ ನಿರ್ಬಂಧ, ಸೂಚನೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕರೊನಾ ಹೊಡೆದೋಡಿಸಲು ಜನರೇ ಸಂಕಲ್ಪ ಮಾಡಿರುವುದು ಕಂಡುಬರುತ್ತಿದೆ.
ಜೂನ್ ಕೊನೆಯ ವಾರದಿಂದ ರಾಜ್ಯದಾದ್ಯಂತ ಕರೊನಾ ಸೋಂಕಿನ ಆರ್ಭಟ ಹೆಚ್ಚಾಗಿದ್ದು, ಪ್ರತಿದಿನ ಸಾವಿರಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನರು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್​ಡೌನ್ ಹಾಗೂ ಸೀಲ್​ಡೌನ್ ಮಾದರಿಯ ಅನುಸರಣೆಗೆ ಮುಂದಾಗಿದ್ದಾರೆ. ಅತಿ ಹೆಚ್ಚು ಸೋಂಕಿತರು ಕಂಡುಬಂದಿರುವ ಬೆಂಗಳೂರು ನಗರ, ಕಲಬುರಗಿ, ಬೀದರ್, ಬೆಳಗಾವಿ, ಧಾರವಾಡ, ಉಡುಪಿ, ಬಳ್ಳಾರಿ, ಗದಗ, ರಾಮನಗರ, ಮಾಗಡಿ, ಮಂಡ್ಯ ಹಾಗೂ ಮೈಸೂರು ಮುಂತಾದೆಡೆ ಜನರೇ ಸ್ವಯಂಪ್ರೇರಿತ ಬಂದ್ ನಡೆಸುತ್ತಿದ್ದಾರೆ.
10 ಸಾವಿರ ರೂ. ದಂಡ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ವಲಸಿಗರಿಗೆ ಪ್ರವೇಶ ನಿರ್ಬಂಧ ಮತ್ತು ಒಳಗಿನವರು ಹೊರ ಜಿಲ್ಲೆಗಳಿಗೆ ತೆರಳಿದರೆ 5ರಿಂದ 10 ಸಾವಿರ ರೂ. ದಂಡ ವಿಧಿಸುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಮಧ್ಯಾಹ್ನ 3ರ ನಂತರ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತದೆ. ಹನೂರಿನಲ್ಲಿ ಜು.2ರಿಂದ 15ರವರೆಗೆ ಮಧ್ಯಾಹ್ನ 2 ಗಂಟೆ ಬಳಿಕ ಅಂಗಡಿ ಮುಂಗಟ್ಟು ಮುಚ್ಚಿ ಜನರೇ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮವನ್ನು ಸ್ಥಳೀಯರು ಸ್ವಯಂಪ್ರೇರಿತ ಲಾಕ್​ಡೌನ್ ಮಾಡಿಕೊಂಡಿದ್ದಾರೆ.
ಸೀಮಿತ ಅವಧಿಗೆ ವ್ಯಾಪಾರ
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮಾತ್ರ ವ್ಯಾಪಾರ- ವಹಿವಾಟು ನಡೆಯುತ್ತಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಅರಸೀಕೆರೆಯಲ್ಲಿ ಮಧ್ಯಾಹ್ನ 1 ಗಂಟೆವರೆಗೆ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ, ಕೊರಟಗೆರೆ, ಮಧುಗಿರಿ, ಕೊಡಗು, ಮಂಡ್ಯ ಜಿಲ್ಲೆಯ ಮದ್ದೂರು, ಉತ್ತರ ಕನ್ನಡ ಜಿಲ್ಲೆ ಮುಂಡಗೋಡ, ಕೋಲಾರ, ಮಧ್ಯಾಹ್ನ 2 ಗಂಟೆವರೆಗೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕು, ಬಳ್ಳಾರಿ, ಹೊಸಪೇಟೆ, ಕೊಪ್ಪಳ ನಗರಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ನಂತರ ವ್ಯಾಪಾರ-ವಹಿವಾಟುಗಳನ್ನು ಸ್ವಯಂಪ್ರೇರಿತ ಬಂದ್ ಮಾಡಲಾಗುತ್ತಿದೆ.
