ಬೆಂಗಳೂರು:ಕಠಿಣ ಕ್ರಮಗಳ ಹೊರತಾಗಿಯೂ ಮತ್ತೆಮತ್ತೆ ಮರುಕಳಿಸುತ್ತಿರುವ ಭೂಣಹತ್ಯೆ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವ ಸಂಬಂಧ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ ಪ್ರತ್ಯೇಕ ಪೊಲೀಸ್ ವಿಭಾಗ ತೆರೆಯಲು ಸರ್ಕಾರ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಜಯವಾಣಿ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ಸುಳಿವು ನೀಡಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಶ್ರೇಣಿ ಹುದ್ದೆ ಸೃಷ್ಟಿಸಿ ಅವರ ಮೂಲಕ ಪೊಲೀಸ್ ಇಲಾಖೆ ಜತೆಗೂಡಿ ಭ್ರೂಣಹತ್ಯೆ ತಡೆಯಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಲು ಉದ್ದೇಶಿಸಿರುವುದಾಗಿ ಸಚಿವರು ಘೋಷಿಸಿದರು.
ಭ್ರೂಣಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಸ್ಕಾ್ಯನಿಂಗ್ ಸೆಂಟರ್​ಗಳ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಭ್ರೂಣಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಿ ಪತ್ತೆ ಮಾಡಬೇಕೆಂದು ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ಪ್ರಕರಣದ ಬಳಿಕ, ಮಂಡ್ಯ- ಪಾಂಡವಪುರ, ಮೈಸೂರು, ಬಾಗಲಕೋಟೆ, ಬೆಳಗಾವಿ ಸೇರಿ ವಿವಿಧ ಕಡೆ ಪ್ರಕರಣ ಬೆಳಕಿಗೆ ಬಂದಿವೆ. ನಮ್ಮ ಆಸ್ಪತ್ರೆಯೊಂದರ ಆವರಣದ ವಸತಿ ಗೃಹದಲ್ಲೇ ಭ್ರೂಣಹತ್ಯೆ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು.. ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು. ಇವೆಲ್ಲ ಪ್ರಕರಣಗಳನ್ನು ಇಲಾಖೆ ಪತ್ತೆ ಹಚ್ಚಿದೆ, ಜನರೂ ಜಾಗೃತರಾಗಿ ದ್ದಾರೆ ಎಂದು ವಿವರಿಸಿದರು.
ಕ್ಯಾನ್ಸರ್ ಪತ್ತೆ ಕಾರ್ಯಕ್ರಮ:ಕ್ಯಾನ್ಸರ್ ರೋಗವನ್ನು ಸಾಕಷ್ಟು ಮುಂಚಿತ ವಾಗಿ ಗುರುತಿಸುವುದರಿಂದ ಚಿಕಿತ್ಸೆ ನೀಡಿ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯ. ಶೀಘ್ರವೇ ಮನೆಮನೆಯಲ್ಲಿ ವೈದ್ಯಕೀಯ ತಪಾಸಣಾ ಅಭಿಯಾನ ರೂಪದ ಕಾರ್ಯ ಕ್ರಮ ರೂಪಿಸಲಾಗುತ್ತಿದೆ. ಸರ್ವಿಕಲ್, ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀನಿಂಗ್ ಯಾವ ರೀತಿ ವ್ಯಾಪಕವಾಗಿ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರವೇ ಒಂದು ರೂಪ ನೀಡ ಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಆರೋಗ್ಯ ಕೇಂದ್ರಗಳಲ್ಲಿ 10 ಸಾವಿರ ಹುದ್ದೆ ಭರ್ತಿಗೆ ಕ್ರಮ:ಜಿಲ್ಲಾ, ತಾಲೂಕು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 20 ಸಾವಿರದಷ್ಟು ವೈದ್ಯೇತರ ಸಿಬ್ಬಂದಿ ಹುದ್ದೆ ಖಾಲಿ ಇವೆ. ಈ ಪೈಕಿ ಶೇ.50 ರಷ್ಟು ಹುದ್ದೆಗಳನ್ನಾದರೂ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಶತಪ್ರಯತ್ನ ನಡೆಸಿರುವುದಾಗಿ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ಡಿ ಗ್ರೂಪ್ ಹುದ್ದೆಗಳು ಹೊರ ಗುತ್ತಿಗೆಯಡಿ ನೇಮಕವಾಗುತ್ತಿವೆ. ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಅಗತ್ಯಕ್ಕೆ ಅನುಗುಣವಾಗಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ. ಆದರೆ ಶುಶ್ರೂಷಕರು, ಫಾರ್ವಸಿಸ್ಟ್, ತಾಂತ್ರಿಕ ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದರಲ್ಲೇ 20 ಸಾವಿರದಷ್ಟು ಖಾಲಿಯಿವೆ. ಒಂದೇ ಸಲಕ್ಕೆ ಎಲ್ಲ ಹುದ್ದೆಗಳ ಭರ್ತಿ ಕಷ್ಟಸಾಧ್ಯ. ಹೀಗಾಗಿ ಮೊದಲ ಶೇ.50ರಷ್ಟು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತುಂಬುವ ಯೋಚನೆಯಿದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಗುಂಡೂರಾವ್ ಹೇಳಿದರು.
