ಅಪ್ರಾಮಾಣಿಕತೆ ಮೊದಲಾದ ದುರ್ಗಣಗಳಿಂದ ಕೃಷಿ, ಕೈಗಾರಿಕೆ, ಮೊದಲಾದ ಉದ್ದಿಮೆಗಳು ನೆಲಕಚ್ಚಿ ನಿರುದ್ಯೋಗ ಸಮಸ್ಯೆ ಇದೆಯೇ ಹೊರತು ಸಂಪನ್ಮೂಲಗಳ ಕೊರತೆಯಿಂದಲ್ಲ. ‘ನೈತಿಕಪ್ರಜ್ಞೆ’ ಎನ್ನುವುದು ಕೌಟುಂಬಿಕ ಚೌಕಟ್ಟಿನಲ್ಲಿ ಇಲ್ಲವೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವ ಪಡೆಯಲೇಬೇಕು.
ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜಾಗತಿಕ ವಲಯಗಳಲ್ಲಿ ಸಂಚಲನ ವನ್ನೇ ಮೂಡಿಸಿದ ಮೇರುವಿದ್ವಾಂಸ ಸ್ವಾಮಿ ರಂಗನಾಥಾನಂದಜಿಯವರು ಪಾಶ್ಚಾತ್ಯ ಚಿಂತಕರೊಬ್ಬರನ್ನು ಉದ್ಧರಿಸುತ್ತಾ ಹೇಳುತ್ತಿದ್ದ ಮಾತಿದು-‘ಪ್ರಬುದ್ಧರು ಸಾಮರಿಕ ಯೋಜನೆಗಳನ್ನು ರ್ಚಚಿಸಿದಾಗಿಗಿಂತ ಹೆಚ್ಚಾಗಿ ಅಪ್ರಬುದ್ಧರು ಶಾಂತಿಯ ಮಾತುಕತೆಗಳನ್ನಾಡಿದಾಗಲೇ ಹೆಚ್ಚು ಯುದ್ಧಗಳು ಸಂಭವಿಸಿವೆ.’ ಕೇವಲ ಯುದ್ಧಗಳೇ ಏಕೆ? ಸಾರ್ವಜನಿಕ ಜೀವನದಲ್ಲಿ ನೂರಾರು ಸಂದರ್ಭಗಳಲ್ಲಿ ಇದನ್ನು ನಾವು ಕಾಣುತ್ತೇವೆ. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಜನಹಿತ ಕಾರ್ಯಗಳನ್ನು ಕಡಿಮೆ ಪ್ರಮಾಣದಲ್ಲೇನೂ ಸರ್ಕಾರಗಳು ಕೈಗೆತ್ತಿಕೊಂಡಿಲ್ಲ. ಆದರೆ ಇವೆಲ್ಲ ಕಾರ್ಯಗತಗೊಂಡಿದ್ದು ಎಷ್ಟರಮಟ್ಟಿಗೆ? ಕೇವಲ ಯೋಜನೆ ಇದ್ದರೆ ಸಾಲದು, ಇದರ ನೂರು ಪಟ್ಟು ಮುಖ್ಯವಾದದ್ದು ಅನುಷ್ಠಾನಿಕ ಸ್ಥಾನಗಳಲ್ಲಿರುವ ವ್ಯಕ್ತಿಗಳ ಪ್ರಾಮಾಣಿಕತೆ, ನಿಯತ್ತು, ಬದ್ಧತೆ, ಛಲ, ಸಾರ್ವಜನಿಕ ಹಿತಾಸಕ್ತಿ ವೈಯಕ್ತಿಕ ಹಿತಕ್ಕಿಂತ ಸಾವಿರಪಟ್ಟು ಮುಖ್ಯ ಎನ್ನುವ ವಿವೇಕ. ಪಕ್ವ ಬುದ್ಧಿ ಮತ್ತು ವಿಕಸಿತ ಹೃದಯಗಳೇ ಅಸ್ತ್ರಗಳು. ಯಾವುದೇ ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆಯ ಗುರಿ ಇರಬೇಕಾದ್ದೇ ಬುದ್ಧಿ ಮತ್ತು ಹೃದಯಗಳನ್ನು ಬೆಳೆಸುವುದರ ಕಡೆಗೆ; ಅದರಲ್ಲೂ ಹೃದಯವಂತಿಕೆಯ ಕಡೆಗೆ. ಸ್ವಾಮಿ ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದಾರೆ- ಹೃದಯ ಮತ್ತು ಬುದ್ಧಿಗಳಿಗೆ ಘರ್ಷಣೆ ನಡೆದಲ್ಲಿ ಯಾವಾಗಲೂ ಹೃದಯದ ಭಾಷೆಯನ್ನೇ ಅನುಸರಿಸು ಎಂದು. ಭಾರತೀಯ ಪರಂಪರೆಯಲ್ಲಿ- ಆಧುನಿಕ ಪಾಶ್ಚಾತ್ಯ ಶಿಕ್ಷಣದ ದುಷ್ಪರಿಣಾಮಗಳು ಅದನ್ನು ಆವರಿಸಿಕೊಳ್ಳುವವರೆಗೂ- ಇದನ್ನೇ ಅನುಸರಿಸಲಾಗುತ್ತಿತ್ತು. ಯಾವುದೇ ಉಪನಿಷತ್ ಚಿಂತನೆಯಲ್ಲಿ ಪ್ರಾರಂಭದ ಶ್ಲೋಕಗಳೆಲ್ಲ ಮನುಷ್ಯನಿಗೆ ನೈತಿಕ ಸ್ಥಿರತೆಯನ್ನು ಬೆಳೆಸುವುದರ ಕಡೆಗೇ ಇದೆ. ಕಠೋಪನಿಷತ್ ‘ದುಶ್ಚರಿತೆಯುಳ್ಳವನಿಗೆ ಆತ್ಮಜ್ಞಾನ ಎಂದಿಗೂ ಸಾಧ್ಯವಿಲ್ಲ’ವೆನ್ನುತ್ತೆ. ಹಾಗೆಯೇ ಪಾತಂಜಲ ಯೋಗಸೂತ್ರಗಳು, ಭಕ್ತಿ ಸೂತ್ರಗಳು ಇತ್ಯಾದಿ. ಶಿಕ್ಷಣ ವ್ಯವಸ್ಥೆಯೊಂದು ಕೇವಲ ಒಂದಷ್ಟು ಮಾಹಿತಿಯನ್ನು ವಿದ್ಯಾರ್ಥಿಯ ತಲೆಗೆ ತುರುಕಿ ಅವುಗಳನ್ನು ಪರೀಕ್ಷೆಯ ದಿನ ಎಷ್ಟು ಚೆನ್ನಾಗಿ ಪ್ರಸ್ತುತಪಡಿಸಬಲ್ಲ ಎನ್ನುವ ಆಧಾರದ ಮೇಲೆ ಪದವಿ ಅನುಗ್ರಹಿಸಿ ಅದನ್ನೇ ಅಳತೆಗೋಲನ್ನಾಗಿಸಿಕೊಂಡು ಸಾರ್ವಜನಿಕ ಜೀವನಕ್ಕೆ ಆಯ್ಕೆ ಮಾಡಿಕೊಂಡಲ್ಲಿ ಆಡಳಿತಯಂತ್ರ ಭ್ರಷ್ಟತೆಯ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ.
ಕೇಂದ್ರ ಸರ್ಕಾರದ ಅಧೀನದ ಬೃಹತ್ ಉದ್ದಿಮೆ ಯೊಂದರ ಎಕ್ಸಿಕ್ಯುಟಿವ್ ಡೈರೆಕ್ಟರ್ ಜೊತೆ ವೇದಿಕೆ ಹಂಚಿಕೊಳ್ಳುವ ಸಂದರ್ಭ ಬಂದಿತ್ತು. ಅದ್ಭುತವಾದ ಪ್ರಗತಿ ತೋರಿಸುತ್ತಿದ್ದ ಉದ್ದಿಮೆ ನಷ್ಟದೆಡೆಗೆ ಜಾರಿ ಮುಚ್ಚುವ ಸ್ಥಿತಿಯಲ್ಲಿತ್ತು. ಇದ್ದಕ್ಕಿದ್ದಂತೆ ಈ ದುಃಸ್ಥಿತಿ ತಲುಪಲು ಏನು ಕಾರಣ ಎಂದು ಅವರನ್ನು ಕೇಳಿದೆ, ಉತ್ತರ ಆಘಾತಕಾರಿಯಾಗಿತ್ತು- “Our executives & Managers divert our orders to other companies for their personal  benefits’ ಅಂತ. ಇವರಿಗೆ ಸಂಬಳಗಳೇನು ಕಡಿಮೆ ಇರಲಿಲ್ಲ. ಆದರೆ ಅವರಿಗೆ ‘ವ್ಯಕ್ತಿತ್ವ’ ಇರಲಿಲ್ಲ. ಅವರೆಲ್ಲಾ ಉನ್ನತ ಶಿಕ್ಷಣ ಪಡೆದವರು. ಆದರೆ ಉತ್ತಮಸ್ಥಿತಿಯಲ್ಲಿದ್ದ ಸಂಸ್ಥೆಯನ್ನು ರೋಗಿಷ್ಟವಾಗಿಸಿದ್ದು ಏಕೆ? ಪ್ರಸ್ತುತ ಸಂದರ್ಭದಲ್ಲಂತೂ ಇದೊಂದು ಸಾಂಕ್ರಾಮಿಕ ರೋಗವೇ ಆಗಿದೆ. ಇದಕ್ಕೆಲ್ಲಾ ನಾವು ‘ವ್ಯಕ್ತಿತ್ವ’ ಕ್ಕಿಂತ ಪದವಿಗಳಿಗೆ ಇಲ್ಲವೇ ಅಂಕಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದೇ ಕಾರಣ. ಭಾರತೀಯ ಸಂಜಾತ, ಅಮೆರಿಕದ ಪ್ರಖ್ಯಾತ ವ್ಯಕ್ತಿತ್ವ ವಿಕಸನ ವಾಗ್ಮಿ ಶಿವ್ ಖೇರಾ ಹೇಳುತ್ತಾರೆ-‘ಪದವಿಗಳನ್ನು ಪರಿಗಣಿಸಿ ವ್ಯಕ್ತಿಯ ಸಾಮರ್ಥ್ಯ ಅಳೆಯುವ ಕಾಲ ಕೊನೆಗೊಳ್ಳುತ್ತಿದೆ; ಅಳೆಯಬೇಕಾದ್ದು ಅವನ ನಿಜ ಮೌಲ್ಯ, ಅವನ ಸಮಗ್ರ ವ್ಯಕ್ತಿತ್ವ. ಇದನ್ನೇ ಆಧುನಿಕ ಭಾಷೆ Total qwality person(TQP) ಅಥವಾ ಪರಿಪೂರ್ಣ ಮಾನವ ಎಂದು ಕರೆಯುತ್ತದೆ. ಇಲ್ಲಿ ವ್ಯಕ್ತಿಯ Ability (ಸಾಮರ್ಥ್ಯ) ಜೊತೆಗೆ ಸದ್ಗುಣಗಳೂ ಇರಬೇಕು. ಅವೇ ಹೆಚ್ಚು ಮುಖ್ಯ’ ಎಂದು ಹೇಳುತ್ತಾ ಅದನ್ನು ಸಮರ್ಥಿಸಲು Ability without responsibility is a liability ಎನ್ನುತ್ತಾರೆ. ಇನ್ನೂ ಕೆಲವು ಸದ್ಗುಣಗಳನ್ನು ಈ ಪಟ್ಟಿಗೆ ಸೇರಿಸುತ್ತಾ ಖಕಿಕ ಅಥವಾ ಪರಿಪೂರ್ಣ ವ್ಯಕ್ತಿ ಸಿದ್ಧನಾಗಬೇಕಾದರೆ ಅವನಲ್ಲಿ ಸಾಮರ್ಥ್ಯ (Ability) ಪ್ರಾಮಾಣಿಕತೆ (Honesty) ನಂಬಿಕಾರ್ಹತೆ (Reliability) ಸಂದಭೋಚಿತ ಹೊಂದಾಣಿಕೆ (Flexibility) ಮತ್ತು ಉತ್ತರದಾಯಿತ್ವ (ಚ್ಚ್ಚuಠಿಚಚಿಜ್ಝಿಜಿಠಿಢ) ಇತ್ಯಾದಿ ಗುಣಗಳಿರಬೇಕು; ಪ್ರಸ್ತುತ ಔನ್ನತ್ಯವನ್ನು ಸಾಧಿಸಿರುವ ಎಲ್ಲ ಪಾಶ್ಚಾತ್ಯ ಸಂಸ್ಥೆಗಳೂ ಇದನ್ನೇ ಅನುಸರಿಸುತ್ತಿವೆ ಎಂದು ಹೇಳುತ್ತಾರೆ.