ಜನಪ್ರತಿನಿಧಿಗಳ ಮುಂದಾಳತ್ವ
ಅನೇಕ ಕಡೆಗಳಲ್ಲಿ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸುರಕ್ಷತೆ ದೃಷ್ಟಿಯಿಂದ ಜನರ ಮನವೊಲಿಸಿ ಹಾಗೂ ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿ ಸ್ವಯಂ ಲಾಕ್​ಡೌನ್ ವಿಧಿಸಿಕೊಂಡ ಉದಾಹರಣೆಗಳಿವೆ. ಕನಪುರದಲ್ಲಿ ಶಾಸಕ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಸ್ವಯಂಪ್ರೇರಿತ ಲಾಕ್​ಡೌನ್ ಮಾಡಲಾಗಿತ್ತು. ಶಾಸಕ ಎಂ.ಪಿ. ರೇಣುಕಾಚಾರ್ಯ ನಡೆಸಿದ್ದ ಸಭೆ ನಿರ್ಣಯದಂತೆ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ಬುಧವಾರದಿಂದಲೇ ಮಧ್ಯಾಹ್ನ 2 ರಿಂದ ಬೆಳಗ್ಗೆ 7 ಗಂಟೆಯವರೆಗೆ ಸ್ವಯಂಪ್ರೇರಿತ ಲಾಕ್​ಡೌನ್ ಆರಂಭವಾಗಿದೆ. ಶಾಸಕ ಎಸ್.ವಿ. ರಾಮಚಂದ್ರ ಅವರ ಮನವಿಗೆ ಸ್ಪಂದಿಸಿ ಗುರುವಾರದಿಂದ ಜಗಳೂರಲ್ಲಿ ಮಧ್ಯಾಹ್ನ 1 ರಿಂದ ಬೆಳಗ್ಗೆ 7ರವರೆಗೆ ಸಾರ್ವಜನಿಕರು, ವರ್ತಕರು ಲಾಕ್​ಡೌನ್ ಆರಂಭಿಸಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಡೆಸಿದ ಸಭೆಯನ್ವಯ ಚನ್ನಗಿರಿ ತಾಲೂಕಿನಲ್ಲಿ ಜೂ.20 ರಿಂದ 10 ದಿನಗಳ ಕಾಲ ನಿತ್ಯ ಮಧ್ಯಾಹ್ನ 12 ಗಂಟೆಯಿಂದಲೇ ಸೀಮಿತ ಅವಧಿಯ ಲಾಕ್​ಡೌನ್ ಯಶಸ್ವಿಯಾಗಿ ನಡೆದಿದೆ. ಸವಿತಾ ಸಮಾಜದವರು ಈ ಹಿಂದೆ ಸಂಪೂರ್ಣ ಸಲೂನ್ ಕಾರ್ಯ ಸ್ಥಗಿತಗೊಳಿಸಿದ್ದರು. ಶಾಸಕ ಎಸ್. ರಾಮಪ್ಪ ಜೂ.24 ರಂದು ಸಭೆ ನಡೆಸಿ, ಲಾಕ್​ಡೌನ್​ಗೆ ಮಾಡಿದ ಮನವಿಗೆ ಹರಿಹರ ತಾಲೂಕಿನಲ್ಲಿ ಸ್ಪಂದನೆ ವ್ಯಕ್ತವಾಗಿಲ್ಲ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಮುಂದಾಳತ್ವದಲ್ಲಿ ವರ್ತಕರ ಸಭೆ ನಡೆಸಲಾಗಿದೆ. ನಿತ್ಯವೂ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆ ತನಕ ಮಾತ್ರವೇ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿ, ಒಂದು ವಾರದಿಂದ ಪಾಲಿಸುತ್ತಿದ್ದಾರೆ. ಸಾರ್ವಜನಿಕರೂ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ರಸ್ತೆ ಮಧ್ಯೆ ಕಂದಕ
ಚಾಮರಾಜನಗರ ಜಿಲ್ಲೆಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ತಾಳವಾಡಿ ತಾಲೂಕಿನ ಎಲ್ಲೆಕಟ್ಟೆ ರಸ್ತೆಯನ್ನು ಗ್ರಾಮಸ್ಥರು ಜೆಸಿಬಿ ಮೂಲಕ ಅಗೆದು ಕಂದಕ ನಿರ್ವಿುಸಿ ಬಂದ್ ಮಾಡಿದ್ದಾರೆ. ಕನ್ನಡಿಗರೇ ಹೆಚ್ಚು ವಾಸ ಮಾಡುತ್ತಿರುವ ತಮಿಳುನಾಡಿನ ತಾಳವಾಡಿ ತಾಲೂಕಿಗೆ ಸೇರಿದ ಎಲ್ಲೆಕಟ್ಟೆಯಲ್ಲಿ ರಸ್ತೆ ಮಧ್ಯೆ ಕಂದಕ ನಿರ್ವಿುಸಲಾಗಿದೆ.
