|ಹರೀಶ್ ಬೇಲೂರುಬೆಂಗಳೂರು
ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಜನರಿಗೆ ಅನುಕೂಲವಾಗುವಂತೆ ಬಳಕೆ ಸಾಧ್ಯವಾಗದಿದ್ದಲ್ಲಿ ಅದರಿಂದ ಪ್ರಯೋಜನ ಶೂನ್ಯ. ಸರ್ಕಾರ ಸಾರ್ವಜನಿಕರ ಸೇವೆಗೆ ಹಲವು ಯೋಜನೆ ಜಾರಿಗೊಳಿಸಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಸಾಮಾನ್ಯರ ಸಂಕಷ್ಟ ತಪು್ಪತ್ತಿಲ್ಲ. ಹೌದು, ಸರ್ವರ್ ಸಮಸ್ಯೆ ಎನ್ನುವುದು ಅತ್ಯಮೂಲ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಇಲಾಖೆಗಳಲ್ಲೇ ದಿನಂಪ್ರತಿ ಕಾಡುತ್ತಿದೆ. ಹೀಗಾಗಿ ಆಸ್ತಿ ನೋಂದಣಿ, ಡಿಎಲ್/ಎಲ್​ಎಲ್ ಹಾಗೂ ಪಡಿತರ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಜೀವ ಉಳಿಸುವ ಆಂಬುಲೆನ್ಸ್ ಸೇವೆ ಕೂಡ ಇದರಿಂದ ಹೊರತಾಗಿಲ್ಲ ಎಂಬುದು ವಿಪರ್ಯಾಸ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ‘ಕಾವೇರಿ’ ವೆಬ್​ಸೈಟ್​ಗೆ, ಆಹಾರ ಇಲಾಖೆಯಲ್ಲಿ ಪಡಿತರ ವಿತರಣೆಯ ಅನ್ನಭಾಗ್ಯ ಯೋಜನೆ, ನಗರಾಭಿವೃದ್ಧಿ ಇಲಾಖೆಯಲ್ಲಿ ಕಟ್ಟಡ ನವೀಕರಣದ ನಿರ್ವಣ-2 ಸಾಫ್ಟ್​ವೇರ್​ಗೆ, ಆರ್​ಟಿಒ ಕಚೇರಿಯಲ್ಲಿ ವಾಹನ ಪರವಾನಗಿ ನೀಡಲು ವಾಹನ್ ಹಾಗೂ ಸಾರಥಿ-4ಗೆ ‘ಸರ್ವರ್ ಡೌನ್’ ಸಮಸ್ಯೆ ವಕ್ಕರಿಸುತ್ತಲೇ ಇದೆ. ಅದರಲ್ಲೂ ಆರೋಗ್ಯ ಇಲಾಖೆಯ ‘ಆರೋಗ್ಯ ಕವಚ-108ಕ್ಕೆ ಎದುರಾದ ತಾಂತ್ರಿಕ ಸಮಸ್ಯೆ’ ಆತಂಕಕಾರಿ. ಹೀಗಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಉದಾಸೀನ ತೋರುತ್ತಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ಹಳೆಯ ಸಾಫ್ಟ್​ವೇರ್:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 2003ರಲ್ಲಿ ಅಭಿವೃದ್ಧಿಪಡಿಸಿರುವ ‘ಕಾವೇರಿ’ ವೆಬ್​ಸೈಟ್​ಗೆ 2-3 ತಿಂಗಳಿಗೊಮ್ಮೆ ಸರ್ವರ್ ಡೌನ್ ಕಾಟ ಕಾಡುತ್ತಿದೆ. ಈ ಸಮಸ್ಯೆ ಉಂಟಾದರೆ ಋಣಭಾರ ಪ್ರಮಾಣ ಪತ್ರ (ಇಸಿ), ಸರ್ಟಿಫೈಡ್ ಕಾಪಿ (ಸಿಸಿ), ಆಸ್ತಿ, ಸ್ಥಿರಾಸ್ತಿ, ಕರಾರು ಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ ಹಾಗೂ ಸಾಗುವಳಿ ಜಮೀನು ಒಪ್ಪಂದ ನೋಂದಣಿ ಕಾರ್ಯಗಳು ಸ್ಥಗಿತವಾಗುತ್ತದೆ. ಉಪ ನೋಂದಣಿ ಕಚೇರಿಗಳಲ್ಲಿ ಸೇವೆಗಳನ್ನು ಸರಳೀಕರಣ ಮಾಡುವ ಉದ್ದೇಶದಿಂದ ಕಾವೇರಿ ಪೋರ್ಟಲ್ ಮೂಲಕ ನೋಂದಣಿ ಸೇವೆ ಜಾರಿಗೊಳಿಸಲಾಗಿತ್ತು.