ಈ ಸಂದರ್ಭದಲ್ಲಿ ಘಟನೆಯೊಂದು ನೆನಪಿಗೆ ಬರುತ್ತದೆ. ತಂದೆ ಸಾಗರೋತ್ತರ ವಾಣಿಜ್ಯೋದ್ಯಮಿ. ಹಲವು ಹಡಗುಗಳ ಮಾಲೀಕ. ಹಲವಾರು ತಿಂಗಳುಗಳ ನಂತರ ಮನೆಗೆ ವಾಪಸಾಗಿದ್ದಾನೆ. ಮಧ್ಯಾಹ್ನದ ವಿಶ್ರಮಿಸಿಕೊಳ್ಳುತ್ತಿದ್ದಾಗ ಅವನ 7-8 ವರ್ಷಗಳ ಮಗ ಮಾತಿಗೆಳೆಯುತ್ತಾ ನಿದ್ರೆಗೆ ಭಂಗಪಡಿಸುತ್ತಿದ್ದ. ತಂದೆಗೆ ಬೇಸರವಾದರೂ ಮುದ್ದು ಮಗನ ಮನಸ್ಸನ್ನು ನೋಯಿಸಲಿಚ್ಛಿಸದೆ ಅವನ ಗಮನವನ್ನು ಬೇರೆಡೆಗೆ ಸೆಳೆಯುವ ಉಪಾಯಕ್ಕಾಗಿ ಯೋಚಿಸಿದ. ಅಟ್ಲಾಸ್ ಪುಸ್ತಕದಿಂದ ಪ್ರಪಂಚದ ಭೂಪಟವನ್ನು ಕಿತ್ತು ಅದನ್ನು ಹರಿದು ಚೂರು ಚೂರುಗಳನ್ನಾಗಿ ಮಾಡಿ ತಾನು ನಿದ್ರೆಯಿಂದೇಳುವ ವೇಳೆಗೆ ಅವುಗಳನ್ನೆಲ್ಲಾ ಜೋಡಿಸಿ ಪೂರ್ಣ ರೂಪ ಕೊಟ್ಟು ತೋರಿಸು ಎಂದ. ಇನ್ನೂ ಮಲಗಿ ಐದು ನಿಮಿಷಗಳಾಗುವ ವೇಳೆಗೆ ಮಗ ಭೂಪಟವನ್ನು ತಯಾರಿಸಿಯೇ ಬಿಟ್ಟಿದ್ದ ಮತ್ತು ತಂದೆಗೆ ತೋರಿಸಲೋಸುಗ ಅವನನ್ನು ಎಬ್ಬಿಸಿಯೂ ಬಿಟ್ಟ. ತಂದೆ ನೋಡುತ್ತಾನೆ ನೂರಾರು ಚೂರುಗಳು ತಮ್ಮ ತಮ್ಮ ಜಾಗಗಳಲ್ಲಿ ಸುಸ್ಥಿರಗೊಂಡಿವೆ. ಆಶ್ಚರ್ಯಗೊಂಡ ತಂದೆ ಅದ್ಹೇಗೆ ಇಷ್ಟು ಬೇಗ ಇವುಗಳನ್ನೆಲ್ಲ ಜೋಡಿಸಿದೆ? ಎಂದಾಗ ಮಗ ಉತ್ತರಿಸಿದ್ದು ಹೀಗೆ -‘ಅಪ್ಪಾ! ನನಗೆ ಪ್ರಪಂಚದ ಭೂಪಟ ಅಷ್ಟೇನೂ ಪರಿಚಯವಿರಲಿಲ್ಲ. ಆದರೆ ಆ ಭೂಪಟದ ಹಿಂದೆ ಮನುಷ್ಯನ ಚಿತ್ರವೊಂದಿತ್ತು, ಈ ಚೂರುಗಳನ್ನೆಲ್ಲಾ ಹೊರಳಿಸಿಕೊಂಡು ಮನುಷ್ಯನ ಚಿತ್ರ ಸರಿಯಾಗಿ ಮೂಡಿಬರುವಂತೆ ಅಂಟಿಸಿದೆ. ಈ ಕಡೆಗೆ ತಿರುಗಿಸಿದಾಗ ಪ್ರಪಂಚದ ಭೂಪಟ ತಾನೇ ಸರಿಯಾಗಿತ್ತು’. ಮಗನ ವಿಶ್ಲೇಷಣೆಯನ್ನು ಕಂಡು ತಂದೆ ಉದ್ಗರಿಸಿದ – ‘ಹೌದು! ಮನುಷ್ಯ ಸರಿಯಾದರೆ ಪ್ರಪಂಚ ತಾನೇ ಸರಿಯಾಗುತ್ತೆ.’
