|ಮೃತ್ಯುಂಜಯ ಕಪಗಲ್ಬೆಂಗಳೂರು
ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ಸಿಗುತ್ತಿಲ್ಲವೆಂಬ ಕೊರಗು ಶಾಶ್ವತ ನಿವಾರಣೆ. ನೀರಿನ ದಕ್ಷ ಬಳಕೆ, ಉತ್ಪಾದಕತೆ ಹೆಚ್ಚಳದ ಜತೆಗೆ ವೆಚ್ಚ ತಗ್ಗಿಸುವ ಬಹೂಪಯೋಗಿ, ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕೆ ವೇದಿಕೆ ಸಜ್ಜಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬರುವ ನಾರಾಯಣಪುರ ಎಡದಂಡೆ ಕಾಲುವೆ (ಎನ್​ಎಲ್​ಬಿಸಿ) ವಿಸ್ತರಣೆ, ಆಧುನೀಕರಣ ಮತ್ತು ನವೀಕರಣ ಪೂರ್ಣಗೊಂಡಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಸ್ವಯಂಚಾಲಿತ ನೀರು ನಿರ್ವಹಣಾ ವ್ಯವಸ್ಥೆ ಅಳವಡಿಸಲಾಗಿದ್ದು, ದೇಶದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯಾದಗಿರಿ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ವರದಾನವೆಂದೇ ಬಿಂಬಿತವಾಗಿರುವ ಈ ವ್ಯವಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ (ಜ.19) ಲೋಕಾರ್ಪಣೆ ಮಾಡಲಿದ್ದು, ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಯಾದಗಿರಿ ಜಿಲ್ಲೆಯ ಕೊಡೇಕಲ್ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಎನ್​ಎಲ್​ಬಿಸಿ ಹಾಗೂ ಶಾಖಾ ಕಾಲುವೆಗಳಡಿ ಬಳಲಿ ಬೆಂಡಾಗಿದ್ದ ನೀರು ಪೂರೈಕೆ ಜಾಲ ಪುನಶ್ಚೇತನವಾಗಿದೆ. ಮುಖ್ಯ ಕಾಲುವೆ 10 ಸಾವಿರ ಕ್ಯುಸೆಕ್ ನೀರು ಹರಿಸುವ ಸಾಮರ್ಥ್ಯವನ್ನು ಮರಳಿ ಗಳಿಸಿಕೊಂಡಿದೆ. ಯೋಜನೆಯ ಮೂಲ ವಿನ್ಯಾಸದಂತೆ ಮೂರು ಜಿಲ್ಲೆಗಳ 4.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಲಭ್ಯವಾಗಿದ್ದು, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ 1.05 ಲಕ್ಷ ಹೆಕ್ಟೇರ್ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕಾಣಲಿದೆ. ನೀರಾವರಿ ಪದ್ಧತಿಯಡಿ ಸೋರಿಕೆ ಹಾಗೂ ನೂರು ಲೀಟರ್ ಸರಬರಾಜು ಮಾಡಿದರೆ ಆವಿಯಿಂದಾಗಿ 60 ಲೀಟರ್ ಪೋಲಾಗುತ್ತಿತ್ತು. ಆಧುನೀಕರಣ, ಹೊಸ ತಂತ್ರಜ್ಞಾನ ಬಳಕೆಯಿಂದ ನೀರು ಬಳಕೆಯ ದಕ್ಷತೆ ಶೇ.30 ರಿಂದ ಶೇ.51ಕ್ಕೇರಲಿದೆ. ಅವೈಜ್ಞಾನಿಕ, ಮಿತಿ ಮೀರಿದ ನೀರಿನ ಬಳಕೆಯಿಂದ ಅಚ್ಚುಕಟ್ಟು ಪ್ರದೇಶದ 37 ಸಾವಿರ ಹೆಕ್ಟೇರ್ ಜಮೀನು ಸವಳು, ಜವಳಾಗಿದೆ. ಇನ್ನು ಮುಂದೆ ಈ ಸಮಸ್ಯೆ ಮರುಕಳಿಸುವುದಿಲ್ಲ. ಉತ್ಪಾದಕತೆ ಹೆಚ್ಚುವ ಜತೆಗೆ ನೀರು ನಿರ್ವಹಣೆ ವೆಚ್ಚದ ಭಾರವೂ ಗಣನೀಯವಾಗಿ ತಗ್ಗಲಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳು ಮಾಹಿತಿ ನೀಡಿವೆ.