ಹಿಂದೆ ಆಸ್ತಿ ನೋಂದಣಿಗಾಗಿ ಕಾವೇರಿ ತಂತ್ರಾಂಶವನ್ನು ನವೀಕರಿಸಿ ಹೊಸ 6.8 ಪ್ಯಾಚ್ (ಅಪ್ಲಿಕೇಷನ್) ಅಳವಡಿಸಲಾಗಿತ್ತು. 3 ವರ್ಷಗಳ ಹಿಂದೆ ವಿಫಲಗೊಂಡಿದ್ದ ಈ ಯೋಜನೆಯನ್ನು ಲೋಪ ಸರಿಪಡಿಸದೆ ಮತ್ತೆ ಜಾರಿಗೆ ತಂದಿರುವುದು ಸಮಸ್ಯೆಗೆ ಮೂಲ ಕಾರಣ. ಒಮ್ಮೆ ಕಾವೇರಿ ತಂತ್ರಾಂಶ ಕೈಕೊಟ್ಟರೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜತೆಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೇಲೂ ಪರಿಣಾಮ ಬೀರುತ್ತದೆ.
ನಿರ್ಮಾಣ ಕಾಮಗಾರಿಗಳಿಗೂ ತೊಂದರೆ:ನಗರಾಭಿವೃದ್ಧಿ ಇಲಾಖೆ ಅಭಿವೃದ್ಧಿಪಡಿಸಿರುವ ನಿರ್ವಣ- 2 ಸಾಫ್ಟ್​ವೇರ್ ಅಗಾಗ್ಗೆ ಕೈಕೊಡುತ್ತಿದೆ. ಇದರಿಂದಾಗಿ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ಕಟ್ಟಡ ನವೀಕರಣ, ಕಟ್ಟಡ ಪರವಾನಗಿ, ಭೂ ಬಳಕೆ ಬದಲಾವಣೆ, ಕಾಂಪೌಂಡ್ ನಿರ್ವಣ, ಲೇಔಟ್ ಅನುಮೋದನೆ, ರಸ್ತೆ ಅಗೆಯುವುದು ಮತ್ತಿತರರ ಕೆಲಸಗಳಿಗಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ನಿರ್ವಣ-2 ಸಾಫ್ಟ್​ವೇರ್ ಅಭಿವೃದ್ಧಿಯಾಗಿದೆ. ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ಪರವಾನಗಿ ಪಡೆಯಲು ಜನರು ತೊಂದರೆಗೆ ಸಿಲುಕುವ ಜತೆಗೆ ಆದಾಯದ ಮೇಲೆ ಪರಿಣಾಮ ಬೀರುತ್ತದೆ.
