| ಅವಿನಾಶ ಮೂಡಂಬಿಕಾನ ಬೆಂಗಳೂರು
ರಾಜ್ಯ ಪೊಲೀಸರಿಗೆ ಕೆಲ ವರ್ಷಗಳಿಂದ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿಯಮದನ್ವಯ ರಜೆ ಲಭಿಸದಿರುವುದೂ ಒಂದು. ಕೆಲಸದ ಒತ್ತಡದ ನಡುವೆ ವಾರದ ರಜೆ ಪಡೆಯಲು ಹರಸಾಹಸ ಪಡೆಬೇಕಾದ ಸ್ಥಿತಿ ಎದುರಾಗಿದೆ. ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ರಜೆ ನೀಡಲಾಗುತ್ತದೆ. ಕಡಿಮೆ ಸಿಬ್ಬಂದಿಯಿರುವ ಠಾಣೆಗಳಲ್ಲಿ ತಿಂಗಳುಗಟ್ಟಲೆ ರಜೆಯೇ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸಿಬ್ಬಂದಿ ಕೊರತೆ ನೆಪ ಹೇಳುವ ಮೇಲಧಿಕಾರಿಗಳು ಕೆಳ ಹಂತದ ಸಿಬ್ಬಂದಿಗೆ ರಜೆ ನೀಡಲು ನಿರಾಕರಿಸುತ್ತಿದ್ದಾರೆ. ‘ಕಡ್ಡಾಯ ವಾರದ ರಜೆ ಕೊಡಲು ಹಿರಿಯ ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿರುವಾಗ 15 ದಿನ ಸಾಂರ್ದಭಿಕ ರಜೆ ತೆಗೆದುಕೊಳ್ಳುವುದು ಕನಸಿನ ಮಾತು’ ಎಂಬುದು ರಾಜ್ಯ ಪೊಲೀಸ್ ಸಿಬ್ಬಂದಿ ಅಳಲು.
ಮೇಲಧಿಕಾರಿಗಳ ಸಮರ್ಥನೆ:ರಾಜ್ಯ ಪೊಲೀಸ್ ಇಲಾಖೆಯಲ್ಲಿ 15 ಸಾವಿರಕ್ಕೂ ಅಧಿಕ ಹುದ್ದೆಗಳು ಇನ್ನೂ ಖಾಲಿಯಿವೆ. ಅವು ಭರ್ತಿಯಾಗದಿರುವುದರಿಂದ ಪ್ರಸ್ತುತ ಸೇವೆಯಲ್ಲಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಹೊಣೆ ಹೊರಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕಾಗುತ್ತದೆ. ರಾಜ್ಯದಲ್ಲಿ ಅಪರಾಧ ಪ್ರಕರಣ ನಿಯಂತ್ರಿಸಲು ಪೊಲೀಸರು ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಕೆಲವೊಂದು ಬಾರಿ ರಜೆ ನೀಡಲು ಕಷ್ಟವಾಗುತ್ತದೆ ಎಂಬುದಾಗಿ ಮೇಲಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ 89 ಸಾವಿರ ಪೊಲೀಸರ ಪೈಕಿ 65 ಸಾವಿರ ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳಿದ್ದಾರೆ. ರಜೆ ಸಿಗದೆ ಹೈರಾಣಾಗುತ್ತಿರುವವರಲ್ಲಿ ಇವರ ಸಂಖ್ಯೆಯೇ ಹೆಚ್ಚು. ಉಳಿದಂತೆ ಮೇಲಧಿಕಾರಿಗಳು ತಮಗೆ ಬೇಕಾದಾಗ ಸಲೀಸಾಗಿ ರಜೆ ಪಡೆದá-ಕೊಳ್ಳುತ್ತಾರೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಕರೊನಾ ಸೋಂಕು ಹೆಸರಲ್ಲಿ ರಜೆ?