ಯಾವುದೇ ಪ್ರಜ್ಞಾವಂತ ಸಮಾಜಕ್ಕೆ ಇರುವುದು ಒಂದೇ ಕೆಲಸ- ಮನುಷ್ಯನನ್ನು ಕಟ್ಟುವುದು. ಮಿಕ್ಕೆಲ್ಲಾ ಕೆಲಸಗಳನ್ನು ಈ ‘ಸರಿಯಾಗಿ ಕಟ್ಟಲ್ಪಟ್ಟ ಮನುಷ್ಯ’ ನೋಡಿಕೊಳ್ಳುತ್ತಾನೆ. ಸ್ಮಶಾನವಾಗಿದ್ದ ಜಪಾನನ್ನು ಕಟ್ಟಲು ಅವರು ಅನುಸರಿಸಿದ ಉಪಾಯವೇ ಈ ‘ಮನುಷ್ಯ ನಿರ್ವಣ’ ಎಂಬ ಅದ್ಭುತ ಕಲ್ಪನೆಯ ಕೆಲವು ಆಯಾಮಗಳನ್ನು ಮಾತ್ರ. ಅವೇ ಶ್ರಮ-ಸಂಸ್ಕೃತಿ, ಆತ್ಮ ನಿರ್ಭರತೆ, ಸಾಂಘಿಕ ಪ್ರಜ್ಞೆ ಮತ್ತು ರಾಷ್ಟ್ರಪ್ರೇಮ. ಸ್ವಾಮಿ ವಿವೇಕಾನಂದರು ಅದೆಷ್ಟು ಒತ್ತುಕೊಟ್ಟು ಹೇಳಿದ್ದರು-‘ಮನುಷ್ಯನನ್ನು ನಿರ್ವಿುಸುವುದರ ಆಚೆಗೆ ನನ್ನ ಕಾರ್ಯಕ್ರಮವೇ ಇಲ್ಲ’ ಎಂದು.
ಸನಾತನ ಭಾರತ ಒಂದು ಜೀವನ ಸಂಹಿತೆಯನ್ನು ಅನಾದಿಕಾಲದಿಂದ ತನ್ನ ಅಸ್ತಿತ್ವದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದೆ. ಅದೇ ‘ಆದರ್ಶವನ್ನು ಕೆಳಕ್ಕೆ ಇಳಿಸಬಾರದು’ ಎಂದು. ಇಂದು ದೇಶದಲ್ಲೆಲ್ಲಾ ತಾಂಡವವಾಡುತ್ತಿರುವ ’ಕರಾಳಮುಖ’ ಇದು- ಅದು ಒಂದು ಭಾಷೆಯೇ ಆಗಿರಲಿ, ಜೀವನಪದ್ಧತಿಯೇ ಆಗಿರಲಿ- Never ask for a lighter luggage, Ask for a stronger back; Live dangerously ಇತ್ಯಾದಿ ಮಾತುಗಳನ್ನು ಪಾಶ್ಚಾತ್ಯರಿಗೇ ಮೀಸಲಿಟ್ಟು ಅವು ನಮ್ಮ ಮಿದುಳನ್ನು ಪ್ರವೇಶಿಸದಂತೆ ನೋಡಿಕೊಳ್ಳುವ ಪವಿತ್ರ ಕರ್ತವ್ಯ ನಮ್ಮದು ಎಂದು ಭಾವಿಸಿಬಿಟ್ಟಂತಿದೆ ನಮ್ಮ ಜನ. ಪ್ರತಿಯೊಂದರಲ್ಲೂ ‘ಪಾಶ್ಚಾತ್ಯರಿಂದ ಬಂದಿದ್ದೇ ಪ್ರಸಾದ’ ಎಂಬ ತತ್ವದ ಪ್ರತಿರೂಪಗಳಾದ ಇವರು ಹೀಗೇಕೆ? ಪರೀಕ್ಷೆಗಳೇ ಇಲ್ಲದ ಶಿಕ್ಷಣ ಪದ್ಧತಿ, ಮಹಾಪ್ರಾಣಗಳೇ ಇಲ್ಲದ ವರ್ಣಮಾಲೆ ಇವು ಕೆಲವು ಉದಾಹರಣೆಗಳು ಮಾತ್ರ.