ಸಾರಥಿ-4ಗೂ ತಾಂತ್ರಿಕ ದೋಷ:ಕಲಿಕಾ, ಚಾಲನಾ ಪರವಾನಗಿ ಹಾಗೂ ಪರವಾನಗಿ ನವೀಕರಣಕ್ಕೆ ಪ್ರತಿನಿತ್ಯ ನೂರಾರು ಜನರು ಆರ್​ಟಿಒ ಕಚೇರಿಗೆ ಭೇಟಿ ನೀಡುತ್ತಾರೆ. ಸಾರಿಗೆ ಇಲಾಖೆಯ ವಾಹನ್ ಹಾಗೂ ಸಾರಥಿ-4 ಸರ್ವರ್​ಗಳಲ್ಲಿ ತಾಂತ್ರಿಕ ದೋಷದಿಂದ ಅರ್ಜಿಗಳು ವಿಲೇ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಗಾಗ್ಗೆ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಆರ್​ಟಿಒ ಕಚೇರಿಗಳಿಗೆ ಅಲೆಯುವಂತಾಗಿದೆ. ಖಾಸಗಿ ಸಂಸ್ಥೆಗೆ ಸರ್ವರ್ ಜವಾಬ್ದಾರಿ ವಹಿಸಲಾಗಿದೆ. ಆದರೆ, ಅಧಿಕಾರಿಗಳು ಹಲವು ಬಾರಿ ದೂರು ಕೊಟ್ಟರೂ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ ಎನ್ನುವಂತಾಗಿದೆ.
ಮೂಲಸೌಕರ್ಯ ಕೊರತೆ:ಆಹಾರ, ಆರೋಗ್ಯ, ನಗರಾಭಿವೃದ್ಧಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇರಿ ಇತರ ಇಲಾಖೆಗಳಲ್ಲಿ ಮೂಲಸೌಕರ್ಯ ಕೊರತೆ ನಿವಾರಿಸಿದರೆ ಸರ್ವರ್ ಸಮಸ್ಯೆ ಬಗೆಹರಿಸಬಹುದು. ಕೆಲವೆಡೆ ಸರ್ವರ್ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರ ಕೊರತೆ ಕಾಡುತ್ತಿದ್ದರೆ, ಕಚೇರಿಗಳಲ್ಲಿ ಅಳವಡಿಸಿರುವ ಕಂಪ್ಯೂಟರ್​ಗಳು ಹಳೆಯದಾಗಿದ್ದರಿಂದ ಹೊಸ ತಂತ್ರಾಂಶಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ. ಯಾವುದೇ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಿದರೆ ಇಂಥ ಸಮಸ್ಯೆಗಳು ಮರುಕಳಿಸುವುದಿಲ್ಲ.
108ಕ್ಕೂ ಸಮಸ್ಯೆ:ಯಾವುದೇ ಭಾಗದಿಂದ ‘108’ ಸಂಖ್ಯೆಗೆ ತುರ್ತು ಕರೆ ಮಾಡಿದರೆ ನಗರ ಪ್ರದೇಶದೊಳಗೆ 20 ನಿಮಿಷ, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷದೊಳಗೆ ಆಂಬುಲೆನ್ಸ್ ತಲುಪುವ ವ್ಯವಸ್ಥೆಯೇ ‘ಆರೋಗ್ಯ ಕವಚ-108’ ಯೋಜನೆ. ಇದನ್ನು 2008ರ ನ.1ರಂದು ಜಾರಿಗೆ ತರಲಾಗಿದೆ. ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಲಭ್ಯವಿರುವ ಈ ಸೇವೆಗೆ ಏಕಾಏಕಿ ಎದುರಾಗಿರುವ ಸರ್ವರ್ ಸಮಸ್ಯೆಯಿಂದ ಸಾವಿರಾರು ರೋಗಿಗಳು ಕಂಗಾಲಾಗಿದ್ದರು. ಒಟ್ಟು 711 ಆಂಬುಲೆನ್ಸ್​ಗಳು ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಯಲ್ಲಿ ಬಳಸುವ ತಂತ್ರಜ್ಞಾನ ತುಂಬಾ ಹಳೆಯದಾಗಿದೆ ಎಂದು ಸರ್ಕಾರವೇ ತಿಳಿಸಿದ್ದು, ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಪಡಿತರ ಆಹಾರ ಧಾನ್ಯ ಪಡೆಯಲೂ ಕಷ್ಟ:ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೂ ಸರ್ವರ್ ಡೌನ್ ಕಾಡುತ್ತಿರುತ್ತದೆ. ಸೆ.15ರಂದು ಶುರುವಾದ ಸರ್ವರ್ ಸಮಸ್ಯೆ 10 ದಿನವಾದರೂ ಬಗೆಹರಿದಿಲ್ಲ. 3-4 ತಿಂಗಳಿಗೊಮ್ಮೆ ಉಂಟಾಗುತ್ತಿರುವ ಈ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಕಾರ್ಡ್​ದಾರರು ಹರಸಾಹಸ ಪಡುವಂತಾಗಿದೆ. ರಾಜ್ಯಾದ್ಯಂತ ಈವರೆಗೆ ಶೇ.60 ಪಡಿತರ ವಿತರಣೆಯಾಗಿದೆ. ಸರ್ವರ್ ಸಮಸ್ಯೆ ಬಗೆಹರಿಸಲಾಗಿದೆ ಎಂದು ಇಲಾಖೆ ಹೇಳುತ್ತಿದ್ದರೂ ಪಡಿತರ ವಿತರಣೆಗೆ ತೊಂದರೆಯಾಗುತ್ತಿದೆ. ಕಾರ್ಡ್​ದಾರರು ಬೆರಳಚ್ಚು ನೀಡಬೇಕಿದೆ. ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ಕೆಲಸ ಬಿಟ್ಟು ನೂರಾರು ಜನರು ಬಯೋಮೆಟ್ರಿಕ್ ನೀಡಲು ಸರದಿ ಸಾಲಿನಲ್ಲಿ ಕಾಯುವಂತಾಗಿದೆ.
ಅಪ್​ಗ್ರೇಡೇಷನ್ ಅಪ್​ಡೇಟ್ ಅಗತ್ಯ:ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಡಿಜಿಟಲ್ ಆಡಳಿತ ಆರಂಭವಾದಾಗಿನಿಂದ, ಇ-ಆಫೀಸ್ ಅನುಷ್ಠಾನದ ದಿನಗಳಿಂದಲೂ ಕಾಡುತ್ತಿದೆ. ಇದಕ್ಕೆ ಪರಿಹಾರವೆಂದರೆ, ಆಯಾ ಕಾಲಕ್ಕೆ ತಕ್ಕಂತೆ ಇಂಟರ್​ನೆಟ್ ಸ್ಪೀಡ್, ಬ್ಯಾಂಡ್​ವಿಡ್ತ್​ಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಜತೆಗೆ ಸಾಫ್ಟ್ ವೇರ್​ಗಳನ್ನು ಆಗಾಗ ಅಪ್​ಡೇಟ್ ಹಾಗೂ ಅಪ್​ಗ್ರೇಡ್ ಮಾಡಿಕೊಳ್ಳುತ್ತಿರಬೇಕು. ಹೊಸ ಹಾರ್ಡ್​ವೇರ್​ಗಳು ಬಳಕೆಯಾಗಬೇಕು. ಆಂಬುಲೆನ್ಸ್ ಸೇವೆ ಸಮಸ್ಯೆಯಾದಾಗ ಸರ್ಕಾರ ಬ್ಯಾಕ್​ಅಪ್ ಸರ್ವರ್​ಗಳನ್ನು ಬಳಸಿಕೊಳ್ಳುವುದಾಗಿ ಹೇಳಿತು. ಜತೆಗೆ ಜಿಲ್ಲಾಮಟ್ಟದಲ್ಲೂ ಹಾರ್ಡ್​ವೇರ್​ಗಳ ಅಪ್​ಗ್ರೇಡ್​ಗೆ ಸೂಚಿಸಿತು. ಈ ವ್ಯವಸ್ಥೆ ಎಲ್ಲ ಜನಪರ ಯೋಜನೆಗಳ ಸೇವೆಗೂ ವಿಸ್ತರಣೆಯಾಗಬೇಕಿದೆ.
ಉದ್ಯೋಗಕ್ಕಾಗಿ ಛಲ ಬಿಡದ ಯತ್ನ: 2 ತಿಂಗಳಲ್ಲಿ 600 ಇ-ಮೇಲ್​, 80 ಫೋನ್​ ಕರೆ; ಕೊನೆಗೂ ಸಿಕ್ತು ಕೆಲಸ

ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eight =
Remember me