ಲೆಕ್ಕ ಪಕ್ಕಾ:ಮುಖ್ಯ ಕಾಲುವೆಯಿಂದ ವಿವಿಧ ಹಂತದಡಿ ಕಾಲುವೆಗಳ ಮೂಲಕ ಹೊಲ/ಗದ್ದೆಗೆ ಹರಿದ ನೀರಿನ ಲೆಕ್ಕವಿಡಲಿದ್ದು, ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಖಾತರಿಪಡಿಸಲಿದೆ. ಮೇಲ್ವಿಚಾರಣೆ ನಿಯಂತ್ರಣ ಮತ್ತು ದತ್ತಾಂಶ ಶೇಖರಣೆ (ಸುಪರ್​ವೈಸರಿ ಕಂಟ್ರೋಲ್ ಅಂಡ್ ಡೇಟಾ ಅಕ್ವಸೇಷನ್-ಸ್ಕಾಡಾ) ವ್ಯವಸ್ಥೆಯಡಿ ದೂರದ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಉಸ್ತುವಾರಿ ವಹಿಸಲಾಗುತ್ತಿದೆ.
ರೈತರ ಬೇಡಿಕೆಯನ್ನು ದಾಖಲಿಸಿಕೊಂಡು ಆಯಾ ವಿತರಣಾ ಕಾಲುವೆಗಳಿಗೆ ನೀರು ಪೂರೈಕೆ ಪ್ರಮಾಣ, ಅವಧಿ ಹಾಗೂ ನೀರು ಒದಗಿಸಿದ ಬಗ್ಗೆ ದತ್ತಾಂಶ ದಾಖಲಿಸಿಕೊಳ್ಳಲಿದೆ. ಸ್ವಯಂಚಾಲಿತವಾಗಿ ಗೇಟು ತೆರೆದು-ಮುಚ್ಚಿಕೊಳ್ಳಲಿವೆ. ಹೊಸದಾಗಿ ಹಾರ್ಡ್​ವೇರ್, ಸಾಫ್ಟ್​ವೇರ್​ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆನ್​ಲೈನ್ ವ್ಯವಸ್ಥೆಗೆ ಶಕ್ತಿಯುತ ಅಂತರ್ಜಾಲ, ಕಾರ್ಯನಿರ್ವಹಣೆಗೆ ಬೇಕಾದ ವಿದ್ಯುತ್​ಅನ್ನು ಸೌರಫಲಕಗಳ ಮೂಲಕ ಪಡೆಯುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಯಾವುದೆಲ್ಲ ಬಲವರ್ಧನೆ?:ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಹುಣಸಗಿ, ಶಹಾಪುರ, ಮುಡಬಾಳ, ಜೇವರ್ಗಿ ಮತ್ತು ಇಂಡಿ ಶಾಖಾ ಕಾಲುವೆಗಳನ್ನು ಬಲವರ್ಧಿಸಿ ಸಾಮರ್ಥ್ಯ ವಿಸ್ತರಣೆ, ಉಪಕಾಲುವೆಗಳು ಹಾಗೂ ಹೊಲಗಾಲುವೆಗಳಿಗೆ ಒಟ್ಟು 4,400 ಗೇಟ್​ಗಳನ್ನು ಅಳವಡಿಸಲಾಗಿದೆ. ಈ ಗೇಟ್​ಗಳನ್ನು ಸ್ಕಾಡಾ ತಂತ್ರಜ್ಞಾನದ ಮೂಲಕ ನಿರ್ವಹಿಸಲಾಗುತ್ತದೆ.
– ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ
– ನೀರಾವರಿ ಜಾಲದಲ್ಲಿ ನೀರಿನ ದಕ್ಷ ಬಳಕೆ
– ಆಪರೇಟರ್​ಗಳ ಅನುಪಸ್ಥಿತಿಯಲ್ಲಿ ನಿಯಂತ್ರಣ ಕೊಠಡಿಯಿಂದ ಸ್ವಯಂಚಾಲಿತ ಉಸ್ತುವಾರಿ
– ಅಚ್ಚುಕಟ್ಟು ಪ್ರದೇಶದ ರೈತರಿಗೆ ನ್ಯಾಯಸಮ್ಮತ, ಸಮಾನ, ಪರಿಣಾಮಕಾರಿಯಾಗಿ ನೀರು ಹಂಚಿಕೆ
– ನೀರು ಪೋಲು ಇಳಿಕೆ, ಉತ್ಪಾದಕತೆ, ಅಚ್ಚುಕಟ್ಟು ಪ್ರದೇಶ ಹೆಚ್ಚಳ
– ಜಲ ಲೆಕ್ಕಪತ್ರ ಪರಿಶೋಧನೆ
– ಆನ್​ಲೈನ್​ನಲ್ಲಿ ನೀರಿನ ಬೇಡಿಕೆ, ಜಲ ಶುಲ್ಕ ಮತ್ತು ಆದಾಯ ಸೃಜನೆ
ಆಸ್ಟ್ರೇಲಿಯಾದಲ್ಲಿ ಪ್ರಾಯೋಗಿಕ ಜಾರಿ:ಆಸ್ಟ್ರೇಲಿಯಾದ ಆಗ್ನೇಯ ಪ್ರಾಂತದಲ್ಲಿರುವ ಮರ್ರೆ-ಡಾರ್ಲಿಂಗ್ ಕಣಿವೆಯಲ್ಲಿ ಪ್ರಾಯೋಗಿಕವಾಗಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸ್ಕಾಡಾ ಜಾರಿಗೆ ತಂದಿದ್ದು, ನಿರೀಕ್ಷಿತ ಫಲಿತಾಂಶ ನೀಡಿದೆ.ಈ ಉಪಕ್ರಮದಿಂದ ಉತ್ತೇಜಿತವಾದ ರಾಜ್ಯ ಸರ್ಕಾರ ಬೃಹತ್ ಪ್ರಮಾಣದ ಯೋಜನೆಗೆ ಅಳವಡಿಸಿದೆ. ಭಾರತ ಮಾತ್ರವಲ್ಲ, ಇಡೀ ಏಷ್ಯಾದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾದರಿಗೆ ಬೇರೆ ರಾಜ್ಯಗಳು ಮಾರುಹೋಗಿವೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರ ಇನ್ನಿತರ ರಾಜ್ಯಗಳ ನೀರಾವರಿ ತಜ್ಞರು, ಉನ್ನತಾಧಿಕಾರಿಗಳ ತಂಡ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ, ರಾಜ್ಯದ ತಜ್ಞರು ಹಾಗೂ ಅಧಿಕಾರಿಗಳ ಜತೆಗೂ ರ್ಚಚಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಮೂಲ್ಯ ಜಲಸಂಪತ್ತು ವ್ಯರ್ಥ ಸೋರಿಕೆಗೆ ಕಡಿವಾಣ, ಗರಿಷ್ಠ ಪ್ರಮಾಣದಲ್ಲಿ ನೀರು ಬಳಕೆ, ಅನ್ನದಾತರ ಸಮಸ್ಯೆಗೆ ಆಧುನಿಕ ತಂತ್ರಜ್ಞಾನವುಳ್ಳ ಸ್ಕಾಡಾ ಬಹೂಪಯೋಗಿ. ಎಲ್ಲ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಅಳವಡಿಕೆ ಸೂಕ್ತ.
|ಪ್ರೊ.ಅರವಿಂದ ಗಲಗಲಿ, ನೀರಾವರಿ ತಜ್ಞ.