2 ವರ್ಷಗಳ ಖರೀದಿಗೆ ಸಮ್ಮತಿ:ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ವಾತಾವರಣ ನಿರ್ವಣವಾಗಿದೆ. 2 ವರ್ಷಗಳಿಗೆ ಬೇಕಾಗುವಷ್ಟು ಔಷಧ, ಮಾತ್ರೆಗಳ ಖರೀದಿಗೆ ಟೆಂಡರ್ ಕರೆಯಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಆಯಾ ಆಸ್ಪತ್ರೆಗಳಿಗೆ ಸುಗಮ ಸಾಗಣೆ, ಸಕಾಲಕ್ಕೆ ವಿಲೇವಾರಿ ಮಾಡಲೆಂದು ಸಿ-ಡ್ಯಾಕ್​ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಲಾಜಿಸ್ಟಿಕ್ ವ್ಯವಸ್ಥೆಯನ್ನು ಆನ್​ಲೈನ್ ತಂತ್ರಾಂಶದ ಮುಖೇನ ಈ ಸಂಸ್ಥೆ ನಿರ್ವಹಿಸಲಿದೆ. ಅಲ್ಲದೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯಕೀಯ ಉಪಕರಣಗಳು ಹಾಗೂ ಪರಿಕರಗಳ ಲಭ್ಯತೆ, ಸ್ಥಿತಿಗತಿ, ಅವಸ್ಥೆ ತಪಾಸಣೆ ಮಾಡಿ ಪಟ್ಟಿ ತಯಾರಿಸಿಕೊಡುವ ಜವಾಬ್ದಾರಿಯನ್ನೂ ಸಿ-ಡ್ಯಾಕ್​ಗೆ ಒಪ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.
ತಜ್ಞ ವೈದ್ಯರದೇ ಸವಾಲು:ಗುತ್ತಿಗೆಯಡಿ ಮಾಸಿಕ 1.25 ಲಕ್ಷ ರೂ. ವೇತನ ಕೊಡಲು ಸರ್ಕಾರ ಮುಂದಾಗಿದ್ದರೂ ವಿಶೇಷ ತಜ್ಞರು ವೈದ್ಯರು ಮುಂದೆ ಬರುತ್ತಿಲ್ಲ, ಸರ್ಕಾರಿ ಆಸ್ಪತ್ರೆಗಳಿಗೆ ಇದೇ ದೊಡ್ಡ ಸವಾಲಾಗಿದೆ ಎಂದು ಸಚಿವರು ಒಪ್ಪಿಕೊಂಡರು.
ಆಯುಷ್ಮಾನ್ ದರ ಪರಿಷ್ಕರಣೆ:ಆಯುಷ್ಮಾನ್ ಯೋಜನೆ ಅಡಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ನೀಡುವ ದರ ಹಳೆಯದಾಗಿದ್ದು, ದರ ಪರಿಷ್ಕರಿಸಬೇಕೆಂಬ ಬೇಡಿಕೆ ಇದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡುತ್ತಿದೆ. ಜತೆಗೆ ಈ ವ್ಯಾಪ್ತಿಯೊಳಗೆ ಬಾರದ ವಿವಿಧ ರೀತಿಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಸೇರಿಸುವ ಪ್ರಸ್ತಾವನೆ ಇದೆ. ಕಸಿ, ಸ್ಪೈನ್ ಸರ್ಜರಿ, ಸೋರಿಯೋಸಿಸ್, ಸೀಳು ತುಟಿ ಚಿಕಿತ್ಸೆಯನ್ನು ಈ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಇದೆ. ಶೀಘ್ರವೇ ಪರಿಷ್ಕರಣೆ ಪಟ್ಟಿ ಪ್ರಕಟವಾಗಲಿದೆ ಎಂದು ಆರೋಗ್ಯ ಸಚಿವರು ವಿವರಿಸಿದರು.