ಉಪನಿಷತ್ ಭಾರತ ‘ಧರ್ಮ’ ಅಥವಾ ‘ವ್ಯಕ್ತಿ ನಿರ್ಮಾಣ ತರಬೇತಿ’ಯನ್ನು ವಿಶ್ಲೇಷಿಸುತ್ತಾ ಕನಿಷ್ಠ ಈ ಮೂರು ಗುಣಗಳಾದರೂ ಇಲ್ಲದಿದ್ದಲ್ಲಿ ಅವನು ಮನುಷ್ಯನೆನಿಸಿಕೊಳ್ಳಲು ಅನರ್ಹ ಎಂದು ಹೇಳುತ್ತದೆ.
ಮಾತೃವತ್ ಪರದಾರೇಷು ಪರಾದ್ರವ್ಯಾಣಿ ಲೋಷ್ಠವತ್ |
ಆತ್ಮವತ್ ಸರ್ವಭೂತೇಷು ವೀಕ್ಷ್ಯಂತೇ ಧರ್ಮಬುದ್ಧಯಃ ||
‘ಪರಸ್ತ್ರೀಯರಲ್ಲಿ ತಾಯಿಯನ್ನು ಕಾಣುವ, ತನ್ನದಲ್ಲದ ವಸ್ತುವಿಗೆ ಎಂದಿಗೂ ಆಸೆ ಪಡದೆ ಮಣ್ಣಿನ ಹೆಂಟೆಯಂತೆ ಕಾಣುವ, ಪ್ರತಿಯೊಬ್ಬರಲ್ಲೂ ತನ್ನ ಆತ್ಮನನ್ನೇ ಕಂಡು ಅವರ ಸುಖ-ದುಃಖಗಳಲ್ಲಿ ಭಾಗಿಯಾಗುವವನೇ ಧರ್ಮಪಥ(ಮನುಜಪಥ) ದಲ್ಲಿದ್ದಾನೆ.’ ಮನುಷ್ಯ ಗೊತ್ತಿಲ್ಲದೆಯೇ ತಪ್ಪು ಮಾಡುತ್ತಾನೆ ಎನ್ನುವುದು ಅರ್ಧಸತ್ಯ. ಅದು ಶೈಶವಾವಸ್ಥೆಯಲ್ಲಿ ಮಾತ್ರ. ನಾವೆಲ್ಲರೂ ಗೊತ್ತಿದ್ದೂ ತಪ್ಪು ಮಾಡುವ ‘ದುರ್ಯೋಧನ ಸಂಸ್ಕೃತಿ’ಯವರು. ಇದಕ್ಕೆ ಕಾರಣ ‘ಆಧ್ಯಾತ್ಮಿಕ ಶಿಕ್ಷಣ’ (Spiritual education)ದ ಅಭಾವ. ಆಧ್ಯಾತ್ಮಿಕ ಶಿಕ್ಷಣ ಎಂದರೆ ಧ್ಯಾನ, ಜಪ ಮತ್ತು ಪೂಜೆಗಳೇ ನಮ್ಮ ಕಣ್ಮುಂದೆ ಬರುವುದು ಸಲ್ಲ. ಅವೆಲ್ಲ ಮುಂದಿನ ಹಂತಗಳು. ಮೃಗತ್ವದಿಂದ ಮಾನವತ್ವಕ್ಕೆ ಮತ್ತು ಮನುಷ್ಯತ್ವದಿಂದ ದೈವತ್ವಕ್ಕೆ ಏರುವ ಪ್ರಜ್ಞಾಪೂರ್ವಕ ಮತ್ತು ಪ್ರಾಮಾಣಿಕ ಪ್ರಯತ್ನವೇ ಆಧ್ಯಾತ್ಮಿಕತೆ. ಇದಕ್ಕೆ ಬೇಕಾದುದು ಪ್ರತಿನಿತ್ಯದ ಆತ್ಮವಿಶ್ಲೇಷಣೆ(self&Analysis) ಮತ್ತು ಆತ್ಮನಿರೀಕ್ಷಣೆ (Introspection). ಮಾನವ ಇತಿಹಾಸದಲ್ಲಿನ ಮೊಟ್ಟ ಮೊದಲ ಘಟಿಕೋತ್ಸವ ಭಾಷಣವನ್ನು ತೈತ್ತರೀಯ ಉಪನಿಷತ್ತಿನಲ್ಲಿ ಕಾಣುತ್ತೇವೆ (‘ಆಚಾರ್ಯೋಪದೇಶಮ್). ಸುಮಾರು ನಲ್ವತ್ತು ವಾಕ್ಯಗಳ ಈ ಸಂದೇಶದಲ್ಲಿ ಮೊದಲ ಮೂರು ವಾಕ್ಯಗಳನ್ನು ನಾವು ಅನುಸರಿಸಿಕೊಂಡು ಬಂದಿದ್ದರೆ ಪ್ರಸ್ತುತ ಚಿತ್ರಣ ಬೇರೆಯೇ ಇರುತ್ತಿತ್ತು.