ಜಿಂದಾಲ್ ಭೀತಿ, ಸ್ವಯಂ ಲಾಕ್​ಡೌನ್​ನತ್ತ ಒಲವು
ಬಳ್ಳಾರಿಯ ಜಿಂದಾಲ್​ನಲ್ಲಿ ಜು.3 ರಿಂದ ಜು.11ರ ವರೆಗೆ ದಿನವೂ ಮಧ್ಯಾಹ್ನ ಮೂರು ಗಂಟೆ ನಂತರ ಸ್ವಯಂ ಲಾಕ್​ಡೌನ್​ಗೆ ವ್ಯಾಪಾರಸ್ಥರು, ವರ್ತಕರ ಸಂಘಗಳ ಅಧ್ಯಕ್ಷರು ನಿರ್ಧರಿಸಿದ್ದಾರೆ. ಹೊಸಪೇಟೆಯಲ್ಲೂ ಇಂಥದೇ ನಿರ್ಧಾರ ಈಗಾಗಲೇ ಕೈಗೊಳ್ಳಲಾಗಿದೆ. ಜಿಂದಾಲ್ ಕಾರ್ಖಾನೆ ಹತ್ತಿರವಿರುವ ಬಳ್ಳಾರಿ ತಾಲೂಕಿನ ಕುಡಿತಿನಿ ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಜನರೇ ಸ್ವಯಂ ಲಾಕ್​ಡೌನ್ ಘೊಷಿಸಿಕೊಂಡಿದ್ದಾರೆ. ಸಂಡೂರು ಪಟ್ಟಣದಲ್ಲೂ ಸಂಘ-ಸಂಸ್ಥೆಗಳು ಅಂಗಡಿ-ಮುಗ್ಗಟ್ಟು ಬಂದ್​ಗೆ ತೀರ್ವನಿಸಿದ್ದಾರೆ. ತಾಲೂಕಿನ ಕುರೆಕುಪ್ಪ ಗ್ರಾಮದಲ್ಲಿಯೂ ಜನತೆ ಸ್ವಯಂ ಪ್ರೇರಿತವಾಗಿ ಲಾಕ್​ಡೌನ್ ವಿಧಿಸಿಕೊಂಡಿದ್ದಾರೆ.
ಕೊಡಗಿನಲ್ಲಿ ಚೇಂಬರ್ ಆಫ್ ಕಾಮರ್ಸ್ ಮನವಿ ಹಿನ್ನೆಲೆಯಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ- ವಹಿವಾಟು ನಡೆಯುತ್ತಿದೆ. 2 ಗಂಟೆ ಮೇಲೆ ಸ್ವಯಂ ಪ್ರೇರಿತವಾಗಿ ಲಾಕ್​ಡೌನ್ ಮಾಡಲಾಗುತ್ತಿದೆ.
ಉಡುಪಿ ಕೃಷ್ಣ ಮಠ ಬಂದ್
ರಾಜ್ಯ ಸರ್ಕಾರ ದೇವಸ್ಥಾನಗಳಿಗೆ ಜುಲೈ 8ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರೂ ಉಡುಪಿ ಕೃಷ್ಣ ಮಠದಲ್ಲಿ ಲಾಕ್​ಡೌನ್ ಮುಂದುವರಿದಿದೆ. ಭಕ್ತರು ಹಾಗೂ ಮಠದ ಸಿಬ್ಬಂದಿಯ ಆರೋಗ್ಯ ಕಾಳಜಿಯಿಂದ ಪರ್ಯಾಯ ಶ್ರೀೕ ಈಶಪ್ರಿಯ ತೀರ್ಥ ಸ್ವಾಮೀಜಿ ಈ ಕಾಳಜಿ ವಹಿಸಿದ್ದಾರೆ.
ವರ್ಕ್ ಫ್ರಮ್ ಹೋಮ್ ಮುಂದುವರಿಕೆ
ರಾಜ್ಯದಲ್ಲಿ ಐಟಿ ಸೇವಾ ಉದ್ಯಮ ಅಗಾಧವಾಗಿ ಬೆಳೆದಿದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ ಹಲವೆಡೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳ ಉದ್ಯೋಗಿಗಳಿಗೆ ಜುಲೈ ತಿಂಗಳವರೆಗೂ ವರ್ಕ್ ಫ್ರಮ್ (ಮನೆಯಲ್ಲಿದ್ದುಕೊಂಡು ಕೆಲಸ) ಕೊಡುವಂತೆ ರಾಜ್ಯ ಸರ್ಕಾರ ಸಲಹೆ ನೀಡಿತ್ತು. ಈಗ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ವರ್ಕ್ ಫ್ರಮ್ ಹೋಮ್್ನು ಮತ್ತಷ್ಟು ತಿಂಗಳುಗಳ ಕಾಲ ಮುಂದುವರಿಸಲು ಸಾಫ್ಟ್​ವೇರ್ ಉದ್ಯಮಗಳು ಮುಂದಾಗಿವೆ.