ದಕ್ಷಿಣ ಭಾರತದ ಗಂಗೆ ಎಂದು ಕರೆಸಿಕೊಳ್ಳುವ ಕೃಷ್ಣಾ ನದಿ ಈ ಭಾಗದ ಕೋಟ್ಯಂತರ ಕುಟುಂಬಗಳಿಗೆ ಆಸರೆಯಾಗಿದೆ. ಸ್ಕಾಡಾ ತಂತ್ರಜ್ಞಾನ ಲೋಕಾರ್ಪಣೆಗೆ ನನ್ನ ತವರೂರು ಕೊಡೇಕಲ್​ಗೆ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದು ನನ್ನ ಮತ್ತು ಯಾದಗಿರಿ ಜಿಲ್ಲೆ ಜನರ ಸೌಭಾಗ್ಯ ಎಂದು ಭಾವಿಸಿದ್ದೇನೆ.
|ನರಸಿಂಹ ನಾಯಕ(ರಾಜುಗೌಡ) ಸುರಪುರ ಶಾಸಕ
ಬೆಂಗಳೂರು: ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ, ಆಧುನೀಕರಣ ಮತ್ತು ನವೀಕರಣ ಯೋಜನೆಗೆ 3,060 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಗೆ 2012ರ ಬಿಜೆಪಿ ಆಡಳಿತಾವಧಿಯಲ್ಲೇ ಅನುಮೋದನೆ ನೀಡಲಾಗಿತ್ತು ಎಂದು ದಾಖಲೆ ಸಹಿತ ಕಾಂಗ್ರೆಸ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ಜಲ ಉದ್ದಿಷ್ಟ ಯೋಜನೆ (ಎಐಬಿಪಿ)ಯಡಿ ನೀರು ಬಳಕೆ ದಕ್ಷತೆ ಕಾರ್ಯಕ್ರಮದಡಿ 1,020 ಕೋಟಿ ರೂ. ಮೊತ್ತದ ಹನಿ ನೀರಾವರಿ ಪದ್ಧತಿ ಅಳವಡಿಕೆ, ಐದು ಕೋಟಿ ರೂ. ಮೊತ್ತದ ಜಿಐಎಸ್ ಆಧಾರಿತ ನೀರು ನಿರ್ವಹಣೆ ಪದ್ಧತಿ ಅಳವಡಿಕೆಗೆ ತಾತ್ವಿಕ ಅನುಮೋದನೆ ನೀಡಿದ ದಾಖಲೆಯನ್ನು ಹಂಚಿಕೊಂಡಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ನಮ್ಮದೆಂದು ಬೀಗುತ್ತಿರುವ ಎಂ.ಬಿ.ಪಾಟೀಲ್ ಅವರೇ ಸುಳ್ಳು ಹೇಳುವ ಚಾಳಿಯನ್ನು ಬಿಡಿ, ದಾಖಲೆಗಳಿವೆ ಕಣ್ತೆರೆದು ನೋಡಿ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ಬೊಮ್ಮಾಯಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಉನ್ನತಮಟ್ಟದ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿತ್ತು.
ಎನ್​ಎಲ್​ಬಿಸಿ ಆಧುನೀಕ ರಣ ದೇಶದಲ್ಲಿಯೇ ಮಾದರಿ. 2012ರಲ್ಲಿ ಬಿಜೆಪಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಏಷ್ಯಾದಲ್ಲಿಯೇ ವಿಶಿಷ್ಟವಾದ ಯೋಜನೆಯನ್ನು ಕೇಂದ್ರ, ರಾಜ್ಯ ಸರ್ಕಾರದ ಅನುದಾನದಿಂದ ಜಾರಿಗೊಳಿಸಲಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