ಕಾಯ್ದೆಗೆ ಬಲ:ಪಿಸಿಪಿಎಂಡಿಟಿ ಕಾಯ್ದೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶವಿದೆ, ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನದ ಮೊತ್ತ ಹೆಚ್ಚಿಸಬೇಕೆಂಬ ಪ್ರಸ್ತಾವನೆಯೂ ಇದೆ. ನಮ್ಮ ಇಲಾಖೆಯಲ್ಲಿನ ವೈದ್ಯರು ಈ ರೀತಿ ದಾಳಿ ಮಾಡುವುದು ಕಷ್ಟ. ಹೀಗಾಗಿ ಆರೋಗ್ಯ ಇಲಾಖೆಯಲ್ಲಿ ಎಸಿಪಿ ದರ್ಜೆ ಹುದ್ದೆ ನೀಡುವಂತೆ ಗೃಹ ಇಲಾಖೆಯನ್ನು ಕೋರಿದ್ದೇವೆ. ತಮಿಳುನಾಡಿನಲ್ಲಿ ಇಂತಹ ವ್ಯವಸ್ಥೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕಿಮೋ ಆರೈಕೆ:ಜಿಲ್ಲಾವಾರು ಕಿಮೋ ಥೆರಪಿ ಆರೈಕೆ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಇದರಿಂದ ರೋಗಿಗಳಿಗೆ ಪ್ರಯಾಣದ ಅನಿವಾರ್ಯತೆ, ಹೆಚ್ಚಿನ ವೆಚ್ಚ ತಪ್ಪಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕ್ರಿಟಿಕಲ್ ಕೇರ್ ಬ್ಲಾಕ್ಸ್:10 ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ಕೇಂದ್ರ ತೆರೆಯಲಾಗುತ್ತದೆ. ಜಿಲ್ಲಾ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿ ಈ ಬ್ಲಾಕ್​ನಿಂದ ಹಾಸಿಗೆಗಳು ಲಭ್ಯವಾಗಲಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಈ ನಾಲ್ಕನ್ನು ಕೇಂದ್ರ ಸ್ಥಾನ ಮಾಡಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರಗಳಿಗೆ ಆಸುಪಾಸಿನ ತಾಲೂಕು ಆಸ್ಪತ್ರೆಗಳು ಜೋಡಣೆಯಾಗಿದ್ದು, ವಿಡಿಯೋ ಸಂವಾದದ ಮುಖೇನ ತಜ್ಞರು ಆಯಾ ತಾಲೂಕು ವೈದ್ಯರಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಚಿವರು ವಿವರಿಸಿದರು.
7 ತಾಲೂಕಿಗೆ ಸುಸಜ್ಜಿತ ಕಟ್ಟಡ:ಖಾನಾಪುರ, ಶೃಂಗೇರಿ, ಹೊಸಕೋಟೆ, ಆನೇಕಲ್, ನೆಲಮಂಗಲ, ಶಿರಹಟ್ಟಿ ಸೇರಿ ರಾಜ್ಯದ ಏಳು ಹಳೇ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳೇ ಇಲ್ಲ. ಇಲ್ಲೆಲ್ಲ ಹೊಸದಾಗಿ ತಲಾ 40 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ವಣಕ್ಕೆ ಕ್ರಮವಹಿಸಲಾಗಿದೆ. ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೊಸದಾಗಿ 18 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ವಣಕ್ಕೆ ಕೆಕೆಆರ್​ಡಿಬಿ ಅನುದಾನ ಒದಗಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ವೆಂಟಿಲೇಟರ್ಸ್ ಸರಿಯಿಲ್ಲ:ಕರೊನಾ ಕಾಲದಲ್ಲಿ ಪಿಎಂ ಕೇರ್ಸ್​ನಡಿ ರಾಜ್ಯಕ್ಕೆ ಪೂರೈಸಿದ ವೆಂಟಿಲೇಟರ್​ಗಳ ಗುಣಮಟ್ಟ ಕಳಪೆಯಾಗಿದೆ. , ಅಳವಡಿಸಿದ ಬಹುತೇಕ ವೆಂಟಿಲೇಟರ್​ಗಳು ನಿಷ್ಕ್ರಿಯವಾಗಿವೆ. ಆಕ್ಸಿಜನ್ ಪ್ಲಾಂಟ್​ಗಳು ಸುಸ್ಥಿತಿಯಲ್ಲಿದ್ದು, ನಿರ್ವಹಣಾ ವೆಚ್ಚ ಹೊರೆಯಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