ಸತ್ಯವನ್ನು ಹೇಳು; ಧರ್ಮವನ್ನು ಆಚರಿಸು; ಅನುಭವಗಳ ವಿಶ್ಲೇಷಣೆ ಮತ್ತು ಘಟನಾವಳಿಗಳ ಅಧ್ಯಯನದಲ್ಲಿ ತೊಡಗು. ಇದೇ ಅದರ ಸಾರ. ಇಲ್ಲಿ ವ್ಯಕ್ತಿ ತಾನೇ ಸಾಮರ್ಥ್ಯವಂತನಾದರೆ ಚೆನ್ನ. ಇಲ್ಲದಿದ್ದಲ್ಲಿ ಸಾಮರ್ಥ್ಯವಂತನಿಗೆ ನಂಬಿಕೆಗೆ ಅರ್ಹನಾದ ಸಹಾಯಕನಾದರೆ ಎಷ್ಟೋ ಆಯಿತು. ನಂಬಿಗಸ್ಥ ಸಹಾಯಕನೊಬ್ಬ ಸಿಕ್ಕರೆ ‘ಸಮರ್ಥ’ ವ್ಯಕ್ತಿ ತನ್ನ ಉದ್ದಿಮೆಯ ‘ವಿಸ್ತರಣೆ’ಯಲ್ಲೇ ನಿರಂತರ ತೊಡಗಲಿಚ್ಛಿಸುತ್ತಾನೆ. ಆದರೆ ಅವನ ಅನುಪಸ್ಥಿತಿಯಲ್ಲಿ ‘ಸಂಸ್ಥೆ’ ಉಳಿಯುವ ಖಾತ್ರಿಯಿಲ್ಲದೆ ಅಲ್ಲಿಯೇ ಬಂಧಿಸಲ್ಪಡುತ್ತಾನೆ. ದೇಶದಲ್ಲಿ ತಾಂಡವವಾಡುತ್ತಿರುವ ಅಪ್ರಾಮಾಣಿಕತೆ ಮೊದಲಾದ ದುರ್ಗಣಗಳಿಂದ ಕೃಷಿ, ಕೈಗಾರಿಕೆ, ಮೊದಲಾದ ಉದ್ದಿಮೆಗಳು ನೆಲಕಚ್ಚಿ ನಿರುದ್ಯೋಗ ಸಮಸ್ಯೆ ಇದೆಯೇ ಹೊರತು ಸಂಪನ್ಮೂಲಗಳ ಕೊರತೆಯಿಂದಲ್ಲ. ‘ನೈತಿಕಪ್ರಜ್ಞೆ’ ಎನ್ನುವುದು ಕೌಟುಂಬಿಕ ಚೌಕಟ್ಟಿನಲ್ಲಿ ಇಲ್ಲವೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವವನ್ನು ಕಂಡುಕೊಳ್ಳದಿದ್ದಲ್ಲಿ ಅದೊಂದು ದುರಂತವೇ ಸರಿ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಖ್ಯಾತ ಚಿಂತಕ ಬರ್ಟ್ರಂಡ್ ರಸಲ್ ಹೇಳಿದಂತೆ -‘ We are all candidates to Humanity & not humans yet ‘ ಎನ್ನುವ ಗುಂಪಿಗೇ ಸೇರಿಬಿಡುತ್ತೇವೆ. ಗಂಭೀರ ಚಿಂತನೆ ಮತ್ತು ಕಾರ್ಯತತ್ಪರತೆಗೆ ನಿಲುಕದ ಸಮಸ್ಯೆಯಂತೂ ಯಾವುದೂ ಇಲ್ಲವಲ್ಲ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