ಪ್ರಯೋಜನವೇನು?
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕೈಮೀರಿದಲ್ಲಿ ಸರ್ಕಾರ ರಿವರ್ಸ್ ಕ್ವಾರಂಟೈನ್​ಗೆ ಚಿಂತನೆ ನಡೆಸಿದೆ. ರಿವರ್ಸ್ ಕ್ವಾರಂಟೈನ್ ಎಂದರೆ ಸೋಂಕಿಗೆ ಬಹುಬೇಗ ತುತ್ತಾಗುವ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರನ್ನು ಮನೆಯಲ್ಲಿ ಪ್ರತ್ಯೇಕವಾಗಿಟ್ಟು ಗೃಹಬಂಧನ ಮಾಡುವುದು. ಈ ಮಾದರಿಯನ್ನು ಕೆಲವು ನಾಗರಿಕರು ಅನುಸರಣೆ ಮಾಡುತ್ತಿದ್ದು, ತಮ್ಮ ಮನೆಯಲ್ಲಿರುವ ಮಕ್ಕಳು, ದೀರ್ಘಾವಧಿ ಕಾಯಿಲೆಗಳಿಂದ ಬಳಲುವವರು, ಗರ್ಭಿಣಿಯರು, ಬಾಣಂತಿಯರು ಹಾಗು ವೃದ್ಧರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡುತ್ತಿದ್ದಾರೆ.
ಮಾರುಕಟ್ಟೆಗಳು ಸೀಲ್​ಡೌನ್
ರಾಜ್ಯದ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರು ನಗರದಲ್ಲಿ ಚಿಕ್ಕಪೇಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ಕಲಾಸಿಪಾಳ್ಯ, ಯಶವಂತಪುರ, ಸಿಂಗೇನ ಅಗ್ರಹಾರ, ಮಲ್ಲೇಶ್ವರ, ಬಸವನಗುಡಿ, ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ಮಂಗಳೂರು ಹಳೇ ಬಂದರಿನ ಧಕ್ಕೆ ಹಸಿ ಮೀನು ಮಾರುಕಟ್ಟೆಗಳನ್ನು ಸೀಮಿತ ಅವಧಿಗೆ ಸ್ವಯಂಪ್ರೇರಿತ ಬಂದ್ ಮಾಡಲಾಗಿದೆ. ಕರೊನಾ ಸೋಂಕು ನಿಯಂತ್ರಣಕ್ಕೆ ಸ್ಥಳೀಯ ಆಡಳಿತಕ್ಕೂ ಇದು ಸಹಕಾರಿಯಾಗಿದೆ.
ಹೊರಗಿನವರಿಗೆ ಪ್ರವೇಶವಿಲ್ಲ
ಯಾವುದೇ ಸೋಂಕಿತರು ಕಂಡುಬರದ ಪ್ರದೇಶಗಳಲ್ಲಿ ಜನರು ತಮ್ಮ ಅಪಾರ್ಟ್​ವೆುಂಟ್​ಗಳು, ವಸತಿ ಬಡಾವಣೆಗಳು, ಬೀದಿಗಳು ಹಾಗೂ ರಸ್ತೆಗಳನ್ನು ಬಂದ್ ಮಾಡುತ್ತಾರೆ. ಹೊಸ ವ್ಯಕ್ತಿ ಅಥವಾ ಹೊರಗಿನವರ ಪ್ರವೇಶಕ್ಕೆ ಅವಕಾಶವಿಲ್ಲ. ಅಲ್ಲಿನ ನಿವಾಸಿಗಳೇ ಹೊರಗಿನಿಂದ ಬಂದಲ್ಲಿ ಅವರನ್ನು ಕ್ವಾರಂಟೈನ್ ಮಾಡಲು ತಿಳಿಸಿ, ಕರೊನಾ ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡುತ್ತಿದ್ದಾರೆ. ಅಗತ್ಯ ಸಾಮಗ್ರಿ, ದಿನಸಿ, ತರಕಾರಿ ಹಾಗೂ ಹಣ್ಣುಗಳನ್ನು ನಿಗದಿತ ವ್ಯಾಪಾರಿಗಳಿಗೆ ಕರೆ ಮಾಡಿ ತರಿಸಿಕೊಳ್ಳುತ್ತಿದ್ದಾರೆ. ಕೆಲವರು ನೇರವಾಗಿ ರೈತರಿಂದಲೇ ತರಕಾರಿ ಹಣ್ಣು ಖರೀದಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