ಕರೊನಾ ಬಿಸಿ ಪೊಲೀಸರಿಗೂ ತಟ್ಟಿದ್ದು, ಹಲವರು ಗುಣಮುಖರಾಗಿದ್ದಾರೆ. ರಜೆಯಿಲ್ಲದೆ ಕಂಗೆಟ್ಟಿದ್ದ ಕೆಲ ಸಿಬ್ಬಂದಿ ಇದೇ ಸರಿಯಾದ ಸಮಯ ಎಂದುಕೊಂಡು ಕರೊನಾ ಇಲ್ಲದಿದ್ದರೂ ಕರೊನಾ ಹೆಸರಿನಲ್ಲಿ ರಜೆ ಪಡೆದಿದ್ದಾರೆ ಎನ್ನಲಾಗಿದೆ. ಸಿಬ್ಬಂದಿಯ ಯಾವ ಗೋಳನ್ನೂ ಕೇಳದ ಮೇಲಧಿಕಾರಿಗಳು ಕರೊನಾ ಎಂದ ತಕ್ಷಣ ರಜೆ ನೀಡುತ್ತಿದ್ದಾರೆ.
ರಜೆ ನೀಡದ ಕಾರಣ ಸಮನ್ವಯತೆ ಕೊರತೆ
ರಜೆ ಕೊಡದ ಬಗ್ಗೆ ಮೇಲಧಿಕಾರಿಗಳನ್ನು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಮಾನತಿಗೆ ಶಿಫಾರಸು ಮಾಡುತ್ತಾರೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೆಳ ಹಂತದ ಸಿಬ್ಬಂದಿ ನಡುವೆ ಸಮನ್ವಯತೆ ಕೊರತೆ ಎದುರಾಗಿದೆ. ಸರ್ಕಾರದ ಎಲ್ಲ ನೌಕರರಿಗೆ ವಾರದ ರಜೆ, ಸಾಂರ್ದಭಿಕ ರಜೆ ಘೋಷಿಸಿದ್ದರೂ ಪೊಲೀಸ್ ಇಲಾಖೆಗೆ ಮಾತ್ರ ಇದು ಅನ್ವಯವಾಗುತ್ತಿಲ್ಲ. ರಾಜ್ಯ ಸರ್ಕಾರ ಎಲ್ಲ ಸರ್ಕಾರಿ ನೌಕರರಂತೆ ಪೊಲೀಸ್ ಸಿಬ್ಬಂದಿಗೂ ವರ್ಷಕ್ಕೆ ಇಂತಿಷ್ಟು ಹೆಚ್ಚುವರಿ ರಜೆಗಳನ್ನು ನೀಡಿದರೂ ಇದು ಹಲವು ವರ್ಷಗಳಿಂದ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ತಮ್ಮ ವೈಯಕ್ತಿಕ ಕೆಲಸಗಳಿಗೆ ರಜೆ ಸಿಗದಿರುವುದರಿಂದ ಕುಟುಂಬದೊಂದಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕುಟುಂಬದ ಹಿತದೃಷ್ಟಿಯಿಂದ ರಜೆ ಪಡೆಯದೆ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ ಎಂದು ಮೇಲಧಿಕಾರಿಗಳ ನಡೆ ವಿರುದ್ಧ ಪೇದೆಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಕಿಡಿ
ನೆರೆ ಹಾವಳಿ, ಕಳ್ಳಕಾಕರರನ್ನು ಪತ್ತೆಹಚ್ಚಲು, ಸಮಾಜದಲ್ಲಿ ಶಾಂತಿ ಕಾಪಾಡುವುದು ಸೇರಿ ಸಮಾಜದ ಕಾವಲು ಕಾಯಲು ಪೊಲೀಸರು ಬೇಕು. ಆದರೆ, ರಜೆ ನೀಡದೆ ನಮ್ಮ ಯೋಗಕ್ಷೇಮ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪೇದೆಯೊಬ್ಬರು ನೋವು ಹಂಚಿಕೊಂಡಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:sixteen + two =
Remember me
